ನಿಸಾರ್ ಸರ್: ಜೀವ ವಿಜ್ಞಾನಿಯ ತುಂಬು ನೆನಪು

ಡಾ. ಪ್ರಶಾಂತ ನಾಯ್ಕ

ಜೀವವಿಜ್ಞಾನ ವಿಭಾಗ । ಮಂಗಳೂರು ವಿಶ್ವವಿದ್ಯಾನಿಲಯ

ತಮ್ಮ ಅದ್ಭುತವಾದ ಕಾವ್ಯ, ವಿಮರ್ಶೆ, ಅನುವಾದಿತ ಕೃತಿ,  ಪ್ರಬಂಧ, ಮಕ್ಕಳ ಸಾಹಿತ್ಯದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆಯನ್ನು ನೀಡಿ ಜಗತ್ತಿನಾದ್ಯಂತ ಕನ್ನಡಿಗರೆಲ್ಲರ  ಹೃದಯದಲ್ಲಿ ನೆಲೆಸಿರುವ  ಅಚ್ಚುಮೆಚ್ಚಿನ  ಕವಿ, ಸಾಹಿತಿ  ಪ್ರೊ. ಕೆ.ಎಸ್. ನಿಸಾರ್ ಅಹಮದ್.  ಅಂತಹ ಮಹಾನ್  ಕವಿಯ  ಒಡನಾಟದ ಭಾಗ್ಯ ಸಿಕ್ಕಿರುವ ಅದೃಷ್ಟವಂತರಲ್ಲಿ  ನಾನೂ ಒಬ್ಬ.  ನಿಸಾರ್ ಸರ್ ಅವರ ಕವನ, ಸಾಹಿತ್ಯಗಳನ್ನು ಓದಿದವರಿಗೆ, ಹಾಡುಗಳನ್ನು ಕೇಳಿದವರಿಗೆ ಅವರೊಬ್ಬ ಶ್ರೇಷ್ಠ ಸಾಹಿತಿ, ಅದ್ಭುತ ಕವಿ.  ಅವರನ್ನು ಹತ್ತಿರದಿಂಬ ಬಲ್ಲವರಿಗೆ ಮಾತ್ರ ಗೊತ್ತು ಅವರೊಬ್ಬ ಸರಳ ಸಜ್ಜನ, ಮಾನವೀಯ ಮೌಲ್ಯಗಳ  ಅಪ್ಪಟ ಬಂಗಾರದಂತಹ  ವ್ಯಕ್ತಿ.  ನನಗೆ ನಿಸಾರ್ ಸರ್ ಅವರ ಒಡನಾಟದ ಭಾಗ್ಯ ದೊರೆತದ್ದು, ನನ್ನ ‘ಪ್ರಾಣಿಜಗತ್ತಿನ ವಿಸ್ಮಯಗಳು’  ಪುಸ್ತಕದ ಮೂಲಕ.  ಒಬ್ಬ ವ್ಯಕ್ತಿಯು ಅವರಿಗೆ ಆತ್ಮೀಯವಾಗಿ ಒಂದು ಸಲ ಪರಿಚಯವಾದರೆ  ಅಥವಾ ಏನಾದರೂ ಚಿಕ್ಕ ಸಹಾಯವನ್ನು ಪಡೆದಿದ್ದರೆ, ಆ ವ್ಯಕ್ತಿಯನ್ನು ಸದಾ ನೆನಪಿನಲ್ಲಿಟ್ಟುಕೊಂಡು  ಕ್ಷೇಮಸಮಾಚಾರವನ್ನು  ವಿಚಾರಿಸಿ ‘ಎಲ್ಲಾ ಒಳ್ಳೆಯದಾಗಲಪ್ಪ’ ಎಂದು   ಮನಸಾರೆ ಶುಭ ಹಾರೈಸುವ ದೊಡ್ಡ ಗುಣ ಅವರದ್ದು. ‘ತುಂಬಿದ ಕೊಡ ತುಳುಕುವುದಿಲ್ಲ’ ಎಂಬ ನಾಣ್ಣುಡಿಗೆ  ಒಬ್ಬ ಆದರ್ಶ ವ್ಯಕ್ತಿ ಎಂದರೆ ಅದು,  ನಿಸಾರ್ ಅಹಮದ್ ಸರ್ ಅಂದರೆ ಅತಿಶಯೋಕ್ತಿಯಲ್ಲ.

ಪ್ರಾಣಿಜಗತ್ತಿನ ವಿಸ್ಮಯಗಳು ನನ್ನ ಮೊದಲ ಪುಸ್ತಕ ಆಗಿರುವುದರಿಂದ ಯಾರಾದರೂ ಖ್ಯಾತ ಸಾಹಿತಿಯ ಕೈಯಿಂದ  ಬಿಡುಗಡೆ ಮಾಡಿಸಬೇಕೆಂಬ ಹಂಬಲ ಮನದಲ್ಲಿ ಮನೆಮಾಡಿತ್ತು. ಇದೇ ಆಲೋಚನೆಯಲ್ಲಿ ಇರುವಾಗ ಒಂದು ದಿನ ಮಂಗಳೂರು ಆಕಾಶವಾಣಿಯಿಂದ ‘ಜೋಗದ ಸಿರಿಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯಹರದ್ವರ್ಣವನದ ತೇಗ ಗಂಧ ತರುಗಳಲ್ಲಿ…”  ಹಾಡು ಪ್ರಸಾರವಾಗುತ್ತಿತ್ತು.  ಕರ್ನಾಟಕದ ಸಿರಿ ಸೊಬಗನ್ನು ಅದ್ಭುತವಾಗಿ ಕಾವ್ಯಮಯವಾಗಿಸಿರುವ ನಿತ್ಯೋತ್ಸವದ ಈ ಹಾಡಿನ ಸೃಷ್ಟಿಕರ್ತ  ನಿಸಾರ್ ಅಹಮದ್ ಅವರು  ಆಗ,  ನನ್ನ ಮನದಲ್ಲಿ ಬಂದು ಹೋದರು. ಇಂತಹ ನೂರಾರು ಮಾಂತ್ರಿಕ ಶಕ್ತಿಯ ಕವನಗಳನ್ನು ಬರೆದು ಜಗತ್ತಿನಾದ್ಯಂತ ಕನ್ನಡಿಗರ ಮನೆಮಾತಾಗಿರುವ  ಧೀಮಂತ  ಕವಿ ನಿಸಾರ್ ಅವರ  ಮೂಲಕ  ಪುಸ್ತಕ ಬಿಡುಗಡೆ ಮಾಡಿಸುವ   ಆಸೆಯೊಂದು ಮನದಲ್ಲಿ ಮೂಡಿಬಂತು.  ಪಠ್ಯ ಪುಸ್ತಕದಲ್ಲಿ  ಇರುವ ನಿಸಾರ್ ಸರ್ ಅವರ ಕವನಗಳನ್ನು ತರಗತಿಯಲ್ಲಿ ಅಧ್ಯಾಪಕರು  ಮಾರ್ಮಿಕವಾಗಿ ವಿವರಿಸುವಾಗ, ಇಂತಹ ಕವನಗಳನ್ನು ರಚಿಸಿರುವ ಕವಿ ನಿಸಾರ್   ಸಾಹಿತ್ಯಪ್ರೇಮಿಗಳೆಲ್ಲರಿಗೂ  ದೊಡ್ಡ ಸೆಲೆಬ್ರಿಟಿ.   ಅನೇಕ ದಿನಗಳಿಂದ ಸರ್ ಅವರನ್ನು ಪುಸ್ತಕ ಬಿಡುಗಡೆಗೆ ಆಹ್ವಾನಿಸುವ  ಆಸೆ ಕನಸಿನ ರೂಪದಲ್ಲಿ ಕೊರೆಯುತ್ತಿತ್ತು. ಏಕೆಂದರೆ ಅಂತಹ ಮೇರುಕವಿಯನ್ನು ಸಂಪರ್ಕಿಸುವುದು ಹೇಗೆ, ಪುಸ್ತಕ ಬಿಡುಗಡೆಯಂತ ಸಣ್ಣ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಅವರು ಬರಲು ಒಪ್ಪುವರೇ,  ಎಂಬ ಪ್ರಶ್ನೆ ಮನದಲ್ಲಿ ಕಾಡುತಿತ್ತು.  ಅನೇಕ ಸಾಹಿತಿಗಳ ಸಂಪರ್ಕವನ್ನು ಹೊಂದಿರುವ ನನ್ನ   ಗೆಳೆಯ ಜೇಸಿ ತ್ಯಾಗಂ ಹರೇಕಳ  ಅವರ ಮೂಲಕ ನಿಸಾರ್ ಅವರ ವಿಳಾಸವನ್ನು ಪಡೆದು ಪುಸ್ತಕವನ್ನು ಅವರಿಗೆ ಅಂಚೆ ಮೂಲಕ ಕಳುಹಿಸಿದೆ.  ಒಂದು ವಾರದ ನಂತರ ಅವರಿಗೆ ದೂರವಾಣಿ ಕರೆ ಮಾಡಿ, ಮಾತನಾಡಿಸಿದಾಗ,   ಪುಸ್ತಕ ಬಿಡುಗಡೆಗೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತಾ, “ದಯಮಾಡಿ ತಪ್ಪು ತಿಳಿಯಬೇಡಿ,  ಅನಿವಾರ್ಯ ಕಾರಣಗಳಿಂದ ಬರಲು ಸಾಧ್ಯವಾಗುತ್ತಿಲ್ಲ” ಎಂದು ವಿನಯಪೂರ್ವಕವಾಗಿ ಹೇಳಿದಾಗ,  ಅಂತ ಮೇರು ಕವಿಯ ವಿನಯವಂತಿಕೆ ಯನ್ನು ನೋಡಿ   ಮನಸ್ಸು ತುಂಬಿ ಬಂತು.  ಕೆಲವು ದಿನಗಳ ನಂತರ ಅವರೇ ನನ್ನ ಮೊಬೈಲ್‌ಗೆ ಕರೆ ಮಾಡಿ, ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿ ಬಿಡುಗಡೆಗೆ ನಾನೇ ಬರುತ್ತೆನೆ ಎಂದು ಅವರು ಹೇಳಿದಾಗ  ನನಗಾದ  ಸಂತೋಷಕ್ಕೆ ಪಾರವೇ ಇರಲಿಲ್ಲ.

ಕವನ, ಲೇಖನಗಳಲ್ಲಿ  ನಿಸಾರ್ ಅವರ ಕನ್ನಡ ಪಾಂಡಿತ್ಯವನ್ನು ನೋಡಿ ಅವರು ಒಬ್ಬ ಕನ್ನಡ ಅಥವಾ ಇಂಗ್ಲೀಷ್ ಸಾಹಿತ್ಯದ ಮೇಷ್ಟ್ರು ಇರಬೇಕು  ಎಂದು ಅನೇಕ ಜನರು  ಭಾವಿಸಿರುವುದನ್ನು ನಾನು ಗಮನಿಸಿದ್ದೇನೆ. ನಾನೂ ಮೊದಲು ಹಾಗೆ ಎಣಿಸಿದ್ದೆ. ಪದವಿ ವ್ಯಾಸಂಗದ ಸಮಯದಲ್ಲಿ ಪಠ್ಯದಲ್ಲಿ ಇದ್ದ ಅವರ ಕವನವೊಂದರ  ಕವಿ ಪರಿಚಯದ ನಂತರವೇ  ಗೊತ್ತಾಗಿದ್ದು  ಅವರು ಭೂವಿಜ್ಞಾನ ಪ್ರಾಧ್ಯಾಪಕರು.   ಒಬ್ಬ ವಿಜ್ಞಾನ  ಶಿಕ್ಷಕರಾಗಿ  ಅವರ ಸಾಹಿತ್ಯದಲ್ಲಿ ಕಾಣಸಿಗುವ ಅನನ್ಯವಾದ  ಅವರ ಭಾಷಾ ಪಾಂಡಿತ್ಯ ವಿಸ್ಮಯ ಮೂಡಿಸುತ್ತದೆ.  ಕೇವಲ ಸಾಹಿತ್ಯ ಮಾತ್ರವಲ್ಲ,  ವಿಜ್ಞಾನದಲ್ಲಿಯೂ ಅವರಿಗಿರುವ  ಕುತೂಹಲ, ಆಸಕ್ತಿ, ಜ್ಞಾನ ಮತ್ತು ವೈಜ್ಞಾನಿಕ ದೃಷ್ಟಿಕೋನ ಬಹಳ ವಿಶಾಲವಾದದ್ದು.    ‘ಪ್ರಾಣಿಜಗತ್ತಿನ ವಿಸ್ಮಯಗಳು’  ಪುಸ್ತಕದ ಮುಖಪಟದಲ್ಲಿರುವ  ಕೀಟ ಒಂದರ ಛಾಯಚಿತ್ರದ ಬಗ್ಗೆ ಪುಸ್ತಕದೊಳಗೆ ಮಾಹಿತಿ ಇದ್ದಿರಲಿಲ್ಲ.  ಡಾ. ವಿನೀತ್ ಅವರ ಛಾಯಚಿತ್ರ ಬಹಳ ಆಕರ್ಷಕವಾಗಿದ್ದುದರಿಂದ ಅದನ್ನು ಪುಸ್ತಕಕ್ಕೆ ಬಳಸಿಕೊಂಡಿದ್ದೆನಾದರೂ  ನಾನೂ ಕೂಡ ಆ ಕೀಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ನಿಸಾರ್ ಸರ್ ಅವರು ದೂರವಾಣಿ ಮಾಡಿ ಆ ಕೀಟದ ಹೆಸರನ್ನು ಕೇಳಿ ತಿಳಿದುಕೊಂಡಿದ್ದು  ಮಾತ್ರವಲ್ಲದೆ ಅದರ ಬಗ್ಗೆ ಅನೇಕ ಮಾಹಿತಿಯನ್ನು ಕಲೆಹಾಕಿದ್ದರು.  ವಿಜ್ಞಾನ ಮುಖ್ಯವಾಗಿ ಮೂಲವಿಜ್ಞಾನದ ಬಗ್ಗೆ ಬಹಳ ಆಸಕ್ತಿ ಕುತೂಹಲ ಇಟ್ಟುಕೊಂಡಿದ್ದರು.   ನಿಸಾರ್ ಅವರು ವಿಜ್ಞಾನ ಶಿಕ್ಷಕರಾಗಿ ವಿಜ್ಞಾನದಲ್ಲೂ ಅವರ ಬರವಣಿಗೆ ಇರಬಹುದಲ್ಲವೇ? ಎಂಬ ಪ್ರಶ್ನೆ ಮನದದಲ್ಲಿತ್ತು.

2015 ರಲ್ಲಿ ಅವರ ಮನೆಗೆ  ಭೇಟಿ ನೀಡಿದಾಗ, ನಾನೇ ಕೇಳಿದೆ, ಸರ್ ತಾವು ವಿಜ್ಞಾನದಲ್ಲಿ ಲೇಖನ, ಪುಸ್ತಕಗಳನ್ನು ಬರೆದಿಲ್ಲವೇ?.   ‘ತಡಿ, ಅಂತ ಎದ್ದು ಪುಸ್ತಕಗಳ ರಾಶಿಯಲ್ಲಿ ‘ಹಕ್ಕಿಗಳು’ ಮತ್ತು     ‘ಶಿಲೆಗಳು ಖನಿಜಗಳು’ ಎಂಬ ಎರಡು ಪುಸ್ತಕಗಳನ್ನು ಕೈಗಿತ್ತರು.  ಮಕ್ಕಳಿಂದ ಹಿಡಿದು ಅಬಾಲ ವೃದ್ಧರಿಗೂ ಸುಲಭವಾಗಿ ಅರ್ಥವಾಗುವಂತೆ ಕುತೂಹಲಭರಿತವಾಗಿ ಓದಿಸಿಕೊಂಡು ಹೋಗುವ  ೧೯೭೭ ರಲ್ಲಿ ಐ.ಬಿ.ಹೆಚ್. ಪ್ರಕಾಶನದಲ್ಲಿ ಹೊರಬಂದಿರುವ  ಆ ಪುಸ್ತಕಗಳು ನಿಸಾರ್ ಸರ್ ಅವರು ವಿಜ್ಞಾನ ಸಾಹಿತ್ಯಕ್ಕೆ ನೀಡಿದ ಅಮೂಲ್ಯವಾದ ಕಾಣಿಕೆಗಳು. ಸಾಹಿತ್ಯದಲ್ಲಿ ಅವರಿಗೆ ಎಷ್ಟು ಅಪಾರವಾದ ಜ್ಞಾನ ಇದೆಯೋ, ವಿಜ್ಞಾನದ ಎಲ್ಲಾ ಶಾಖೆಗಳ ಬಗ್ಗೆಯೂ ಒಳ್ಳೆಯ ಪಾಂಡಿತ್ಯವನ್ನು ಹೊಂದಿದ್ದರು.  ‘ಪ್ರಾಣಿಜಗತ್ತಿನ ವಿಸ್ಮಯಗಳು’  ಪುಸ್ತಕದ ಬಗ್ಗೆ ಚರ್ಚಿಸುವಾಗ, ತನಗೆ ತಿಳಿದಿರುವ ಜೀವವಿಜ್ಞಾನದ ಅನೇಕ ಕೌತುಕಮಯ ಅಂಶಗಳ ಬಗ್ಗೆ  ಹೇಳುತ್ತಿದ್ದರು. ಮಾತ್ರವಲ್ಲ ಭೌತಶಾಸ್ತ್ರ ರಸಾಯನಶಾಸ್ತ್ರ, ವಸ್ತುವಿಜ್ಞಾನ ವಿಷಯಗಳಲ್ಲೂ ಅಪಾರವಾದ ಜ್ಞಾನ ಆಸಕ್ತಿಯನ್ನು ಉಳಿಸಿಕೊಂಡಿದ್ದರು.  ಅವರ ‘ಅಚ್ಚುಮೆಚ್ಚು – ಆಯ್ದ ಗದ್ಯ ಬರಹಗಳು’  ಕೃತಿಯಲ್ಲಿ ‘ವಿಜ್ಞಾನ ಮತ್ತು ಸಾಹಿತ್ಯ’ ಎಂಬ ಲೇಖನದಲ್ಲಿ ಸಂಶೋಧನೆ, ಅನ್ವೇಷಣೆ,  ವೈಜ್ಞಾನಿಕ ಮನೊಭಾವ, ವಿಜ್ಞಾನಿಗಳ ಸಾಮಾಜಿಕ ಬದ್ಧತೆ,    ಪ್ರಕೃತಿ ಮತ್ತು ಮಾನವ ನಡುವಿನ ಸಂಬಂಧಗಳು,  ಹೀಗೆ ವಿಜ್ಞಾನದ ಹಲವು ಆಯಾಮಗಳ ಬಗ್ಗೆ ವಿಸ್ತ್ರತವಾಗಿ  ತಮ್ಮ ಅನುಭವಗಳನ್ನು ಮನಮುಟ್ಟುವಂತೆ  ದಾಖಲಿಸಿರುತ್ತಾರೆ.  ಪ್ರತಿಯೊಬ್ಬರೂ  ಮುಖ್ಯವಾಗಿ ವಿಜ್ಞಾನಿಗಳು ಮತ್ತು ವಿಜ್ಞಾನ ಸಾಹಿತಿಗಳು ಓದಲೇಬೇಕಾದ  ಒಂದು ಅಪೂರ್ವವಾದ ಲೇಖನ ಅದು.

ಮಂಗಳೂರು ವಿಶ್ವವಿದ್ಯಾನಿಲಯವು ಎಸ್. ವಿ. ಪರಮೇಶ್ವರ ಭಟ್ ಕನ್ನಡ ಅಧ್ಯಯನ ಸಂಸ್ಥೆಯಿಂದ ಆಯೋಜಿಸಿದ ‘ನಿತ್ಯೋತ್ಸವ – ಕನ್ನಡ ನಾಡು ನುಡಿ ಸಂಸ್ಕೃತಿಯ  ಚಿಂತನ ಸರಣಿ’ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅವರನ್ನು ಆಹ್ವಾನಿಸಲಾಗಿತ್ತು.  ವಿಶ್ವವಿದ್ಯಾನಿಲಯದ  ಆಗಿನ ಕುಲಪತಿಗಳಾದ ಭೂವಿಜ್ಞಾನಿ  ಪ್ರೊ. ಕೆ. ಭೈರಪ್ಪ ಅವರಿಗೆ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರ ಬಗ್ಗೆ  ಅಪರಿಮಿತವಾದ ಗೌರವ ಮತ್ತು ಅಭಿಮಾನ.  ಹಾಗಾಗಿ ನಿಸಾರ್ ಸರ್ ಅವರನ್ನು ಅತಿಥಿ ಗೃಹದಲ್ಲಿ ಉಳಿಸದೆ ತಮ್ಮ ಬಂಗಲೆಯಲ್ಲೇ ಅವರಿಗೆ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಿದ್ದರು. ಆ ಸಮಯದಲ್ಲಿ ನಿಸಾರ್ ಸರ್ ಅವರ ಆಶಯದಂತೆ ನನಗೆ ಅವರ ಜೊತೆ ಇರಲು ಅವಕಾಶ ಒದಗಿಬಂದಿತ್ತು.   ದೇಶವಿದೇಶಗಳಲ್ಲಿ  ಉನ್ನತ ಸಂಶೋಧನೆಗಳನ್ನು ನಡೆಸಿರುವ ಪ್ರೊ. ಕೆ. ಭೈರಪ್ಪ ಅವರು  ವಿಜ್ಞಾನದ ಅನೇಕ ಸಾಂಪ್ರದಾಯಿಕ ಮತ್ತು ಇತ್ತೀಚಿನ ಸಂಶೋಧನೆಗಳ ಬಗ್ಗೆ  ನಿಸಾರ್ ಸರ್ ಜೊತೆ ಚರ್ಚಿಸುವಾಗ ಪಕ್ಕದಲ್ಲಿ ಕುಳಿತು ಆಲಿಸುವ ಸದವಕಾಶ ನನಗೆ ಸಿಕ್ಕಿತ್ತು. ಆ ಚರ್ಚೆಯಲ್ಲಿ ನಿಸಾರ್ ಸರ್ ಅವರೂ ಸಹ ವಿಜ್ಞಾನದ  ಅನೇಕ ಹೊಸ ವಿಷಯಗಳನ್ನು, ಇತ್ತೀಚಿನ ಸಂಶೋಧನೆ, ಆವಿಷ್ಕಾರಗಳ ಬಗ್ಗೆ ಹಂಚಿಕೊಳ್ಳುತ್ತಿದ್ದರು. ವಿಜ್ಞಾನದ ಬಗ್ಗೆ ಅವರಿಗಿರುವ  ಆಳವಾದ  ಜ್ಞಾನವನ್ನು ನೋಡಿ  ಪ್ರಾಯಶ: ಇವರು ಸಾಹಿತಿ ಆಗಿರದೇ ಹೋಗಿದ್ದರೆ  ಒಬ್ಬ ಅಂತರಾಷ್ಟ್ರೀಯ ಮಟ್ಟದ ಶ್ರೇಷ್ಠ ವಿಜ್ಞಾನಿ ಆಗುತ್ತಿದ್ದರೋ ಎಂಬ ಭಾವನೆ ಮೂಡಿತ್ತು.    ಮೂಲ ವಿಜ್ಞಾನಗಳಲ್ಲಿ  ಅಪಾರವಾದ  ಜ್ಞಾನ ಆಸಕ್ತಿಯನ್ನು ಹೊಂದಿರುವ ಅವರು ವಿಜ್ಞಾನ ಸಾಹಿತ್ಯದಲ್ಲಿ ಇನ್ನಷ್ಟೂ ತಮ್ಮ ಕೊಡುಗೆಯನ್ನು  ನೀಡಬಹುದಿತ್ತಲ್ಲ    ಅಂತ  ಕೆಲವೊಮ್ಮೆ  ನನಗೆ ಅನಿಸಿತ್ತು. ಅವರ ಅನೇಕ ಕವನಗಳಲ್ಲಿ ನಿಸರ್ಗದ  ಅನೇಕ  ವೈಜ್ಞಾನಿಕ ಸಂಗತಿಗಳು ಕಾವ್ಯಮಯವಾಗಿ ಅಭಿವ್ಯಕ್ತ ಗೊಂಡಿರುವುದನ್ನು ನಾವು ಮನಗಾಣಬಹುದು. ‘ರವಿ ಕಾಣದ್ದನ್ನು  ಕವಿ ಕಾಣಬಲ್ಲ’  ಎಂಬುವುದಕ್ಕೆ ನಿಸಾರ್ ಅವರ ಕವನಸಂಕಲನಗಳು ಸಾಕ್ಷಿಯಾಗಿ ನಿಲ್ಲುತ್ತವೆ.

ನಿಸಾರ್ ಸರ್ ಅವರ ಮುಖ್ಯವಾದ ಇನ್ನೊಂದು ಅಭಿರುಚಿ ಛಾಯಾಗ್ರಹಣ;  ಅವರು ಎಲ್ಲೇ ಹೋದರೂ  ಪುಟ್ಟದಾದ ಕ್ಯಾಮೆರಾ ಒಂದು ಅವರ ಹ್ಯಾಂಡ್ ಬ್ಯಾಗ್ ನಲ್ಲಿ ಸದಾ ಇರುತಿತ್ತು.   ನಿಸರ್ಗ ಸೌಂದರ್ಯವನ್ನು  ಕ್ಯಾಮರದಲ್ಲಿ ಸೆರೆಹೆಡೆಯುವುದು, ಅದಕ್ಕಿಂತಲೂ ಮುಖ್ಯವಾಗಿ ಕಣ್ಣಿಗೆ ಕಪ್ಪು  ಗ್ಲಾಸ್ ಧರಿಸಿ ಒಳ್ಳೆಯ  ಫೋಸ್ ಕೊಟ್ಟು  ಫೋಟೊ ತೆಗಿಸಿಕೊಂಡು  ನಿಸರ್ಗದ ಸೌಂದರ್ಯ ದೊಂದಿಗೆ ತಾನೂ ಬೆರೆಯುವುದು  ಅವರಿಗೆ ಖುಷಿ ಕೊಡುವ   ಒಂದು ಹವ್ಯಾಸ.  ತಮ್ಮ ಜೊತೆ ಇರುವ ಆಪ್ತರೊಂದಿಗೂ ಗ್ರೂಪ್ ಫೋಟೊ ತೆಗೆಸಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಹೋಟೆಲ್, ವಿಮಾನ ನಿಲ್ದಾಣ ಎಲ್ಲಿಯಾದರೂ ಜನರು  ಅವರನ್ನು ಗುರುತಿಸಿ ಜೊತೆಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಇಷ್ಟಪಟ್ಟಾಗ ಎಷ್ಟೇ ತುರ್ತು ಇದ್ದರೂ ಒಲ್ಲೆ ಎನ್ನದೆ  ಛಾಯಾಚಿತ್ರಕ್ಕೆ ನಗುಮುಖದ ಪೋಸ್  ನೀಡುತ್ತಿದ್ದರು;   ತೋರಿದ ಅಭಿಮಾನಕ್ಕಾಗಿ ಮನದುಂಬಿ ಕೃತಜ್ಞತೆ ಸಲ್ಲಿಸುತ್ತಿದ್ದರು   ಸಭೆ ಸಮಾರಂಭಗಳಲ್ಲಿ ಭಾಗವಹಿಸುವಾಗ  ಅವರ  ಆಪ್ತ ಛಾಯಚಿತ್ರಗಾರರನ್ನು ಕರೆಸಿಕೊಳ್ಳುತ್ತಿದ್ದರು. ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಅಲ್ಲಿ ತೆಗೆದ ಛಾಯಾಚಿತ್ರಗಳನ್ನು  ತಪ್ಪದೇ ತರಿಸಿಕೊಳ್ಳುತ್ತಿದ್ದರು. ಆ ಛಾಯಚಿತ್ರಗಳನ್ನು ನೋಡುತ್ತಾ  ಕಳೆದ ಸಂತಸದ ಕ್ಷಣಗಳನ್ನು ಚಿಕ್ಕಮಕ್ಕಳಂತೆ ಅವರು ಆಸ್ವಾದಿಸು ತ್ತಿದ್ದರು.   ಅವರು ಸೆರೆಹಿಡಿದಿರುವ ಛಾಯಚಿತ್ರಗಳು, ನಿಸರ್ಗ ಸೌಂದರ್ಯದೊಳಗೆ ಅವರೇ ಸೆರೆಯಾಗಿರುವ ವಿಷಯ ಅವರ ಆಪ್ತರಿಗೆ ಮಾತ್ರ ಗೊತ್ತಿರಬಹುದು. ಆದರೆ ತಾನು ಕಂಡ ಪ್ರಕೃತಿ ಸೌಂದರ್ಯವನ್ನು  ಕಾವ್ಯಮಯವಾಗಿ ಅಕ್ಷರಗಳಲ್ಲಿ ಪೋಣಿಸಿರುವ ಅವರ ಎಲ್ಲಾ  ಕವನಗಳು ಅಂದಿಗೂ, ಇಂದಿಗೂ, ಎಂದೆಂದಿಗೂ ಜನಮಾನಸದಲ್ಲಿ ಶಾಶ್ವತವಾಗಿ ಸೆರೆಯಾಗಿರುವುದಂತೂ ಸತ್ಯ.

ಕನ್ನಡ ನಾಡು  ನುಡಿಯ  ಬಗ್ಗೆ ಅವರಿಗಿರುವ ಅಭಿಮಾನ,  ಕಾಳಜಿ ಅಗಾಧವಾದದ್ದು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ದೊರೆತ ಸಮಯದಲ್ಲಿ  ಅವರು ವ್ಯಕ್ತಪಡಿಸಿದ ಭಾವನೆ “ನಮ್ಮಲ್ಲಿ ಸಾಕಷ್ಟು ಭವ್ಯ ಪರಂಪರೆ, ಇತಿಹಾಸವಿರುವ ತಾಣಗಳಿವೆ. ಅದ್ಭುತ ಪ್ರಕೃತಿ ಐಸಿರಿ ಜೋಗ ಜಲಪಾತ ವೈಭವವಿದೆ. ಇಂಥಹ ತಾಣಗಳು ಇಂದು ಗಬ್ಬೆದ್ದು ಹೋಗಿವೆ, ಕುಡಿತ, ಮೋಜಿನ ತಾಣವಾಗಿ, ಅಸಹನೀಯ ವಾತಾವರಣ ಅಲ್ಲಿದೆ. ಇಂಥ ಜನಾಕರ್ಷಕ ತಾಣಗಳ ರಕ್ಷಣೆ, ಕಾಳಜಿ ಸರಕಾರದಿಂದ ಆಗಬೇಕು. ಶಾಸ್ತ್ರೀಯ  ಭಾಷೆ  ಜೊತೆಜೊತೆಗೆ ಪರಂಪರೆ ಉಳಿಸುವ ಕಾರ್ಯವೂ ಆಗಬೇಕು. ರಾಜಕಾರಣಿಗಳು ಕುರ್ಚಿ ಉಳಿಸುವ ತಿಕ್ಕಾಟದಲ್ಲಿ ತೊಡಗಿಕೊಳ್ಳುವ ಬದಲು, ರಾಜಕೀಯ ಇಚ್ಛಾಶಕ್ತಿಯಿಂದ ಜನಪರವಾದ ಕಾರ್ಯ ನಡೆಸುವಂತಾಗಬೇಕು, ನಮ್ಮ ಭವ್ಯ ಪ್ರಾಕೃತಿಕ ಸಂಪತ್ತಿನ ರಕ್ಷಣೆ ಮತ್ತು ಪ್ರಚಾರ ಕಾರ್ಯ ಆಗಬೇಕು” ನಿಸಾರ್ ಅವರ ಚಿಂತನೆಗಳು, ಪರಿಸರ ಕಾಳಜಿ , ಸಾಮಾಜಿಕ ಕಳಕಳಿ,   ದೂರದೃಷ್ಟಿ ಆದರಣೀಯ. ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ| ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು ಕರ್ನಾಟಕದ ನಾಡಗೀತೆಯನ್ನಾಗಿ ಕರ್ನಾಟಕ ಸರ್ಕಾರ ಆಯ್ಕೆ ಮಾಡಿದಾಗ ಅದನ್ನು ಸಂಪೂರ್ಣ ಹಾಡಬೇಕೆ ಅಥವಾ ಕೆಲವು ಸಾಲುಗಳನ್ನು ತೆಗೆದು ಹಾಡಬೇಕೆ  ಎಂಬ ಬಿಸಿ ಚರ್ಚೆ ಆಗುತ್ತಿರುವ ಸಂದರ್ಭದಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟಣೆಗೊಂಡ ನಿಸಾರ್ ಅವರ ವಿಸ್ತೃತವಾದ ಲೇಖನವು   ವಾದ-ವಿವಾದಗಳಿಗೆ ಒಂದು ಅಂತ್ಯ ಹಾಡಿತ್ತು.

ನಿಸಾರ್ ಸರ್ ಅವರಿಗೆ   ಹಿರಿಯ ಹಾಗೂ ತಮ್ಮ ಸಮಕಾಲೀನ ಕವಿ, ಸಾಹಿತಿಗಳ ಮೇಲೆ ಅಪಾರವಾದ ಗೌರವ ಪ್ರೀತಿಯನ್ನು ಇಟ್ಟುಕೊಂಡಿದ್ದರು.    “ನಾನು ಏನಾದರೂ ಇವತ್ತು ನಾಡಿನಲ್ಲಿ  ಒಬ್ಬ  ಕವಿ ಎಂದು ಗುರುಸಿಕೊಂಡಿದ್ದರೆ, ಅದಕ್ಕೆ ಕಾರಣ ನನ್ನನ್ನು ತಿದ್ದಿ ಬೆಳೆಸಿ ಪ್ರೋತ್ಸಾಹಿಸಿದ ಗುರುಗಳು” ಎಂದು   ಕುವೆಂಪು, ಗೋವಿಂದ ಪೈ,  ದ.ರಾ. ಬೇಂದ್ರೆ,  ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ,  ಗೋಪಾಲಕೃಷ್ಣ ಅಡಿಗರನ್ನು  ನೆನೆಸಿಕೊಂಡು   ಕೈಮುಗಿದು ನಮಸ್ಕಾರ ಸಲ್ಲಿಸುತ್ತಿದ್ದರು. ಅವರು ‘ ಅಚ್ಚುಮೆಚ್ಚು’  ಕೃತಿಯಲ್ಲಿ ತನ್ನನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಹಿತ್ಯದೆಡೆಗೆ ದಾರಿ ಮಾಡಿಕೊಟ್ಟು ಸಾಧನೆಗೆ ಪ್ರೋತ್ಸಾಹಿಸಿದ ಸಾಹಿತಿಗಳಿಗೆ  ಹೃದಯಸ್ಪರ್ಶಿ ಲೇಖನಗಳನ್ನು (ಕುವೆಂಪು; ವ್ಯಕ್ತಿಕೃತಿ ಅವಲೋಕನ ಮತ್ತು ಮಹಾಕವಿಗೆ ನೆನಪಿನ ನಮನ; ಗದ್ಯ ರೂವಾರಿ ಡಾ. ಎ. ಆರ್. ಕೃಷ್ಣಶಾಸ್ತ್ರಿ; ಮಾಸ್ತಿಯವರನ್ನು ನೆನೆದು; ಕಾವ್ಯರೂಪಿ ಅಡಿಗರಿಗೆ ಉಳಿವಿಲ್ಲ; ರವೀಂದ್ರರ ಸಾಹಿತ್ಯ ವಿಚಾರಗಳು) ಮುಡುಪಾಗಿಟ್ಟು ಅವರಲ್ಲಿ  ಕಳೆದ ಕೆಲವರೊಂದಿಗೆ  ಕ್ಷಣಗಳನ್ನು  ಹಂಚಿಕೊಂಡಿರುತ್ತಾರೆ. ಗೋಪಾಲಕೃಷ್ಣ ಅಡಿಗರ ಸ್ಮರಣಾರ್ಥ ಅವರ  ಹುಟ್ಟೂರಿನ ಅವರು ಕಲಿತ ಶಾಲೆಯಲ್ಲಿ ಆಯೋಜಿಸಿದ  ಮೂರು  ದಿನಗಳ ಕಾರ್ಯಕ್ರಮದ ಎಲ್ಲಾ ಗೋಷ್ಠಿಗಳ ನೇತ್ರತ್ವವನ್ನು ವಹಿಸಿ ಇಳಿವಯಸ್ಸಿನಲ್ಲೂ ಹಗಲಿರುಳು ಶ್ರಮ ವಹಿಸಿರುವುದನ್ನು ನೋಡಿದರೆ  ನಿಸಾರ್ ಸರ್ ಅವರ ಹೃದಯ ವೈಶಾಲ್ಯ  ಹಿಮಾಲಯದಷ್ಟು ಎತ್ತರದ್ದು.

ನಿಸಾರ್ ಸರ್ ಅವರ ಹ್ಯಾಂಡ್‌ಬ್ಯಾಗ್‌ನಲ್ಲಿ ಒಂದಿಷ್ಟು ಚಾಕಲೇಟ್ ಸದಾ ಇರುತ್ತದೆ. ಹೀಗೆ ಹೇಳುವಾಗ ಬಹುಶ: ನಿಸಾರ್ ಅವರಿಗೆ ಚಾಕಲೇಟ್ ಅಂದರೆ ತುಂಬಾ ಇಷ್ಟ ಅನಿಸಬಹುದು. ತಾನು ಎಲ್ಲೇ ಹೋದರೂ  ಮಕ್ಕಳು ಸಿಕ್ಕಿದರೆ, ಆ ಮಕ್ಕಳಿಗೆ ಹಂಚಲು ಚಾಕಲೇಟ್‌ಗಳನ್ನು ರೆಡಿಯಾಗಿ ಇಟ್ಟುಕೊಂಡಿರುತ್ತಿದ್ದರು.  ಮಕ್ಕಳೊಂದಿಗೆ ತಾನು ಬೆರತು ಒಂದಿಷ್ಟು ಖುಷಿಪಡುತ್ತಿದ್ದರು.   ನಿಸಾರ್ ಸರ್ ಅವರನ್ನು ಜನರು ಗುರುತಿಸಿ ಮಾತಾನಾಡಿಸಿದಾಗ, ತಾನೊಬ್ಬ ಮೇರು ಸಾಹಿತಿ ಎಂದು ಒಂದಿಷ್ಟು ಗತ್ತುಗಾಂಭೀರ್ಯವನ್ನು ತೋರಿಸದೆ  ಆತ್ಮೀಯವಾಗಿ ಮಾತನಾಡಿಸುತ್ತಿದ್ದರು.  ಒಳ್ಳೆಯ ಕೆಲಸಗಳನ್ನು ಪ್ರಶಂಸಿಸುತ್ತಿದ್ದರು, ಅವರ ಪ್ರೋತ್ಸಾಹದ ನುಡಿಗಳು ಸ್ಪೂರ್ತಿದಾಯಕ.  ಅವರ ಒಡನಾಟದ ನಂತರ ನಾನು ಯಾವುದಾದರೂ ಲೇಖನಗಳನ್ನು ಬರೆದಾಗ ಇರಲಿ ಅಂತ ಹೇಳಿ ಅವರ ವಿಳಾಸಕ್ಕೆ ಅಂಚೆಯಲ್ಲಿ ಪ್ರತಿಯನ್ನು ಕಳಿಸುತ್ತಿದ್ದೆ. ಅನೇಕ ಕೆಲಸಕಾರ್ಯ,   ಸಭೆ ಸಮಾರಂಭಗಳ ನಡುವೆ ಅವುಗಳನ್ನು ಮೂಲೆಗೆ ಇಟ್ಟಿರಬಹುದು ಅಂತ ಅನಿಸಿದರೆ ತಲುಪಿದ ಕೆಲವು ದಿನಗಳ ನಂತರ ಅವರೇ ದೂರವಾಣಿ ಕರೆ ಮಾಡಿ ಲೇಖನಗಳ ಬಗ್ಗೆ ಚರ್ಚಿಸಿ ತಿದ್ದುಪಡಿಗಳು ಇದ್ದರೆ ಗಮನಕ್ಕೆ ತಂದು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು.   ಯಾರು ಏನೇ ಪುಸ್ತಕ ಲೇಖನಗಳನ್ನು ಕಳುಹಿಸಿದರು,  ಬಿಡು ಮಾಡಿಕೊಂಡು ಅವುಗಳನ್ನು ಓದಿ ತನ್ನ ಅಭಿಪ್ರಾಯವನ್ನು ನೀಡುವುದು ತನ್ನ ಕರ್ತವ್ಯ ಎಂಬಂತೆ ಪಾಲಿಸುತ್ತಿದ್ದರು.

ಪ್ರೊ. ಕೆ.  ಎಸ್.  ನಿಸಾರ್ ಅಹಮದ್ ಅವರು ವಿನೋದಪ್ರೀಯರು, ಸಂಗಡಿಗರೊಂದಿಗೆ ಮಾತಿನ ಮಧ್ಯೆ ಹಾಸ್ಯ ಚಟಾಕಿಯನ್ನು ಹಾರಿಸುವುದು ಅವರ ಸ್ವಭಾವ. ಬೇರೆಯವರು ಜೋಕ್ ಮಾಡಿದರು ಅಷ್ಟೇ ಸಂತಸದಿಂದ ಆಸ್ವಾದಿಸುತ್ತಿದ್ದರು. ಯಾವುದೇ ಸಭೆ ಸಮಾರಂಭ ಇರಲಿ,  ಅವರ ಭಾಷಣಗಳನ್ನು ಕೇಳುವುದೇ ಒಂದು ಖುಷಿ ಕೊಡುವ ಅನುಭವ. ಸಂದರ್ಭಾನುಸಾರ ಅವರು ಹೇಳುವ ಹಾಸ್ಯ ತುಣುಕುಗಳು,  ಕೀಟಲೆಗಳು ಮನಸ್ಸಿಗೆ ಹಿತ ನೀಡುತ್ತಿತ್ತು.  ಅವರಿಗೆ ಮಾನವ ನಿರ್ಮಿತ ಸ್ಥಾವರ ಕಟ್ಟಡಗಳಿಗಿಂತ ಪ್ರಕೃತಿ ಸೌಂದರ್ಯವನ್ನು ಸವಿಯುವುದು ತುಂಬಾ ಇಷ್ಟ.    ಪುಸ್ತಕ ಬಿಡುಗಡೆಗೆ ಮಂಗಳಗಂಗೋತ್ರಿಗೆ ಬಂದಾಗ  ಅವರ ಅಭಿಲಾಷೆಯಂತೆ ಸೋಮೇಶ್ವರ ಸಮುದ್ರಕಿನಾರೆಗೆ  ಸಂದರ್ಶಿಸಿದಾಗ ಮಧ್ಯಾಹ್ನದ ಸುಡುಬಿಸಿಲಿನ ಹೊತ್ತಿನಲ್ಲೂ (ಸಂಜೆ ನಾಲ್ಕು ಗಂಟೆಗೆ ಅವರ ವಿಮಾನದ ಸಮಯವಾಗಿದ್ದರಿಂದ ಸೂರ್ಯಾಸ್ತಮದ ಸಮಯಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ) ಅಲ್ಲಿನ ಸೌಂದರ್ಯದೊಂದಿಗೆ ಸಂಭ್ರಮಿಸುತ್ತಿದ್ದರು. ಅವರು ಪೋನಾಯಿಸಿದಾಗಲೆಲ್ಲ  ಪುಸ್ತಕ ಬಿಡುಗಡೆ ಮಾಡಲು ಬಂದಾಗ ಪರಿಚಯವಾಗಿದ್ದ ನನ್ನ ತಂದೆ ತಾಯಿಗಳನ್ನು ಅತ್ತೆ ಮಾವ, ಹೆಂಡತಿ ಎಲ್ಲರನ್ನೂ ಜ್ಞಾಪಿಸಿಕೊಳ್ಳುತ್ತಿದ್ದರು.  ಮಾತ್ರವಲ್ಲ, ಆ ದಿನ ಅವರ ಜೊತೆ ಸೇರಿದ ನನ್ನ ಸ್ನೇಹಿತರನ್ನೆಲ್ಲ ವಿಚಾರಿಸಿಕೊಂಡು ಅವರಿಗೆಲ್ಲ ನನ್ನ ನಮಸ್ಕಾರಗಳನ್ನು ತಿಳಿಸಿ ಎಂದು ಮರೆಯದೇ ಹೇಳುತ್ತಿದ್ದರು. ಅವರ ಸ್ಮರಣಶಕ್ತಿ ನಿಜವಾಗಿಯೂ ಆಶ್ಚರ್ಯ ಉಂಟುಮಾಡುತ್ತದೆ. ತನ್ನೊಂದಿಗೆ ಬೆರೆತ ಎಲ್ಲರ  ಹೆಸರುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಅವರ ಮನೆಗೆ ಹೋದಾಗ ಅವರು ನೀಡುವ ಅತಿಥಿ ಸತ್ಕಾರ;    ತೋರುವ ಆತ್ಮೀಯತೆ,  ಹಿಂದಿರುಗುವಾಗ ಒಂದಿಷ್ಟು ಪುಸ್ತಕಗಳು,  ತಿಂಡಿತಿನಿಸುಗಳನ್ನು  ಕಟ್ಟಿಕೊಡುವ ಅವರ ಪ್ರೀತಿ ವಾತ್ಸಲ್ಯಕ್ಕೆ ಬೆಲೆಕಟ್ಟಲಾಗದು. ಸದಾ ಲವಲವಿಕೆಯಿಂದ ಇರುವ ನಿಸಾರ್ ಅವರು ಜೊತೆಯಲ್ಲಿ ಇರುವವರೆಲ್ಲರನ್ನೂ  ತಮ್ಮ ಹಾಸ್ಯಪ್ರಜ್ಞೆಯಿಂದ ಲವಲವಿಕೆಯಿಂದ ಇರುವಂತೆ ಮಾಡುತ್ತಿದ್ದರು.   ಅವರು ದೇಶ ವಿದೇಶಗಳನ್ನು ಸುತ್ತಿದವರು; ಅಲ್ಲಿ ಕಳೆದ ಸವಿ ಕ್ಷಣಗಳನ್ನು,  ನೋಡಿದ ಪ್ರೇಕ್ಷಣೀಯ ಸ್ಥಳಗಳು, ವಿಶೇಷ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಪ್ರವಾಸ ಕಥನಗಳನ್ನು ಹೊರತರಬೇಕೆಂಬ ಅಭಿಲಾಷೆ ಅವರ ಮನದಲ್ಲಿ ಅಡಗಿತ್ತು.  ಇತ್ತೀಚಿನ ವರ್ಷಗಳಲ್ಲಿ ಅವರ ಕುಟುಂಬದಲ್ಲಿ ಉಂಟಾದ ಕೆಲವು ಘಟನೆಗಳು, ನೋವುಗಳಿಂದಾಗಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ಬಾರಿ ಹೇಳಿದ್ದರು. ಅವರು ಆರೋಗ್ಯವಂತರಾಗಿ ಬದುಕಿರುತ್ತಿದ್ದರೆ ಮುಂದಿನ ದಿನಗಳಲ್ಲಿ ಪ್ರವಾಸ ಕಥನಗಳನ್ನು ಹೊರತರುವ ಅವರ ಕನಸು ಸಾಕಾರಗೊಳ್ಳುತ್ತಿ ತ್ತು.

ಅವರ ನಿತ್ಯೋತ್ಸವ, ಆನಂದೋತ್ಸವ ಮತ್ತು ಮಿಲನೋತ್ಸವ ಧ್ವನಿಸುರುಳಿಯ (ಸಿಡಿಯಲ್ಲಿ) ಅವರ ಸಾಹಿತ್ಯದ ಒಂದೊಂದು ಹಾಡನ್ನು ಕೇಳುವಾಗ ಮೈಮನಸ್ಸೆಲ್ಲಾ ಉಲ್ಲಾಸಭರಿತವಾಗುತ್ತದೆ. ಎಷ್ಟೋ ಸಲ ಮನಸ್ಸು ಖಿನ್ನತೆ ಯಲ್ಲಿರುವಾಗ ಅವರ ಹಾಡನ್ನು ಕೇಳಿದಾಗ ಮನಸ್ಸು ಪ್ರಸನ್ನವಾಗುತ್ತದೆ.  ಅವರ  ನಿತ್ಯೋತ್ಸವದ ಹಾಡುಗಳು  ಎಷ್ಟೊಂದು  ಜನಪ್ರಿಯತೆ ಹೊಂದಿದೆ ಎಂದರೆ ಧ್ವನಿಸುರುಳಿ  ೧೯೭೨ ರಲ್ಲಿ ಬಿಡುಗಡೆಯಾದ ದಿನದಿಂದಲೂ  ಅದು ಎವರ್ಗ್ರೀನ್.  “ನನ್ನ ಅನೇಕ ಕವನಗಳು ಇಷ್ಟೊಂದು  ಕೀರ್ತಿ,  ಜನಪ್ರಿಯತೆಯ  ಹೆಗ್ಗಳಿಕೆಯು ಇಂಪಾದ ರಾಗ ಸಂಯೋಜನೆ ಮಾಡಿರುವ  ನನ್ನ ಆಪ್ತಮಿತ್ರ  ಮೈಸೂರು ಅನಂತ ಸ್ವಾಮಿ ಅವರಿಗೆ ಸಲ್ಲುತ್ತದೆ” ಎಂದು ಸಂದರ್ಭ ಸಿಕ್ಕಿದಾಗಲೆಲ್ಲ ವ್ಯಕ್ತಪಡಿಸುವ  ಅವರ ದೊಡ್ಡ ಗುಣ ಅನುಕರಣೀಯ. ಎಲ್ಲಿಯೂ ಅವರು ತನ್ನ  ಸಾಹಿತ್ಯದಿಂದಲೇ ಆ ಕವನಗಳು (ಗೀತೆಗಳು) ಜನಪ್ರಿಯತೆ    ಪಡೆಯಿತು ಎಂದು ಬೀಗಿದವರಲ್ಲ.  ನಿಸಾರ್ ಅವರು ಒಬ್ಬ ಮುಸ್ಲಿಂ  ಬಾಂಧವರಾದರೂ, ಅವರು  ವೇದಗಳು, ರಾಮಾಯಣ, ಮಹಾಭಾರತ, ಬೈಬಲ್ , ಪುರಾಣ ಕಥೆಗಳ ಬಗ್ಗೆ   ಅಪಾರವಾದ ಜ್ಞಾನ,  ಆಸಕ್ತಿಯನ್ನು ಹೊಂದಿದ್ದರು. ಅವರ ಮನೆಯ ಕಪಾಟಿನಲ್ಲಿ ಕೂಡಿಟ್ಟಿರುವ ಪುಸ್ತಕಗಳ ರಾಶಿಯಲ್ಲಿ ವಿವಿಧ ಧರ್ಮಗಳ  ಅನೇಕ ಪುಸ್ತಕಗಳನ್ನು ಶೇಖರಿಸಿಟ್ಟಿದ್ದರು.

ಅವರ ಧರ್ಮಪತ್ನಿಯ ಬಗ್ಗೆ ಅಪಾರವಾದ ಗೌರವ ಪ್ರೀತಿಯನ್ನು ಹೊಂದಿದ್ದರು.  ಪರ ಊರಿನಲ್ಲಿ ಇರುವಾಗ ರಾತ್ರಿ ಊಟವಾದ ನಂತರ ತಪ್ಪದೆ ಹೆಂಡತಿಗೆ ಫೋನ್ ಮಾಡಿ ಆ ದಿನದ ಮುಖ್ಯ ಘಟನಾವಳಿಗಳನ್ನು ಹಂಚಿಕೊಳ್ಳುತ್ತಿದ್ದರು. ನಿಸಾರ್ ಅಹಮದ್ ಸರ್ ಅವರು ಭೋಜನ ಪ್ರಿಯರು, ಅದರಲ್ಲೂ ಮುಖ್ಯವಾಗಿ ನಾನ್ ವೆಜ್ ಊಟ ಅಂದರೆ ತುಂಬಾ ಇಷ್ಟ. ಆಸ್ವಾದಿಸಿ ಖುಷಿಯಿಂದ ಊಟವನ್ನು ಮಾಡುತ್ತಿದ್ದರು. ಆ ದಿನದ ಊಟದ ವಿಶೇಷತೆಗಳನ್ನು ಹೆಂಡತಿಗೆ ವರದಿಯನ್ನು ನೀಡುತ್ತಿದ್ದರು.  ಹೆಂಡತಿಯೊಂದಿಗೂ  ಸಹ ತಮ್ಮ ಅದೇ ಹಾಸ್ಯಪ್ರಜ್ಞೆಯಿಂದಲೇ ಮಾತನಾಡುತ್ತಿದ್ದರು. ಇದು ಅವರ ಅನ್ನೋನ್ಯ ದಾಂಪತ್ಯ ಜೀವನವನ್ನು  ಸೂಚಿಸುತ್ತಿತ್ತು.  ಇತ್ತೀಚೆಗೆ ಅಂದರೆ ಮಾರ್ಚ್  23,  2019 ರಂದು  ಅವರ ಧರ್ಮಪತ್ನಿ ಶಹನವಾಜ್ ಬೇಗಂ ಅವರು ನಿಧನರಾದಾಗ, ತುಂಬಾ ಕುಗ್ಗಿ ಹೋಗಿದ್ದರು.  ಮೊಣಕಾಲು ಗಂಟು ನೋವಿನಿಂದ ಬಳಲುತ್ತಿದ್ದ ತಮ್ಮ ಪತ್ನಿಯನ್ನು ಸಭೆ-ಸಮಾರಂಭಗಳಿಗೆ,  ಪ್ರಶಸ್ತಿ-ಪುರಸ್ಕಾರಗಳನ್ನು ಸ್ವೀಕರಿಸುವ ಸಂದರ್ಭಗಳಲ್ಲಿ ಕರೆದುಕೊಂಡು ಹೋಗಲು ಸಾಧ್ಯವಾಗದೆ ಇರುವುದಕ್ಕೆ  ತುಂಬಾ ಬೇಸರವನ್ನು ವ್ಯಕ್ತಪಡಿಸುತ್ತಿದ್ದರು.  2017ರ ಮೈಸೂರು ದಸರಾವನ್ನು ಉದ್ಘಾಟಿಸಲು ಕರ್ನಾಟಕ ಸರ್ಕಾರವು ನಿಸಾರ್ ಅಹ್ಮದ್ ಅವರನ್ನು ಆಮಂತ್ರಿಸಿದಾಗ, ತಮ್ಮ ಪತ್ನಿಯನ್ನು ಹೇಗೋ ಕಷ್ಟಪಟ್ಟು ತಮ್ಮೊಂದಿಗೆ ಕರೆದುಕೊಂಡು ಹೋಗಿರುವುದನ್ನು ತುಂಬಾ ಸಂತಸದಿಂದ ಹಂಚಿಕೊಂಡಿದ್ದರು.

ಯಾರಾದರೂ ಕಷ್ಟದಲ್ಲಿದ್ದಾರೆ  ಎಂಬುದು ಗೊತ್ತಾದಾಗ ಸಂಕಷ್ಟಕ್ಕೆ ಮಿಡಿಯುವ ಅವರ ಮಾನವೀಯ ಗುಣ ಆದರ್ಶನೀಯ.  ತುಂಬಾ ಸರಳ ಜೀವನ ಅವರದ್ದು. ಕಾರು ಬಂಗಲೆ ಅವರಲ್ಲಿರಲಿಲ್ಲ.   ಅದಕ್ಕೆಲ್ಲ ಆಸೆ ಪಟ್ಟವರೂ ಅಲ್ಲ. ಸಹೃದಯ  ವ್ಯಕ್ತಿತ್ವದ ಅವರ ಜೀವನಶೈಲಿಯು ಸಹ ಸರಳವಾಗಿತ್ತು. ಬೆಂಗಳೂರಿನಲ್ಲಿ ವ್ಯಯಕ್ತಿಕ ಕೆಲಸಕ್ಕೆ ಹೋಗುವುದಿದ್ದರೆ ನಡೆದುಕೊಂಡೇ ಅಥವಾ ದೂರದಲ್ಲಿ ಇದ್ದರೆ ರಿಕ್ಷಾದಲ್ಲೇ ಓಡಾಡುತ್ತಿದ್ದರು. ನಿಸಾರ್ ಸರ್ ಅವರು ಅಪ್ಪಟ ದೇಸಿವಾದಿ ಮತ್ತು ಕನ್ನಡಪ್ರೇಮಿ. ತನ್ನನ್ನು ಈ ಮಟ್ಟಕ್ಕೆ ತಂದುಕೊಟ್ಟ ಕನ್ನಡಾಂಬೆಗೆ ಯಾವಾಗಲೂ ಭಕ್ತಿಯಿಂದ ನಮಸ್ಕರಿಸುತ್ತಿದ್ದರು.  ಭಾರತದಲ್ಲಿ ಹುಟ್ಟಿ ಬೆಳೆದಿರುವ ನಾನೇ ಧನ್ಯ ಎಂದು ಸದಾ ಸ್ಮರಿಸುತ್ತಿದ್ದರು.  ಮನೆಯಲ್ಲಿ ತುಂಬಾ ಸರಳವಾಗಿದ್ದರೂ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವಾಗ ಖಡಕ್ ಇಸ್ತ್ರಿ  ಹಾಕಿರುವ  ಸೂಟು ಟೈ ಧರಿಸಿ ಬಹಳ ಶಿಸ್ತುಬದ್ಧವಾಗಿ ಹೋಗುವುದರಲ್ಲಿ ರಾಜಿ ಮಾಡಿಕೊಳ್ಳುತ್ತಿರಲಿಲ್ಲ.  ಯಾವುದೇ ಕಾರ್ಯಕ್ರಮವಿರಲಿ  ಅಲಕ್ಷ ಮಾಡದೆ, ಸಂದರ್ಭಾನುಸಾರ ಮಾತಾನಾಡಲು  ಪೂರ್ವ ತಯಾರಿಮಾಡಿಕೊಳ್ಳುವುದು ಅವರ ನಿಯಮ.  ನಿಸಾರ್ ಅವರು ಯಾವಾಗಲೂ ಹೇಳುತ್ತಿದ್ದರು, “ಜನರು ನನ್ನನ್ನು ಗುರುತಿಸಿ ಗೌರವಿಸುತ್ತಾರೆ. ಈ ಗೌರವ ಸನ್ಮಾನ ಎಲ್ಲವೂ ಕನ್ನಡ ಮಾತೆಗೆ ಸಲ್ಲಬೇಕು. ಇಲ್ಲಿ ನಾನು ನಿಮಿತ್ತ ಮಾತ್ರ.  “ನಾನು ಯಾವ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಆಸೆ ಇಟ್ಟುಕೊಂಡವನಲ್ಲ. ಅದಾಗಿಯೇ ಬಂದಿವೆ’ ನಮಗೆ  ಏನೇನು  ಸಲ್ಲಬೇಕು  ಭಗವಂತನ ಕೃಪೆಯಿಂದ ಅದಾಗಿಯೇ ಸಲ್ಲುತ್ತಿದೆ. ರಾಷ್ಟ್ರಕವಿ  ಪುರಸ್ಕಾರಕ್ಕೆ ಅವರ ಹೆಸರು ಮುಖ್ಯವಾಗಿ ಕೇಳಿಬಂದಿತ್ತು.   ಪ್ರಶಸ್ತಿಯು ಬಹಳ ಚರ್ಚಾಸ್ಪದವಾದಾಗ ಅವರು ತುಂಬಾ ಮುಜುಗರ ಪಟ್ಟುಕೊಂಡಿದ್ದು ಇದೆ.

ಅವರ ಜೊತೆ ಇದ್ದರೆ ಸಮಯ ಕಳೆದಿದ್ದೆ ಗೊತ್ತಾಗುತ್ತಿರಲಿಲ್ಲ. ನಾನು ಅವರಿಗಿಂತ ತುಂಬಾ ಚಿಕ್ಕವನಾದರೂ ತಮ್ಮ ಅನುಭವಗಳನ್ನು ಕಷ್ಟಸುಖಗಳನ್ನು ಹಂಚಿಕೊಳ್ಳುತ್ತಿದ್ದರು.  ತನ್ನೊಂದಿಗೆ ಪ್ರಯಾಣಿಸುವ ಕಾರು ಚಾಲಕರನ್ನು ಆತ್ಮೀಯವಾಗಿ ಮಾತನಾಡಿಸಿ ಅವರ ಕಷ್ಟಸುಖಗಳನ್ನು ವಿಚಾರಿಸುತ್ತಿದ್ದರು. ತನಗೆ ಆತ್ಮೀಯರಾದವರಿಗೆ, ಸಹಾಯ ಮಾಡಿದವರಿಗೆ ಹಾಡಿನ ಸಿಡಿ ಅಥವಾ ಚಾಕ್ಲೇಟ್ ನೀಡುವುದನ್ನು ಮರೆಯುತ್ತಿರಲಿಲ್ಲ.  ಅವರ ಮನೆಯಲ್ಲಿ ಹಾಸಿಗೆ ಹಿಡಿದಿರುವ ಸುಮಾರು  ೯೨ ವರ್ಷ ಪ್ರಾಯದ ಅತ್ತೆಯನ್ನು  (ಅವರ ಧರ್ಮಪತ್ನಿಯ  ತಾಯಿ) ತುಂಬಾ ಕಾಳಜಿಯಿಂದ ಆರೈಕೆ ಮಾಡುತ್ತಿದ್ದರು.  ಬೆಂಗಳೂರಿನಲ್ಲಿರುವ  ಅವರ  ‘ನಿತ್ಯೋತ್ಸವ’  ಮನೆಯ ವಾಸ್ತುಶೈಲಿ,  ಗೋಡೆಯಲ್ಲಿ ಬಿಡಿಸಿದ ನಿಸರ್ಗ ಸೌಂದರ್ಯದ ವರ್ಣಚಿತ್ರಗಳು ಅವರ ಸೃಜನಶೀಲತೆಗೆ ಕನ್ನಡಿ ಹಿಡಿದಂತಿದೆ. ನಿತ್ಯೋತ್ಸವ ಅವರ ಕನಸಿನ ಮನೆಯಾಗಿದ್ದರು ತಮ್ಮ ಧರ್ಮಪತ್ನಿ ಮತ್ತು ಅತ್ತೆಯವರ  ಆರೈಕೆಗಾಗಿ ಪದ್ಮನಾಭನಗರದಲ್ಲಿರುವ  ಚಿಕ್ಕ ಮನೆಯಲ್ಲಿಯೇ ವಾಸವಾಗಿರುವುದು ಅವರ ತ್ಯಾಗ ಮನೋಭಾವಕ್ಕೆ ಒಂದು  ಉದಾಹರಣೆ.

ಉಡುಪಿಯ ಎಂ.ಜಿ. ಎಂ. ಕಾಲೇಜಿನಲ್ಲಿ ೨೦೧೪ ರ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಭಾಜನರಾದಾಗ ಪ್ರಶಸ್ತಿ ಸ್ವೀಕರಿಸಿ ಅವರು ಮಾಡಿದ ಭಾಷಣ ಅವಿಸ್ಮರಣೀಯ. ಅಲ್ಲಿ ಅವರು ಭಾಷಣದಲ್ಲಿ ಹೇಳಿದ ಮಾತು  “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ನನಗೆ ತುಂಬಾ ಪ್ರಿಯವಾದದ್ದು;  ಇಲ್ಲಿನ ಜನರ ತೋರುವ ಪ್ರೀತಿವಾತ್ಸಲ್ಯಕ್ಕೆ ಅತಿಥಿ ಸತ್ಕಾರಕ್ಕೆ ಸದಾ ಋಣಿಯಾಗಿರುತ್ತೇನೆ..”  ಅಂದು ಅಲ್ಲಿ ನೆರೆದಿರುವವರೆಲ್ಲರ ಮನದಲ್ಲಿ ಅಚ್ಚೊತ್ತಿದೆ. ಅವರೊಂದಿಗೆ ಕಳೆದ ಸಮಯ  ನಮ್ಮ ಜೀವನದ ಸವಿಕ್ಷಣಗಳು.  ಅವರು ಭಾಗಿಯಾಗುವ ಕಾರ್ಯಕ್ರಮ ಎಲ್ಲೇ ಇದ್ದರೂ  ಅದರ ಆಮಂತ್ರಣ ಪತ್ರಿಕೆಯನ್ನು ತಪ್ಪದೇ ಕಳುಹಿಸುತ್ತಿದ್ದರು. ಅನೇಕಬಾರಿ ಬರಲೇಬೇಕು ಎಂದು ಪ್ರೀತಿಯಿಂದ ಒತ್ತಾಯಿಸುತ್ತಿದ್ದರು.  ವೇದಿಕೆ ಮೇಲೆ ಭಾಷಣ ಮಾಡುವಾಗ ಅವರ ಪ್ರೀತಿಗೆ ಓಗೊಟ್ಟು ಬಂದ ಆತ್ಮೀಯರ ಹೆಸರುಗಳನ್ನು  ಹೇಳಿ ಕೃತಜ್ಞತೆ ಸಲ್ಲಿಸುವುದನ್ನು ಮರೆಯುತ್ತಿರಲಿಲ್ಲ. ಮೂರು ನಾಲ್ಕು ಬಾರಿ ದೊಡ್ಡ ಸಮಾರಂಭಗಳಲ್ಲಿ ಭಾಷಣ ಮಾಡುತ್ತಿರುವಾಗಲೇ ವೇದಿಕೆಗೆ ಕರೆದು  ಅವರಿಂದ ಗುರುತಿಸಿಕೊಳ್ಳುವ ಸೌಭಾಗ್ಯ ಸಿಕ್ಕಿರುವುದು ನನ್ನ ಅದೃಷ್ಟ. 2017ರಲ್ಲಿ ಕರ್ನಾಟಕ ಸರಕಾರದಿಂದ ಪಂಪ ಪ್ರಶಸ್ತಿಗೆ ಭಾಜನರಾದ ಸುಸಂದರ್ಭದಲ್ಲಿ ಸಿರ್ಸಿಯಲ್ಲಿ ಅವರೊಂದಿಗೆ ಉಳಿದು ಮಾರನೆಯ ದಿನ  ಪ್ರಕೃತಿಯ ರಮ್ಯ ತಾಣ ಯಾಣಕ್ಕೆ  ಭೇಟಿ ನೀಡಿ ಅಲ್ಲಿ ಅವರೊಂದಿಗೆ ಕಳೆದ ಕ್ಷಣಗಳು ನನ್ನ ಪಾಲಿಗೆ ಅವಿಸ್ಮರಣೀಯ.

ನಿಸಾರ್ ಅವರ ಕವನ, ಸಾಹಿತ್ಯವನ್ನು  ಓದಿದವರಿಗೆ, ಅವರ ಸಾಹಿತ್ಯದ ಹಾಡನ್ನು ಕೇಳಿದವರಿಗೆ  ಅವರು ಒಬ್ಬ ಶ್ರೇಷ್ಠ ಕವಿ. ಆದರೆ ಅವರ ಜೊತೆ ಒಡನಾಟ ಬಲ್ಲವರಿಗೆ ಮಾತ್ರ ಗೊತ್ತು, ಅವರದ್ದು ಸರಳ ಸಜ್ಜನಿಕೆಯ ವ್ಯಕ್ತಿತ್ವ.  ಒಮ್ಮೆ ಮುಗ್ಧ ಮನಸ್ಸಿನ ಮಗುವಿನಂತೆ,  ಇನ್ನೊಮ್ಮೆ ದಾರ್ಶನಿಕರಾಗಿ, ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿಯಂತೆ ಕಾಣುತ್ತಾರೆ.  ಅವರು  ಪಡೆದ  ಪ್ರಶಸ್ತಿ-ಪುರಸ್ಕಾರಗಳು ನೂರಾರು. ಈ ಎಲ್ಲಾ ಪ್ರಶಸ್ತಿ-ಪುರಸ್ಕಾರಗಳಿಗೆ ಪೂರಕವಾಗಿ ಪಡೆದಿರುವ ಸ್ಮರಣಿಕೆಗಳಲ್ಲಿ ಪದ್ಮನಾಭನಗರದಲ್ಲಿರುವ ಅವರ  ಖಾಸಗಿ ಕೊಠಡಿಯ ಗೋಡೆಯಲ್ಲಿ  ಕೆಲವೊಂದು ತೂಗು ಹಾಕಿದ್ದಾರೆ ಇನ್ನು ಹಲವಾರು ಸ್ಥಳವಕಾಶ ಇಲ್ಲದೆ ಒಂದು ಮೂಲೆಯಲ್ಲಿ  ರಾಶಿ ಬಿದ್ದಿವೆ. ನಿಸಾರ್ ಅಹಮದ್ ಅವರ ಹೆಸರಿನಲ್ಲಿ ಮ್ಯೂಸಿಯಂ ಒಂದನ್ನು  ಸ್ಥಾಪಿಸಿ  ಅವರು ಪಡೆದ ಪ್ರಶಸ್ತಿ-ಪುರಸ್ಕಾರಗಳ ಫಲಕಗಳನ್ನ ,  ಸ್ಮರಣಿಕೆಗಳನ್ನು,  ಅವರ ಸಂಗ್ರಹದಲ್ಲಿರುವ ಪುಸ್ತಕ ಭಂಡಾರ,  ಎಲ್ಲ ಕೃತಿಗಳನ್ನು, ಸಂರಕ್ಷಿಸಿ  ಪ್ರದರ್ಶನಕ್ಕೆ ಇಟ್ಟರೆ ಮೇರು ಕವಿಗೆ ಈ ಸಂದರ್ಭದಲ್ಲಿ ನೀಡುವ ಒಂದು ದೊಡ್ಡ ಗೌರವಾರ್ಪಣೆ. ನಿಸಾರ್ ಅವರು  ನಮ್ಮನ್ನು ಅಗಲಿರಬಹುದು.  ಆದರೆ ಅವರು ಕನ್ನಡ ಸಾಹಿತ್ಯಲೋಕಕ್ಕೆ ಮಾತ್ರವಲ್ಲ ಕನ್ನಡ ಭಾಷಾಭಿವೃದ್ಧಿಗೆ  ನೀಡಿರುವ  ಅಮೂಲ್ಯ  ಕೊಡುಗೆಗಳು ಐತಿಹಾಸಿಕ. ಇಂತಹ ಮಹಾನ್ ವ್ಯಕ್ತಿಗೆ ನನ್ನದೊಂದು ಭಾವಪೂರ್ಣ ಶ್ರದ್ಧಾಂಜಲಿ.

 

‍ಲೇಖಕರು avadhi

May 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

21 ಪ್ರತಿಕ್ರಿಯೆಗಳು

  • Ashakiran

   ಅರ್ಥ ಪೂರ್ಣವಾದ ಶ್ರದ್ಧಾಂಜಲಿ. ಕವಿಯ ವಿಸ್ತೃತವಾದ ಮಾಹಿತಿಗಾಗಿ ಧನ್ಯವಾದಗಳು..

   ಪ್ರತಿಕ್ರಿಯೆ
 1. Dr. Shyama Prasad Sajankila

  ಆತ್ಮೀಯ ಡಾ. ಪ್ರಶಾಂತ್ ನಾಯಕ್… ನಿತ್ಯೋತ್ಸವ ದ ನಿತ್ಯ ಕವಿ ಡಾ. ನಿಸಾರ್ ಅಹಮದ್ ಅವರ ವ್ಯಕ್ತಿತ್ವ ಪರಿಚಯ…. ಅವರ ಜೊತೆಗಿನ ನಿಮ್ಮ ಆತ್ಮೀಯ ಒಡನಾಟ ಇದನ್ನು ಅತ್ಯಂತ ಸರಳ… ಮನಮುಟ್ಟುವಂತೆ ಅಕ್ಷರ ರೂಪದಲ್ಲಿ ಚಿತ್ರಿಸಿದ್ದೀರಿ.
  ಧನ್ಯವಾದಗಳು.

  ಸ್ಥಾವರಕ್ಕಳಿಉಂಟು…. ಜಂಗಮ ಕ್ಕೆ ಅಲ್ಲ…!

  ಸಂಪೂರ್ಣ ಕರ್ನಾಟಕದ ವೈಭವವನ್ನು “ಜೋಗದ ಸಿರಿಯಲ್ಲಿ” ಸಾಂದ್ರಗೊಳಿಸಿದ ನಿತ್ಯ ಕವಿಯ ನೆನಪು ಮಾಸಲು ಸಾಧ್ಯವೇ?

  ಪ್ರತಿಕ್ರಿಯೆ
 2. Dr. Venkatakrishna K.

  ಇದು ನಿತ್ಯೋತ್ಸವ ಕವಿಗೆ ಅರ್ಥಪೂರ್ಣ ನುಡಿನಮನ. ಒಂದೊಂದೂ ವಾಕ್ಯದಲ್ಲಿ ಲೇಖಕರಿಗೆ ಕವಿಯ ಮೇಲೆ ಇದ್ದ ಅಭಿಮಾನ, ಪ್ರೀತಿ ಎದ್ದು ಕಾಣಿಸುತ್ತಿದೆ. ನಿಸಾರರ ಧೀಮಂತ ವ್ಯಕ್ತಿತ್ವ, ವಿಶಾಲ ಹೃದಯ, ಎಲ್ಲಾ ವಿಷಯಗಳ ಬಗ್ಗೆ ಅವರಿಗಿದ್ದ ಆಸಕ್ತಿ, ಜ್ಞಾನ, ಒಡನಾಡಿಗಳೊಡನೆ ಹೊಂದಿದ್ದ ಭಾಂದವ್ಯ, ಸಹಧರ್ಮಿಣಿಯ ಬಗ್ಗೆ ಅವರಿಗಿದ್ದ ಗೌರವ, ಪ್ರೀತಿ, ಅವರ ಅಪ್ರತಿಮ ಭಾಷಾಭಿಮಾನ, ಮುಂತಾದ ಎಲ್ಲಾ ಆಯಾಮಗಳನ್ನು ನಮಗೆ ಪರಿಚಯಿಸಿದ ಡಾ. ಪ್ರಶಾಂತ ನಾಯ್ಕರಿಗೆ ಅಭಿನಂದನೆಗಳು.‌ ನಿಸಾರರು ಅಮರ ಕವಿ. ಅವರ ಕೃತಿಗಳ ಮೂಲಕ ಅವರ ನೆನಪು ಸದಾ ಹಸಿರಾಗಿರುತ್ತದೆ.

  ಪ್ರತಿಕ್ರಿಯೆ
 3. M.J.Hegde

  Very good tribute to a great man. Wonderful write up. Congratulations..Our heart’felt condolences,.May his departed soul rest in eternal peace.

  ಪ್ರತಿಕ್ರಿಯೆ
 4. Dr. M. Krishnamoorthy.

  An excellent tribute the tallest ,multifaceted personality. I learnt about unparalled contributions of Prof. Nissar Ahmed from this beautiful article from Prof. Prashanth Naik. My salutations to the departed soul.

  ಪ್ರತಿಕ್ರಿಯೆ
 5. Dr Ummappa Poojary P

  ತುಂಬಾ ಅರ್ಥಪೂರ್ಣ ಶ್ರದ್ಧಾಂಜಲಿ ಸರ್, ಕವಿ ನಿಸ್ಸಾರ್ ಆಹ್ಮದ್ ಅವರ ಬಹುಮುಖಗಳನ್ನು ತೆರೆದಿಟ್ಟಿದ್ದೀರಿ.

  ಪ್ರತಿಕ್ರಿಯೆ
  • ಚಂದ್ರಮ್ಮ

   ಸರ್, ಕವಿ, ಸಾಹಿತಿ, ವಿಜ್ಞಾನಿ, ಎಲ್ಲಕ್ಕಿಂತ ಮಿಗಿಲಾಗಿ ಮಾನವತಾವಾದಿ ನಿಸ್ಸಾರ್ ಅಹ್ಮದ್ ರವರಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲೀಸಿದ್ದೀರಿ. ಪ್ರತಿ ಘಟನೆ, ಸನ್ನಿವೇಶ ಓದುಗರಿಗೆ ಮನಮುಟ್ಟುವಂತಿದೆ. ಕೋರೋನಾ ಸಂದರ್ಭದ ಈ ವಿಷಮ ಘಳಿಗೆಯಲ್ಲಿ ಮಾಧ್ಯಮದವರು ಇನ್ನೂ ಹೆಚ್ಚಿನ ಸಮಯ ಅವರ ವಿಷಯ ಚರ್ಚಿಸಲು ಸಮಯ ಮೀಸಲಿಡಲು ಕಷ್ಟವಾಗಿತ್ತೇನೋ. ಆ ಕೊರತೆ ನಿಮ್ಮ ಲೇಖನದಲ್ಲಿ ವಿವರವಾಗಿ ಮೂಡಿಬಂತು.
   ನಾನೂ ಕೂಡ ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರನ್ನು ಹತ್ತಿರದಿಂದ ನೋಡಿದ್ದು ಹಾಗೂ ಖುಷಿ ಪಟ್ಟಿದ್ದು.
   ಎಷ್ಟೋ ಆತ್ಮೀಯ ವಿಚಾರಗಳನ್ನು ತಿಳಿಸಿರುವುದಕ್ಕಾಗಿ ಧನ್ಯವಾದಗಳು.
   ಚಂದ್ರಮ್ಮ. ಎಂ

   ಪ್ರತಿಕ್ರಿಯೆ
 6. Shreenivasagiliyaru

  ನುಡಿ ನಮನ ಲೇಖನಗಳಲ್ಲಿ ಇಷ್ಟೊಂದು ವ್ಯಾಪಕವಾದ ವಿವರಗಳು, ಬಹುಮುಖಿ ನೋಟಗಳು ಹಾಗೂ ಸಹೃದಯತೆಯೊಂದಿಗೆ ಬರೆದ ಲೇಖನಗಳು ಬಹಳ ಕಡಿಮೆ ಇರಬೇಕೆಂದು ನನ್ನ ಭಾವನೆ. ನಿಮ್ಮೊಳಗಿನ ಸಾಹಿತ್ಯ ಪ್ರೀತಿ/ಮಾನವ ಪ್ರೀತಿಗೆ ಅಭಿನಂದನೆಗಳು.

  ಡಾ.ಶ್ರೀನಿವಾಸ ಗಿಳಿಯಾರು.

  ಪ್ರತಿಕ್ರಿಯೆ
 7. Dr. Vishalakshi M. Hegde

  ನಿಸಾರ್ ಅವರು ಓರ್ವ ಶ್ರೇಷ್ಠ ಕವಿ, ಬರಹಗಾರರು ಎಂದು ಎಲ್ಲರಿಗೂ ಗೊತ್ತು. ಆದರೆ ಅವರ ವ್ಯಕ್ತಿತ್ವದ ಬಗ್ಗೆ, ಅವರ ಅಭಿರುಚಿಯ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ. ಕಾಯ ಅಳಿದರೂ ಕಾಯಕ ಅಳಿಯದು ಎನ್ನುವಂತೆ ಬದುಕಿದ ಅವರಂಥವರು ಜನಮಾನಸದಲ್ಲಿ ಎಂದಿಗೂ ಉಳಿಯುತ್ತಾರೆ ಎಂಬುದು ಸಾರ್ವಕಾಲಿಕ ಸತ್ಯ. ಲೇಖನ ತುಂಬಾ ಚೆನ್ನಾಗಿದೆ.

  ಪ್ರತಿಕ್ರಿಯೆ
 8. Dr. Rajeev Bhat, Estonian University of Life Sciences, Kreutzwaldi 56/5, Tartu 51006, European Union

  An excellent article with a tribute to Prof. K.S. Nissar Ahmed, who contributed a lot for Kannada literature and Karnataka. May his soul rest in peace.

  ಪ್ರತಿಕ್ರಿಯೆ
 9. Devaraj Poojari, Byndoor

  ಇದು ನಿಜವಾಗಿಯೂ ಹೃದಯ ಸ್ಪರ್ಶಿಸುವ ಲೇಖನವಾಗಿದೆ. ಡಾ.ಪ್ರಶಾಂತ ನಾಯಕ್, ಅಂತಹ ಮಹಾನ್ ವ್ಯಕ್ತಿತ್ವದೊಂದಿಗೆ ನಿಕಟ ಒಡನಾಟವನ್ನು ಹೊಂದಲು ನೀವು ನಿಜವಾಗಿಯೂ ಅದೃಷ್ಟಶಾಲಿ. ನಾವು ನಿತ್ಯೋತ್ಸವ ಕವಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

  ಪ್ರತಿಕ್ರಿಯೆ
 10. Kishori Nayak

  Very fine tribute to the great poet. Well-written with several personal anecdotes which bring out the personality of Prof. Nissar Ahmed, both as a poet and as a man of science. I remember enjoying not merely the celebratory poem Nithyotsava, but also satirical poems like Kurigalu Sar Kurigalu. Thanks for sending me the article, Prof Prashanth.

  ಪ್ರತಿಕ್ರಿಯೆ
 11. Spoorthi S. Sagarkar, Sirsi

  Because of you I got an opportunity to meet Nissar Ahmed Sir at your first book release programme at Mangalore. He was a simple man and the article u wrote about him was really good

  ಪ್ರತಿಕ್ರಿಯೆ
 12. Keshava Murthy Bengaluru

  ನಿಸಾರ್ ಸರ್-ರನ್ನು ಕೇವಲ ಠಾಕು- ಠೀಕಾದ ಕೋಟಿನೊಳಗೆ , ಟಿವಿಯಲ್ಲಿ ನೋಡಿದ್ದ ನಮ್ಮಂತಹವರಿಗೆ..‌ ತಮ್ಮ ಒಡನಾಟದ ಸವಿನೆನಪುಗಳಲ್ಲಿ ನಿಸಾರ್ ಸರ್ ರ ಸರಳತೆ, ಹಾಸ್ಯ ಮನೋಭಾವ ಹಾಗೂ ವಿಜ್ಞಾನದ ಲೇಖನದ ಹೊಸ ಅಂಶಗಳನ್ನು ತಿಳಿಸಿ ಕೊಟ್ಟಿದ್ದೀರಿ. ಧನ್ಯವಾದಗಳು ಪ್ರಶಾಂತ್ ಸರ್.

  ಪ್ರತಿಕ್ರಿಯೆ
 13. ಜಯಕರ ಭಂಡಾರಿ

  ನಿಸಾರ್ ಸರ್ ಕೋಟಿನ ಒಳಗೆ ತುಂಬಾ ಆಪ್ತವಾಗಿ ಸೇರಿಕೊಂಡು, ಅಲ್ಲಿ ಕಂಡ ಅಪರೂಪದ ಅಂಶಗಳನ್ನು ನಮಗೂ ಹಂಚಿದ್ದಕ್ಕೆ ಧನ್ಯವಾದಗಳು ಪ್ರಶಾಂತ್. ತುಂಬಾ ಆಪ್ತವಾಗುವ ಬರಹ ನಿಮ್ಮದು.

  ಪ್ರತಿಕ್ರಿಯೆ
 14. NARASIMHAIAH N

  Professor,
  Very fine tribute to the great poet and excellent article .

  Thanks

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: