
—————————————–
ಬಿದಲೋಟಿ ರಂಗನಾಥ್
—————————————–
ಎತ್ತಿ ಬಿಸಾಡಿದ್ದಾರೆ
ಈ ಕತ್ತಲೆ ಕೋಣೆಯೊಳಕೆ
ಮೌಢ್ಯಕ್ಕೆ ಬಿದ್ದ ಕೈಗಳು
ಕತ್ತಲೆಂದರೆ ಕತ್ತಲು
ಅವರ ಕಣ್ಣ ಕತ್ತಲು ಸೇರಿ
ಕಣ್ಣೇ ಕಾಣುತ್ತಿಲ್ಲ ನನಗೆ
ಕಿಟಕಿಯಿಲ್ಲ
ಕದವಿಕ್ಕಿ ಬೀಗ ಜಡಿದಿದ್ದಾರೆ
ಕೂಗುತ್ತಲೆ ಇದ್ದೇನೆ
ಕೇಳಿಸುತ್ತಿಲ್ಲ ಹೊರಕೆ
ನಾ ಬಿಟ್ಟ ಉಸಿರ ನಾನೇ ಕುಡಿಯುತ
ಒಂದೇ ಒಂದು ಸಾಸಿವೆ ಕಾಳಿನ ಗಾತ್ರದ
ಬೆಳಕಿಗಾಗಿ ಹಂಬಲಿಸುತ್ತಲೇ ಇದೆ ಮನ.
ಬೆಳದಿದ್ದಾವೆ ಮಾರುದ್ದ ತಲೆ ಕೂದಲು,
ಉಗುರು .ಆಗಾಗ ತಿವಿಯುತ್ತೇನೆ
ಮೂಢ ಗೋಡೆಯ
ಮತ್ತೆ ನೋಯುತ್ತೇನೆ
ಭೇದಿಸಲಾಗದೆ.
ಬಿರು ಮಳೆಯ ಶಬ್ದ ಕೇಳುತ್ತದೆ
ಗೋಡೆ ಕುಸಿಯ ಬಾರದೆ
‘ಮಾಡು’ಮೋಡವಾಗಬಾರದೆ
ಎಂದು ಒಳಗೇ ಕುದಿಯುತ್ತಲೇ ಇದ್ದೇನೆ.
ಯಾರೂ ಮನಸು ಮಾಡಲಿಲ್ಲ
ಬಾಗಿಲ ಕೀಲಿ ತಗೆಯಲು
ಬುದ್ದಿಯ ಕಾಳಿದ್ದರು
ಬಿತ್ತಲು ಭೂಮಿಯಿಲ್ಲ
ಒಂದು ಕಾಳು ಎರಡಾಗಲಿಲ್ಲ
ಮೂರಾಗಲಿಲ್ಲ ಮೂಟೆಯಾಗಲಿಲ್ಲ.!
ನನಗೆ ನಾನೇ ಕಾಣುತಿಲ್ಲ.!
ಈ ಕತ್ತಲ ಕೂಪದೊಳಗೆ.
ನಾನತ್ತ ಅಳು ನನಗೇ ಕೇಳುತ್ತಿದೆ.
ನಗುತ್ತೇನೆ
ಅಳುತ್ತೇನೆ
ಕಿರುಚಾಡುತ್ತೇನೆ
ಗೋಡೆಗೆ ಗುದ್ದಿ ಗಾಯ ಮಾಡಿಕೊಳ್ಳುತ್ತೇನೆ
ಗೋಡೆ ಹಸಿರಾಗಲೇ ಇಲ್ಲ.!
ನಾನು ಕುರಡನಲ್ಲದ ಕುರುಡ
ಅಂಧ ಸಮಾಜದ ಎದುರು.
ಆಗೋ,
ಯಾರೋ ಕದ ತಟ್ಟುವ ಶಬ್ದ.!
ಅದು ,ಸಪ್ಪಟ ಸರಿರಾತ್ರಿ
ತಟ್ಟಿ ತಟ್ಟಿ ಸುಮ್ಮಕಾದರು.
ಸುಸ್ತಾದರು.
ಅವರೇ..
ಬುದ್ದ ಬಸವ ಭೀಮರಿರಬೇಕು.
ಜಾತಿಯ ಕೀಲಿ ,
ಮೌಢ್ಯದ ‘ಕದ’ ತೆರೆಯಲೇ ಇಲ್ಲ.
ಅವರು ಹೊಡೆದ ಹೊಡೆತಕೆ
ಕದ ಸೀಳು ಬಿಟ್ಟು
ಒಂಚೂರು ಬೆಳಕಿನ ಹೆಜ್ಜೆ ಕಂಡಂತಿದೆ.
ಬೊಗಸೆಯಷ್ಟು ಗಾಳಿಯ ಆಗಮನವಿದೆ.
ನನ್ನ ಕಣ್ಣುಗಳಲ್ಲಿ ,
ತೆರುಪು ತೆರುಪಾದ
ಹೊಸ ಬೆಳಕಿನ
ಹೆಜ್ಜೆ ಹೂರಿದ ಖುಷಿಯಿದೆ.
ಆದರೆ,
ನಾನು ಮಾತ್ರ
ನನ್ನ ಕತ್ತಲೆಗೆ ಎಸೆದ
ಕೈಗಳು ಉದ್ದಾರವಾಗಲೆಂದು
ಬೇಡಿಕೊಳ್ಳುತ್ತಲೇ ಇದ್ದೇನೆ
ಅವರ ಮನಸು ಬದಲಾಗುವವರೆಗು.





*ತೊಡೆ ತಟ್ಟಿದ ಬೆಳಕು*
ಆ ನಿರ್ಜನ ಮನೆಯೊಳಗೆ
ಕತ್ತಲಿನದೇ ದರಬಾರು
ಮುಚ್ಚಿದ ಕಿಟಕಿಗಳೇ ಅಂಗರಕ್ಷಕರು
ಇಳೀ ಬಿಟ್ಟ ಪರದೆಗಳೇ ಎದೆ ಕವಚ
ಕರೀ ಬಾವಲಿಗಳ ರೆಕ್ಕೆ ಬಡಿತವೇ ಚಾಮರ
ಗೆದ್ದಲು ಹಿಡಿದ ತರಾಯಿಗಳೊಳಗಿಂದ
ಮೊಳಗಿದೆ ದುಂಬಿಗಳ ಬಹುಪರಾಕ್
ಇಂತಹ ಗವ್ವೆನುವ ಕಡು ಕತ್ತಲ
ಸಾಮ್ರಾಜ್ಯದ ಮೇಲೆ ಈಗಷ್ಟೇ
ಹೊಂಚು ಹಾಕಿ ದಂಡೆತ್ತಿ ಬಂದಿದೆ ಬೆಳಕು
ಅಂಗರಕ್ಷರಿಗೀಗ ಅಂಗವೈಕಲ್ಯ
ಎದೆಕವಚಗಳ ಗುಂಡಿಗೆ ಢಮಾರು
ಬಾಲ ಮುದುರಿಕೊಂಡ ಬಾವಲಿಗಳು
ದುಂಬಿಗಳ ಉಸಿರುಗಟ್ಟಲು ಕಿರಣಗಳು
ಒತ್ತಿ ಹಿಡಿದಿವೆ ದಿಂಬು
ಸೋತು ಸುಣ್ಣವಾದ ಕತ್ತಲಿಂದ
ಜರುಗುತ್ತಿದೆ ಬೆಳಕಿಗೆ ಪಾದ ಪೂಜೆ
ತೊಡೆ ತಟ್ಟುವ ಬೆಳಕಿನ ರಾಜ್ಯಭಾರಕ್ಕೆ
ಈಗಷ್ಟೇ ದೊರೆತಿದೆ ಅಧಿಕೃತ ಚಾಲನೆ.
– ಡಾ.ಮಹೇಂದ್ರ. ಎಸ್. ತೆಲಗರಹಳ್ಳಿ
ನಮ್ಮನ್ನು ಕತ್ತಲೆಗೆ ತಳ್ಳಿದರೇನು?
ಇರಲೇಳು, ಕತ್ತಲಿನಲೂ ಕೈ ಹಿಡಿವ ಬುದ್ಧಿಯ ಬೆಳಕಿದೆ
ಇರುಳು ಕಾಲಡಿ ಬೀಳುವುದು ನಾಳೆ
ನಮ್ಮನ್ನು ಕೋಣೆಗೆ ತಳ್ಳಿ ಅಗುಳಿ ಜಡಿದರೇನೆ?
ಆಗಲೇಳು, ಗೋಡೆಗಳ ನಡುವೆ ಅರಳುವ ನವಿರು ಮನಸಿದೆ
ಪ್ರೀತಿಯ ಕನಸ ನಿಚ್ಚಣಿಕೆ ಎದುರಿಗಿದೆ
ಕಾಲಿಗೆ ಹಗ್ಗ ಸುತ್ತಿದರೇನು?
ಸುತ್ತಲೇಳು, ಪರಿಮಳಕೆ ಕುಣಿಕೆಯ ಹಂಗಿಲ್ಲ,
ಹರಡಿಯೇ ತೀರುವುದು
nice poem..deepthi