ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಮಡಿಲಲಿ ನಿಮಿಷ ತಲೆಯಿಟ್ಟು ಮಲಗುವೆನು..

ಹೃದಯಶಿವ

ಕಣ್ಣೆದುರು ನೀನಿರಲು ನನ್ನೊಳಗೆ ಕವಿತೆಗಳು
ಇನ್ನೆಂದು ನೀ ದೂರವಾಗಬೇಡ
ನಂಟು ಎಂಬುದು ಇದುವೇ ತುಸು ಹತ್ತಿರಕೆ ಬಾರೆ
ಹಾಡಬೇಕಿದೆ ಕೂಡಿ ಒಂದು ಹಾಡ

ಯಾವ ಸುಮುಹೂರ್ತದಲಿ ನೀ ಸೆಳೆದೆ ನನ್ನನ್ನು
ಯಾರು ನೀ ನನಗೀಗ ಹೇಳು ಗೆಳತಿ
ಹೀಗೆ ಸಾಗಲಿ ಪಯಣ ಬೆಸೆದಿರಲಿ ಜೋಡಿ ಕೈ
ಬೆಳಗುತ್ತಲಿರಲೆರಡು ಕಣ್ಣ ಪ್ರಣತಿ

ನಿನ್ನ ಮಡಿಲಲಿ ನಿಮಿಷ ತಲೆಯಿಟ್ಟು ಮಲಗುವೆನು
ಹಾಡೆನಗೆ ಇನಿದಾದ ಜೋಗುಳವನು
ಕಣ್ಣ ತುಂಬುವ ಕನಸಿನಲ್ಲು ನೀ ಸುಳಿವಾಗ
ಕಳೆದುಹೋಗುವೆ ನಾನು ಹುಡುಕು ನೀನು

ನೋಡಿಲ್ಲಿ ಈ ದೋಣಿ ನಮಗಾಗಿ ಕಾಯುತಿದೆ
ಏರಿ ಸುತ್ತುವ ಬಾರೆ ನೀಲಿ ಕಡಲ
ದೂರದ ದಿಗಂತದಲಿ ಸೂರ್ಯ ಮುಳುಗುತ್ತಿಹನು
ಕನಸಿ ನಮ್ಮೊಳಗೊಂದು ಹೊಸತು ಹಗಲ

ನೋಡೀಗ ತಾರೆಗಳು ಮೂಡಿಹವು ಬಾನಿನಲಿ
ಬಾ ಇಲ್ಲೇ ಕಳೆಯೋಣ ಬೆಳ್ಳಿ ಇರುಳು
ಬಾಕಿಯೇನಿದೆ ಇನ್ನು ಸಾಂಗತ್ಯದಲೇ ಸುಖವು
ಬಾಹುಬಂಧನದಲ್ಲಿ ಮೆಲ್ಲನರಳು

‍ಲೇಖಕರು avadhi

26 April, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading