ನಿವೇದಿತಾ ಎಚ್
ಕವನ ಕಟ್ಟೋಣವೆಂಬ
ಹಂಬಲವಾಗುತ್ತಿದೆ
ಇರಬೇಕು ಅದರಲ್ಲಿ
ನಮ್ಮೊಲವ ನವಿರು
ನಿನ್ನ ಉಸಿರಿನ ಘಮಲು
ನಮ್ಮ ಭೇಟಿಯ ಉತ್ಕಟತೆ
ನಿನ್ನ ನೋಟದ ಆತ್ಮೀಯತೆ
ನಮ್ಮ ಅವಿನಾಭಾವದ ಸೊಗಸು
ನಿನ್ನ ಸ್ಪರ್ಶದ ಪುಳಕ
ನಮ್ಮ ಪ್ರೇಮದ ಸೌಂದರ್ಯ
ಆದರೇಕೋ
ಮುಷ್ಕರ ಹೂಡಿದೆ
ಮನಸು
ಸೋತು
ಸೊರಗಿವೆ
ಕೈಗಳು
ಅವಜ್ಞೆ ತೋರುತಿದೆ
ಮೆದುಳು
ತಿಳಿಯಿತು…!

ನಿನ್ನ ಪ್ರೇಮದ ಪರಿಗೆ
ನಿನ್ನ ಅಕ್ಕರೆಯ ಸವಿಗೆ
ನಿನ್ನ ಬಾಹುಗಳ ಬಂಧನಕೆ
ನಿನ್ನೆದೆಯ ಬೆಚ್ಚನೆಯ ಬಿಸುಪಿಗೆ
ಕರಗಿ ಹೋಗಿವೆ ಅಕ್ಷರಗಳು
ಭಾವನೆಗಳು ಮಾತ್ರ ಭೋರ್ಗರೆಯುತ್ತಿವೆ
ಲೇಖನಿಯದು ಕುಸಿಯುತ್ತಿದೆ
ಆದರೆ…
ಕಣ್ಣುಗಳು ಸಾಂತ್ವನ ಹೇಳುತ್ತಿವೆ
ಬಿಡು… ವ್ಯರ್ಥ ಪ್ರಯತ್ನವೇಕೆ?
ನಾನಿದ್ದೇನೆ ನಿನ್ನ ಹೃದಯದ ಪ್ರತಿನಿಧಿ!






0 Comments