ಗಾಯತ್ರಿ ರವಿ
ಇನ್ನು ಮುಂದೆ ನನ್ನ ಕವನಗಳಲಿ
ನೀನಿರುವುದು ಬೇಡ
ಜೀವನದ ನೋಟವೇ ಬದಲಾದೀತು
ನನ್ನ ಭಾವದಲ್ಲಿ ಬೆರೆತು
ಬಣ್ಣ ಬದಲಾಯಿಸಬೇಡ
ಭಾವನೆಗಳಿಗೆ ಬೆಲೆ ಇಲ್ಲದಂತಾದೀತು
ಮನಸಿನಲಿ ಮನೆ ಮಾಡಿ
ಕನಸಿಗೆ ಕಾವಲುಗಾರನಾಗಬೇಡ
ಹಕ್ಕಿ ರೆಕ್ಕಿ ಕಳೆದುಕೊಂಡಂತಾದೀತು
ನಡೆಯುವಾಗ ದಾರಿಗುಂಟ
ಎಡುವುವ ಭೀತಿ ಹುಟ್ಟಿಸಬೇಡ
ನಾ ಸೇರುವ ತಾಣ ದಿಕ್ಕು ತಪ್ಪೀತು

ನಿನ್ನ ನಿಯತ್ತಿಲ್ಲದ ನಾಲಗೆಯಿಂದ
ನನ್ನ ಮಾತಿಗೆಳೆಯ ಬೇಡ
ಡೋಣಿ ದಡ ಸೇರದೇ ಮುಳುಗಿ ಹೋದೀತು
ನಿನ್ನ ಗತ್ತಿನ ತೆಕ್ಕೆಯಲಿ
ಬಂದಿಸಿ ಬಯಸ ಬೇಡ
ಉಸಿರಾಡುವುದು ಕಷ್ಟವೆನಸೀತು
ನಿನ್ನ ದರ್ಪದ ಭದ್ರ ಕೋಟೆಯಲಿ
ನನ್ನ ಕೂಡಿ ಹಾಕಬೇಡ
ನಾನಿರುವುದೇ ಮರೆತು ಹೋಗಿ
ಕೊನೆಗೆ ನಾನಲ್ಲೇ ಕಳೆದು ಹೋದೇನು . . . . !






ಚಂದ ದ ಕವಿತೆಗಳು