ನನ್ನದೂ ಲೋಹದ ಕಣ್ಣು

ಎಚ್ ಎಸ್ ರಾಮನಗೌಡ್ರ

ರಾಜಹಂಸ, ಜೀವನ ಪ್ರಕಾಶನ
ಜೀವನ್ ಪ್ರಕಾಶನದ ರಾಜ್ಯಮಟ್ಟದ
ಯುಗಾದಿ ಕಾವ್ಯ ಸ್ಪರ್ಧೆ-2016ರ ಮೆಚ್ಚುಗೆ ಪಡೆದ ಕವಿತೆ
ನಿನ್ನ ಅಂಗಾಂಗದ ಉಬ್ಬುತಗ್ಗು ತೊಗಲುತೊಳಿಯ
ಇಂಚಿಂಚನು ಜೂಮುಹಾಕಿ ಅಳೆದು ತೂಗುವ ನಾನು
ನಿನಗೇನಾಗಬೇಕು ಹೇಳು ಹುಡುಗಿ
ನೀನು ಅಣ್ಣನೆಂದರೂ ತಮ್ಮನೆಂದರೂ ಏನನ್ನಾದರೂ ಸರಿ
ಬೀದಿಯ ಮಹಾಪರೆದೆಯಲಿ ಎಲ್ಲ ಬಯಲಿಗಿಟ್ಟಂತೆ ಮೋಹ
ಬೀದಿಬೆದೆತನಕೆ ಬಾಯಾರಿ ನೆಲತೀಡಿನೋಡುವ ದಾಹ
ಮತ್ತೊಂದುಹಾಳೆ ಮತ್ತೊಂದು ಕಿರುಪರದೆ ಮತ್ತೆ ಲೋಹದಕಣ್ಣು
ಗಂಧ ತೇದಿಟ್ಟ ಗಾಜಸೀಸೆಯಂತ ಮೋಹದಮಲು ಸಲ್ಲುಸಲ್ಲಿಗೆ;
ಬಲುತಾರೀಪಿನ ಅಕ್ಷರಗಳ ಉರುಲಾಗಿಸಿ ಮಾರಿಬಿಡಬಲ್ಲೆ,
ತಲೆ ತೀಡಿತೀಡಿ ಎಲ್ಲಸಲ್ಲಾಪಗಳ ತರಂಗವಾಗಿಸಿ ಹಾರಿಬಿಡಬಲ್ಲೆ,
ಕದ್ದು ನೋಡಿದ ಚಿತ್ರಗಳ ಚಿತ್ತದಲಿ ತಿರುಗಿಸಿ ತೂರಿಬಿಡಬಲ್ಲೆ.
ಅವಳೇ ಹೇಳುತ್ತಾಳೆ ‘ಇವೆಂತ ಉರಿಉರಿಕಣ್ಣು ದೇಹದಲೆಗೆ ‘
‘ಒಂದು ನಿಮಿಷ …
ಒಂದೇ ಒಂದು ನಿಮಿಷ ಅವರು ಹೇಳಿಕಳುಹಿದ್ದಾರೆ
ನಾನುಡುವ ಬಟ್ಟೆಗೆ ತಮ್ಮನದೆ ನವವಿನ್ಯಾಸ ನೋಡುವಿರಂತೆ.’
ಎಲ್ಲೋ ದೇಹದಗ್ನಿಯಾಳದಲಿ ಕತ್ತಲು ಮನೆಹೂಡುತ್ತಿದೆ ಮಂಪರಿಳಿಸಿ
ಅಲ್ಲೇ ಕಳೆದುಹೋಗಿದೆ ಏನೊ ಹುಡುಕಹೋಗಿ ನಿಜದಕಣ್ಣು
ಅದಕಂಡು ಎದೆಯುಬ್ಬಿ ಹಿಗ್ಗುತ್ತಿದೆಯೆ ಲೋಹದಕಣ್ಣು?
ಕಣ್ಣಿಗೆ ಮೈಲಿಗೆಯಂಬುದಿಲ್ಲ ನಿಜವಿದೀತು ಮನಕೆ ಸೂತುಕ
ಮನಕೆ ಸೂತುಕವಾದರೆ ತಪ್ಪದು ಮೈಯಲ್ಲ ಮೈಲಿಗೆ
ನೋಡು…ನೋಡು ಮತ್ತೆ ಮನ ಬಂದಿತೆಲ್ಲಿಗೆ
ಏಳುಗುಡ್ಡವಸುತ್ತಿ ಏಳುದಾರಿಯತುಳಿದು ಮತ್ತೆ..ಮತ್ತೆ ಇಲ್ಲಿಗೆ!





0 Comments