ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ರಸಭರಿತ ತುಟಿಗಳು ಉಪವಾಸಕ್ಕಿಳಿದಿರುವಾಗ..

 

 

 

 

ಎನ್ ರವಿಕುಮಾರ್ ಶಿವಮೊಗ್ಗ

 

 

 

ಜೋಪಡಿ ಜೋಗಳುಗಳು

ಅವನು ಮುತ್ತಿನ
ಮೇಲೆ ಮುತ್ತು ಉಣಿಸುತ್ತಾ
ಮದಗೊಂಡು
ಮಧು ಹೀರಿ ತೇಗುವಾಗ
ಅವಳು
ಅಂಗಾಂಗ ಅಡವಿಟ್ಟು
ತುತ್ತು ತುತ್ತಿಗೂ ಕಳವಳಿಸಿ
ಅಳುವ ಕೂಸ ನೆನೆದು
ಬಿಕ್ಕುತ್ತಿದ್ದಳು.

ಸಖೀ
ನಿನ್ನ ರಸಭರಿತ ತುಟಿಗಳು
ಉಪವಾಸಕ್ಕಿಳಿದಿರುವಾಗ
ನಾನಾದರೂ
ಉಂಡು ತೇಗುವುದು ಏನಿದೆ?

ಮತ್ತೆ ಮತ್ತೆ
ಒಲವಿಂದ ಸುರಿದ ಪರಿಗೆ
ಮೈನೆರೆದು ಮೆದುವಾಗಿದೆ ಒಡಲು
ಹಗಲು- ರಾತ್ರಿಗಳ ಕಾಲ ನೇಮಗಳ ಕಣ್ತಪ್ಪಿಸಿ
ಸೂರಾಡಿ ಸರಿದಾಡಿ
ಸೊಕ್ಕಿ ಮೊರೆದಿದ್ದಾನೆ
ಕೆಲವೊಮ್ಮೆ ತಟ ತಟ ತೊಟ್ಟಿಕ್ಕಿ
ಮತ್ತೊಮ್ಮೆ ಭರ್ರನೆ …ಧುಮ್ಮಿಕ್ಕಿ

ಹೋದನೆಂದು ಹೊರಳುವಾಗಲೆ
ಮತ್ತೆ ಬಂದು ಮಗ್ಗಲ ಊಡಾಗುವ,
ಕಾಡುವ
ಕಾವಿಟ್ಟು ಮುದಗೊಳಿಸುವ

ಆಷಾಡದ ಹಂಗಿಲ್ಲದೆ
ಆಳದಾಳದ ಜೀವ ಬಳ್ಳಿಯಲ್ಲಿ
ಈಗ ಹೂ ಅರಳಿದೆ.

ಸಣ್ಣ ಮಳೆಯೊಂದು
ಹದವಾಗಿ ಸುರಿದು
ಮೆದುಗೊಂಡ ನೆಲದಲ್ಲಿ
ಹಸಿರು ಗರಿಯೊಂದು ನಸುನಕ್ಕಿದಂತೆ…
ನನ್ನ ಕವಿತೆ

“ನನ್ನ ಕವಿತೆ ಎಂದರೆ…
ಕುದಿಬಿಂದುವಿನಲ್ಲಿ ಬೆಂದು
ಅರಳುವ ಅಗುಳು
ಅವಳ ತೋಳ್ ತೊಡೆಗಳ
ತೆಕ್ಕೆಯಲ್ಲಿ ಸೊಕ್ಕುವ ಬಿಸಿಯುಸಿರು
ಜೀವಕೋಶದಲ್ಲಿ ತತ್ತಿಯಿಟ್ಟು
ನಗುವ ಹೂವು
ಕಾಲಾತೀತ ಕಾಯ್ದು
ಪೊರೆವ ತಾಯ್ತನ”

“ನನ್ನ ಕವಿತೆ ಎಂದರೆ …
ಮುದ್ದೇ ಮಡಿಕೆಯ ತಳದ ಸೀಕು
,ಒಲೆಯ ಬೂದಿ
ಹಣೆಗೇರಿದ ವಿಭೂತಿ,
ನೆರಿಕೆ ಗೋಡೆಯ ನುಸುಳುವ
ಬೆಳಕಿನ ಕೋಲು”

ಪಂಕ್ತಿಯಿಂದ ಎಳೆದು
ಹೊರದಬ್ಬಿದ
ಉತ್ತಮನನ್ನು ನೋಡಿ
ತೊಟ್ಟಿಯಲ್ಲಿ ನ ಅನ್ನದ ರಾಶಿ
ಪಕ ಪಕನೆ ನಕ್ಕಿತು.”

ಅವಳ ಎದೆಯಲ್ಲಿ
ಜಿನುಗುವ ಮೊದಲ
ಜೀವ ಹನಿಯೂ
ಮೆದು ನೆತ್ತಿ ನೇವರಿಸಿ
ಹಣೆಗೆ ತುಟಿಯೊತ್ತಿ
ಧೇನಿಸುವ
ಸಂಭ್ರಮವೂ ಕವಿತೆಯೇ!

ಕವಿತೆ
ಎದೆಯ
ಮಾತುಗಳಷ್ಟೇ ಅಲ್ಲ,
ಕರುಳ ಚೀಲದ
ಪಿಸುಮಾತುಗಳ
ಜೀವ ಧಾತು ಕೂಡ

ಅವಳ ಕಣ್ಣಕೊಳದ
ದಡದ ಮೇಲೆ
ಹರಳುಗಟ್ಟಿದ
ನಿಬಿಂದುಗಳೆ
ಅವಳ ಆತ್ಮಕಥೆ”

ಪಟದ ಚಿತ್ರ
ಮಾತನಾಡಿತು!

ಗೋಡೆಗೆ ತೂಗು ಬಿದ್ದ ಪಟಕ್ಕೂ
ಜೀವ ಬಂದ ಘಳಿಗೆ
ನೆರೆತ ಮೈಗೆ ಗಿಡಗದ ಕಣ್ಣುಗಳು
ಅವ್ವನಿದ್ದಿದ್ದರೆ…..?

ಹಾಡು ಹಗಲೆ ಕನಸುಗಳು ಮುತ್ತಿಕೊಳ್ಳುತ್ತವೆ.
ಹಾದರದ ಅರಮನೆಯೊಳಗೆ
ಋತು ಸಂಕಟದ ಹಗಲು ?ರಾತ್ರಿಗಳಲ್ಲೂ
ತರಾವರಿ ಚಿತ್ರ, ಕಥೆಗಳಿಗೆ ಕಿವಿಗೊಡುತ್ತೇನೆ
ಮೈವೂಡ್ಡುತ್ತೇನೆ ಕಾಮಸೂತ್ರದ ರೇಖಾ ಚಿತ್ರಗಳಂತೆ

ಕಿಬ್ಬೊಟ್ಟೆಯೊಳಗೊಂದು ಜೀವ ಬಳ್ಳಿಯ ಬಯಕೆ
ತಾಯ್ತನದ ಹರಕೆ
ಛೇ, ! `ಸೂಳೆ ಮಗ(ಳು)’ ನೆಂಬ ಹಣೆಪಟ್ಟಿಗೆ
ಗರ್ಭ ನಂಜುಗೊಂಡಾತು
ಬಂಜೆ ಪಟ್ಟಕ್ಕೆ ಅಡವಿಟ್ಟ ಒಡಲು

ಕಥೆ ಹೇಳಬೇಕೆನಿಸುತ್ತಿದೆ..
ಗರತಿಯರ ಓಣಿಯೊಳಗೆ…..!

ಲಂಪಟರ ಸಂತೆಯೊಳಗೆ ತಾಳ ತಪ್ಪಿದ ಹಾ(ಪಾ)ಡು
ಬಿಗಿದ ಕೊರಳೊಳು ನೂರು ರಾಗ
ಬಕ್ಕಸ ಬರಿದಾದವು
ಧಗ್ಗನೆ ಉರಿದು ಹೋದವು

ಬಂದವರಿಗೆಲ್ಲ `ಸೊಕ್ಕು’ ಮುರಿವ ಆವೇಶ
ಬೆತ್ತಲೆಯ ಒಡಲೊಳು ಜೀಕುವ `ಪುರುಷತ್ವ’ಕ್ಕೆ
ನಿಟ್ಟುಸಿರುಗಳೆಲ್ಲಾ…
ರತಿ ರಾಗದಂತೆ ಉನ್ಮಾದಿಸುತ್ತಿವೆ
ಹಾಡ ಬೇಕೆನಿಸುತ್ತಿದೆ…
ಶ್ರೋತೃಗಳಿಲ್ಲದ ಹಜಾರದೊಳಗೆ!!

ರಂಗ ಮಂಚದೊಳು ಬಂದು ಹೋದ ಪಾತ್ರಗಳು
ನೆನಪಿಗಿಲ್ಲ.
ಒಂದೆ,ಎರಡೆ…
ಅವರಿಗಿರಬಹುದು.

ಸೀರೆ ಸೆಳೆದ ರಾಶಿಯೊಳಗೆ ನೂರು ದುಶ್ಯಾಸನರು
ಕೃಷ್ಣನಿಲ್ಲದ ದ್ರುಪದ ಪುತ್ರಿ
ಗೆಳೆಯ, ಗೆಣೆಕಾರ ಪಾತ್ರಗಳ ಅನಿಷಿದ್ಧ ದೊಡ್ಡಾಟ
ಬಣ್ಣವಿಲ್ಲ, ಬೆಳಕಿಲ್ಲ
ಅಂಗಾತ ಬಿದ್ದ ಕ್ಯಾನ್‍ವಾಸ್‍ನ ಚಿತ್ರ

ನಟಿಸಬೇಕೆನಿಸುತ್ತಿದೆ
ಯಾಯಿತಿಯ `ಚಿತ್ರಲೇಖೆ’ಯಂತೆ
ರಂಗ ರಸಿಕರಿಲ್ಲದ ಬಯಲು ರಂಗದಲಿ!!!

ಮಾತು ಮರೆತು ಅದೆಷ್ಟೋ ದಿನಗಳಾದವು
ಸಂವಾದ,ಹರಟೆ,ಸಲ್ಲಾಪದ ಸೊಲ್ಲುಗಳು
ಕಾಡು ಹೆಣಗಳು

ಜಿದ್ದಿಗೆ ಬಿದ್ದು ಧಿಕ್ಕರಿಸಿದರೂ
ತೆವಲುಗಾರರ ತೆಕ್ಕೆಯೊಳಗೆ ಸಿಕ್ಕ ಹಕ್ಕಿ
ಅಳುವ ಬರಿಗಣ್ಣಿಗೆ ತೊಟ್ಟಿಕ್ಕದ ಹನಿಗಳು

ಹಕ್ಕು ಕೇಳುವ ದನಿಗಳೆ
ಹಾಡು-ಹಗಲೆ ದಿಕ್ಕಾ ಪಾಲು
ಹುಮ್ಮಳಿಸುವ ದುಃಖಕ್ಕೆ
ಸರಿರಾತ್ರಿಗಳೆ ಸಂಗಾತಿ

ಬದುಕಬೇಕೆನಿಸುತ್ತಿದೆ
ಮನುಷ್ಯರಿಲ್ಲದ ಊರಿನೊಳಗೆ!!

‍ಲೇಖಕರು Avadhi GK

19 January, 2018

2 Comments

  1. Mmshaik

    Very touchy…RAVI

  2. Shanmukhappa b.s

    ಅದ್ಭುತ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading