ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಮ್ಮ ಪಾರಿವಾಳಗಳೆಲ್ಲ ಹಾರಿ ಹೋಗಿವೆ..

ಮನೆ ಬೆಂಕಿ
ಇಂಗ್ಲಿಷ್ ಮೂಲ: ಅಮೂಲ್ಯ ಅರಸಿನಮಕ್ಕಿ
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
-1-
ಕಳೆದ ವಾರ, ತಾತ್ಕಾಲಿಕ ಮರಗಳ ನಡುವೆ
ನಡೆದುಬರುತ್ತಿದ್ದೆ
ಗತ ಕಾಲದ ಪರಿಮಳ ಹುಡುಕುತ್ತಾ
“ಹೇ, ನಾಳೆ ಎಲ್ಲ ಸರಿ ಹೋಗುತ್ತೆ,
ನಂಬು ನನ್ನನ್ನು
ಆ ಸಿಗರೇಟು ಹಚ್ಚಬೇಡಾ
ಅತಿ ಕೆಟ್ಟ ದಿನಕ್ಕಾಗಿ ಕಾದಿರಿಸು”
ಎನ್ನಬಹುದಾಗಿದ್ದ ದಿನಗಳವು
ಈಗ ಹೆಣಗಳು ಉರಿಯುತ್ತಿವೆ
ನನಗೆ ಮಾತಿಲ್ಲದಾಗಿದೆ
ಇದಕ್ಕೇನು ಹೆಸರಿಡಲಿ
ಯಾರಾದರೂ ಹೇಳುವಿರಾ?
ಈ ನಮ್ಮ ಕೊಳೆಯುತ್ತಿರುವ ಆತ್ಮಗಳ ದುರ್ನಾತ
ಮತ್ತು ಅವನ ಉರಿಯುತ್ತಿರುವ ಶ್ವಾಸಕೋಶಗಳು?

-2-
ವರ್ಷದ ಈ ಋತುವಿನಲ್ಲಿ
ಛಾವಣಿ ಸುಂದರವಾಗಿರುತ್ತದಂತೆ.
ಅದನ್ನೇ ದಿಟ್ಟಿಸುತ್ತೇನೆ, ಅರ್ಥೈಸುತ್ತಾ
ಬಿಳಿ, ಮಾಸಲು ಮತ್ತು ಮುತ್ತಿನ ಬಣ್ಣಗಳ ಎಂಭತ್ತಾರು ಛಾಯೆ
ಪಾರದರ್ಶಕ ಹನಿಗಳು
ಗುರುತ್ವಕ್ಕೆ ಸಿಕ್ಕಿ ಅಡ್ಡಾದಿಡ್ಡಿ ಓಡುತ್ತವೆ
ಮತ್ತದೇ ಹಳೆಯ
ಕಂದು ಬಣ್ಣದ ರಕ್ತದ ನೆಲ
ಆಗ ಆಗಮಿಸುತ್ತದೆ ಪ್ರೀತಿ, ತಪ್ಪದೇ, ಹಿಡಿದು
ಬೊಗಸೆ ತುಂಬಾ ಪೆಪ್ಪರಮಿಂಟು ಮತ್ತು ಪೋಲೊ
ಅವನಿಗೆ ಹೇಳಲು ಸಾಧ್ಯವಿದ್ದಿದ್ದರೆ
“ಇದು ಸಾಲದು
ಇದು ಸಾಲದು
ಇದು ಸಾಲದು, ನನ್ನೊಲವೇ”
ಮೆಂಥಾಲ್ ಉಸಿರು
ಕಲ್ಲು ಹೃದಯಗಳನ್ನು ಕರಗಿಸುವಂತಿದ್ದರೇ
ಮತ್ತು ಭುಜಗಳನ್ನು ಬಿಸಿಯಾಗಿಸುವಂತಿದ್ದರೇ
ನಾನು ನನ್ನ ಉಸಿರನ್ನು ಕೊಟ್ಟು
ಉರಿಯನ್ನು ನಂದಿಸಲು
ಅವರೆಡೆಗೆ ಕಳಿಸುತ್ತಿದ್ದೆ
ಉಸಿರಿಟ್ಟುಕೊಂಡು ಏನು ಮಾಡುವುದು
ಮನೆಗೆ ಬೆಂಕಿ ಬಿದ್ದಾಗ
ಕ್ಷಣಕ್ಷಣಕ್ಕೆ ಬಣ್ಣ ಬದಲಿಸುತ್ತಾ
ಹಳೆಯ ಪರಿಚಿತ ಹುಡುಗ
ಮೂಲೆಯಲ್ಲಿ ಮುದುರಿ ಕೂತು
ಪಿಸುಗುಡುತ್ತಾನೆ
“ಚಿಂತಿಸಬೇಡಿ, ನಿಮ್ಮ ಪಾರಿವಾಳಗಳೆಲ್ಲ ಹಾರಿ ಹೋಗಿವೆ”
ಕಳೆದ ವಾರ, ತಾತ್ಕಾಲಿಕ ಮರಗಳ ನಡುವೆ
ನಡೆದುಬರುತ್ತಿದ್ದೆ
ಗತ ಕಾಲದ ಪರಿಮಳ ಹುಡುಕುತ್ತಾ
ಅದು ದೆಹಲಿ ಎನ್ನುವ ಭಾಸವಾಯಿತು

‍ಲೇಖಕರು avadhi

11 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading