
ಗೀತಾ ವಸಂತ
ನೀನು ಪಿಸುಗುಡುವುದು
ಉಸಿರ ಅಲೆಗಳಿಗೆ ತಾಕಿ
ಉನ್ಮಾದದ ಸಾಗರವು ಕೆರಳುವುದು
ಯಾವುದೋ ನದಿಯ ಸೆಳವಿಗೆ ಸಿಕ್ಕಂತೆ
ಸಾವಿನ ಸುಳಿಗಳಲಿ ಸುಳಿದಾಡಿ ಬಂದಂತೆ
ತಳಮಳದ ಪಾತ್ರೆಯಲಿ ಜೀವ ಕುದಿಯುವುದು
ಕೆಂಡದಂಥ ನಿಟ್ಟುಸಿರುಗಳ ಮೇಲೆ
ನೀ ಸುರಿದ ಬೆಳದಿಂಗಳ ಲೀಲೆ
ಬೇಲಿಗುಂಟ ನೆಟ್ಟ ಮುಳ್ಳುಗಿಡಗಳ ತುದಿಗೆ
ಹೂವರಳುವ ಸದ್ದು ಕೇಳುವುದು ಕಿವಿಗೆ
ನೀನೂಡಿದುಸಿರಲ್ಲಿ ಕೇಳುವ ಮುರಳಿ
ಮರಮರಳಿ ರಾಗಗಳ ಸೃಜಿಸುವುದು
ನಾಡಿಗಳಲ್ಲಿ ನಾಗಸ್ವರವ ನುಡಿಸುವುದು
ಎಂದೂ ಕೇಳಿರದ ಸದ್ದುಗಳು
ಎದ್ದುಬಂದಿವೆ ಕಿವಿಯ ಕಿನಾರೆಗೆ
ಆಕಾಶದ ಸುಯ್ಲು, ಪರ್ವತಗಳ ಪಿಸುಮಾತು
ಭೂಗರ್ಭದ ಮರ್ಮರ ಅಂತರಿಕ್ಷದ ಮೌನ
ಇರುವುದೋರುತ್ತಿವೆ ಎಲ್ಲವೂ ಇಲ್ಲಿಯೇ
ಯಾವಮಂತ್ರವ ಕಿವಿಯಲೂದಿದೆ ಕವಿಯೆ?
ಯಾವುದೋ ತುಂಟಗಾಳಿ
ಕಿವಿಗುಹೆಯೊಳಗೆ ತಂಬೂರಿ ನುಡಿಸುವುದು
ಮಲಗಿರುವ ಕನಸಿಗೆ ರೆಕ್ಕೆ ಹಚ್ಚುವುದು
ಕನಸಲ್ಲಿ ನನ್ನ ಕಣ್ಣು ನಿನ್ನ
ಆಕಾಶದಂಥ ಕಣ್ಣಲ್ಲಿ ಕರಗುವುದು
ಉಸಿರಪರಿಮಳದಲ್ಲಿ ಮನವು
ತನ್ನ ರೂಹು ಅರಸುವುದು
ಆಕಾಶವೆ ಕಣ್ಣಾಗಿ ನೋಡುತಿರುವೆ
ಎಲ್ಲೆಗಳು ಕಳಚಿಬೀಳುವುದ ಕೇಳುತಿರುವೆ
ಕೇಳುವುದ ಬಿಟ್ಟರೆ ಇನ್ನೇನೂ ಇಲ್ಲವೆಂಬಂತೆ
ಕಿವಿಯಲ್ಲೇ ಕರಗಿರುವೆ
ನಿನ್ನ ಪಿಸುಮಾತುಗಳನೇ
ಉಸಿರಾಡುತಿರುವೆ
ನಿಲ್ಲಿಸದಿರು ಪಿಸುಗುಡುವುದನು.






ತಳಮಳದ ಪಾತ್ರೆಯಲಿ ಜೀವ ಕುದಿಯುವುದು ಆಹಾ !…..ಎಂತಹ ಅದ್ಭುತ ರೂಪಕ
ಕವಿತೆ ತುಂಬಾ ಚೆನ್ನಾಗಿದೆ
Geeta nijakku. Tivrateya arivide. Uttama
ಚಂದ ಇದೆ
ಎರೆಡು ಮೂರು ಸಾರಿ ಓದಿದೆ, ಆಳದಲ್ಲಿ ಏನನ್ನೋ ಕೆದಕುತ್ತಿತ್ತು
wah
ಕವಿತೆ ಸುಂದರವಾಗಿದೆ ಮೇಡಂ
Good poem
Wow wah wah suprrrrr
ಪಿಸುಗುಡುವುದರೊಳಗಿಷ್ಟೋಂದು ಕಾಂತಿಯ ಕ್ರಾಂತಿಯೇ