ನಾ ದಿವಾಕರ
**
ಅಮ್ಮ ಹುಟ್ಟಿದ ದಿನ ವರುಷದ ಮೊದಲ ದಿನ ಹೀಗೇ ಕನವರಿಕೆಗಳಲ್ಲಿ
**
ವರುಷ ವರುಷವೂ ಬರುವ ಯುಗಾದಿಗೂ ಅಮ್ಮನಿಗೂ ಎಂತಹ ಅವಿನಾಭಾವ ಸಂಬಂಧ ! ಹೀಗೆಂದ ಕೂಡಲೇ ನೆನಪಾಗುವುದು ಅಮ್ಮ ಮಾಡುತ್ತಿದ್ದ ಹೋಳಿಗೆ. ಆ ಹೋಳಿಗೆಯ ರುಚಿ ಇಂದಿಗೂ ಮನದಾಳದ ಮೂಲೆಯಲ್ಲಿ ಅವಿತು ಕುಳಿತಿದೆಯೇನೋ ಎನ್ನುವಷ್ಟು ಆಪ್ತತೆಯನ್ನು ಉಳಿಸಿಕೊಂಡಿದೆ. ಕಾರಣ ಹೇಳಬೇಕೇ? ಅದರೊಳಗೆ ತುಂಬಿದ್ದ ಹೂರಣದಲ್ಲಿ ಬೇಳೆ ಬೆಲ್ಲ ಇತ್ಯಾದಿಗಳ ಹೊರತಾಗಿ ಪ್ರೀತಿ, ವಾತ್ಸಲ್ಯ ಮಮತೆ, ಕಾಳಜಿ, ಕಳಕಳಿ ಇನ್ನೇನೇನೋ ಇರುತ್ತಿದ್ದವು. ಆ ರುಚಿಯನ್ನು ಸವಿದು ಮೂರು ದಶಕಗಳಿಗೂ ಹೆಚ್ಚು ಕಾಲ ಸವೆದುಹೋಗಿದೆ. ನಾಲಗೆಯ ಮೇಲಂತೂ ಇರಲು ಸಾಧ್ಯವಿಲ್ಲ. ಹೊಟ್ಟೆಯೊಳಗೆ ಹೇಗಿದ್ದೀತು ? ಆದರೆ ಮನದ ಮೂಲೆಯಲ್ಲಿ ಪುಟಿಪುಟಿದು ಕಾಣಿಸಿಕೊಳ್ಳುತ್ತದೆ. ಏಕೆ ಗೊತ್ತೇ? ನನ್ನ ಮಟ್ಟಿಗೆ ಯುಗಾದಿ ಒಂದು ಸಾಂಪ್ರದಾಯಿಕ ಹಬ್ಬ ಎನ್ನುವುದಕ್ಕಿಂತಲೂ ನನ್ನಮ್ಮ ಹುಟ್ಟಿದ ದಿನ ಎನ್ನುವುದೇ ವಿಶೇಷ.
ಹೌದು, ಅಮ್ಮ ಭೌತಿಕವಾಗಿ ಅಗಲಿ 34 ವರ್ಷಗಳೇ ಕಳೆದಿದ್ದರೂ (05-06-1990) ಆ ತಾಯಿಯ ಅಕ್ಕರೆಯ ಮಾತುಗಳು, ʼಮಗೂʼ ಎಂಬ ನಲ್ಮೆಯ ಕರೆ, ʼಕರೂʼ ಎಂಬ ವಾತ್ಸಲ್ಯದ ಕೂಗು ಇಂದಿಗೂ ಗುನುಗುನಿಸುತ್ತಲೇ ಇರುತ್ತದೆ. ಯುಗಾದಿಯ ದಿನ ಈ ಎರಡು ಪದಗಳು ಜೀರುಂಡೆಯಂತೆ ಎರಡೂ ಬದಿಗಳಲ್ಲಿ ಸದ್ದುಮಾಡುತ್ತಲೇ ಇರುತ್ತವೆ. ಅಮ್ಮನ ನೆನಪಾದರೆ ಅವಳ ಬದುಕಿನ ದಿನಗಳಿಂದ ಏನನ್ನು ನೆನಪಿಸಿಕೊಳ್ಳುವುದು, ಯಾವುದನ್ನು ಮರುಸಂಪರ್ಕಿಸಿ ಮತ್ತೊಮ್ಮೆ ಮುಖಾಮುಖಿಯಾಗಿ ವರ್ತಮಾನಕ್ಕೆ ತಂದು ನಿಲ್ಲಿಸಿ ಪುನರ್ ಮನನ ಮಾಡಿಕೊಳ್ಳುವುದು? ಈ ಜಿಜ್ಞಾಸೆಯೂ ಒಂದು ವಾರ್ಷಿಕ ಕ್ರಿಯೆಯೇ ಆಗಿದೆ. ಕಾರಣ ಹೇಳಬೇಕೇ? ಫೋಟೋದಲ್ಲಿ ನಗುತ್ತಾ ಇರುವ ಅಮ್ಮ ನನ್ನ ನಗುವಿಗೆ ಸ್ಪಂದಿಸದೆ ಇದ್ದರೂ, ಆಗಾಗ್ಗೆ ಹನಿಯುವ ಕಂಬನಿಗೆ ಥಟ್ಟನೆ ಮಿಡಿಯುತ್ತಾಳೆ. ಅಥವಾ ನನಗೆ ಹಾಗೆ ಭಾಸವಾಗುತ್ತದೆ.
ಭಾವನೆ ಎನ್ನುವುದೇ ಹಾಗೆ. ಭೌತಿಕ ಜೀವಂತಿಕೆ ಇಲ್ಲದೆಯೂ ಜೀವಂತವಾಗಿ ಎದೆಯೊಳಗೆ ಹೊಕ್ಕು ನರನಾಡಿಗಳಲ್ಲಿ ನೆನಪುಗಳನ್ನು ಉದ್ಧೀಪನಗೊಳಿಸುವ ಸಮ್ಮೋಹಕ ಶಕ್ತಿ ಈ ʼಭಾವನೆʼ ಎನ್ನುವ ಮಾನಸಿಕ ಪ್ರಕ್ರಿಯೆಗೆ ಇರುತ್ತದೆ. ಸ್ವತಃ ಅಥವಾ ಜನ್ಮತಃ ಭಾವಜೀವಿಯಾದ ನನಗೆ ಅಮ್ಮ ಹೀಗೆ ಭಾವನೆಗಳಲ್ಲೇ ಸಜೀವವಾಗಿ ಸದಾ ನನ್ನೊಡನಿರುತ್ತಾಳೆ ಎಂದೇ ಭಾವಿಸುತ್ತೇನೆ. ಯಾವುದೋ ಸನ್ನಿವೇಶದಲ್ಲಿ, ಯಾರೋ
ನೋವುಂಟುಮಾಡಿದಾಗ, ಯಾರೋ ಆಪ್ತರು ಪಕ್ಕೆಗಳಿಗೆ ಇರಿದಾಗ, ಯಾವುದೋ ಸಂದರ್ಭ ಖಿನ್ನತೆಗೆ ದೂಡಿದಾಗ, ನನ್ನೊಳಗಿನ ಅಮ್ಮ ಧುತ್ತನೆ ಹೊರಬರುತ್ತಾಳೆ, ಮತ್ತದೇ ʼಮಗೂ,,,,ʼ ಎಂಬ ಕರೆಯೊಡನೆ. ಯುಗಾದಿಯಂದು ಮಡದಿ ಮಾಡುವ ಸಿಹಿ ಹೂರಣದಲ್ಲೂ ಈ ಕರೆಯೇ ಕಾಣುವುದರಿಂದ ನನಗೆ ಯುಗಾದಿ ʼಅಮ್ಮನುಗಾದಿʼ ಆಗುತ್ತದೆ.
ಬಡತನ, ಹಸಿವು, ಅಪಮಾನ, ಮಾನಸಿಕ ಚಿತ್ರಹಿಂಸೆ ಇವೆಲ್ಲವುಗಳನ್ನೂ ದಿಟ್ಟತನದಿಂದ ಎದುರಿಸಿ, ತಾನು ಕಳೆದುಕೊಂಡದ್ದನ್ನು ಪರಿಪೂರ್ಣವಾಗಿ ಮರಳಿ ಪಡೆಯುವ ಮುನ್ನವೇ ನಿರ್ಗಮಿಸಿದ ಅಮ್ಮನ ಬದುಕಿನ ಪುಟಗಳನ್ನು ತೆರೆದಿಟ್ಟಾಗ, ಆಕೆಯ ದಿಟ್ಟತನದ ಕೆಲವು
ಪ್ರಸಂಗಗಳು ಕಣ್ಣೆದುರು ಹಾದು ಹೋಗುತ್ತವೆ. ತನ್ನ ತಾಯ್ತನದ ಕರುಣೆ ಮತ್ತು ವಾತ್ಸಲ್ಯದ ಗಡಿಗಳನ್ನೂ ದಾಟಿ, ಬದುಕಿನ ವಾಸ್ತವತೆಗೆ ಮುಖಾಮುಖಿಯಾದ ಸನ್ನಿವೇಶಗಳಲ್ಲಿ ʼಅಮ್ಮʼ ಕರುಳ ಸಂಬಂಧಗಳ ಸಂಕೋಲೆಗಳನ್ನೂ ಲೆಕ್ಕಿಸದೆ, ದೃಢ ನಿರ್ಧಾರವನ್ನು ತಳೆದ ಒಂದು ಪ್ರಸಂಗ ಆಕೆಯ ಆತ್ಮಸ್ಥೈರ್ಯದ ಸಂಕೇತವಾಗಿಯೇ ಇಂದಿಗೂ ಕಾಣುತ್ತದೆ. ಒಬ್ಬ ತಾಯಿ ಹೀಗೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆಯ ಜೊತೆಗೇ, ಕಷ್ಟ ಕಾರ್ಪಣ್ಯಗಳಿಂದ ನೊಂದು ಬೆಂದು ಅಸಹಾಯಕಳಾದ ತಾಯಿ ಹೀಗೂ ಮಾಡಬಹುದು ಎಂಬ ಉತ್ತರವೂ ದೊರೆಯಲು ಸಾಧ್ಯ.
1977ರ ಪ್ರಸಂಗ ಹೀಗಿದೆ : “ಅಪ್ಪ ನಮ್ಮಿಂದ ಹಠಾತ್ತನೆ ನಿರ್ಗಮಿಸಿ ಕೆಲವೇ ದಿನಗಳಾಗಿರಬಹುದು. ಅಪ್ಪ ಇದ್ದಾಗಲೂ ಅವರ ಅನಾರೋಗ್ಯದ ಬಗ್ಗೆ ಕಣ್ಣೆತ್ತಿ ನೋಡದ ಹಿರಿಮಗ, ಅವರ ಸಾವಿನ ನಂತರ ಬಂದು ಕಂಬನಿ ಮಿಡಿಯುತ್ತಾನೆ. ಕರುಳ ಸಂಬಂಧವಲ್ಲವೇ, ಅದು ಸಹಜ. ಅಮ್ಮ ಆ ದಿನಗಳನ್ನು ಹೇಗೆ ಎದುರಿಸಿದಳೋ ಇಂದಿಗೂ ಅರ್ಥವಾಗುತ್ತಿಲ್ಲ. ನಾನು ಮೊದಲ ಪಿಯುಸಿ, ಮತ್ತೊಬ್ಬ ಸೋದರ ದ್ವಿತೀಯ ಪಿಯುಸಿ. ಪದವಿ ಪೂರೈಸಿದ ಅಕ್ಕ. ಹತ್ತನೆ ಇಯತ್ತೆ ಫೇಲಾದ ಮತ್ತೊಬ್ಬ ಸೋದರಿ. ಓದು ಅರ್ಧಕ್ಕೇ ನಿಲ್ಲಿಸಿ ಅಕ್ಕಿಗಿರಣಿಯಲ್ಲಿ ತಿಂಗಳಿಗೆ 90 ರೂ ಸಂಬಳಕ್ಕೆ ದುಡಿಯುತ್ತಿದ್ದ ಮತ್ತೊಬ್ಬ ಸೋದರ. ಬಾಡಿಗೆ ಮನೆ ಆದರೂ ಬಾಡಿಗೆ ಕೊಡಲಾಗುವುದಿಲ್ಲ ಎಂದು ನಿರ್ದಾಕ್ಷಿಣ್ಯವಾಗಿ, ಯಾವುದೇ ಮುಜುಗರ ಇಲ್ಲದೆ, ಹೇಳುವಂತಹ ಬದುಕು. ಬಡತನ ಕೆಲವೊಮ್ಮೆ ಈ ಧೈರ್ಯವನ್ನು ತಂದುಕೊಡುವುದುಂಟು. ತಿನ್ನಲು ಕೂಳೇ ಇಲ್ಲದಿದ್ದಾಗ ಈ ಧೈರ್ಯ ಹೆಚ್ಚಾಗುವುದೂ ಉಂಟು. ಒಬ್ಬನ ಆದಾಯಕ್ಕೆ ಐದು ತೆರೆದ ಬಾಯಿಗಳು, ಹಸಿದ ಹೊಟ್ಟೆಗಳು. ಇದನ್ನು ಸಾಂತ್ವನದೊಂದಿಗೆ ನಿಭಾಯಿಸುವ ಹೊರೆ ಅಮ್ಮನದು.
“ಇದ್ದಾಗ ಊಟ ಇಲ್ಲದಿದ್ದಾಗ ತಣ್ಣನೆಯ ನೀರು” ಪ್ರಮೇಯದಲ್ಲಿ ಜೀವನ. ಈ ಸನ್ನಿವೇಶದಲ್ಲೇ ಪತಿಯ ಸಾವು. ಕಂಗೆಟ್ಟ ಬದುಕು, ಕಾಂತಿಹೀನ ಕಣ್ಣುಗಳು, ಸುಡುಕಾವಲಿಯಂತಾದ ಹೊಟ್ಟೆಗಳು. ಹಿರಿ ಮಗನ ಆಗಮನದಿಂದ ಅಮ್ಮನ ಮನಸ್ಸಿಗೆ ಅದೇನೋ ಪುಳಕ. “ಅಂತೂ ನಮ್ಮ ಕಷ್ಟ ಪರಿಹರಿಸಬಹುದು” ಎಂಬ ಆತ್ಮವಿಶ್ವಾಸ. ಕಾರಣ ಅವನು ಮದ್ರಾಸಿನಲ್ಲಿ ನೌಕರಿಯಲ್ಲಿದ್ದ. ಒಮ್ಮೆ ರಾತ್ರಿ 9ರ ವೇಳೆ ನಾವೆಲ್ಲರೂ ಊಟ ಮಾಡುತ್ತಿದ್ದ ಸಮಯ. ಊಟ ಅಂದರೆ ಮಜ್ಜಿಗೆ ಅನ್ನ ಅಷ್ಟೆ. ಸುತ್ತಲೂ ಹಸಿದ ನಾವು. ನಡುವೆ ಅಮ್ಮ. ಆ ಹಿರಿಮಗ, ಅಂದರೆ ನನ್ನ ಹಿರಿಯಣ್ಣನೂ ಹೊರಗೆ ಹೋಗಿದ್ದವನು ದಡಬಡನೆ ಬಂದ. ಊಟಕ್ಕೆ ಬಾರೋ, ಅಮ್ಮನ ಕರೆಗೆ ಅವನೇನೂ ಸ್ಪಂದಿಸಲಿಲ್ಲ. ಅವನ ಕೈಯ್ಯಲ್ಲಿ ನೂರರ ಐದು ನೋಟುಗಳಿದ್ದವು. ಇಸ್ಪೇಟ್ ಎಲೆಗಳಂತೆ ಜೋಡಿಸಿಕೊಂಡು, ಅಮ್ಮನ ಮುಖದೆದುರು ಹಿಡಿದು “ಅಮ್ಮಾ ನಾನು ಹನ್ನೊಂದು ಗಂಟೆ ರೈಲಿಗೆ ಮದ್ರಾಸ್‌ಗೆ ಹೊರಟಿದ್ದೇನೆ, ನನ್ನ ಕೈಯ್ಯಲ್ಲಿರುವುದು ಇಷ್ಟೇ, ನನ್ನ ಜೀವನ ನೋಡಿಕೊಳ್ಳುವುದಕ್ಕಾಗಿ, ನಿಮ್ಮೆಲ್ಲರನ್ನೂ ಸಾಕಲು ನನ್ನಿಂದ ಸಾಧ್ಯವಿಲ್ಲ Bye” ಎಂದು ಹೇಳಿ ಸೂಟ್ ಕೇಸ್ ಹಿಡಿದು ಹೊರಟೇ ಬಿಟ್ಟ. ಅವನ ನಿಷ್ಠುರ/ನಿರ್ದಾಕ್ಷಿಣ್ಯ ಮಾತುಗಳು ನಮ್ಮೆಲ್ಲರನ್ನೂ ಅವಾಕ್ಕಾಗಿಸಿತ್ತು. ಪಿಳಿಪಿಳಿ ಕಣ್ಣುಬಿಡುತ್ತಾ ಅಮ್ಮನನ್ನೇ ನೋಡುತ್ತಾ ಕುಳಿತೆವು.
ನನ್ನ ನೆನಪಿನ ಶಕ್ತಿ ಸರಿ ಇದ್ದರೆ, ಅಂದು ಅಮ್ಮನ ಕಣ್ಣಲ್ಲಿ ಆತಂಕವಾಗಲೀ, ಗಾಬರಿಯಾಗಲೀ, ಹತಾಶೆಯಾಗಲೀ ಕಾಣಲೇ ಇಲ್ಲ. ಕಂಬನಿಯೂ ಹೊರಬರಲಿಲ್ಲ. ಸುಮ್ಮನೆ ಶಿಲಾಮೂರ್ತಿಯಂತೆ ಕುಳಿತುಬಿಟ್ಟಳು. ನಾವೆಲ್ಲರೂ ಮೂಕ ಪ್ರೆಕ್ಷಕರಾಗಿಬಿಟ್ಟೆವು. ‘ನಾಳೆ’ ಎನ್ನುವುದು ದಿನನಿತ್ಯವೂ ಅನಿಶ್ಚಿತವಾಗಿದ್ದುಕೊಂಡೇ ಹಸಿವಿನ ನಡುವೆಯೇ ಬದುಕು ಸಾಗಿಸುತ್ತಿದ್ದ ನಮಗೆ ಈ ʼಅನಿಶ್ಚಿತತೆʼ ಖಾಯಂ ಆದಂತೆ ಭಾಸವಾಗಿದ್ದು ಸತ್ಯ. ಅಮ್ಮನ ಬಗ್ಗೆ ಹೇಳುತ್ತಿದ್ದೆ ಅಲ್ಲವೇ, ಅವಳ ಬಾಯಿಂದ ಒಂದೇ ಒಂದು ಮಾತು ಹೊರಡಲಿಲ್ಲ. ಆದರೆ “ಪಾಪಿ ಮುಂಡೇಮಗ” ಎಂದು ಮನದೊಳಗೇ ಬೈದುಕೊಂಡಿದ್ದಂತೂ ಎಲ್ಲರಿಗೂ ಕೇಳಿಸಿತ್ತು.
ಈ ಪ್ರಸಂಗದ ಹಿನ್ನೆಲೆಯಲ್ಲೇ ಆ ಹಿರಿಮಗನಿಗೇ ಸಂಬಂಧಿಸಿದ, ಇದಕ್ಕೂ ಒಂದು ವರ್ಷದ ಹಿಂದಿನ, ಮತ್ತೊಂದು ಪ್ರಸಂಗವನ್ನೂ ಹೇಳಬಹುದು. ಅಪ್ಪ ಇನ್ನೂ ಬದುಕಿದ್ದರು ಆದರೆ ಮಧುಮೇಹ, ಗ್ಯಾಂಗ್ರಿನ್ ಖಾಯಿಲೆಯಿಂದ ಬಳಲಿ ಹಾಸಿಗೆ ಹಿಡಿದಿದ್ದರು. ಆಗಲೂ ಮನೆಯ ಪರಿಸ್ಥಿತಿ ಇದೇ ಆಗಿತ್ತು. ಅಷ್ಟೇ ಆದಾಯ ಅಷ್ಟೇ ಹಸಿದ ಹೊಟ್ಟೆಗಳು, ಔಷಧಿ ಇತ್ಯಾದಿ ಹೆಚ್ಚುವರಿ ಖರ್ಚುಗಳು. ಆ ಹೆಚ್ಚುವರಿಯ ಬಗ್ಗೆ ʼWorry ಯಾರಿಗೂ ಇರಲಿಲ್ಲವಾಗಿಯೇ ಅಪ್ಪನ ಹಾದಿಯೂ ಬೇಗ ಕೊನೆಗೊಂಡಿತ್ತೆನ್ನಿ. ಆಗಲೂ ಒಂದು ದಿನ ಹೀಗೆಯೇ ರಾತ್ರಿ ಎಲ್ಲರೂ ಊಟಕ್ಕಾಗಿ, ಅಂದರೆ ʼಮಜ್ಜಿಗೆ ಅನ್ನʼ ತಿನ್ನಲು ಎಲ್ಲರೂ ಕುಳಿತಿದ್ದೆವು. ಈ ಹಿರಿಮಗನೂ ಬಂದು ಕುಳಿತ. ಎಲ್ಲರ ತಟ್ಟೆಗೂ ಅನ್ನ ಹಾಕುತ್ತಾ ಬಂದ ಅಮ್ಮ ಇವನನ್ನು ನೋಡುತ್ತಲೇ “ನಿನಗೆ ನಾನು ಊಟ ಹಾಕುವುದಿಲ್ಲ. ಹಿರಿಮಗನಾಗಿ ದಂಡಪಿಂಡದಂತೆ ಮನೇಲಿ ಬಿದ್ದಿದೀಯಾ, ಚಿಕ್ಕವನ ದುಡಿಮೆಯಲ್ಲಿ ನಾವೆಲ್ಲಾ ಅರೆಹೊಟ್ಟೆ ತಿನ್ನುತ್ತಿದ್ದೇವೆ, ಮಂಚದ ಮೇಲೆ ಅವರು ಅಸಹಾಯಕರಾಗಿ ಬಿದ್ದಿದ್ದಾರೆ. ನೀನು ಸಂಪಾದಿಸಿಕೊಂಡು ಬರುವವರೆಗೂ ಈ
ಮನೆಯಲ್ಲಿ ನಿನಗೆ ಅನ್ನ ಹಾಕುವುದಿಲ್ಲ, ಎದ್ಹೋಗು” ಎಂದುಬಿಟ್ಟರು. ಹೀಗೆ ಒಂದೇ ಉಸಿರಿನಲ್ಲಿ ಹೇಳಿದ ಅಮ್ಮನಲ್ಲಿ ಆಗ ನಾನು ಕಂಡಿದ್ದೇನು? ಕರುಳ ಕುಡಿಯ ಹಸಿವನ್ನು ತಣಿಸಲು ನಿರಾಕರಿಸಿದ ತಾಯಿಯನ್ನೇ? ಅಸಹಾಯಕ ಮಕ್ಕಳಿಗಾಗಿ ಮಿಡಿದ ಮಾತೃ ಹೃದಯವನ್ನೇ? ತನ್ನ-ಮಕ್ಕಳ ಅನಿಶ್ಚಿತ ಬದುಕಿಗೆ ಕಾರಣನಾದ ವ್ಯಕ್ತಿಯನ್ನು ಕಟಕಟೆಯಲ್ಲಿ ನಿಲ್ಲಿಸುವ ನ್ಯಾಯಮೂರ್ತಿಯನ್ನೇ? ಇಂದಿಗೂ ಅರ್ಥವಾಗುತ್ತಿಲ್ಲ. ಆದರೆ ಇದಾದ ಆರೇಳು ತಿಂಗಳಲ್ಲಿ ಅವನು ಮದ್ರಾಸ್‌ನಲ್ಲಿ ನೌಕರಿ ಪಡೆದು ನಿರ್ಗಮಿಸಿದ್ದ.
2009ರಲ್ಲಿ ಕಾರ್ಪೋರೇಟ್ ಉದ್ಯಮದಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದ ಹಿರಿಯಣ್ಣ ಮೈಸೂರಿನ ಮನೆಗೆ ಬಂದಿದ್ದಾಗ, ಈ ಪ್ರಸಂಗವನ್ನು ನೆನೆಯುತ್ತಾ “ಅದು ನನ್ನ ಬದುಕಿಗೆ ಕಣ್ತೆರೆಸಿದ ಘಟನೆ ” ಎಂದು ಹೇಳಿದ್ದ, ಅದಾದ ಒಂದು ವರ್ಷದ ನಂತರ ಅವನೂ ನಿರ್ಗಮಿಸಿದ. ಹೀಗೆ ಕನವರಿಕೆ ಬಂದಾಗಲೆಲ್ಲಾ ಅಮ್ಮ ನೆನಪಾಗುತ್ತಾಳೆ. ಅವಳ ಆತ್ಮಸ್ಥೈರ್ಯ, ದಿಟ್ಟ ನಿಲುವು, ದಾರ್ಷ್ಟ್ಯ, ಹಠಮಾರಿತನ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಬದುಕಿನ ವಿಷಮ ಗಳಿಗೆಗಳನ್ನು ಪಾರು ಮಾಡಲು ಬೇಕಾದ ಧಾರಣ ಶಕ್ತಿ ನೆನಪಾಗುತ್ತದೆ. ಅವಳ ಯಾವುದೇ ನಡೆಯೂ ತಪ್ಪು ಎನಿಸುವುದಿಲ್ಲ. ಅವಳ ಜಾಗದಲ್ಲಿ ನಿಂತು ನೋಡಲು ಸಾಧ್ಯವಾಗುವುದೂ ಇಲ್ಲ ಏಕೆಂದರೆ ಆ ಖಾಲಿ ಜಾಗವನ್ನು ತುಂಬುವ ಆತ್ಮಶಕ್ತಿ ನನ್ನಲ್ಲಂತೂ ಇಲ್ಲ. ಹಾಗಾಗಿ ನೆನಪಿನ ದೋಣಿಯಲ್ಲಿ ಸಾಗುತ್ತಾ ಕೆಲವೇ ಪ್ರಸಂಗಗಳನ್ನು ಮೆಲುಕು ಹಾಕುತ್ತಾ, ಅಮ್ಮನ ಹುಟ್ಟುಹಬ್ಬದ ದಿನವನ್ನು ʼಯುಗಾದಿʼ ಎಂದು ಆಚರಿಸುತ್ತೇನೆ. ಯುಗಾದಿ ಮರಳಿ ಮರಳಿ ಬರುತ್ತದೆ. ಅಮ್ಮನ ನೆನಪು ಸದಾ ಇರುತ್ತದೆ. ಯುಗಾದಿಯಂದು ವಿಶೇಷ ಭಾವಸ್ಪರ್ಶದೊಡನೆ ಬಾಧಿಸುತ್ತದೆ. ಆ ಭಾವಸ್ಪರ್ಶದ ಭಾವುಕ ತುಣುಕುಗಳಿಗೆ ಈ ಅಕ್ಷರ ರೂಪ. “ಅಮ್ಮಾ, ನೀನು ಸದಾ ಜೀವಂತ ನಿನ್ನ ನೆನಪು ಅಮರ ನಿನ್ನ ಜೀವನಸ್ಫೂರ್ತಿ ಸಾರ್ವಕಾಲಿಕ. ನಮನಗಳು.” ನಿನ್ನ ʼಮಗುʼ ಅಲಿಯಾಸ್ ʼಕರುʼ.
0 Comments