ಕರಗಿ ನೀರಾದೆ!
ಸೌಮ್ಯ ಕೆ ಆರ್

ತುಂತುರು ಮಳೆಯಂತೆ
ಹನಿ ಹನಿಯಾಗಿ ಬಂದಿರುವೆ
ನಾ ನಿನ್ನ ಬಳಿ ಓಡಿ,
ಓ ಮನವೇ ಹೇಳಿಬಿಡು ಅವನೆದುರು
ಎದೆಯಾಳದ ಬೆಟ್ಟದಾಕಾರದಾಸೆ
ಇಬ್ಬನಿಗೆ ನೆಲ ಮೆದುವಾಗುವ ಹಾಗೆ
ನಯವಾಗಿ ಮುದ್ದಿಸಿ, ನೇವರಿಸಿ
ತಂಗಾಳಿಯಂತೆ ತಂಪು ನೀಡು
ಡವಗುಡುವ ಎದೆಗುಡಿಯಲ್ಲಿ
ಪ್ರೀತಿ ದುಂಬಿಯ ಝೇಂಕಾರ
ಮಳೆ ಬಂದಾಗಲೆಲ್ಲ ನಿನ್ನ ನೆನಪು
ಅನುದಿನವೂ ಪಟಪಟನೆ ಸದ್ದು ಮಾಡುತ್ತ
ಎದೆಯ ಕದ ತಟ್ಟುವ ಮುಂಗಾರಿನ ಶಬ್ದ
ಮೈಮನದಲ್ಲೆಲ್ಲಾ ಕೃಷ್ಣಲೀಲೆ ಆಡಿಸಿದೆ
ಆ ಮಣ್ಣ ವಾಸನೆಯ ಸವಿಯಲು
ನೀ… ಎದುರು ಬಂದಾಗೆಲ್ಲ ಮೌನರಾಗ
ಮನ ಗಟ್ಟಿ ಮಾಡಿ ಚುಂಬಿಸಲೇ
ರಾಶಿರಾಶಿ ಆಸೆಗಳ ಹರವಿಬಿಡಲೇ..?
ನನ್ನ ನಾ ಅರಿಯದೆ ಕಾಣೆಯಾಗಿದ್ದೇನೆ
ನಿನ್ನೊಳು ನಾನಾಗಿ…
ಮಿಂಚಿನಂತೆ ನಿನ್ನ ಕಣ್ಣ ಕಾಂತಿ
ಸುಳಿವ ತಂಗಾಳಿ ಸ್ಪರ್ಶವೂ ರೋಮಾಂಚನ
ನಿನ್ನ ನೆನಪೇ ಹೀಗಿರುವಾಗ
ನಿನ್ನ ಸಂಗ ಹೇಗೋ ನಾನರಿಯೆ
ಆದರೂ ಪ್ರೇಮದಮೃತಕೆ ನಾ ಕರಗಿ ನೀರಾದೆ!






ತುಂಬಾ ಹಿಡಿಸಿತು.
Utthama bhaavada kavithe.
Nice…
ನವಿರಾದ ಪ್ರೇಮ ನಿವೇದನೆ…. ಸುಂದರ