ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ಮಾದಕತೆ ತುಂಬಿಟ್ಟಿದ್ದೇನೆ..

ಶುಭ್ರತೆ

ಅವಿಜ್ಞಾನಿ ಮಂಗಳೂರು

ನನ್ನ ಸಾವಿಗೆ
ನಾ ಮಾದಕತೆ ತುಂಬಿಟ್ಟಿದ್ದೇನೆ
ಬಹುವಾಗಿ
ಚೆಲುವನ ಕಾಯುವ
ಕನ್ಯೆಯ ಕತ್ತಲ ದೂಡುವ
ಕ್ಷಣಗಳಂತದ್ದು
ಮೊದಲ ಬಾರಿ ಪ್ರೇಮಿಸಲಾಗಿ
ದೂರಾಗಿ ಇರುವ ವಿರಹಿ
ಹುಡುಗನ ಕನವರಿಕೆಯಂತದ್ದು

ಬಗೆ ಬಗೆಯ ಚೆಲುವ
ಅಚ್ಚಾಗಿಸಿದ್ದೇನೆ
ನನ್ನ ಸಾವಿನ
ದಿನಮಾನ ನನ್ನ ದೂರದೃಷ್ಟಿಯಲ್ಲಿ
ಊರಿಡೀ ಯುವತಿಯರ
ಮನಗೆದ್ದು ಬೀಗುವ
ಹುರಿಮೀಸೆ ಕೌಮಾರನ ಗತ್ತು
ಯಾರಿಗೂ ಸಿಕ್ಕದೆ ಸ್ನಿಗ್ಧ ನಗು
ಚೆಲ್ಲಿ ನಿದ್ದೆಗೆಡಿಸುವ
ಓರಗೆಯ ಕನಸಿನ ರಾಣಿಯ
ಬೆತ್ತಲೆ ಬೆನ್ನಿನಂತದ್ದು


ನಾಜೂಕು ತೊಟ್ಟು
ಉರಿದುರಿದು ನಗುವ
ಕಂದೀಲ ಕಣ್ಣ ಸೂಕ್ಷ್ಮತೆ
ನೆಲವ ತೊಯ್ದು ಹರಿದು
ಯಾವ ದಂಡೆಗೂ ದಕ್ಕದೆ
ಬಿಸುಟಿಕೊಂಡು ಹೋಗುವ
ನದಿಯ ಪಾದರಸ ನಡಿಗೆ
ನನ್ನ ಸಾವಿಗೆಲ್ಲ ಬೆಳಕ
ನೆರಳ ಕಪ್ಪು ಕಣ್ಮಸಿಯಿದೆ
ಹೀಗೆಲ್ಲಾ

ಬಟಾಬಯಲ ಮುಗುಳ್ನಗು
ಪ್ರೇಮಿಸುವವನ ಕಣ್ಣ ಹೊಳಪು
ಧೈನ್ಯತೆ ತುಂಬಿಕೊಂಡ
ಬಡವನ ದೈನೇಸಿತನ
ಹೊಟ್ಟೆ ತುಂಬಿದ ಹಸಿದವನ
ನೆಮ್ಮದಿ
ಮೋಕ್ಷ ಹುಡುಕುವವನ ಕಾತರ
ನನ್ನ ಸಾವಿನ ತರಹೇವಾರಿ
ಮಗ್ಗುಲುಗಳು

ಆದರೆ…

ಈ ಮನೆಯವರು
ಭಯಪಡಿಸುತ್ತಾರೆ
ಸಾವು ಭಯಾನಕವೆಂಬಂತೆ
ನಿಸ್ತೇಜವಾದ ಕಣ್ಣುಗಳು
ನೀಟಾಗಿ ಹರಡಿಕೊಂಡ ಕೈಕಾಲುಗಳು
ನನಗೆ ನೆಮ್ಮದಿ ಯನ್ನ
ಉಟ್ಟುಕೊಂಡ
ಬಿಳಿಬಟ್ಟೆಯಷ್ಟೇ ಕಾಣುತ್ತದೆ..!

‍ಲೇಖಕರು avadhi

12 July, 2019

3 Comments

  1. mmshaik

    Very nice.. Avi

    • ಅವಿಜ್ಞಾನಿ

      ಧನ್ಯವಾದಗಳು

  2. Sarayu

    Kavana chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading