ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಲುಕದ ಬಿಸಿಲ್ಗುದುರೆಗಳ ಮೇಲೇರುವ ತವಕ…

ಸವೆದ ಹಾದಿಯನ್ನರಸುತ್ತಾ…..

ನಾ ದಿವಾಕರ

ಎಲ್ಲೋ ಹುಡುಕುತ್ತಿದ್ದೇನೆ ಗತಿಸಿ
ಹೋದ ಹೆಜ್ಜೆ ಗುರುತುಗಳನ್ನು
ಅಳಿಸಿ ಭೂಗತವಾದ ಭಾವನೆಗಳನ್ನು
ಆವಿಯಾಗಿ ಮುಕ್ತಾಕಾಶದಿ
ಬೆರೆತುಹೋದ ಅಂತರಾಳದ
ಪ್ರೀತಿಯ ಹೊಳಹುಗಳನ್ನು !
 
ಎಲ್ಲಿ ಹೋದವು ಆ ತಾಣಗಳು
ಅಮ್ಮನ ಸೆರಗಿನ ಆಸರೆ
ಅಪ್ಪನ ಕಿರುಬೆರಳಿನ ಆಸರೆ
ಸುತ್ತಲಿನ ಗೆಳೆಯರ ಸಾಂತ್ವನದ ಆಸರೆ
ಹೃದಯಾಂತರಾಳದಲಿ
ಮೂಡಿರುವ ಅಚ್ಚಳಿಯದ ಗುರುತುಗಳು
ಏನಾದವು? ಏನಾದವು?

ಬಯಸಿದ್ದೊಂದೇ!
ಜೀವನವಿಡೀ ಬಯಸಿದ್ದೊಂದೇ
ನಿಷ್ಕಲ್ಮಷ ಪ್ರೀತಿ ಎಲ್ಲಿಯೂ
ಎಂದಿಗೂ ನಿಲ್ಲದ ನಿಚ್ಚಳ ಪ್ರೀತಿ;
ದೊರೆತಿದ್ದೇನೋ ನಿಜ
ಹೆಜ್ಜೆ ಹೆಜ್ಜೆಗೂ ನೆನಪಿಸುವ ವಾತ್ಸಲ್ಯದ
ತುಣುಕುಗಳು;
ಎಲ್ಲೋ ಕಳೆದುಹೋದವು
ಭಾವನೆಗಳ ಗುಂಗಿನಲ್ಲಿ
ಕಾಮನೆಗಳ ಹಂಗಿನಲ್ಲಿ
ಸ್ವಾರ್ಥತೆಯ ಛಾಯೆಯಲ್ಲಿ!
 
ಇನ್ನೂ ಬೇಕೆನಿಸುತ್ತಿದೆ
ಮನಹೃದಯಗಳು ಕೈ ಬೀಸಿ
ಕರೆಯುತಿದೆ ಆಂತರ್ಯದ ಹಪಹಪಿ
ಮತ್ತೆ ಆವಿಯಾಗುತ್ತಿದೆ
ಎಲ್ಲಿ ಹುಡುಕಲಿ ಮಣ್ಣಾದ
ಭಾವದೀಪ್ತಿಗಳನು;
ನಿಲುಕದ ಬಿಸಿಲ್ಗುದುರೆಗಳ ಮೇಲೇರುವ
ತವಕ ಸಾಕಾರಗೊಳ್ಳುವುದೆಂತು!
 
 
ಅದೋ ಅಲ್ಲೊಂದು ಪ್ರಣತಿ
ಕತ್ತಲ ಕಣಿವೆಯಂಚಿನಲಿ
ತಿಮಿರವನಳಿಸಿ ಜೀವಧಾರೆಯನೆರೆವ
ಪ್ರೀತಿಯ ಹೊನಲು
ಬೆಳಗುತಿದೆ
ಹೃದಯ ಕಣಿವೆಯನು;
ಅದೋ ಕಾಣುತಿದೆ ನೆಲದಾಳದಲಿ
ಕಳೆದುಹೋದ ಹೆಜ್ಜೆಗಳು
ಅಳಿಸಿ ಹೋದ ಭಾವನೆಗಳು!
 
ಇನ್ನೇನನರಸಲಿ:
ನೀರ ಮೇಲಣ ಹೆಜ್ಜೆಗುರುತುಗಳು
ಬಡಿದೆಬ್ಬಿಸುತಿವೆ ಆಂತರ್ಯದ
ಭಾವಗಳನು
ಅಪ್ಪಿಕೊಳ್ಳುವುದೊಂದೇ ಭಾವ
ಒಪ್ಪಿಕೊಳ್ಳುವುದೊಂದೇ ಜೀವ
ಪಡೆದುಕೊಳ್ಳುವ ತವಕದಲಿ
ಎಲ್ಲವೂ ನಿರ್ಭಾವ!

‍ಲೇಖಕರು G

7 February, 2015

4 Comments

  1. Manjula

    Mana tattuvantide kaduva novugala varate

  2. lakshmikanth itnal

    ಕಳೆದುಹೋದ ಕ್ಷಣಗಳ ಬೆಂಬತ್ತಿ ಹುಡುಕುವ ಪರಿ ಚನ್ನಾಗಿ ಒಡಮೂಡಿದೆ ಸರ್.
    “ಅಪ್ಪಿಕೊಳ್ಳುವುದೊಂದೇ ಭಾವ
    ಒಪ್ಪಿಕೊಳ್ಳುವುದೊಂದೇ ಜೀವ
    ಪಡೆದುಕೊಳ್ಳುವ ತವಕದಲಿ
    ಎಲ್ಲವೂ ನಿರ್ಭಾವ!” ಸಾಲುಗಳು ಮೆಚ್ಚುಗೆಯಾದವು

  3. mmshaik

    koneya saalugaLu kaadidavu…uttama gatti kavana.

  4. Anonymous

    mana muttuva kavana enanno kaledukonda bhava. matte balyakke hogona anisutide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading