ಎರಡು ಕವನಗಳು
ಜ.ನಾ.ತೇಜಶ್ರೀ
ಹನಿ
ಕಂಡಿರುವುದು ಒಂದು ಹನಿ
ಅಡಗಿ ಕುಳಿತದ್ದು ಕಡಲಿಗೆ ಕಡಲೆ
ಹರಿಯಬಿಡಬೇಕು ನಿನ್ನನ್ನು ನನ್ನೊಳಗೆ
ನೀರ ಹರಿವಿಗೆ ಒಗ್ಗಿ ದಾರಿಯಾಗುವ ಕಾಲ
ಹನಿಯುವುದು ಪ್ರೀತಿ ಗುಟುಕು ಗುಟುಕೆ
ಖಾಲಿಗೆ ಬಾಯಿದೆರೆದು ಗಾಳಿ ನುಂಗುವ ಹಕ್ಕಿಮರಿ
ಒಂದು ಗುಟುಕಿನ ಪ್ರತೀಕ್ಷೆ
ಸಿಕ್ಕಿದರೆ ಅರಿವು ಇಲ್ಲದಿದ್ದರೆ ಹರಿವು
ನಿನ್ನ ಕಣ್ಣಲ್ಲಿ ನನ್ನ ಅರ್ಥ ಹುಡುಕುವ ಹಂಬಲ
ಹನಿಯಲ್ಲಿ ಸಾಗರ ಕುಡಿಯುವ ವಿನಯ
೨. ದಾಹ
ದಾಹ ದಾಹ ದಾಹದ ದಾಹ
ಕಣ್ಣಿಗೆ ಕುಡಿಯುವ
ಮೈಯಿಗೆ ಮುತ್ತುವ
ಕಡಲನ್ನು ಕುಡಿದಷ್ಟು
ಬೇಗೆಗೆ ಉನ್ಮಾದ
ಈ ಕತ್ತಲೆಗೆ
ನನ್ನ ಅಕ್ಷರಗಳನ್ನು ನುಂಗುವ ಖುಷಿ
ಕೆಂಪು ಬಳಿದಿದೆ ಪಡುವಲಿಗೆ
ಪಡಬಾರದ ಪಾಡು ಸೂರ್ಯನ ನುಂಗುವುದು
ಒಂದು ಬೊಗಸೆ ಸಿಹಿನೀರಲ್ಲಿ
ದಾಹವನಿಂಗುವ ಶಕ್ತಿಯಿದೆಯಲ್ಲ
ಎಂಥಾ ಸತ್ಯ!






0 Comments