ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀನು ಆಗಬಹುದು ಆ ಪದ್ಯ ಈ ಪದ್ಯ..

ಚೈತ್ರ ಕೋಟೂರ್ 

ನೀನು ಆಗಬಹುದು
ಆ ಪದ್ಯ ಈ ಪದ್ಯ ಇನ್ನು ಎಷ್ಟೋ ಪದ್ಯಗಳು
ನಾನು ಇಲ್ಲದೆಯೂ ಇರಬಹುದು
ಅದರೆಲ್ಲದರಲ್ಲಿಯೂ

ಬೀಡಿ ಸೇದಿ ಬಿಸಾಕುವವರು ನಾವಿಬ್ಬರೂ ಅಲ್ಲ
ಸುಗಂಧ ಕಡ್ಡಿ ಜೊತೆ ಸೇರಿ ಹೊಸೆಯೋಣ
ಆ ಮನೆಯ ತುಳಸಿಯ ಮುಂದೆಂದಾರೂ
ಅದು ಬೆಳಗಬಹುದು
ಅಥವಾ ನಿನ್ನದೇ ಮನೆಯಲ್ಲಿ
ನಿನ್ನ ಅಜ್ಜ ಮುತ್ತಜ್ಜರ ತಿಥಿ ಮಾಡುವಾಗ
ನಿನ್ನ ಹೆಂಡತಿ ಮಕ್ಕಳ ಮುಂದೆ
ನೀನೇ ಹಚ್ಚಬಹುದು
ಅಥವಾ ನಿನ್ನ ಮಗನ ಪ್ರಸ್ಥದ ಕೋಣೆಯನ್ನಾದರೂ
ಉದ್ದೀಪನಗೊಳಿಸಬಹುದು

ನನ್ನ ಪ್ರಸ್ಥದ ಚಿಂತೆ ಈ ಕ್ಷಣ
ನಿನಗೆ ಮೂಡುವುದು ಸಹಜ
ಅಲ್ಲೂ ಯಾರೋ ಇಬ್ಬರು ಸೇರಿ ಉಜ್ಜಿಟ್ಟ ಗಂಧದ ಕಡ್ಡಿಯ ಹಚ್ಚಿರುತ್ತಾರೆ ಬಿಡು
ಇಲ್ಲ ಅವನು ಹನಿಮೂನಿಗೆಂದು ಕರೆದುಕೂಂಡು ಹೋಗಿ ಸೆಂಟ್ ಹೊಡೆದು ನನ್ನ ಸೆಳೆಯಲೂಬಹುದು

ಯಾರೇನೇ ಸೆಳೆದರೂ ನಿನ್ನ ಸೆಳೆತ ಪದ್ಯದಂತೆ
ನಮ್ಮಿಬ್ಬರ ಪಿಂಡದ ಮುಂದೆ
ಹಚ್ಚುವ ಆ ಗಂಧದ ಕಡ್ಡಿಯಾಣೆಗೂ
ನಿನ್ನೊಂದಿಗೆ ನಾ ಹೊಸೆಯಬೇಕಿದೆ ಅಂತದ್ದೇ ಒಂದು
ನಮ್ಮಿಬ್ಬರ ಗಂಧ ಮೇಳೈಸುವಂತೆ
ಆ ಒಂದು ಕಡ್ಡಿ ಉರಿದು ಇಂಗಿ ಹೋಗುವಂತೆ
ನೀನು ಪದ್ಯ ಬರೆದು ಮರೆಯುವಂತೆ
ನಾನು ಓದಿ ಮುಳುಗುವಂತೆ
ಬೀಡಿ ಸೇದಿ ಬಿಸಾಕುವಂತೆ!

‍ಲೇಖಕರು avadhi

21 March, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading