ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿತ್ಯ ಸೀತೆಯರು

ವಸುಂಧರಾ ಕದಲೂರು

ಹೆಸರಿಗೆ ಅಲ್ಲಿ ಜ್ವಾಲಾಗ್ನಿ ಇರುವುದಿಲ್ಲ
ಆದರೂ ಉರಿದು ಬೂದಿಯಾಗುತ್ತಾ
ಮತ್ತೆ ಫೀನಿಕ್ಸಿನಂತೆ ಹುಟ್ಟಿ ಬರುತ್ತೇವೆ ನಾಳೆಗೆ.
ಈ ಅವತಾರ ಹೊಸದು; ಶರ್ಮಿಷ್ಠೆಯ ಉಡುಗೆ
ದೇವಯಾನಿ ಉಟ್ಟಂತೆ ದಿನಬೆಳಗಾದರೆ
ಪಾತ್ರವೂ ಬದಲು…

ದಾರಿಹೋಕ ಕಾಮುಕ ಕಣ್ಣುಗಳಿಗೆ
ನಿತ್ಯವೂ ಬತ್ತಲಾಗುತ್ತಾ, ಮಡದಿಯರಾಗುತ್ತಾ
ದ್ರೌಪದಿಗೆ ಸೈಡು ಹೊಡೆದುಬಿಡುತ್ತೇವೆಂಬ
ಭಯದಲಿ ದಿನದೂಡಿರುತ್ತೇವೆ. ಸದಾ
ಕಾಯುವ ಊರ್ಮಿಳೆಯರಾಗಿ ಅಡುಗೆ
ಕೋಣೆ ಸೇರಿ ಕನಸು ನೇಯುವುದಿಲ್ಲ;
ಕುಂತಿಯಂತೆ ಇಚ್ಛೆಪಟ್ಟವನನ್ನು ಕರೆದು
ಕೂಡಲಾಗುವುದೂ ಇಲ್ಲ..

ಎಲ್ಲಾ ಬರಿಯ ಕಳೆಯುವ ಲೆಕ್ಕ.
ಬದುಕನ್ನೂ, ಕನಸ್ಸನ್ನೂ… ಆಸೆ ಮಾತ್ರ
ಅಂಧ ಆನೆ ಮುಟ್ಟಿದಂತೆ ಕಲ್ಪಿತವನ್ನು
ಒಪ್ಪಿಸಿಕೊಳ್ವ ಸಾಕು ಬುದ್ಧಿಯ, ಶರಣಾಗುವ,
ಸರಪಣಿ ಕಟ್ಟಿದ ನಾಯಿ; ಬಿಚ್ಚಿದರೆ
ಪುನಃ ಅಂಡಲೆಯುವ ಸೋಗು

ಕಲ್ಲಾಗಿದ್ದರೂ ಕೊರೆದು ಕಲೆ ಮಾಡುವ
ಶಿಲ್ಪಿಗಾಗಿ ಕಾಯುವ ಅಹಲ್ಯಾ ಸಂತಾನದವರೇ
ನಾವಾಗಿ ಬಿಡುವ ನಾವಲ್ಲದ ನಾವು; ವ್ಯಾಘ್ರ ಹಸಿವು ಇಟ್ಟುಕೊಂಡ ಪುಣ್ಯಕೋಟಿ ಗೋವಿನಂಥವರು; ನಿತ್ಯ ಅಗ್ನಿಯೊಡಲು ಹೊಕ್ಕಿ
ಹೊಕ್ಕಿ ಬರುವ ಸೀತೆಯರು..

‍ಲೇಖಕರು Avadhi

15 October, 2020

6 Comments

  1. Smitha Amrithraj.

    ತಟ್ಟುವ ಕವಿತೆ ವಸುಂಧರಾ

    • km vasundhara

      ಧನ್ಯವಾದಗಳು ಸ್ಮಿತಾ..

  2. T S SHRAVANA KUMARI

    ಮಾರ್ಮಿಕ ಕವಿತೆ

  3. km vasundhara

    ಧನ್ಯವಾದಗಳು..

  4. Purushothama Bilimale

    ವಸುಂಧರಾ ಕದಲೂರು ಅವರು ಬರೆದ – ಹೆಸರಿಗೆ ಅಲ್ಲಿ ಜ್ವಾಲಾಗ್ನಿ ಇರುವುದಿಲ್ಲ / ಆದರೂ ಉರಿದು ಬೂದಿಯಾಗುತ್ತಾ /ಮತ್ತೆ ಫೀನಿಕ್ಸಿನಂತೆ ಹುಟ್ಟಿ ಬರುತ್ತೇವೆ ನಾಳೆಗೆ/ ಎಂಬ ಸಾಲುಗಳು ಬಹಳ ಶಕ್ತಿಯುತವಾಗಿವೆ. ಜ್ವಾಲಾಗ್ನಿ ಇಲ್ಲದೇ ಉರಿದು ಬೂದಿಯಾಗುವ ಕಲ್ಪನೆಯೇ ನಿಜವಾದ ಕಾವ್ಯ

  5. ಚೈತ್ರಾ ಶಿವಯೋಗಿಮಠ

    ಹೌದು ನಾವು ನಿತ್ಯ ಸೀತೆಯರು.. ಮಾರ್ಮಿಕ ಕವಿತೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading