ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ದಿವಾಕರ್ : ಸಾವಿನಲ್ಲಿ ವಿಜೃಂಭಣೆಯೇಕೆ, ನಾವು ನಾಗರೀಕರಲ್ಲವೇ ?

ಅಂದು ಅಜ್ಮಲ್ ಕಸಬ್ ಆಯಿತು. ಇಂದು ಅಫ್ಜಲ್ ಗುರು. ಭಾರತದಲ್ಲಿ ಬಹುಶಃ ಮೃದು ಧೋರಣೆ-ಕಠಿಣ ಧೋರಣೆಯ ಸಂಘರ್ಷಗಳ ನಡುವೆ ಮರಣದಂಡನೆಯ ಪರಂಪರೆ ಸ್ಥಾಪಿತವಾಗುತ್ತಿರುವಂತೆ ಭಾಸವಾಗುತ್ತಿದೆ. ಭಾರತೀಯ ಸಮಾಜದ ಸಮೂಹ ಪ್ರಜ್ಞೆಯನ್ನು ಸಂತೃಪ್ತಿಪಡಿಸಲು ಅಪರಾಧಿಗಳಿಗೆ ಉಗ್ರ, ಕಠಿಣ ಶಿಕ್ಷೆ ಅತ್ಯಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ ಭಾರತೀಯ ಸಮಾಜದ ಸಮೂಹ ಪ್ರಜ್ಞೆ ಸಮೂಹ ಸನ್ನಿಗೆ ಒಳಗಾಗಿರುವುದು ಸ್ಪಷ್ಟವಾಗುತ್ತಿದೆ. ಕಸಬ್ ಮುಂಬೈ ದಾಳಿಯಲ್ಲಿ ನೇರವಾಗಿ ಭಾಗಿಯಾಗಿ ಹಲವರ ಸಾವಿಗೆ ಕಾರಣನಾದ ಒಬ್ಬ ಭಯೋತ್ಪಾದಕ. ಅಫ್ಜಲ್ ಗುರು ಸಂಸತ್ ಭವನದ ಮೇಲಿನ ದಾಳಿಯಲ್ಲಿ ಶಸ್ತ್ರಾಸ್ತ್ರ ಹಿಡಿದು ಭಾಗಿಯಾಗಲಿಲ್ಲ. ಯಾರನ್ನೂ ಹತ್ಯೆ ಮಾಡಲಿಲ್ಲ. ಭಾರತದ ಪವಿತ್ರ ಸಂವಿಧಾನದ ಮೇಲೆ ಆಕ್ರಮಣ ಮಾಡಲಿಲ್ಲ. ಭಯೋತ್ಪಾದಕ ಕೃತ್ಯದಲ್ಲಿ ನೇರವಾಗಿ ಭಾಗವಹಿಸಲಿಲ್ಲ. ಆದರೆ ಸಂಸತ್ ದಾಳಿಯ ಸಂಚು ರೂಪಿಸುವಲ್ಲಿ, ಪಿತೂರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪ ಎದುರಿಸುತ್ತಿದ್ದು ಮರಣದಂಡನೆಗೆ ಗುರಿಯಾಗಬೇಕಿದೆ.
ಭಯೋತ್ಪಾದನೆಯನ್ನು ಮತೀಯ ಕಂಗಳಿಂದಲೇ ನೋಡುವ ಬಲಪಂಥೀಯ ರಾಜಕೀಯ ಪಕ್ಷಗಳಿಗೆ ಭಾರತದಲ್ಲಿ ಭಯೋತ್ಪಾನೆಯ ಅಸ್ತಿತ್ವ ಮತ್ತು ಅಫ್ಜಲ್ ಗುರುವಿನ ಬದುಕು ಒಂದೇ ಆಗಿತ್ತು. ಅಫ್ಜಲ್ಗೆ ಶಿಕ್ಷೆ ವಿಧಿಸಿದರೆ ಭಯೋತ್ಪಾದಕತೆಗೆ ಹಿನ್ನಡೆ ಉಂಟಾಗುತ್ತದೆ ಎಂಬ ಭಾವನೆ ಒಂದೆಡೆಯಾದರೆ, ಅಫ್ಜಲ್ ಗುರುವಿಗೆ ಶಿಕ್ಷೆ ನೀಡದಿರುವುದು ಅಲ್ಪಸಂಖ್ಯಾತರ ಓಲೈಕೆಯಾಗುತ್ತದೆ ಎಂಬ ಭಾವನೆ ಮತ್ತೊಂದೆಡೆ ವ್ಯಕ್ತವಾಗುತ್ತಿದ್ದುದು ಭಾರತದ ರಾಜಕೀಯ ಸಂಕಥನಗಳ ಸಂಕುಚಿತ ಧೋರಣೆಯ ಪ್ರತೀಕವಾಗಿ ಕಾಣುತ್ತದೆ. ಈ ಎರಡೂ ಪ್ರತಿಪಾದನೆಗಳು ದೋಷಪೂರಿತವಾದದ್ದಷ್ಟೇ ಅಲ್ಲ ಪೂರ್ವಗ್ರಹ ಪೀಡಿತವಾಗಿಯೂ ಕಾಣುತ್ತವೆ. ನಿಜ, ಭಾರತದಲ್ಲಿ ಭಯೋತ್ಪಾದನೆ ತಳ ಊರಿದೆ. ಸ್ಥಳೀಯ , ದೇಶೀಯ ಮತ್ತು ವಿದೇಶದಿಂದ ಆಮದು ಮಾಡಿಕೊಂಡ ಭಯೋತ್ಪಾದಕರು ಇಲ್ಲಿ ನೆಲೆಯೂರಿದ್ದಾರೆ. ಸರ್ಕಾರದ ಕಠಿಣ ಶಾಸನಗಳು, ಕರಾಳ ಶಾಸನಗಳು ಮತ್ತು ಉಗ್ರ ಶಿಕ್ಷೆಗಳ ನಡುವೆಯೂ ಇಲ್ಲಿ ಭಯೋತ್ಪಾದನೆ ಸುಪ್ತವಾಗಿ ಹರಿದಾಡುತ್ತಲೇ ಇದೆ.
1980ರ ಸಿಖ್ ಭಯೋತ್ಪಾದನೆ ರಿಬೇರೋ ಅವರಂತಹ ಪೊಲೀಸರ ದಿಟ್ಟ ಕಾನೂನು ಕ್ರಮಗಳ ಫಲವಾಗಿ ಅಂತ್ಯವಾಯಿತು ಎಂದು ಭಾವಿಸಿ, ಇದೇ ರೀತಿಯ ಕಠಿಣ ಕಾನೂನು ಕ್ರಮಗಳು ಎಲ್ಲ ರೀತಿಯ ಭಯೋತ್ಪಾದನೆಯನ್ನೂ ಕೊನೆಗಾಣಿಸಬಹುದು ಎಂದು ಎಣಿಸಲಾಗುತ್ತದೆ. ಆದರೆ ಸಿಖ್ ಭಯೋತ್ಪಾದನೆ ಅಂತ್ಯವಾಗಿಯೂ ಇಲ್ಲ, ಭಾರತದಲ್ಲಿ ತನ್ನ ಪ್ರಭಾವ ಕಳೆದುಕೊಂಡಿದ್ದರೆ ಅದಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ಕಾರಣಗಳು ಸಾಕಷ್ಟಿವೆ.  ಇರಲಿ, ಭಯೋತ್ಪಾದನೆಯ ನಿಗ್ರಹದಲ್ಲಿ ಅಫ್ಜಲ್ ಗುರುವಿಗೆ ನೀಡುವ ಶಿಕ್ಷೆ ಧನಾತ್ಮಕ ಬೆಳವಣಿಗೆ ಎಂದು ಭಾವಿಸುವುದು ಪ್ರಭುತ್ವದ ಆತ್ಮರತಿಯ ಸಂಕೇತವಾಗುವುದಷ್ಟೆ.  ದೇಶದ ಸಂಸತ್ ಭವನದ ಮೇಲೆ ದಾಳಿ ಮಾಡುವ ಮೂಲಕ ಸಾರ್ವಭೌಮತ್ವಕ್ಕೇ ಸಡ್ಡು ಹೊಡೆದವರಿಗೆ ಶಿಕ್ಷೆ ನೀಡುವುದು ಸ್ವಾಗತಾರ್ಹ. ಮರಣದಂಡನೆ ವಿಧಿಸುವುದು ತರವೇ ಎಂಬ ಪ್ರಶ್ನೆಯನ್ನ ಬದಿಗಿಟ್ಟು ನೋಡಿದರೂ ಅಫ್ಜಲ್ ಮತ್ತು ಭಯೋತ್ಪಾದನೆಯನ್ನು ಸಮೀಕರಿಸಿ ನೋಡಲಾಗುವುದಿಲ್ಲ. ಇದು ಸಂಘಪರಿವಾರ ಮತ್ತು ಬಿಜೆಪಿಯ ಸಂಕಥನಗಳಿಗೆ ಹೊಂದಬಹುದಷ್ಟೆ.
ಮತ್ತೊಂದು ವಿಚಿತ್ರ ಪ್ರತಿಪಾದನೆ ಎಂದರೆ ಅಫ್ಜಲ್ ಗುರು ಮತ್ತು ಅಲ್ಪಸಂಖ್ಯಾತರನ್ನು ಸಮೀಕರಿಸುವುದು. ಈ ದೇಶದ ಅಲ್ಪಸಂಖ್ಯಾತ ಜನಸಾಮಾನ್ಯರು ಎಂದಿಗೂ ಭಯೋತ್ಪಾದನೆಯನ್ನು ಸಮಥರ್ಿಸಿದವರಲ್ಲ. ಅಥವಾ ಅಫ್ಜಲ್, ಕಸಬ್ ಅಂಥವರ ಬೆಂಬಲಕ್ಕೆ ನಿಂತವರಲ್ಲ. ಕೆಲವು ಮೂಲಭೂತವಾದಿ ಮತೀಯ ಮುಸ್ಲಿಂ ಸಂಘಟನೆಗಳು ತಮ್ಮ ಪ್ರಾತಿನಿಧ್ಯ, ಅಸ್ತಿತ್ವ ಮತ್ತು ಪ್ರಾಬಲ್ಯವನ್ನು ಪ್ರದಶರ್ಿಸಲು ತಾಳುವ ನಿಲುವುಗಳನ್ನು ಇಡೀ ಸಮುದಾಯಕ್ಕೆ ಆರೋಪಿಸಲೂ ಆಗುವುದಿಲ್ಲ.  ಅಫ್ಜಲ್ಗೆ ಗಲ್ಲುಶಿಕ್ಷೆ ವಿಧಿಸಿದರೆ ಕಾಶ್ಮೀರದಲ್ಲಿ ಗಲಭೆಯಾಗಬಹುದು. ಆಗಿದೆ. ಅದು ಕಾಶ್ಮೀರದ ಅಸ್ಮಿತೆಯ ಪ್ರಶ್ನೆಯಾಗುತ್ತದೆ. ಆದರೆ ಸಕರ್ಾರ ಊಹಿಸಿದಷ್ಟು ಗಲಭೆಯಾಗಲಿಲ್ಲ. ಮಾಧ್ಯಮಗಳಲ್ಲಿ ಬಿಂಬಿಸಿದಂತೆ ಕಾಶ್ಮೀರ ಹೊತ್ತಿ ಉರಿಯಲಿಲ್ಲ. ಕೆಲವು ಸಂಘಟನೆಗಳು ಮಾತ್ರ ಪ್ರತಿಭಟನೆ ನಡೆಸುತ್ತಿವೆ. ಆದರೆ ದೇಶದ ಇತರ ಭಾಗಗಳಲ್ಲಿ ಯಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ. ಆದರೂ ಮಾಧ್ಯಮಗಳಲ್ಲಿ ಅಲ್ಪಸಂಖ್ಯಾತರ ಓಲೈಕೆಯ ಸುತ್ತ ಸಾಕಷ್ಟು ಸಂವಾದಗಳು ನಡೆಯುತ್ತಿರುವುದು ದುರಾದೃಷ್ಟಕರ.  ಗಲ್ಲು ಶಿಕ್ಷೆ ವಿಳಂಬ ಮಾಡಿದರೆ ಮುಸ್ಲಿಮರ ಓಲೈಕೆ- ಶಿಕ್ಷೆ ವಿಧಿಸಿರುವುದು ಹಿಂದೂ ಮತೀಯವಾದಿಗಳ ಓಲೈಕೆ ಎಂಬ ಪ್ರಮೇಯವನ್ನು ದೇಶದ ಪ್ರಮುಖ ಟಿವಿ ಮಾಧ್ಯಮಗಳು ಬಿಂಬಿಸಿರುವುದು ಭಾರತದ ಸಾಮಾಜಿಕ ಸ್ಥಿತ್ಯಂತರಗಳಲ ಗ್ರಹಿಕೆಯಲ್ಲಿನ  ಕೊರತೆಯನ್ನು ತೋರುವುದಷ್ಟೆ.
ಅಫ್ಜಲ್ ಗುರು ಶಿಕ್ಷೆಗೆ ಅರ್ಹ ಎಂದೇ ಒಪ್ಪಿಕೊಳ್ಳೋಣ. ಮರಣದಂಡನೆಯ ಶಿಕ್ಷೆ ಮಾನವೀಯ ನೆಲೆಗಟ್ಟಿನಲ್ಲಿ ಸ್ವೀಕಾರಾರ್ಹವಲ್ಲದಿದ್ದರೂ ದೇಶದ ನ್ಯಾಯ ವ್ಯವಸ್ಥೆಯ ತೀಮರ್ಾನವನ್ನು ಪ್ರಶ್ನಿಸುವ ಅಗತ್ಯವಿಲ್ಲ. ಆದರೆ ಗಲ್ಲು ಶಿಕ್ಷೆಗೊಳಗಾದ ವ್ಯಕ್ತಿ ಕೇವಲ ಅಪರಾಧಿ ಮಾತ್ರವಲ್ಲ ಒಂದು ಕುಟುಂಬದ ಸದಸ್ಯನೂ ಆಗಿರುತ್ತಾನೆ. ಮಾನವ ಸಮಾಜದ ಅಂಗವಾಗಿರುತ್ತಾನೆ.  ಎಸಗಿದ ಅಪರಾಧ ಎಷ್ಟೇ ಕ್ರೂರವಾಗಿರಲಿ, ಆತನ ಸಾವಿನಿಂದ ಕೆಲವು ಹೃದಯಗಳಾದರೂ ರೋದಿಸುತ್ತವೆ. ಅಪರಾಧಿಯಾಗಿ ಯಾರೂ ಜನಿಸುವುದಿಲ್ಲ, ಸಾಮಾಜಿಕ ಸನ್ನಿವೇಶಗಳು ಅಪರಾಧಿಗಳನ್ನು ಸೃಷ್ಟಿಸುತ್ತವೆ ಎಂಬ ತತ್ವದ ಹಿನ್ನೆಲೆಯಲ್ಲಿ ಭಯೋತ್ಪಾದಕರನ್ನೂ ಪರಿಗಣಿಸಬೇಕಾಗುತ್ತದೆ. ಹಾಗಾಗಿ ಶಿಕ್ಷೆಯನ್ನು ಸ್ವಾಗತಿಸುವುದಕ್ಕೂ, ಸಂಭ್ರಮಿಸುವುದಕ್ಕೂ ಅಪಾರ ವ್ಯತ್ಯಾಸ ಕಾಣುತ್ತದೆ. ಭಾರತದಲ್ಲಿ ಭಯೋತ್ಪಾದನೆ ನಾನಾ ರೂಪಗಳಲ್ಲಿ ವ್ಯಕ್ತವಾಗುತ್ತಿದೆ. ಇತಿಹಾಸದುದ್ದಕ್ಕೂ ವ್ಯಕ್ತವಾಗಿದೆ. ಆದರೆ ಭಯೋತ್ಪಾದನೆಯನ್ನು ನಿವಾರಿಸುವಂತಹ ಸೌಹಾರ್ದಯುತ ವಾತಾವರಣ ನಿಮರ್ಿಸುವ ಪ್ರಾಮಾಣಿಕ ಪ್ರಯತ್ನ ಮಾತ್ರ ನಡೆಯುತ್ತಿಲ್ಲ. ಏಕೆಂದರೆ ಭಯೋತ್ಪಾದನೆಯೂ ಒಂದು ರಾಜಕೀಯ ಅಸ್ತ್ರವಾಗಿ ಪರಿಣಮಿಸಿದೆ.
ಭಾರತೀಯರಾಗಿ, ಮಾನವತೆಯ ಹರಿಕಾರರಾಗಿ, ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರತಿಪಾದಕರಾಗಿ ನಾವು ಗಲ್ಲಿಗೇರಿಸಬೇಕಿರುವುದು ನಮ್ಮೊಳಗಿನ ದ್ವೇಷ, ಮತೀಯತೆ, ಅಸೂಯೆ ಮತ್ತು ಕೋಮುವಾದಿ ಧೋರಣೆಗಳನ್ನು. ಕಾಶ್ಮೀರದಲ್ಲಾಗಲಿ ಕನ್ಯಾಕುಮಾರಿಯಲ್ಲಾಗಲಿ ಭಯೋತ್ಪಾದನೆಯ ಭೂತ ಬೇರು  ಬಿಟ್ಟಿದ್ದರೆ ಅದಕ್ಕೆ ಭಾರತದ ಸಾಮಾಜಿಕ ಸ್ಥಿತ್ಯಂತರಗಳು, ರಾಜಕೀಯ ಕುಟಿಲತೆಗಳು ಮತ್ತು ಅಧಿಕಾರಸ್ಥರ ನಿಷ್ಕ್ರಿಯತೆಯೇ ಕಾರಣ. ಅಮಾಯಕ ಜನಸಾಮಾನ್ಯರನ್ನು ಭಯೋತ್ಪಾದನೆಯ ಜಾಲಕ್ಕೆ ತಳ್ಳುವಂತಹ ದುಷ್ಟ ಶಕ್ತಿಗಳ ನಿಗ್ರಹ ಕೇವಲ ಒಬ್ಬ ವ್ಯಕ್ತಿಯ ಗಲ್ಲು ಶಿಕ್ಷೆಯಿಂದ ಸಾಧ್ಯವಾಗುವುದಿಲ್ಲ. ಇದು ಮನೋಭಾವದ ಪ್ರಶ್ನೆ. ಮಾನಸಿಕ ಧೋರಣೆಯ ಪ್ರಶ್ನೆ. ಸೈದ್ಧಾಂತಿಕ ನಿಲುವಿನ ಪ್ರಶ್ನೆ. ಯಾವುದೇ ವ್ಯಕ್ತಿಯ ಸಾವನ್ನು ಸಂಭ್ರಮಿಸುವುದು ಸಾವಿನ ದಲ್ಲಾಳಿಗಳ ಲಕ್ಷಣವಾಗುವುದೇ ಹೊರತು ದೇಶಭಕ್ತಿಯ ದ್ಯೋತಕವಾಗಲಾರದು. ವಿಷಾದಕರ ಸಂಗತಿ ಎಂದರೆ ಅಫ್ಜಲ್ ಗುರು ಗಲ್ಲು ಶಿಕ್ಷೆಯ ಸುತ್ತ ಮಾಧ್ಯಮಗಳಲ್ಲಿ ನಡೆದ ಚಚರ್ೆಗಳಲ್ಲೂ ಇದೇ ರೀತಿಯ ಸಂಭ್ರಮ ಎದ್ದು ಕಾಣುತ್ತಿತ್ತು.  ಇದು ಮಾರುಕಟ್ಟೆಯ ಅನಿವಾರ್ಯತೆಯೇ ಇರಬಹುದು ಆದರೆ ಮಾನವೀಯತೆಯ ದೃಷ್ಟಿಯಿಂದ ಒಪ್ಪುವಂತಹುದಲ್ಲ. ಅಫ್ಜಲ್-ಕಸಬ್ ಇನ್ನಿಲ್ಲ ಆದರೆ ಅವರ ಸಂತತಿ ಜೀವಂತವಾಗಿದೆ, ಅವರು ಪ್ರತಿಪಾದಿಸಿದ ಸಿದ್ಧಾಂತ ಜೀವಂತವಾಗಿದೆ, ಹಲವು ರೂಪಗಳಲ್ಲಿ. ಸರಿಯಾದ ದೃಷ್ಟಿಯಿಂದ ನೋಡುವ ದಾಷ್ಟ್ರ್ಯತೆ ನಮ್ಮೊಳಗಿದ್ದರೆ ಸಾಕು.
 

‍ಲೇಖಕರು avadhi

17 February, 2013

12 Comments

  1. R.RAJU

    ಭಾರತೀಯರಾಗಿ, ಮಾನವತೆಯ ಹರಿಕಾರರಾಗಿ, ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರತಿಪಾದಕರಾಗಿ ನಾವು ಗಲ್ಲಿಗೇರಿಸಬೇಕಿರುವುದು ನಮ್ಮೊಳಗಿನ ದ್ವೇಷ, ಮತೀಯತೆ, ಅಸೂಯೆ ಮತ್ತು ಕೋಮುವಾದಿ ಧೋರಣೆಗಳನ್ನು. ಕಾಶ್ಮೀರದಲ್ಲಾಗಲಿ ಕನ್ಯಾಕುಮಾರಿಯಲ್ಲಾಗಲಿ ಭಯೋತ್ಪಾದನೆಯ ಭೂತ ಬೇರು ಬಿಟ್ಟಿದ್ದರೆ ಅದಕ್ಕೆ ಭಾರತದ ಸಾಮಾಜಿಕ ಸ್ಥಿತ್ಯಂತರಗಳು, ರಾಜಕೀಯ ಕುಟಿಲತೆಗಳು ಮತ್ತು ಅಧಿಕಾರಸ್ಥರ ನಿಷ್ಕ್ರಿಯತೆಯೇ ಕಾರಣ. ಅಮಾಯಕ ಜನಸಾಮಾನ್ಯರನ್ನು ಭಯೋತ್ಪಾದನೆಯ ಜಾಲಕ್ಕೆ ತಳ್ಳುವಂತಹ ದುಷ್ಟ ಶಕ್ತಿಗಳ ನಿಗ್ರಹ ಕೇವಲ ಒಬ್ಬ ವ್ಯಕ್ತಿಯ ಗಲ್ಲು ಶಿಕ್ಷೆಯಿಂದ ಸಾಧ್ಯವಾಗುವುದಿಲ್ಲ. ಇದು ಮನೋಭಾವದ ಪ್ರಶ್ನೆ. ಮಾನಸಿಕ ಧೋರಣೆಯ ಪ್ರಶ್ನೆ. ಸೈದ್ಧಾಂತಿಕ ನಿಲುವಿನ ಪ್ರಶ್ನೆ. ಯಾವುದೇ ವ್ಯಕ್ತಿಯ ಸಾವನ್ನು ಸಂಭ್ರಮಿಸುವುದು ಸಾವಿನ ದಲ್ಲಾಳಿಗಳ ಲಕ್ಷಣವಾಗುವುದೇ ಹೊರತು ದೇಶಭಕ್ತಿಯ ದ್ಯೋತಕವಾಗಲಾರದು,,,,,
    ಎಂತಹ ಅದ್ಬುತವಾದ ಮಾತು,ದನ್ಯವಾದಗಳು ದಿವಾಕರ್ ಅವರಿಗೆ,ವೀರಪ್ಪನ್ ಸತ್ತಾಗ,ಕಸಬ್ ಮತ್ತು ಅಪ್ಜಲ್ ಗರು,ಇವರುಗಲನ್ನು ಗಲ್ಲಿಗೇರಿಸಿದಾಗ ಕೆಲವು ಸಾರ್ವಜನಿಕರು ಸಿಹಿ ಹಂಚಿ ಸಂಬ್ರಮಿಸುವುದನ್ನು ಕಂಡು ಒಂದು ರೀತಿಯ ಕಸಿವಿಸಿಯಾಗುತ್ತಿತ್ತು, ಒಂದು ಸಾವನ್ನು ಸಂಬ್ರಮಿಸುವಸ್ಟು ಮನೋಭಾವನೆ ಬಾರತೀಯರಲ್ಲಿ ಕಂಡು ಗಲಿಬಿಲಿಗೊಂಡೆ,

  2. ಶ್ರೀವತ್ಸ ಜೋಶಿ

    ನಾ.ದಿವಾಕರ್ ಅವರಿಗೊಂದು ಪ್ರಶ್ನೆ. “ಶಿಕ್ಷೆಗೊಳಗಾದ ವ್ಯಕ್ತಿ ಕೇವಲ ಅಪರಾಧಿ ಮಾತ್ರವಲ್ಲ ಒಂದು ಕುಟುಂಬದ ಸದಸ್ಯನೂ ಆಗಿರುತ್ತಾನೆ. ಮಾನವ ಸಮಾಜದ ಅಂಗವಾಗಿರುತ್ತಾನೆ. ಎಸಗಿದ ಅಪರಾಧ ಎಷ್ಟೇ ಕ್ರೂರವಾಗಿರಲಿ, ಆತನ ಸಾವಿನಿಂದ ಕೆಲವು ಹೃದಯಗಳಾದರೂ ರೋದಿಸುತ್ತವೆ.” ಎಂದು ಬರೆದಿರಿ, ಒಪ್ಪಿಕೊಳ್ಳೋಣ. ಆದರೆ, ಆ ಅಪರಾಧಿಯ ದುಷ್ಕೃತ್ಯದಿಂದ ಸಾವಿಗೀಡಾದ, ಕಷ್ಟನಷ್ಟ ಅನುಭವಿಸಿದ ಅಮಾಯಕ ಜನಸಾಮಾನ್ಯರ (ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ಪೊಲೀಸ್ ಸಿಬ್ಬಂದಿಯ ಮತ್ತು ಅವರ ಕುಟುಂಬದವರ) ಬಗ್ಗೆ ನಿಮ್ಮ ನೇರೆನೋಟ ಏನನ್ನುತ್ತದೆ?

    • ದಿವಾಕರ ನಾ

      ಶ್ರೀವತ್ಸ ಜೋಷಿಯವರೇ
      ಸಾವನ್ನು ವಿಜೃಂಭಿಸುವುದು ಅನಾಗರೀಕ ಲಕ್ಷಣ ಎಂದು ನಾನು ಶೀರ್ಷಿಕೆಯಲ್ಲೇ ಹೇಳಿರುವಾಗ ನಿಮ್ಮ ಪ್ರಶ್ನೆ ಅಸಂಬದ್ಧ ಎನಿಸುತ್ತದೆ. ಮರಣದಂಡನೆಯನ್ನು ನಿರ್ಬಂಧಕ ಶಿಕ್ಷೆ ಎಂದು ನಾನು ಒಪ್ಪುವುದಿಲ್ಲ. ದುಷ್ಕೃತ್ಯ ಎಸಗಿದ ವ್ಯಕ್ತಿಯ ಸಾವಿಗೂ ದುಷ್ಕೃತ್ಯಕ್ಕೀಡಾದ ವ್ಯಕ್ತಿಯ ಸಾವಿಗೂ ಇರುವ ವ್ಯತ್ಯಾಸವಾದರೂ ಏನು ? ಯಾವುದೇ ಸಾವನ್ನು ವಿಜೃಂಭಿಸುವುದು ಮಾನವೀಯತೆಯಲ್ಲ. ಇದೇ ನನ್ನ ನೇರನೋಟ.

  3. vasanthn

    ಅಫ್ಜಲ್ ಗುರುವನ್ನು ಗಲ್ಲಿಗೇರಿಸಿರುವುದು ಅಕ್ಷಮ್ಯ. ಕೇವಲ ಸಾಂಧಬಿ೵ಕ ಸಾಕ್ಷ್ಯದಾರಗಳ ಮೇಲೆ ನ್ಯಾಯಾಲಯ ಆತನಿಗೆ ಮರಣದಂಡನೆಯನ್ನು ವಿಧಿಸಿದೆ. ಪೊಲೀಸರು ಸಾಂದಭಿ೵ಕ ಸಾಕ್ಷ್ಯವನ್ನು ಸೃಷ್ಟಿಸಿಲ್ಲ ಎಂದು ಹೇಳಲು ಸಾಧ್ಯವೇ?
    ಈ ಬಗ್ಗೆ Kafila ವೆಬ್ಸೈಟ್ ನಲ್ಲಿ ಯುಗ್ ಮೋಹಿತ್ ಚೌಧರಿಯವರು ಹೇಗೆ ಪೊಲೀಸರ ತನಿಖೆ ಅಸತ್ಯದಿಂದ ಕೂಡಿರುತ್ತವೆ ಎಂದು ಮನಮಿಡಿಯುವಂತೆ ಮಾತನಾಡಿದ್ದಾರೆ. ಸಾಧ್ಯವಾದರೆ ಮಾನ್ಯ ಜೋಶಿಯವರು ಆ ವಿಡೀಯೋವನ್ನು ನೋಡಿ: http://kafila.org/2013/02/16/death-penalty-in-india-is-a-legal-lottery/

  4. ಶ್ರೀವತ್ಸ ಜೋಶಿ

    @ನಾ.ದಿವಾಕರ ಮತ್ತು @ವಸಂತ – ಸಾವನ್ನು (ಯಾರದೇ ಆಗಲಿ) ವಿಜೃಂಭಿಸಬೇಕು ಅಂತಲ್ಲ ನಾನು ಹೇಳುತ್ತಿರುವುದು. “ದುಷ್ಕೃತ್ಯ ಎಸಗಿದ ವ್ಯಕ್ತಿಯ ಸಾವಿಗೂ ದುಷ್ಕೃತ್ಯಕ್ಕೀಡಾದ ವ್ಯಕ್ತಿಯ ಸಾವಿಗೂ ಇರುವ ವ್ಯತ್ಯಾಸವಾದರೂ ಏನು?” ಎಂಬ ನಿಮ್ಮ ಮಾತಿನಲ್ಲಿ ನನಗೆ “ದುಷ್ಕೃತ್ಯಕ್ಕೀಡಾದ ವ್ಯಕ್ತಿಗಳು ಸತ್ತರೆ ಸಾಯಲಿ ನಮಗೇನಂತೆ, ಆದರೆ ದುಷ್ಕೃತ್ಯ ಮಾಡಿದ ವ್ಯಕ್ತಿ ಮಾತ್ರ ಏನೇಆಗಲಿ ಸಾಯಬಾರದು” ಎಂಬ ಧಾಟಿ ಗೋಚರಿಸುತ್ತದೆ. ಮೂಲ ಲೇಖನದಲ್ಲಿಯೂ ಹಾಗೆಯೇ ಆಯ್ತು, ಅದಕ್ಕೋಸ್ಕರವೇ ನಾನು ಆ ಪ್ರಶ್ನೆಯನ್ನು ನಿಮಗೆ ಕೇಳಿದೆ. ನನ್ನ ಪ್ರಶ್ನೆ ಅಸಂಬದ್ಧ ಎಂದಿರಿ ಹೊರತು (ಇರಲಿ, ನನಗೆ ಅದರಿಂದೇನೂ ಬೇಜಾರಿಲ್ಲ) ದುಷ್ಕೃತ್ಯಕ್ಕೊಳಗಾಗಿ ಸತ್ತುಹೋದ ಅಮಾಯಕರ ಬಗ್ಗೆ ಈಗಲೂ ನೀವು ತುಟಿಪಿಟಿಕ್ಕೆನ್ನುತ್ತಿಲ್ಲ! ಇಲ್ಲಿ emotional/sentimental ಅಂಶವನ್ನು ತಂದು ವಾದಮಾಡುವ ಇರಾದೆ ನನ್ನದಲ್ಲ. ಆದರೆ ಅಮಾಯಕರ ಸಾವಿನ ಬಗ್ಗೆ ಯಾವೊಂದು ಅನುಭೂತಿಯನ್ನೂ ತಾಳದೆಯೇ ಅಪರಾಧಿಯ ಶಿಕ್ಷೆಯ (ಸಾವಿನ ಅಂತಲೇ ಇರಲಿ) ವಿರುದ್ಧ ಮಾತನಾಡುವ ನಿಮ್ಮ ಚಿಂತನೆ ಒಂದೋ ನನಗೆ ಅರ್ಥವಾಗುತ್ತಿಲ್ಲ, ಅಥವಾ ಅದಕ್ಕೆ ಹೆಚ್ಚು ಬೆಲೆಕೊಡಬೇಕು ಎಂದು ನನಗೆ ಅನಿಸುತ್ತಿಲ್ಲ. ಆದರೂ ಪ್ರಾಮಾಣಿಕವಾಗಿ ಉತ್ತರಿಸಿದ್ದಕ್ಕೆ ನಿಮಗೆ ಧನ್ಯವಾದಗಳು.

  5. ಆಸು ಹೆಗ್ಡೆ

    ಅಫ್ಜಲ್ ಗುರು ಸಂಸತ್ ಭವನದ ಮೇಲಿನ ದಾಳಿಯಲ್ಲಿ ಶಸ್ತ್ರಾಸ್ತ್ರ ಹಿಡಿದು ಭಾಗಿಯಾಗಲಿಲ್ಲ. ಯಾರನ್ನೂ ಹತ್ಯೆ ಮಾಡಲಿಲ್ಲ. ಭಾರತದ ಪವಿತ್ರ ಸಂವಿಧಾನದ ಮೇಲೆ ಆಕ್ರಮಣ ಮಾಡಲಿಲ್ಲ. ಭಯೋತ್ಪಾದಕ ಕೃತ್ಯದಲ್ಲಿ ನೇರವಾಗಿ ಭಾಗವಹಿಸಲಿಲ್ಲ. ಆದರೆ ಸಂಸತ್ ದಾಳಿಯ ಸಂಚು ರೂಪಿಸುವಲ್ಲಿ, ಪಿತೂರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪ ಎದುರಿಸುತ್ತಿದ್ದು ಮರಣದಂಡನೆಗೆ ಗುರಿಯಾಗಬೇಕಿದೆ.
    ಈ ಮಾತಿನ ಅರ್ಥ ಏನು. ಆರೋಪ ಎದುರಿಸುತ್ತಿದ್ದು, ಮರಣದಂಡನೆಗೆ ಗುರಿಯಾಗಬೇಕಿದೆ ಅಂದರೆ ಆತನ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ ಅನ್ನುವ ಹೇಳಿಕೆಯೇ?
    ನ್ಯಾಯಾಲಯದ ತೀರ್ಪುಗಳು ಕೇವಲ ಸಾಕ್ಷ್ಯಾಧರಿತವಾಗಿರುತ್ತವೆ ಅನ್ನುವುದನ್ನು ಒಪ್ಪಬಹುದಾದರೂ, ತೀರ್ಪನ್ನು ಈ ರೀತಿ ಪ್ರಶ್ನಿಸುವುದರಿಂದ,ಟೀಕಿಸುವುದರಿಂದ, “ನಾವು ನಾಗರೀಕರಲ್ಲವೇ?” ಅನ್ನುವ ಪ್ರಶ್ನೆಗೆ ಆಸ್ಪದ ನೀಡಿದಂತಾಗುತ್ತದೆ ಎಂದು ನನ್ನ ಅನಿಸಿಕೆ.

  6. ಆಸು ಹೆಗ್ಡೆ

    ಅಪರಾಧಿಯ ಸಂಸಾರದ ಸದಸ್ಯರೊಂದಿಗೆ ಅನ್ಯ ನಾಗರೀಕರು ಗಲ್ಲು ಶಿಕ್ಷೆಗೆ ಶೋಕಾಚರಣೆ ಮಾಡಬಹುದಾದರೆ, ಅಪರಾಧಿಯಿಂದ ದುಷ್ಕೃತ್ಯಕ್ಕೆ ಬಲಿಯಾದವರ ಜೊತೆಗೆ ಅನ್ಯ ನಾಗರೀಕರು ಅಪರಾಧಿಗಾದ ಗಲ್ಲುಶಿಕ್ಷೆಯ ಸಂಭ್ರಮಾಚರಣೆ ಮಾಡಬಹುದೇನೋ.

  7. Kiran

    When a person commits a crime, there has to be a punishment. What is the purpose of punishment? Is our governance and system mature enough to assign the right reformatory measures? Has Afzal Guru expressed true remorse anytime for his deed? Even if he did, is our system capable of assessing the truth in it and find a suitable reformatory measures for such people without the bias of religion, caste, creed or vote-bank politics? Capital punishment is the default choice in a governance not capable of thinking beyond petit issues. This discussion serves no purpose until the entire system reforms itself. It is a long process. With the kind of people governing us and with the quality of people voting for them, perhaps our generation may not be alive to see the improvement.

  8. raghu

    kasab pakistani prajeyagi avanige bharatada mele badda dwesha bidi. Adare afjal guru kashmiri bharatada bada janarinda balavantavaadi vasoolada terigeyallina bahu palu tindu kobbi beledava. bharatada anna, neeru gali kudidu tindu `unda manege eradu bagedava’. deshada hitarakshane, sarvaboumate vyaktiya bhavanatmaka sambandhagalige sharanagabeke?. Istakku aata tanu huttida desha bidi,tane srustisikonda kutumbada melina pritigadaru inthaha drushkrutyadinda doora uliyabekagittu. Kutumbakkoskara obbanannu, ondu gramakkoskara ondu kutumbavannu haagu ondu gramavannu deshakkostaka mattu mokshkkagi dehavannu bidiabeku enudu ondu subhashita saaruttade. Istkku kshame, jeevadana ella avidyavanta amayakarige horatu tilidu tilidu tappesuguva afjal gurivinanthavigalla. Innu afjal guru, madani, kasab mattu akbaruddina ovaisiyondige jati, dharmada hesarinalli samekarisikolluvarige Divakar dayamadi patha helabeku.

  9. Prasad V Murthy

    ಸಾವಿನಲ್ಲಿ ವಿಜೃಂಭಣೆಯನ್ನು ನಿಮ್ಮಂತೆ ನಾನೂ ವಿರೋಧಿಸುತ್ತೇನೆ.
    ಆದರೆ ‘ಕ್ಯಾಪಿಟಲ್ ಪನಿಶ್ಮೆಂಟ್’ ಬಗ್ಗೆ ಮಾತನಾಡುವಾಗ, ಅದು ಅಪರಾಧಗಳನ್ನು ನಿಗ್ರಹಿಸುವುದಿಲ್ಲ. ಅದರಿಂದ ಕ್ರೈಂ ರೇಟ್ ಕಡಿಮೆಯಾಗುವುದು ಅನುಮಾನ ಎಂಬಂತೆ ಮಾತನಾಡಿದ್ದೀರಿ ಆದರೆ ‘ಕ್ಯಾಪಿಟಲ್ ಪನಿಶ್ಮೆಂಟ್’ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಲು ನ್ಯಾಯಾಂಗ ವ್ಯವಸ್ಥೆ ಚುರುಕಾಗಬೇಕು. ನೂರೆಂಬತ್ತಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಮುಂಬೈ ಅಟ್ಯಾಕ್ ನ ಆರೋಪಿ ಕಸಬ್ ನನ್ನು ಗಲ್ಲಿಗೇರಿಸಲು ವೀಡಿಯೋ ಫೂಟೇಜ್ ಗಳ ಸಾಕ್ಷಿ ಸಿಕ್ಕ ನಂತರವೂ ತೆಗೆದುಕೊಂಡ ಸಮಯ ನಾಲ್ಕು ವರ್ಷಗಳು! ಅದೂ ಸುಮಾರು ೨೫ ಕೋಟಿ ರೂಪಾಯಿಗಳನ್ನು ಅವನ ಊಟ, ವಸತಿಗಳಿಗಾಗಿ ವ್ಯಯಿಸಿದ ಮೇಲೆ! ಇಂತಹ ಆಮೆ ಗತಿಯ ಕ್ಯಾಪಿಟಲ್ ಪನಿಶ್ಮೆಂಟ್ ನಿಂದ ಯಾವ ಲಾಭವೂ ಇಲ್ಲ! ಅಪರಾಧದ ಬಿಸಿ ಆರುವ ಮೊದಲೇ ಅಪರಾಧಿಗೆ ಮರಣದಂಡನೆ ಆದರೆ ‘ಮರಣದಂಡನೆ’ಯ ಭಯ ಅಪರಾಧಗಳ ಸಂಖ್ಯೆಯನ್ನು ತಗ್ಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
    ಇನ್ನು ಅಫ್ಜಲ್ ಗುರುವಿನ ಬಗ್ಗೆ ಮಾತನಾಡಿದ್ದೀರಿ. ಆತ ಕಸಬ್ ನಂತೆ ಶಸ್ತ್ರಾಸ್ತ್ರ ಹಿಡಿಯಲಿಲ್ಲ, ಯಾರನ್ನೂ ಹತ್ಯೆ ಮಾಡಲಿಲ್ಲ ಎಂದು! ಹಾಗಾದರೆ ಸತ್ತ ಹನ್ನೆರಡಕ್ಕೂ ಹೆಚ್ಚಿನ ಸಾರ್ವಜನಿಕರು ಸತ್ತಿದ್ದು ಹೇಗೆ? ಮೊದಲು ಶಸ್ತ್ರಾಸ್ತ್ರ ಹಿಡಿದ ಕ್ರಿಮಿನಲ್ ಗಳಿಗಿಂತ ಬೌದ್ಧಿಕವಾಗಿ ಕ್ರಿಮಿನಲ್ ಆಗಿರುವವರನ್ನು ಮಟ್ಟ ಹಾಕಬೇಕು. ಏಕೆಂದರೆ ಶಸ್ತ್ರಾಸ್ತ್ರ ಹಿಡಿದವರು ಕೇವಲ ಅಸ್ತ್ರಗಳಷ್ಟೇ. ಎ.ಕೆ.೪೭ ಅಲ್ಲದಿದ್ದರೆ ಎ.ಕೆ.೫೬ ಹೀಗೆ ಯಾವ ಶಸ್ತ್ರಾಸ್ತ್ರ ಬೇಕಾದರೂ ಬಳಸಬಹುದು! ಅಫ್ಜಲ್ ಗುರುವಿಗೆ ಮಾತ್ರ ಒಂದು ಕುಟುಂಬವಿರುತ್ತದೆ, ಸಮಾಜವಿರುತ್ತದೆ ಸತ್ತ ಹನ್ನೆರಡು ಮಂದಿಗೆ ಇರಲಿಲ್ಲ ಎನ್ನುತ್ತೀರಾ?
    ನನ್ನ ಪ್ರಕಾರ ‘ಮನುಷ್ಯರಿಗಷ್ಟೇ ಮಾನವೀತೆಯ ರಕ್ಷೆ, ರಾಕ್ಷಸರಿಗೆ ಮೃಗೀಯ ವರ್ತನೆಯೇ ಸರಿ!’
    ಆದರೆ ‘ಕ್ಯಾಪಿಟಲ್ ಪನಿಶ್ಮೆಂಟ್’ ನಲ್ಲಿರುವ ಒಂದು ಅಪಾಯವೆಂದರೆ ಅದು ಮತದಾರರನ್ನು ತನ್ನೆಡೆಗೆ ಸೆಳೆಯುವ ಸರ್ಕಾರದ ಅಸ್ತ್ರವಾಗಬಾರದಷ್ಟೆ, ಈಗ ನಮ್ಮ ಕೇಂದ್ರ ಸರ್ಕಾರದ ಅಸ್ತ್ರವಾಗಿರುವಂತೆ! ಮತ್ತು ಅದು ನಮ್ಮ ಕೈಯ್ಯಲ್ಲಿದೆ ಎಂದ ಮಾತ್ರಕ್ಕೆ ಹೇಗೆ ಬೇಕೋ ಹಾಗೆ ಉಪಯೋಗಿಸದೇ ಪ್ರಕರಣದ ಕ್ರೂರತೆಯನ್ನು ಮಾನದಂಡವಾಗಿ ತೆಗೆದುಕೊಂಡು, ಅತೀ ಕ್ರೂರವೆನಿಸುವ ಅಪರಾಧಗಳಿಗಷ್ಟೇ ‘ಕ್ಯಾಪಿಟಲ್ ಪನಿಶ್ಮೆಂಟ್’ ಅನ್ನು ಜಾರಿಗೊಳಿಸುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ.
    – ಪ್ರಸಾದ್.ಡಿ.ವಿ.

  10. ಶ್ರೀವತ್ಸ ಜೋಶಿ

    ಪ್ರಸಾದ್ ಅವರು ನನ್ನ ಮನಸ್ಸಲ್ಲಿದ್ದ ಅಭಿಪ್ರಾಯವನ್ನೇ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದ್ದಾರೆ. “ಅಫ್ಜಲ್ ಗುರುವಿಗೆ ಮಾತ್ರ ಒಂದು ಕುಟುಂಬವಿರುತ್ತದೆ, ಸಮಾಜವಿರುತ್ತದೆ. ಸತ್ತ ಹನ್ನೆರಡು ಮಂದಿಗೆ ಇರಲಿಲ್ಲ ಎನ್ನುತ್ತೀರಾ?” ಎಂಬ ಅವರ ಪ್ರಶ್ನೆಯೇ ನನ್ನದೂ ಸಹ. ಅಫ್ಜಲ್ ಗುರು ತನ್ನ ಕುಟುಂಬಕ್ಕೆ ಬರೆದ ಕೊನೆಯ ಪತ್ರವನ್ನು ಭಾವುಕವಾಗಿ ಪ್ರದರ್ಶಿಸಿವೆ ಕೆಲವು ವಾರ್ತಾವಾಹಿನಿಗಳು/ವೇದಿಕೆಗಳು. ಅಫ್ಜಲ್ ಗುರುಗೆ ಅದಕ್ಕಾದರೂ (ಕುಟುಂಬದ ಜತೆ ಪತ್ರಮುಖೇನ ಕೊನೆಯ ಸಂಪರ್ಕ) ಅವಕಾಶ ಸಿಕ್ಕಿತು. ಅವತ್ತು ಪಾರ್ಲಿಮೆಂಟ್ ಧಾಳಿಯ ವೇಳೆ ಸಾವಿಗೀಡಾದ ನತದೃಷ್ಟರಿಗೆ ಅದೂ ಸಿಗಲಿಲ್ಲವಲ್ಲ? ಅದಕ್ಕೇನನ್ನುತ್ತಾರೆ ತಥಾಕಥಿತ “ಮಾನವತಾವಾದಿ”ಗಳು? ಹಾಗಾಗಿಯೇ ಈ ಮಾನವತಾವಾದಿಗಳದು ಢೋಂಗಿತನದ ಸೋಗು ಎಂದು ನನಗೆ ಅನಿಸುವುದು.
    ಕ್ಯಾಪಿಟಲ್ ಪನಿಶ್‍ಮೆಂಟ್‌ ಅನಾವಶ್ಯಕವಾಗಿ ತಡವಾಗುವುದರಿಂದ ಹೇಗೆ ನಿಷ್ಪ್ರಯೋಜಕವಾಗುತ್ತವೆ ಎಂಬುದನ್ನು ಮೊನ್ನೆ ಭಾನುವಾರದ ವಿಜಯವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ “ಮನುಷ್ಯನ ಚೌಕಾಶಿ ಬುದ್ಧಿಯೂ ಗಣಿತವೂ…” ಲೇಖನದಲ್ಲಿ ಮಿತ್ರ ರೋಹಿತ್ ಭಟ್ ಚೆನ್ನಾಗಿ ವಿವರಿಸಿದ್ದಾರೆ. ಆಸಕ್ತರು ಅದನ್ನು ಇಲ್ಲಿ ಓದಬಹುದು:
    http://epapervijayavani.in/epaperimages/1722013/1722013-md-hr-21/22356812.JPG

    • lakshmikantha

      yas sir nim vaada sariyagiddu……….
      yavaga obba manushya thanna aase poraisikollalu ennobbanannu kolloke nodthano aaga avanannu death sentence ge guri madodu sariyaada krama.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading