ಬೆ೦ಕಿ ಬಿದ್ದಿದೆ ಕೆರೆಗೆ
ಜಯಶ್ರೀ ದೇಶಪಾಂಡೆ
ಇದ್ದುಬಿಡುತ್ತೇನೆ ಬಿಡು, ನಾ ನನ್ನ ಹೆಜ್ಜೆಗಳ ಜತೆಗೆ.
ಏಕೆ೦ದರೆ ಇದು ಗಮ್ಯಾಗಮ್ಯಗಳ ಪ್ರಶ್ನೆ!
ನೀ ಮುಟ್ಟಿದಲ್ಲಿಗೇ ನಾ ಮುಟ್ಟಬೇಕಿಲ್ಲ…
ಹೆಜ್ಜೆಗಳಲ್ಲಿ ಯಾಕಿಷ್ಟು ಅ೦ತರ
ಅ೦ತ ಕೇಳಲೇ ಇಲ್ಲ ನೀ ನನ್ನ.
ನಿನ್ನ ಹೆಜ್ಜೆಗುರುತಿನ ಪಾದಕ್ಕೂ
ನನ್ನ ಪಾದಕ್ಕೂ ಇರುವುದೇ ಆ ವ್ಯತ್ಯಾಸ …
ನಿನ್ನ ವೇಗಕ್ಕಿತ್ತು ಎಲ್ಲ ಜಗತ್ತಿನದೂ ಹಿಮ್ಮೇಳ …ನನಗೋ ಊರೆಗೋಲಿರಲಿಲ್ಲ.. ಅಷ್ಟೇ ಖುಷಿ ಹೌದಲ್ಲ?
ಓಹೋ ಅವನಓಟ ಕ೦ಡಿರಾ ಅನುತ
ಸ೦ಭ್ರಮಿಸುವವರ ನಡುವೆ…
ಆಗೊ೦ದು ಈಗೊ೦ದು ಪಾದ ಸರಿಸುತ್ತಿದ್ದ ನಾ
ಯಾರ ಕಣ್ಣಿಗೂ ಬೀಳಲೇ ಇಲ್ಲ.
ನಿನ್ನ ಪಾದಗಳ ಹೊಳಪಿಗೆ ವೇಗಕ್ಕೆ, ಬಿರುಸಿಗೆ
ಬಿದ್ದ ಚಪ್ಪಾಳೆಗಳದೆಷ್ಟು ?
ನಾನೂ ಬ೦ದೆ ಇರು ಅ೦ದ ನನ್ನ ಕ್ಷೀಣ ದನಿ
ಹಬೆಯಾಡಿದ ಬಿಸಿಯನ್ನದ ಒಲೆಯ ಹಿ೦ದೆ …
ಎದ್ದೆದ್ದು ಆರಿ, ನಾ ಹೊರಬಿದ್ದೇನೆನ್ನುವಾಗ
ನೀ ಎಲ್ಲೋ ಕಾಣದ೦ತಾಗಿಬಿಟ್ಟಿದ್ದೆ…
ಆಕಾಶಕ್ಕೆ ಲಗ್ಗೆ ಹಾಕುವ ನಿನ್ನ ಹುಚ್ಚಿನ
ಬೆನ್ನಟ್ಟಿ ನಾ ಬರಲೇಬೇಕೆ೦ಬ ಕರಾರೇನಿರಲಿಲ್ಲ.
ತ್ರಿವಿಕ್ರಮನಾಗುವ ಹುಚ್ಚಿನಲ್ಲಿ ಇದ್ದ ನೆಲಕ್ಕೊ೦ದು
ಪಾದ ಊರಲಾಗದ ತ್ರಿಶ೦ಕು-
ಆಗಿಬಿಡಲಿದ್ದ ನಿನ್ನ ತಡೆಯಲು ನೋಡಿ
ನನ್ನದಾಗಿಬಿಟ್ಟಿತಲ್ಲ ಅದೇ ತಪ್ಪು?
ತಪ್ಪಿಲ್ಲ ಕನಸುಗಳ ಹಿಮ್ಮೆಟ್ಟುವಲ್ಲಿ
ಊ೦ ಹೂ೦..ಆದರೆ ಕನಸು
ಕನಸೇ ಅ೦ತ ತಿಳಿಯದೆ ಹೋದೆಯಲ್ಲ
ಅದಲ್ಲವೇ ತಪ್ಪು!?
ಅಲ್ಲೆಲ್ಲೋ ಎ೦ದೋ ನೀ ಹೊರಳಿ ನೋಡಿದರೆ
ಇದ್ದುಬಿಟ್ಟಿರುತ್ತೇನೆ ನಾ ನನ್ನ ಹೆಜ್ಜೆಗಳ ಜೊತೆಗೆ…
ನನ್ನ ಪಾದಗಳ ಜೊತೆಗೆ ,
ಕೆರೆಯ ತಣ್ಣಿರಿಗೆ ಗಿರಾಕಿಗಳಿಲ್ಲ….
ಏಕೆ೦ದೆಯಾ? ಬೆ೦ಕಿ ಬಿದ್ದಿದೆ ಕೆರೆಗೆ!





ಕವಿತೆ ವಿಷಾದಭರಿತ ಚನ್ನಾಗಿದೆ
wah. bahala chennagide.
ನಾನೂ ಬ೦ದೆ ಇರು ಅ೦ದ ನನ್ನ ಕ್ಷೀಣ ದನಿ
ಹಬೆಯಾಡಿದ ಬಿಸಿಯನ್ನದ ಒಲೆಯ ಹಿ೦ದೆ
Soooooooper
Thanks Shama, prajna, badaloti ranganath avare.