ಗೋಪಾಲ ವಾಜಪೇಯಿ ಕಾಲಂ : ರಂಗದ ಹಿಂದಿನ 'ಕೈ'ಗಳ ಕುರಿತು!

ಸುಮ್ಮನೇ ನೆನಪುಗಳು –  36

ಅವತ್ತು ಅದಕ್ಕಿಂತಲೂ ಹೆಚ್ಚಿಗೆ ಸಹಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಬರೆದುಕೊಂಡಾಗಿತ್ತು, ಬೇಡಿಕೊಂಡಾಗಿತ್ತು. ಅದು ಫಲಿಸದಿದ್ದಾಗ ಎದ್ದು ನಿಂತು ಕೂಗಾಡಿದ್ದಾಗಿತ್ತು. ಅದಕ್ಕೂ ಜಗ್ಗದಿದ್ದಾಗ ಅಧ್ಯಕ್ಷರ ಎದುರು ಧರಣಿ ಕೂತೂ ಆಗಿತ್ತು.
ಇನ್ನು ಕೊನೆಯ ಅಸ್ತ್ರ. ಅದನ್ನೂ ಪ್ರಯೋಗಿಸಿಯೇ ಬಿಟ್ಟಿದ್ದೆ. ”ನೀವು ನನ್ನ ಪ್ರಪೋಸಲ್ಲನ್ನು ಒಪ್ಪದೇ ಹೋದರೆ ರಾಜೀನಾಮೆ ತೊಗೊಳ್ಳಿ,” ಅಂತ ನಾಲ್ಕು ಸಾಲಿನ ಪತ್ರವನ್ನೂ ಬರೆದು ಅವರ ಮೇಜಿನ ಮೇಲಿಟ್ಟು ಹೊರ ನಡೆದುಬಿಟ್ಟಿದ್ದೆ.
ಮನೆಯಿಂದ ಹೊರಗಿದ್ದಾಗ ಸಾಮಾನ್ಯವಾಗಿ ನಾನು ಕೋಪಿಸಿಕೊಳ್ಳುವುದು ತೀರ ಕಡಿಮೆ. ಆಫೀಸಿನಲ್ಲಿ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಹುಡುಗರು, ”ನಿಮಗ ಸಿಟ್ಟು ಬರೋದs ಇಲ್ಲೇನು?” ಅಂತ ಕೇಳುತ್ತಿದ್ದರು. ಆಗೆಲ್ಲ, ”ನಿಮ್ಮ ಪ್ರಶ್ನಿಗೆ ಉತ್ತರ ಬೇಕಂದ್ರ ನನ್ನ ಹೇಣ್ತಿ-ಮಕ್ಕಳನ ಕೇಳ್ರಿ…” ಅಂತ ನಕ್ಕುಬಿಡುತ್ತಿದ್ದೆ.
ಆದರೆ, ಆ ದಿನ ನನಗೆ ಎಲ್ಲಿಲ್ಲದ ಸಿಟ್ಟು. ಅದರ ಜೊತೆಗೆ ಇವರು ನನ್ನ ಮಾತಿಗೆ ಬೆಲೆ ಕೊಡುವಂತೆ ಮಾಡಲೇಬೇಕೆಂಬ ಹಠ ಮತ್ತು ಅವೆರಡರ ಕಾರಣದಿಂದಾಗಿ ಒಂದು ನಮೂನೆಯ ರೊಚ್ಚು.
ಅಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾದದ್ದು ಒಂದು ‘ವಿಶಿಷ್ಟ’ ರಂಗ ತರಬೇತಿ ಶಿಬಿರದ ಪ್ರಸ್ತಾವನೆ.
ಅವತ್ತು ಆ ವರ್ಷದ ಕಾರ್ಯಕ್ರಮಗಳನ್ನು ನಿರ್ಧರಿಸುವ, ಮತ್ತು ಆ ಕುರಿತ ಯೋಜನೆಯನ್ನು ರೂಪಿಸುವ ಸಭೆ. ಒಂದು ರೀತಿಯಲ್ಲದು ‘ಕರ್ನಾಟಕ ನಾಟಕ ಅಕಾಡೆಮಿ’ಯ ವರ್ಷದ ಮೊದಲ ಸರ್ವಸದಸ್ಯರ ಸಭೆ. ಇಡೀ ವರ್ಷದಲ್ಲಿ ನಡೆಯಬೇಕಾದ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾವನೆ, ಅದರ ಕುರಿತು ಚರ್ಚೆ, ನಂತರ ಒಪ್ಪಿಗೆ… ಇವು ಆ ಸಭೆಯ ಅಜೆಂಡಾ…
ನೀವು ಏನೇ ಅನ್ನಿ, ಆಗಿನ ಅಕಾಡೆಮಿಗಳೇ ಅಕಾಡೆಮಿಗಳು. ಸ್ವತಃ ರಂಗಕರ್ಮಿಗಳೂ ನಾಟಕಕಾರರೂ ಚಿಂತಕರೂ ಆಗಿದ್ದ ಎಂ.ಪಿ. ಪ್ರಕಾಶ್ ಆಗ ರಾಜ್ಯದ ಸಂಸ್ಕೃತಿ ಸಚಿವರು. ವಿಶೇಷವಾಗಿ ನಾಟಕ ಮತ್ತು ಸಾಹಿತ್ಯ ಅಕಾಡೆಮಿಗಳ ಅಧ್ಯಕ್ಷರನ್ನೂ ಸದಸ್ಯರನ್ನೂ ಅವರೇ ಮುತುವರ್ಜಿ ವಹಿಸಿ ಆಯ್ಕೆ ಮಾಡಿದ್ದರು.
ಬಿ.ವಿ. ವೈಕುಂಠ ರಾಜು ಅಧ್ಯಕ್ಷರಾಗಿದ್ದ ಆಗಿನ ನಾಟಕ ಅಕಾಡೆಮಿಯಲ್ಲಿ ಎಂಥೆಂಥ ಘಟಾನುಘಟಿಗಳು ಸದಸ್ಯರಾಗಿದ್ದರು ಅಂತೀರಿ? ಹಿರಿಯ ನಾಟಕಕಾರ ಪರ್ವತವಾಣಿ, ವೃತ್ತಿ ರಂಗಭೂಮಿಯ ಧ್ರುವತಾರೆಗಳೆನಿಸಿದ್ದ ನಾಟಕಕಾರರಾದ ಪಿ.ಬಿ. ಧುತ್ತರಗಿ ಮತ್ತು ಎಚ್. ಕೆ. ಯೋಗಾನಾರಸಿಂಹ, ಸಂಘದೊಡತಿಯಾಗಿ ಕೆ.ಬಿ.ಆರ್. ನಾಟಕ ಸಂಘವನ್ನು ಮುನ್ನಡೆಸಿ ಸೈ ಎನ್ನಿಸಿಕೊಂಡಿದ್ದ ಪದ್ಮಶ್ರೀ ಚಿಂದೋಡಿ ಲೀಲಾ, ಜಾನಪದ ವಿದ್ವಾಂಸ ಡಾ. ಬಸವರಾಜ ಮಲಶೆಟ್ಟಿ, ಮೈಸೂರಿನ ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮಾ, ಮಂಗಳೂರಿನ ನಾ. ದಾಮೋದರ ಶೆಟ್ಟಿ, ಮಂಡ್ಯದ ಜಯಪ್ರಕಾಶ ಗೌಡರು, ರಂಗಾಯಣದ ಹಿಂದಿನ ನಿರ್ದೇಶಕರುಗಳಾದ ಸಿ. ಬಸವಲಿಂಗಯ್ಯ, ಚಿದಂಬರ ಜಂಬೆ, ಈಗಿನ ನಿರ್ದೇಶಕ ಬಿ.ವಿ. ರಾಜಾರಾಂ, ಬೆಳಗಾವಿಯಲ್ಲಿ ಕನ್ನಡ ನಾಟಕ ಚಳುವಳಿ ನಿರಂತರವಾಗುವಂತೆ ಮಾಡಿದ ಶ್ರೀಪತಿ ಮಂಜನಬೈಲು, ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗಳೆರಡರ ಅದ್ವಿತೀಯ ನಟ ಏಣಿಗಿ ನಟರಾಜ, ಸಂಘಟಕ ಕೆ.ವಿ. ನಾಗರಾಜಮೂರ್ತಿ ಇವರೊಂದಿಗೆ ನನ್ನಂಥ ‘ಹೊಸಬ’ರು.
ನಾಲ್ಕು ಸಾಲಿನ ರಾಜೀನಾಮೆ ಪತ್ರವನ್ನು ಅಧ್ಯಕ್ಷರ ಮೇಜಿನ ಮೇಲಿಟ್ಟು ಹೊರ ನಡೆದುಬಿಟ್ಟೆನಲ್ಲ ಅವತ್ತು… ಹಾಗೆ ಹೊರಬಿದ್ದು ಹೊರಟದ್ದೇ ತಡ, ಬೆನ್ನ ಹಿಂದೆಯೇ ಕೇಳಿಬಂತು ಪರ್ವತವಾಣಿಗಳ ದನಿ : ”ವಾಜಪೇಯಿ… ವಾಜಪೇಯಿ… ನಿಲ್ಲಪ್ಪಾ, ನಿಲ್ಲು… ಹಾಗಲ್ಲಪ್ಪಾ ಅದು… ನನ್ ಮಾತ್ ಕೇಳು…”
ಅವರ ದನಿಯೇ ಅಷ್ಟು ಎತ್ತರದ್ದು… ಅಷ್ಟು ಆಳದ್ದು… ಅಷ್ಟು ಪ್ರಭಾವಶಾಲಿಯಾದದ್ದು… ಅದಕ್ಕೇ ವಿ.ಕೃ. ಗೋಕಾಕರು ಅವರನ್ನು ‘ಪರ್ವತವಾಣಿ’ ಎಂದು ಕರೆದದ್ದು. ಪರ್ವತವಾಣಿಗಳ ದನಿ ಕಲಾಕ್ಷೇತ್ರದ ಹಜಾರದಲ್ಲೆಲ್ಲ ಪ್ರತಿಧ್ವನಿಸಿತು. ಹೆಜ್ಜೆಗಳಿಗೆ ಲಗಾಮು ಹಾಕಿದಂತೆ ನಾನು ನಿಂತೆ. ಆ ಹೊತ್ತಿಗಾಗಲೇ ನಾನು ಕಲಾಕ್ಷೇತ್ರದ ಮುಖ್ಯದ್ವಾರದ ಬಳಿ ಬಂದಾಗಿತ್ತು. ಬಳಿಗೆ ಬಂದ ಪರ್ವತವಾಣಿಯವರು ನನ್ನ ಹೆಗಲ ಮೇಲೆ ಕೈ ಹಾಕಿದರು ನೋಡಿ… ನನ್ನ ರೋಷವೆಲ್ಲ ಜರ್ರನೆ ಇಳಿಯಿತು.
ದೊಡ್ಡವರೆಂದರೇ ಹಾಗೆ. ಅವರ ಮಾತು, ಅವರ ನೋಟ, ಅವರ ಸ್ಪರ್ಶ ಎಲ್ಲವೂ ನಮ್ಮನ್ನು ಆ ಕ್ಷಣಕ್ಕೆ ವಿನಯವಂತರನ್ನಾಗಿ ಮಾಡಿಬಿಡುತ್ತವೆ…
”ನೋಡಪ್ಪಾ… ಇದೆಲ್ಲಾ ಇರೋದೇ… ನಾವೆಲ್ಲಾ ಕೂತು ಬಗೆಹರಿಸ್ಕೋಬೇಕು ಕಣಪ್ಪಾ… ಗೊತ್ತು ನನಗೆ ನಿನ್ನ ಸಂಕಟ. ಬಾ ಸುಮ್ನೆ… ನಾನಿದೀನಿ ನಿನ್ ಜೊತೆ…” ಅಂತ ಆ ಹಿರಿಯರು ನನ್ನನ್ನು ವಾಪಸ್ ಲೌಂಜಿನತ್ತ ನಡೆಸಿಕೊಂಡು ಹೋದರು. ತಮ್ಮ ಪಕ್ಕದಲ್ಲೇ ಕೂರಿಸಿಕೊಂಡರು. (ಆಗಿನ್ನೂ ‘ಕನ್ನಡ ಭವನ’ದ ಕಟ್ಟಡ ತಲೆ ಎತ್ತಿರಲಿಲ್ಲ. ನಾಟಕ ಅಕಾಡೆಮಿ ಕಚೇರಿ ಕಲಾಕ್ಷೇತ್ರದ ಮಹಡಿಯ ಮೇಲಿತ್ತು. ನಮ್ಮ ಸಭೆಗಳು ಕೆಳಗೆ ಪುರುಷರ ಲೌಂಜಿನಲ್ಲಿ ನಡೆಯುತ್ತಿದ್ದವು.)
ಅಷ್ಟರಲ್ಲೇ ಅಲ್ಲಿಯ ಇಡೀ ಚಿತ್ರವೇ ಬದಲಾಗಿ ಹೋಗಿತ್ತು… !
”ಏ ಗೋಪಾಲಾ… ನಿನಗೇ ಕೊಡ್ತೀವಪ್ಪಾ… ತಗೋ… ನೀನೇ ಮಾಡ್ಕೋ ಈ ಶಿಬಿರಾನಾ… ಆಯ್ತಾ…?” ಅಂತ ವೈಕುಂಠರಾಜು ಹೇಳಿದ್ದೇ ತಡ ಹತ್ತಾರು ಚಪ್ಪಾಳೆಗಳು…
”ನೋಡಿದೇನೋ ಗೋಪಾಲಾ… ಎಲ್ರೂ ನಿನ್ನ ಪರವಾಗಿದಾರೆ ಕಣೋ… ನೀನು ಸುಮ್ಸುಮ್ನೆ ಅಳ್ತೀಯಪ್ಪಾ…” ಅಂತ ಬಿ.ವಿ.ವೈ. ಒಗ್ಗರಣೆ ಬೇರೆ…
”ಅಳೋ ತನಕಾ ಹಾಲು ಸಿಗಲ್ಲ ಅಂತ ಈ ಮಗೂಗೆ ಚೆನ್ನಾಗಿ ಗೊತ್ತು…” ಅಂತ ನನ್ನ ಬೆನ್ನು ತಟ್ಟಿದ ಪರ್ವತವಾಣಿಗಳು ಲೌಂಜು ಅದರುವಂತೆ ನಕ್ಕರು…
ಸಾಮಾನ್ಯವಾಗಿ ಆ ಸಭೆಯಲ್ಲಿ ಪರ್ವತವಾಣಿಯವರು ನನ್ನನ್ನು ತಮ್ಮ ಬಳಿಯೇ ಕೂಡಿಸಿಕೊಳ್ಳುತ್ತಿದ್ದರು. ನನ್ನ ಇನ್ನೊಂದು ಪಕ್ಕಕ್ಕೆ ಏಣಿಗಿ ನಟರಾಜ ಇಲ್ಲವೇ ಶ್ರೀಪತಿ ಮಂಜನಬೈಲು ಕೂತಿರಬೇಕು. ಎದುರಲ್ಲಿ ಪಿ. ಬಿ. ಧುತ್ತರಗಿ, ಯೋಗಣ್ಣ ಮತ್ತು ಡಾ. ಮಲ್ಲಶೆಟ್ಟಿ ಬಸಣ್ಣ…
ಆ ಕಡೆ ಏನೋ ಗಂಭೀರ ಚರ್ಚೆ ನಡೆದಿದ್ದರೆ ಇಲ್ಲಿ ಪರ್ವತವಾಣಿಗಳು ನನಗೆ ಮಾತ್ರ ಕೇಳುವಂತೆ ಏನೋ ಹೇಳಿ ಖಿಕ್ಕನೆ ನಕ್ಕುಬಿಡಬೇಕು… ಅವರ ‘ಖಿಕ್ಕು’ ಅಲ್ಲೆಲ್ಲ ಪ್ರತಿಧ್ವನಿಸಬೇಕು… ಅದನ್ನು ಗಮನಿಸಿ ಧುತ್ತರಗಿ ‘ಏನು?’ ಅಂತ ಕಣ್ಸನ್ನೆಯಲ್ಲೇ ಕೇಳಬೇಕು… ನಾನು ‘ಏನೂ ಇಲ್ಲ,’ ಎಂಬಂತೆ ಮೆಲ್ಲಗೆ ತಲೆಯಲ್ಲಾಡಿಸಬೇಕು…
ಇದನ್ನೆಲ್ಲ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದ ವೈಕುಂಠರಾಜು ನನ್ನನ್ನು ಬೇರೆ ಕಡೆ ಕೂರಲು ಹೇಳಿದ್ದ ದಿನವೇ ಮೇಲಿನ ಘಟನೆ ನಡೆದದ್ದು.
ನನಗಿನ್ನೂ ಸಮಾಧಾನವಾಗಿರಲಿಲ್ಲ. ಇನ್ನೂ ಒಂದು ಬೇಡಿಕೆ ಮುಂದಿಟ್ಟೆ. ಅದಕ್ಕೂ ‘ಅಸ್ತು’ ಅಂದಿತು ಸಭೆ.

-೦-೦-೦-೦-೦-

ಹೌದು. ತುಂಬಾ ಭರವಸೆ ಇಟ್ಟುಕೊಂಡು ರೂಪಿಸಿದ್ದ ಯೋಜನೆ ಅದು. ಕರ್ನಾಟಕದ ಪ್ರಾಯೋಗಿಕ ರಂಗಭೂಮಿಯ ಸಂದರ್ಭದಲ್ಲಂತೂ ಅದು ನಿಜಕ್ಕೂ ಅತ್ಯಂತ ಮುಖ್ಯ ಯೋಜನೆ. ಆ ಕುರಿತು ಯೋಚಿಸಿ, ಯಶಸ್ವಿಗೊಳಿಸಲು ಉತ್ಸುಕವಾಗಿ, ಅಕಾಡೆಮಿಗೆ ಅರ್ಜಿ ಸಲ್ಲಿಸಿ, ಬೇಕಾದ ಎಲ್ಲ ಏರ್ಪಾಟುಗಳನ್ನೂ ಮಾಡಿಕೊಂಡು ಕೂತಿತ್ತು ಹುಬ್ಬಳ್ಳಿಯ ‘ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ ಸಂಸ್ಥೆ. ಅದಕ್ಕಾಗಿ ದೇಶದ ಒಬ್ಬ ಹಿರಿಯ ರಂಗ ತಂತ್ರಜ್ಞನನ್ನು ಸಂಪರ್ಕಿಸಿಯೂ ಆಗಿತ್ತು.
ಸಂಗೀತ ಕ್ಷೇತ್ರದಲ್ಲಿ ದೇಶಪ್ರಸಿದ್ಧವಾದ ‘ಹುಬ್ಬಳ್ಳಿ ಆರ್ಟ್ಸ್ ಸರ್ಕಲ್’ನ ಒಂದು ಅಂಗ ಈ ‘ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್.’ ಅದೊಂದು ದತ್ತಿ ಸಂಸ್ಥೆ. ಎಲ್ಲ ಪ್ರದರ್ಶಕ ಕಲೆಗಳ ಕುರಿತು ಸಂಶೋಧನೆ, ದಾಖಲೀಕರಣ ಮತ್ತು ಆಮೂಲಾಗ್ರ ತರಬೇತಿ ಈ ಸಂಸ್ಥೆಯ ಗುರಿ. ಸಂಗೀತ ವಿದುಷಿ ಡಾ. ಗಂಗೂಬಾಯಿ ಹಾನಗಲ್ ಮುಂತಾದ ಗಣ್ಯರು ಆ ಸಂಸ್ಥೆಯ ಬೆನ್ನ ಹಿಂದಿನ ಬಲವಾಗಿದ್ದವರು.
1986ರಲ್ಲಷ್ಟೇ ಆರಂಭವಾಗಿದ್ದ ಈ ‘ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ಗೆ ಅವು ತುಂಬಾ ಉಮ್ಮೇದಿನ ದಿನಗಳು. ಹುಬ್ಬಳ್ಳಿಯ ‘ಸವಾಯಿ ಗಂಧರ್ವ ಕಲಾಮಂದಿರ’ದ ಮಹಡಿಯಲ್ಲಿ ಅದರ ಕಾರ್ಯಾಲಯ. ಅದರದೇ ಒಂದು ಭಾಗ ‘ಸಂಗೀತ ಪತ್ರಾಗಾರ’ (Archives of Music). ಭಾರತದ ಗಣ್ಯಾತಿಗಣ್ಯ ಸಂಗೀತ ಪಟುಗಳ ಧ್ವನಿ ಸುರುಳಿ ಮತ್ತು ವೀಡಿಯೊಗಳನ್ನು ಸಂಗ್ರಹಿಸಿ ಅಲ್ಲಿಡಲಾಗಿದೆ. ಸಂಶೋಧನೆಯಲ್ಲಿ ತೊಡಗುವ ಯುವ ಸಂಗೀತ ಪಟುಗಳಿಗೆ ಅದು ‘ನಾದ ಕಾಶಿ’. ಈಗಿನ ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಪಟು ಡಾ. ನಾಗರಾಜರಾವ್ ಹವಾಲ್ದಾರ್ ಮುಂತಾದವರು ಸಂಶೋಧನೆ ನಡೆಸಿದ್ದು ಅಲ್ಲಿಯೇ.
ನಮ್ಮಂಥ ರಂಗಕರ್ಮಿಗಳಿಗೆಲ್ಲ ‘ಸವಾಯಿ ಗಂಧರ್ವ ಕಲಾಮಂದಿರ’ ಎರಡನೆಯ ಮನೆ. ನಾಟಕ ಮತ್ತು ತತ್ಸಂಬಂಧಿ ಚಟುವಟಿಕೆಗಳ ಸಂದರ್ಭದಲ್ಲಂತೂ ಸರಿಯೇ, ಅದಿಲ್ಲದಿದ್ದಾಗ ಕೂಡ ದಿನಕ್ಕೊಮ್ಮೆಯಾದರೂ ಅಲ್ಲಿಗೆ ಹೋಗಿ ‘ಸವಾಯಿ ಗಂಧರ್ವ’ರ ಪುತ್ಥಳಿಯ ಹಿಂದಿನ ಹುಸಿಯಲ್ಲಿ ಒಂದಷ್ಟು ಹೊತ್ತು ಕೂತು ಬರದಿದ್ದರೆ ಏನೋ ಕಳಕೊಂಡ ಭಾವ ನಮಗೆ. ಆ ಪುತ್ಥಳಿಯನ್ನು ಮಾಡಿಸಿಕೊಟ್ಟು ಗುರುಭಕ್ತಿಯನ್ನು ಮೆರೆದವರು ನಮ್ಮೆಲ್ಲರ ಅಕ್ಕ ಡಾ. ಗಂಗೂಬಾಯಿ ಹಾನಗಲ್ಲರು.
ಈ ಸಂಸ್ಥೆಯ ಅಧ್ಯಕ್ಷ ಡಾ. ಗೋರೆಯವರು ನಾಟಕ ಅಕಾಡೆಮಿಯ ಪ್ರತಿನಿಧಿಯಾಗಿದ್ದ ನನ್ನೆದುರು ಈ ಯೋಜನೆಯ ಕುರಿತು ಚರ್ಚಿಸಿದ್ದರು. ಎಲ್ಲ ವಿವರಗಳನ್ನೂ ಕರಾರುವಾಕ್ಕಾಗಿ ನಮೂದಿಸಿದ್ದರು. ನಿಜಕ್ಕೂ ಹುಬ್ಬಳ್ಳಿಗೆ ಹೆಮ್ಮೆ ಎನಿಸುವಂಥ ಶಿಬಿರ ಅದು.
”ಖಂಡಿತ ಒಪ್ಪಿಸಿಕೊಂಡು ಬರುತ್ತೇನೆ,” ಎಂದು ಡಾ. ಗೊರೆಯವರೆದುರು ಹೇಳಿ, ಆ ಆತ್ಮವಿಶ್ವಾಸದೊಂದಿಗೆ ಬಂದರೆ ಇಲ್ಲಿ ಶುರುವಾದದ್ದೇ ಬೇರೆ…
ಪ್ರಸ್ತಾವನೆಯನ್ನು ಎದುರಿಗಿಟ್ಟುಕೊಂಡು ಅಧ್ಯಕ್ಷರು, ”ಈ ಶಿಬಿರವನ್ನ ಹುಬ್ಬಳ್ಳಿಯಲ್ಲಿ ಮಾಡಬೇಕು ಅಂತ ವಾಜಪೇಯಿ ಹೇಳ್ತಿದ್ದಾರೆ. ಅಲ್ಲೇ ಮಾಡಬೇಕಾ ಅಥವಾ ಬೇರೆ ಕಡೆ ಮಾಡಬೇಕಾ ಅಂತ ನೀವು ಮೇಂಬರುಗಳು ಅಭಿಪ್ರಾಯ ಹೇಳಬೇಕು…” ಅಂತ ಹೇಳಿದ್ದೆ ತಡ, ”ಹುಬ್ಬಳ್ಳಿ ಬೇಡ, ಮೈಸೂರಲ್ಲಾಗಲಿ,” ಅಂತ ಕೆಲವರು, ”ಬೇಡ ಬೇಡ, ಬೆಂಗಳೂರಲ್ಲಾಗಲಿ,” ಅಂತ ಇನ್ನು ಕೆಲವರು, ”ನಮ್ಮ ಹೆಗ್ಗೋಡಲ್ಲೇ ಮಾಡಿಬಿಡೋಣ ಬಿಡ್ರೀ, ಅಲ್ಲಿ ಎಲ್ಲ ಅನುಕೂಲಗಳೂ ಇವೆ,” ಅಂತ ಜಂಬೆಯವರು…
ಶುರುವಾಯಿತು ಚರ್ಚೆ. ಕ್ರಮೇಣ ಅದು ವಾದ ವಿವಾದದ ಸ್ವರೂಪ ಪಡೆಯಿತು. ಅವರೆಲ್ಲ ತಮ್ಮ ಊರಲ್ಲೇ ಅಂತ ಹಠ ಹಿಡಿದರು. ನಾನು ಪ್ರತಿರೋಧಿಸುತ್ತ ಬಂದೆ. ನಮ್ಮವರೆಲ್ಲ ಬೆಂಬಲಿಸಿದರು. ವೃತ್ತಿ ರಂಗಭೂಮಿಯವರು ಇದು ತಮಗೆ ಸಂಬಂಧಿಸದ ವಿಷಯ ಎಂಬಂತೆ ತೆಪ್ಪಗೆ ಕೂತಿದ್ದರು. ಧುತ್ತರಗಿ, ಯೋಗಣ್ಣ, ಪರ್ವತವಾಣಿ ಇವರೆಲ್ಲ ‘ರಾಜೀಸೂತ್ರ’ದ ಪರವಾಗಿದ್ದದ್ದು ಸ್ಪಷ್ಟ ಗೋಚರವಿತ್ತು.
ಬೆಳಿಗ್ಗೆ ಹನ್ನೊಂದಕ್ಕೆ ಶುರುವಾದ ಈ ಚರ್ಚೆ ವಾಗ್ಯುದ್ಧವಾಗಿ, ಕೊನೆಗೆ ನನ್ನ ಸಹನೆಯನ್ನು ಕೆಣಕಿದ ಹೊತ್ತಿನಲ್ಲೇ ನಾನು ಹೊರಗೆ ನಡೆದದ್ದು.

-೦-೦-೦-೦-೦-

ಅಂತೂ ನನ್ನ ಹಠ ಗೆದ್ದಿತ್ತು. ಡಾ. ಗೋರೆಯವರಿಗೆ ಕೂಡಲೇ ವಿಷಯ ತಿಳಿಸಿದೆ. ಆಗ ನನಗೆ ಬೆಂಗಳೂರಿಗೇ ವರ್ಗವಾಗಿದ್ದ ಕಾರಣ, ವಿ. ರಾಮಮೂರ್ತಿಯವರನ್ನು ಸಂಪರ್ಕಿಸಲು ಡಾ. ಗೋರೆ ಸೂಚಿಸಿದರು.

ವಿ. ರಾಮಮೂರ್ತಿ ಅಂತಾರಾಷ್ಟ್ರೀಯ ಖ್ಯಾತಿಯ ಪ್ರಕಾಶ ವಿನ್ಯಾಸಕ. ರಾಷ್ಟ್ರೀಯ ನಾಟಕ ಶಾಲೆಯ ಮೊದಲ ವರ್ಷದ ವಿದ್ಯಾರ್ಥಿ. ಅಲ್ಲಿ ಬಿ. ವಿ. ಕಾರಂತ ಮುಂತಾದವರ ಸಹಪಾಠಿ. ಪ್ರಕಾಶ ಸಂಯೋಜನೆಯಲ್ಲಿ ಅತ್ಯಂತ ದೊಡ್ಡ ಹೆಸರು. ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಅವರು ತಮ್ಮ ಅನುಪಮ ಕಾರ್ಯಕ್ಕಾಗಿ ಪ್ರಸಿದ್ಧರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ. ಮೊದಲ ನೋಟಕ್ಕೆ ‘ಸ್ವಲ್ಪ ಗರ್ವಿಷ್ಠ’ ಎಂಬಂತೆ ತೋರುವ ಈ ಹಿರಿಯರನ್ನು ನಾವೆಲ್ಲ ಪ್ರೀತಿಯಿಂದ ‘ವಿರಾಮ ಮೂರ್ತಿ’ ಅಂತಲೇ ಕರೆಯೋದು. ಪರಿಚಯವಾದರೆ ಮುಗಿಯಿತು, ನಿಮ್ಮ ಹೃದಯವನ್ನು ಗೆದ್ದುಬಿಡುವ ಚತುರ ಈ ರಾಮಮೂರ್ತಿ. ಸ್ವಲ್ಪ ಮಟ್ಟಿಗೆ ಖಂಡಿತವಾದಿ. ಕಟುವೆನಿಸುವಂಥ ಮಾತು. ಆದರೆ ಅವರ ಶಿಸ್ತು, ಸಮಯಪ್ರಜ್ಞೆ, ಸಿದ್ಧತೆ-ಬದ್ಧತೆಗಳ ಮುಂದೆ ಅದೆಲ್ಲ ನಗಣ್ಯ. ಮೊನ್ನೆ ಮೊನ್ನೆಯ ತನಕ ಆ ಊರು ಈ ಊರು, ಅಲ್ಲಿ ಥೇಟರ್ ಡಿಸೈನು, ಇಲ್ಲಿ ಲೈಟ್ ಡಿಸೈನು ಅಂತ ಸುತ್ತುತ್ತಲೇ ಇದ್ದ ಚಟುವಟಿಕೆಯ ವ್ಯಕ್ತಿ. ಅಲ್ಲಿ, ಗಾಂಧೀ ನಗರದಲ್ಲಿ ಕಪಾಲಿ ಚಿತ್ರಮಂದಿರದ ಹಿಂದೆ ತಮ್ಮ ಸೋದರ ಸಂಬಂಧಿಯ ಮನೆಯಲ್ಲಿರುತ್ತಿದ್ದರು ಈ ಬ್ರಹ್ಮಚಾರಿ.
ನನಗೆ ಅವರ ಪರಿಚಯವಾದದ್ದು 1978ರಲ್ಲಿ. ಕಿತ್ತೂರಿನ ಬಳಿಯ ತೂರಮರಿಯಲ್ಲಿ. ‘ಒಂದಾನೊಂದು ಕಾಲದಲ್ಲಿ’ ಚಿತ್ರೀಕರಣದ ಸಂದರ್ಭದಲ್ಲಿ. ಅದರಲ್ಲವರು ಹುಚ್ಚು ಮುದುಕನ ಪಾತ್ರ ಮಾಡಿದ್ದು ನಿಮಗೆಲ್ಲ ನೆನಪಿರಬೇಕು… ಇಂಥ ರಾಮಮೂರ್ತಿಯವರೊಂದಿಗೆ ಸತತ ಮೂರು ತಿಂಗಳು ಕೂತು ಹುಬ್ಬಳ್ಳಿಯ ಶಿಬಿರದ ರೂಪುರೇಷೆಗಳನ್ನು ಪಕ್ಕಾ ಮಾಡಿದೆ. ವೇಳಾಪತ್ರಿಕೆ, ಶಿಬಿರಕ್ಕೆ ಆಹ್ವಾನಿಸಬೇಕಾದ ಆಯಾ ವಿಷಯಗಳ ತಜ್ಞ ಉಪನ್ಯಾಸಕರು, ಶಿಬಿರಾರ್ಥಿಗಳ ಅಭ್ಯಾಸಕ್ಕೆ ಅನುಕೂಲವಾಗುವಂಥ ನಾಟಕಗಳ ಪ್ರದರ್ಶನ ಇತ್ಯಾದಿ…
ಅವರ ಬಳಿಯಲ್ಲೊಂದು ‘ಲ್ಯಾಪ್ ಟಾಪ್’ನಂಥ ರೆಮಿಂಗ್ಟನ್ ರಾಂಡ್ ಕಂಪನಿಯ ಪುಟ್ಟ ಟೈಪ್ ರೈಟರ್. ಅದನ್ನು ಕುಟ್ಟುತ್ತ ಅದನ್ನು ಸದಾ ಏನೋ ಬರೆಯುತ್ತಲೇ ಇರಬೇಕು. ನಾವು ಮಾತಾಡಿಸಿದರೆ ಊಹೂಂ… ಟೈಪ್ ಮಾಡುವುದು ಮುಗಿಯುವ ತನಕ ಉತ್ತರಿಸುವುದಿರಲಿ, ಜಪ್ಪಯ್ಯ ಅಂದರೂ ನಮ್ಮ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಅದಕ್ಕೇ ನಾನೊಂದು ಬೇರೆಯೇ ಪ್ಲಾನು ಮಾಡಿದೆ.
ದಿನವೂ ಸಂಜೆ ಕಲಾಕ್ಷೇತ್ರಕ್ಕೆ ಬಂದು ಹೋಗುವುದು ರಾಮಮೂರ್ತಿಯವರ ಆಗಿನ ದಿನಚರಿಯ ಭಾಗ. ಹಾಗೆ ಬಂದಾಗ, ಅಲ್ಲಿದ್ದ ಕಾರಂತರ ಕ್ಯಾಂಟೀನಿನಲ್ಲಿ ಏನಾದರೂ ಒಂದಷ್ಟು ಕುರುಕಲು ತಿಂಡಿ ಕಟ್ಟಿಸಿಕೊಂಡು, ಅವರನ್ನು ‘ಸಂಸ’ ಬಯಲು ರಂಗಮಂದಿರದೆಡೆ ಕರೆದೊಯ್ಯುತ್ತಿದ್ದೆ. ಅಲ್ಲಿ ಮುಂದುವರಿಯುತ್ತಿತ್ತು ನಮ್ಮ ಶಿಬಿರದ ಚರ್ಚೆ. ಅದು ಗೊತ್ತಾಗಿ, ಅಲ್ಲಿಗೆ ರಂಗ ನಿರ್ದೇಶಕ, ಧ್ವನಿ ತಜ್ಞ ಎಚ್. ವಿ. ವೆಂಕಟಸುಬ್ಬಯ್ಯ ಮತ್ತು ಪದ್ದಣ್ಣ ಅಲ್ಲಿಗೇ ಬರುತ್ತಿದ್ದರು. ನೇಪಥ್ಯದ ಕೆಲಸಕ್ಕಾಗಿಯೇ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು ಪದ್ದಣ್ಣ. ಕರ್ನಾಟಕ ನಾಟಕ ಅಕಾಡೆಮಿ ಇಂಥ ಅದ್ಭುತ ನೇಪಥ್ಯ ಶಿಲ್ಪಿಯ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸುವುದರ ಮೂಲಕ ಅವರ ಸೇವೆಯನ್ನು ಗೌರವಿಸಿದೆ. ಅಂಥ ಹಿರಿಯರು ನಮ್ಮ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದದ್ದು ಒಂದು ರೀತಿಯಲ್ಲಿ ನಮ್ಮ ಶಿಬಿರದ ಯಶಸ್ಸಿಗೆ ಪ್ಲಸ್ ಪಾಯಿಂಟಾಯಿತು. ನಮ್ಮೊಂದಿಗೆ ಮೊದಲಿನಿಂದಲೂ ಕೂತು, ಚರ್ಚಿಸಿ, ಏನೆಲ್ಲಾ ಮಾಡಬಹುದು, ಉಪನ್ಯಾಸಕರಾಗಿ ಯಾರಾರನ್ನೆಲ್ಲ ಕರೆಸಬಹುದು, ಪ್ರಾತ್ಯಕ್ಷಿಕೆಗಳಿಗೆ ಯಾರು ಸೂಕ್ತ ಎಂದೆಲ್ಲ ನೆನಪು ಮಾಡಿಕೊಡುತ್ತಿದ್ದಾತ ನಮ್ಮ ಬೆಳಕಿನ ಮುದ್ದಣ್ಣ. (ಆತನೇ ನಮ್ಮ ಈ ಶಿಬಿರದ ತಾಂತ್ರಿಕ ಸಹಾಯಕ).

-೦-೦-೦-೦-೦-

ಸಾಮಾನ್ಯ ಪ್ರೇಕ್ಷಕನಿಗೆ ‘ನಾಟಕ’ ಎಂದರೆ ‘ರಂಗದ ಮೇಲೆ ಕಾಣುವ ಪಾತ್ರಗಳು ಮತ್ತು ಅವನ್ನು ಮಾಡುವ ಜನ’ ಅಷ್ಟೇ. ಈ ಭಾವನೆ ಮೊದಲಿನಿಂದಲೂ ಇದೆ. ನಾಟಕದಲ್ಲಿ ಪಾತ್ರ ಮಾಡುವ ಹುಮ್ಮಸ್ಸಿನಿಂದ ಬರುವ ಬಹುತೇಕ ಹುಡುಗರಿಗೂ ಇಷ್ಟೇ ಕಲ್ಪನೆ ‘ನಾಟಕ’ದ ಬಗ್ಗೆ. ವಾಸ್ತವವೆಂದರೆ, ರಂಗದ ಮುಂದಿರುವಷ್ಟೇ (ಒಮ್ಮೊಮ್ಮೆ ಅದಕ್ಕಿಂತಲೂ ಹೆಚ್ಚು) ಜನ ರಂಗದ ಹಿಂದೆ ತೋಳೇರಿಸಿ ನಿಂತುಕೊಂಡಿರಬೇಕಾಗುತ್ತದೆ. ಈ ಪರದೆಯ ಹಿಂದಿನ ಕಾರ್ಯವೇ ‘ನೇಪಥ್ಯದ ಕೆಲಸ’.
ಹೀಗಾಗಿ, ರಂಗದ ಹಿಂದೆ ದುಡಿಯುವವರನ್ನೆಲ್ಲ ನಾನು ‘ನೇಪಥ್ಯ ಶಿಲ್ಪಿಗಳು’ ಎಂದೇ ಗೌರವಿಸುತ್ತ ಬಂದಿರುವಾತ. ಹೀಗಾಗಿ, ಇಂಥ ‘ನೇಪಥ್ಯ ಶಿಲ್ಪಿ’ಗಳನ್ನು ರೂಪಿಸುವ ಉದ್ದೇಶದ ಆ ಶಿಬಿರಕ್ಕೆ ನಾನು ಕೊಟ್ಟ ಶೀರ್ಷಿಕೆ ‘ನೇಪಥ್ಯ ಶಿಲ್ಪ’…
ಮೊದಲೇ ಪತ್ರಿಕೆಗಳ ಮೂಲಕ ಶಿಬಿರದ ವಿಚಾರ ಮತ್ತು ಉದ್ದೇಶವನ್ನು ಅರಿತುಕೊಂಡು ಅನೇಕ ಉತ್ಸಾಹಿಗಳು ಅರ್ಜಿ ಸಲ್ಲಿಸಿದ್ದರು… ಈ ಕಡೆ ಮಂಗಳೂರು, ಆ ಕಡೆ ಗುಲ್ಬರ್ಗಾ, ಮತ್ತೆ ಆ ಕಡೆ ಉತ್ತರ ಕನ್ನಡ ಜಿಲ್ಲೆಯ ಹುಡುಗರು, ಹಾಗೂ ಮಂಜಿನ ಮಡಿಕೇರಿ, ಬಿರುಬಿಸಿಲಿನ ಬಳ್ಳಾರಿ, ಕೋಟೆ-ಕೊತ್ತಲಗಳ ಚಿತ್ರದುರ್ಗ ಅಲ್ಲದೆ ಹುಬ್ಬಳ್ಳಿ ಧಾರವಾಡಗಳ ಹವ್ಯಾಸಿಗಳ ಜೊತೆ ಒಂದಷ್ಟು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು… ಅವರ ಹಿನ್ನೆಲೆ, ಇನ್ನಿತರ ಆಸಕ್ತಿ, ಕಲಿಯುವ ತವಕ, ಶಿಬಿರದ ನಂತರ ರಂಗಭೂಮಿಗೆ ಅವರೇನು ಮಾಡಬಲ್ಲರು ಎಂಬುದನ್ನು ಕೂಲಂಕಷವಾಗಿ ತಿಳಿದುಕೊಂಡ ರಾಮಮೂರ್ತಿ ಆಯ್ಕೆ ಮಾಡಿದ್ದು ಒಟ್ಟು 26 ಜನ ಉತ್ಸಾಹಿಗಳನ್ನು.

ಅಂದಿನಿಂದ ಮುಂದಿನ ಹದಿನಾರು ದಿನಗಳ ಕಾಲ, ಇಪ್ಪತ್ತನಾಲ್ಕೂ ಗಂಟೆ, ಅವರೆಲ್ಲ ಜೊತೆಯಲ್ಲೇ ಇರಬೇಕು. ಅವರ ಊಟ-ವಸತಿ, ನೀರು-ನಿಡಿಗಳ ವ್ಯವಸ್ಥೆಯ ಹೊಣೆ ಸಂಘಟಕರದು.
ಸರಕಾರಿ ನೌಕರರು, ಶಿಕ್ಷಕರು, ಕಾರ್ಖಾನೆಗಳಲ್ಲಿ ದುಡಿಯುವವರು, ಒಬ್ಬ ರಿಕ್ಷಾ ಚಾಲಕ ಹಾಗೂ ವಾಸ್ತುಶಾಸ್ತ್ರದ ವಿದ್ಯಾರ್ಥಿಗಳು ಇಲ್ಲಿ ಶಿಬಿರಾರ್ಥಿಗಳು. ಮೊದಲು ಅವರಲ್ಲಿ ‘ಏಕೋಭಾವ’ವನ್ನು ತರಬೇಕು. ‘ನಾವೆಲ್ಲ ಸಮಾನರು’ ಎಂಬ ಅನಿಸಿಕೆಯನ್ನು ಉಂಟುಮಾಡಬೇಕು. ಪರಸ್ಪರ ಪರಿಚಯವಾದಾಗ, ಅವರು ಒಬ್ಬರಿಗೊಬ್ಬರು ಸ್ನೇಹಿತರಾದಾಗ ಮಾತ್ರ ಇದು ಸಾಧ್ಯ. ರಾಮಮೂರ್ತಿ ಮೊಟ್ಟಮೊದಲು ಮಾಡಿದ ಕೆಲಸವೇ ಅದು. ಶಿರಾರ್ಥಿಗಳಷ್ಟೇ ಅಲ್ಲ, ಸಂಘಟಕರಾದಿಯಾಗಿ ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡ ಹುಬ್ಬಳ್ಳಿ-ಧಾರವಾಡದ ಎಲ್ಲ ಹವ್ಯಾಸಿ ರಂಗಕರ್ಮಿಗಳು ತಮ್ಮನ್ನು ತಾವು ಪರಿಚಯಿಸಿಕೊಳ್ಳಬೇಕು ಎಂದು ಕಟ್ಟಪ್ಪಣೆ ಮಾಡಿಬಿಟ್ಟರು. ಎಷ್ಟೆಂದರೂ ಅವರು ‘ಶಿಬಿರ ನಿರ್ದೇಶಕ’ರಲ್ಲವೇ?
ಆ ನಂತರ ಶುರು ಪೂರ್ವ ತಯಾರಿ. ಶಿಬಿರಾರ್ಥಿಗಳು ಉಳಿಯಬೇಕಾದ ಜಾಗ, ಸ್ನಾನಗೃಹಗಳು, ಶಿಬಿರದ ಸಭಾಂಗಣ, ಪಾಠಗಳು ಪ್ರಾತ್ಯಕ್ಷಿಕೆಗಳು ನಡೆಯುವ ಕೋಣೆಗಳು, ರಂಗಮಂದಿರದ ಬೆಳಕಿನ ಕೋಣೆ ಹಾಗೂ ಮುಖ್ಯದ್ವಾರ ಇತ್ಯಾದಿಗಳನ್ನೆಲ್ಲ ಚೊಕ್ಕಗೊಳಿಸುವುದರೊಂದಿಗೆ ರಾಮಮೂರ್ತಿಗಳ ‘ಮೊದಲ ಪಾಠ’ ಆರಂಭವಾಯಿತು.
ಮರುದಿನ ಅಂದರೆ1988ರ ನವೆಂಬರ್ 16… ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಸಂಭ್ರಮವೋ ಸಂಭ್ರಮ. ಎಂದಿನಂತೆ ಸುತ್ತಲಿನ ಜಿಲ್ಲೆಗಳ ರಂಗಕರ್ಮಿಗಳು ಶಿಬಿರದ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು.
‘ನೇಪಥ್ಯ ಶಿಲ್ಪ’ವನ್ನು ಉದ್ಘಾಟಿಸಿದವರು ಹವ್ಯಾಸಿಗಳ ಪಾಲಿನ ‘ಅಜ್ಜ’, ಹಿರಿಯ ನಾಟಕಕಾರ ಜಿ.ಬಿ. ಜೋಶಿ. ಇನ್ನೊಂದು ವಿಶೇಷವೆಂದರೆ, ಜಿ.ಬಿ. ಅವತ್ತು ಮೈಕಿನೆದುರು ನಿಂತು ಮಾತನಾಡಿದ್ದು. ಸಾಮಾನ್ಯವಾಗಿ ಯಾವ ಸಭೆಯಲ್ಲೂ ಮಾತಾಡದವರೆಂಬ ಖ್ಯಾತಿ ಅವರದು. ಆದರೆ ಅವರನ್ನು ಆಮಂತ್ರಿಸಲು ಹೋಗಿದ್ದಾಗ, ಉದ್ಘಾಟನಾಕ್ಕ ಬರ್ತೀನಿ… ಆದ್ರ, ‘ಮಾತಾಡ್ರಿ’ ಅಂತ ಮಾತ್ರ ಕೇಳಬ್ಯಾಡ್ರಿ,” ಅಂತ ಅವರು; ”ಏನಾದ್ರೂ ನಾಲ್ಕು ಹಿತನುಡಿ ಆಡಲಿಕ್ಕೇಬೇಕು,” ಅಂತ ನಾವು.

ನಮ್ಮ ಒತ್ತಾಯಕ್ಕೋ ಏನೋ, ಜಿ.ಬಿ. ಅವತ್ತು ಪೋಸ್ಟ್ ಕಾರ್ಡ್ ಅಳತೆಯ ಕಾಗದವೊಂದರಲ್ಲಿ ತಮ್ಮ ವಿಚಾರಗಳನ್ನು ಬರೆದು ತಂದಿದ್ದರು. ಅದನ್ನೇ ಓದಿದರು. (ಹಾಗೆ ಮಾಡುವುದು ನಿಜಕ್ಕೂ ಅದು ಒಳ್ಳೆಯ ಅಭ್ಯಾಸ. ಅದು ಒಂದು ದಾಖಲೆಯೇ ಆಗುತ್ತದೆ.) ಆ ಚಿಕ್ಕ ಭಾಷಣದಲ್ಲಿ ಅವರು ನೇಪಥ್ಯದ ಮಹತ್ವವನ್ನು ತಿಳಿಸಿದುದಲ್ಲದೇ, ”ನಾಟಕ ಸಮಾಜ ಮತ್ತು ಸಂಸ್ಕೃತಿಗಳ ಅಂಶಗಳಿಂದ ಕೂಡಿದ ಒಂದು ಕಲೆ. ಅದು ಅರ್ಥಪೂರ್ಣವಾಗಬೇಕಾದರೆ ಶಾಸ್ತ್ರವನ್ನು ಅವಲಂಬಿಸಬೇಕು. ಹೀಗೆ ಶಾಸ್ತ್ರವನ್ನು ಅಧ್ಯಯನ ಮಾಡುವುದು ಒಂದು ಒಳ್ಳೆಯ ಲಕ್ಷಣ,” ಎಂಬ ಮಹತ್ವದ ನುಡಿಗಳನ್ನಾಡಿದರು.
ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ಅವತ್ತು ನಮಗೆ ಅಯಾಚಿತವಾಗಿ ಒದಗಿದ ಇನ್ನೊಬ್ಬ ಅತಿಥಿ. ಕವಿಹೃದಯದ ರಂಗಾಸಕ್ತ ಪೋಲಿಸ್ ಅಧಿಕಾರಿ ಎಂ.ಕೆ. ನಾಗರಾಜ್ ಅವತ್ತು ಅಧ್ಯಕ್ಷತೆ ವಹಿಸಿದ್ದರು.
ಹೀಗೆ ಹಿರಿಯರ ಹಿತವಚನದೊಂದಿಗೆ ಒಳ್ಳೆಯ ಆರಂಭ ಕಂಡ ‘ನೇಪಥ್ಯ ಶಿಲ್ಪ’ ಒಂದು ಯಶಸ್ವಿ ರಂಗ ತಾಂತ್ರಿಕ ಶಿಬಿರವಾಗಿ ಹೊಮ್ಮುವುದಕ್ಕೆ ಕಾರಣವಾದವರು ಹಲವು ಜನ ನಿಷ್ಣಾತ ರಂಗಕರ್ಮಿಗಳು, ರಂಗ ತಜ್ಞರು.
ಆರಂಭದ ಎರಡು ದಿನ ರಂಗ ನಿರ್ದೇಶಕ ಸುರೇಶ ಆನಗಳ್ಳಿ ಅವರಿಂದ ‘ನಾಟಕ ನಿರ್ಮಾಣ ಮತ್ತು ರಂಗ ಪರಿಕರ’ಗಳ ಕುರಿತ ಉಪನ್ಯಾಸ, ಜೊತೆಗೆ ಪ್ರಾತ್ಯಕ್ಷಿಕೆಗಳು. ಇದು ಒಂದು ರಂಗಪ್ರಯೋಗದ ಎಲ್ಲ ಅವಶ್ಯಕ ಅಂಗಗಳ ಕುರಿತಾದ ವಿಷಯ ಪ್ರವೇಶಿಕೆ. ಶಿಬಿರಾರ್ಥಿಗಳಲ್ಲಿ ಆಸಕ್ತಿ ಕುದುರಿಸುವಲ್ಲಿ ಇದು ಸಹಾಯಕ. ಸುರೇಶ ಆನಗಳ್ಳಿ ಶಿಬಿರಾರ್ಥಿಗಳಿಗೆ ‘ಮುಖವಾಡ ಮತ್ತು ಶಿರೋಭೂಷಣ’ಗಳನ್ನು ತಯಾರಿಸಲು ಹೇಳಿದಾಗ ನೋಡಬೇಕಿತ್ತು ಆ ಇಪ್ಪತ್ತಾರೂ ಮಂದಿಯ ಉತ್ಸಾಹವನ್ನು.
ನಂತರದ ಎರಡು ದಿನ ನಿರ್ದೇಶಕ ಎಚ್. ವಿ ವೆಂಕಸುಬ್ಬಯ್ಯ ಅವರು ನೀಡಿದ ‘ರಂಗ ವಿನ್ಯಾಸ ಮತ್ತು ವಸ್ತ್ರವಿನ್ಯಾಸ’ ಕುರಿತ ಪ್ರಾತ್ಯಕ್ಷಿಕೆ ಸಹಿತದ ಉಪನ್ಯಾಸ ಶಿಬಿರಾರ್ಥಿಗಳನ್ನು ಇನ್ನೊಂದು ಮಜಲಿಗೆ ಕೊಂಡೊಯ್ದಿತು. ತತ್ಪರಿಣಾಮ ಅವರೆಲ್ಲ ರಂಗಮಂದಿರಗಳ ಮಾದರಿಗಳನ್ನೂ ವಸ್ತ್ರವಿನ್ಯಾಸದ ಮಾದರಿಗಳನ್ನೂ ತಯಾರಿಸಿ ತಮ್ಮ ಸೃಜನಶೀಲತೆಯನ್ನು ಸಾಬೀತುಪಡಿಸಿದರು. ಅದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದವರು ನಟ ಮುಖ್ಯಮಂತ್ರಿ ಚಂದ್ರು. ಅವರು ತಮ್ಮದೇ ಶೈಲಿಯಲ್ಲಿ ನೀಡಿದ ಉಪನ್ಯಾಸ ದೇಹ ಮತ್ತು ಧ್ವನಿಯ ಕುರಿತಾದದ್ದು. ‘ರಂಗ ವಾಸ್ತುಶಿಲ್ಪ’ ಕುರಿತು ಶಿಬಿರ ನಿರ್ದೇಶಕ ವಿ. ರಾಮಮೂರ್ತಿ ಅಲ್ಲಿದ್ದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಹೆಚ್ಚು ಆಸಕ್ತಿಯನ್ನು ಕುದುರಿಸಿತು. ಆ ನಂತರದ ವಿಷಯ ‘ಬೆಳಕಿನ ಸಂಯೋಜನೆ’. ಹಲವಾರು ಸಾವಿರ ರಂಗಪ್ರಯೋಗಗಳಿಗೆ ಬೆಳಕು ಕೊಟ್ಟ ಆರ್. ಮುದ್ದಣ್ಣ, ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಕಾಶ ಸಂಯೋಜನೆಗೆ ಹೆಸರಾದ ರಾಘವೇಂದ್ರ ಹುನಗುಂದ, ನಾಲ್ಕು ದಶಕಗಳ ಹಿಂದೆಯೇ ಸ್ಪಾಟ್ ಲೈಟುಗಳೊಂದಿಗೆ ಆಡುತ್ತಾಡುತ್ತ ಬೆಳಕಿಗೆ ಇನ್ನೊಂದು ಹೆಸರೆನಿಸಿದ ಡಾ. ಎ. ಮುರಿಗೆಪ್ಪ (ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು), ಹಾಗೂ ಜಗತ್ಪ್ರಸಿದ್ಧ ಪ್ರಕಾಶ ವಿನ್ಯಾಸಕ ವಿ. ರಾಮಮೂರ್ತಿ ಈ ಕುರಿತು ನೀಡಿದ ಪ್ರಾತ್ಯಕ್ಷಿಕೆ ಸಹಿತದ ಉಪನ್ಯಾಸಗಳು ಶಿಬಿರಾರ್ಥಿಗಳನ್ನು ಹೊಸ ಬೆಳಕಿನಲ್ಲಿ ನಿಲ್ಲಿಸಿದವು. ಇನ್ನು ‘ಪ್ರಸಾಧನ ಅಥವಾ ಮೇಕಪ್’. ನಾಟಕಕ್ಕೆ ಬೇರೆಲ್ಲಕ್ಕಿಂತ ಮುಖ್ಯ ಎಂದು ಜನ ಭಾವಿಸಿರುವ ಈ ಕಲೆಯ ಕುರಿತು ಮಾತಿಗಿಂತಲೂ ಮೇಕಪ್ ಮಾಡುವುದರ ಮೂಲಕವೇ ಹೆಚ್ಚು ಮಾಹಿತಿ ನೀಡಿದವರು ಹಿರಿಯ ಪ್ರಸಾಧನಪಟುಗಳಾದ ಕನ್ನರಪಾಡಿ ರಾಮಕೃಷ್ಣ ಮತ್ತು ಗಜಾನನ ಮಹಾಲೆ. ಪ್ರಾಸಂಗಿಕವಾಗಿ ಪ್ರಾಥಮಿಕವೆನ್ನಬಹುದಾದ ಕೆಲವು ಮಹತ್ವದ ಸೂಚನೆಗಳನ್ನು ಅವರು ಶಿಬಿರಾರ್ಥಿಗಳಿಗೆ ನೀಡಿದರು.
ಆ ನಂತರದ ವಿಷಯ ‘ನಾದ ಮತ್ತು ಸಂಗೀತ’. ಇವು ನಾಟಕದ ಪರಿಣಾಮವನ್ನು ಹೆಚ್ಚಿಸಲು ನೆರವಾಗುವ ಮುಖ್ಯ ಅಂಶಗಳು. ಈ ಕುರಿತಂತೆ ಹಿರಿಯ ನಟ ನಿರ್ದೇಶಕ ಅಬ್ಬೂರು ಜಯತೀರ್ಥ ನೀಡಿದ ಉಪನ್ಯಾಸ ಒಂದು ನಿಟ್ಟಿನದಾದರೆ, ಗದಗಿನ ಡಾ. ವಿ. ಡಿ. ಚಾಫೇಕರ್ ಅವರು ನೀಡಿದ ‘ಧ್ವನಿವರ್ಧಕಗಳ ಬಳಕೆಯನ್ನು ಹೇಗೆ?’ ಎಂಬ ಕುರಿತು ಪ್ರಾತ್ಯಕ್ಷಿಕೆ ಸಹಿತದ ಮಾಹಿತಿ ಇನ್ನೊಂದು ನಿಟ್ಟಿನದು. ನಾಟಕ ಕೇವಲ ಕಲೆಯಲ್ಲ, ಅದು ವ್ಯವಹಾರವೂ ಹೌದು. ಆದ್ದರಿಂದ ‘ವ್ಯವಹಾರ ವ್ಯವಸ್ಥೆ’ ಕೂಡ ನೇಪಥ್ಯದ ಒಂದು ಅಂಗವೇ. ಈ ಕುರಿತು ವಿವರಣೆ ನೀಡಿದವರು ನಟ ಮತ್ತು (ಸದ್ಯದ ಮೈಸೂರು ರಂಗಾಯಣದ) ನಿರ್ದೇಶಕ ಡಾ. ಬಿ.ವಿ. ರಾಜಾರಾಂ. ನಾಟಕ ಒಂದು ಮಾರಾಟದ ವಸ್ತು ಅಥವಾ ಪ್ರಾಯೋಜಿಸಲ್ಪಡುವ ಸಂಗತಿಯೂ ಹೌದು. ನಾಟಕದ ಕುರಿತ ವಿವರಗಳು ಜನಕ್ಕೆ ತಿಳಿದಾಗ ಮಾತ್ರ ಅವರು ಅದರತ್ತ ಆಕರ್ಷಿತರಾಗುತ್ತಾರೆ. ನಾಟಕಕ್ಕೆ ಪ್ರಚಾರಕ್ಕೆ ಬಳಸಬಹುದಾದ ವಿವಿಧ ರೀತಿ ಮತ್ತು ಕ್ರಮಗಳ ಕುರಿತಂತೆ ಚಿತ್ತರಂಜನ ಚಟರ್ಜೀ ಮತ್ತು ಶಿಬಿರದ ಸಂಚಾಲಕರಾಗಿದ್ದ ಗೋಪಾಲ ವಾಜಪೇಯಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಛಾಯಾಗ್ರಹಣ ಮತ್ತು ವೀಡಿಯೋಗ್ರಫಿ ಕೂಡ ಹೇಗೆ ಒಂದು ನಾಟಕದ ಪ್ರಚಾರ ಮತ್ತು ದಾಖಲೀಕರಣದ ಅಂಗವಾಗುತ್ತದೆ ಎಂಬುದರ ಬಗ್ಗೆ ಸಚಿತ್ರ ವಿವರಣೆ ಕೊಟ್ಟವರು ಛಾಯಾಗ್ರಾಹಕ ವಸಂತಕುಮಾರ್. ಶಿಬಿರದ ಸಂಯೋಜಕರಾಗಿದ್ದ ಡಾ. ಎಸ್. ಎಸ್. ಗೋರೆಯವರು ‘ರಂಗಮಂದಿರ ನಿರ್ವಹಣೆ’ಯ ಕಷ್ಟ ನಷ್ಟಗಳ ಚಿತ್ರಣವನ್ನು ನೀಡಿದರೆ, ರಾಘವೇಂದ್ರ ಓಕಡೆಯವರು ಇದೇ ವಿಷಯದ ಇನ್ನೊಂದು ಮಗ್ಗುಲಿನ ಪರಿಚಯ ಮಾಡಿಕೊಟ್ಟರು. ಇಷ್ಟೆಲ್ಲ ಆದಮೇಲೆ ‘ನಟ ಮತ್ತು ರಂಗತಂತ್ರಗಳ ಸಂಬಂಧ’ ಏನು ಎಂಬುದನ್ನು ಅರಿತುಕೊಳ್ಳಬೇಕಲ್ಲವೇ? ಆ ಕುರಿತು ವಿಶ್ಲೇಷಿಸಿದವರು ರಂಗ ನಿರ್ದೇಶಕಿ ಎಸ್. ಮಾಲತಿ. ಇವೆಲ್ಲದರ ಜೊತೆಗೆ ಬಡಿಗತನ ಹಾಗೂ ಚಿತ್ರಕಲೆಯ ವಿಚಾರವಾಗಿಯೂ ಉಪನ್ಯಾಸಗಳು ನಡೆದವು.

-೦-೦-೦-೦-೦-

ಶಿಬಿರ ಹನ್ನೆರಡನೆಯ ದಿನಕ್ಕೆ ಕಾಲಿರಿಸಿದ್ದ ಸಂದರ್ಭ. ಅಲ್ಲಿಯವರೆಗೆ ಶಿಬಿರಾರ್ಥಿಗಳು ಪಡೆದ ಜ್ಞಾನ ಹಾಗೂ ಅನುಭವ ಏನೆಂಬುದನ್ನು ಸ್ವತಃ ಬಂದು ವೀಕ್ಷಿಸಿದರು ಅಕಾಡೆಮಿಯ ಅಧ್ಯಕ್ಷ ಬಿ. ವಿ. ವೈಕುಂಠ ರಾಜು. ಆ ಸಂಜೆ (1988ರ ನವೆಂಬರ್ 27) ‘ರಂಗ ವಸ್ತುಗಳ ಪ್ರದರ್ಶನ’ವನ್ನು ಉದ್ಘಾಟಿಸಿದ ಅವರು ನನ್ನ ಬೆನ್ನು ಚಪ್ಪರಿಸಿ, ”ನಿನ್ನ ಹಠ ಗೆದ್ದಿತು ಕಣೋ… ತುಂಬಾ ಚೆನ್ನಾಗಿದೆ ಈ ಶಿಬಿರ. ಬೇರೆ ಕಡೆ ಆಗಿದ್ದರೆ ಈ ವ್ಯಾಪ್ತಿ ಸಿಗುತ್ತಿತ್ತೋ ಇಲ್ಲವೋ” ಅಂದರು. ”ಶಿಬಿರದ ಸಂಪೂರ್ಣ ಯಶಸ್ಸಿಗೆ ಬಾಧ್ಯಸ್ಥರು ಇವರೆಲ್ಲ, ” ಅಂತ ಅಲ್ಲಿದ್ದವರೆಡೆ ಕೈತೋರಿಸಿದೆ. ಮಹಾನಗರದ ಎಲ್ಲ ರಂಗಕರ್ಮಿಗಳು, ರಂಗಾಸಕ್ತರು ಮತ್ತು ‘ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ನ ಡಾ. ಗೋರೆ ಮತ್ತವರ ಜನರ ನಿರಂತರ ಪರಿಶ್ರಮವೇ ಶಿಬಿರದ ಯಶಸ್ಸಿಗೆ ನಿಜವಾದ ಕಾರಣ.
ಶಿಬಿರಾರ್ಥಿಗಳ ‘ಅಭ್ಯಾಸ’ಕ್ಕಾಗಿ, ರಂಗಪ್ರಯೋಗದ ನಿಕಟ ನಿರೀಕ್ಷಣೆಗಾಗಿ ಒಳ್ಳೆಯ ಅವಕಾಶವೇ ಆ ಸಂದರ್ಭದಲ್ಲಿ ಒದಗಿ ಬಂತು. ಅದೇ ಹೊತ್ತಿಗೆ ‘ನೀನಾಸಂ ತಿರುಗಾಟ’ದ ಮೂರು ನಾಟಕಗಳು (‘ಚಿದಂಬರ ರಹಸ್ಯ’, ‘ಚಾಣಕ್ಯ ಪ್ರಪಂಚ’ ಮತ್ತು ‘ಲಿಯರ್ ಮಹಾರಾಜ’) ಪ್ರದರ್ಶಿಸಲ್ಪಟ್ಟವು. ಅವುಗಳ ಬೆನ್ನ ಹಿಂದೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸಿದ ಮತ್ತೆ ಮೂರು ನಾಟಕಗಳ ಪ್ರಯೋಗಗಳನ್ನು (‘ಸಂತ್ಯಾಗ ನಿಂತಾನ ಕಬೀರ’, ‘ರಣಹದ್ದುಗಳು’ ಮತ್ತು ‘ಪೋಲೀಸರಿದ್ದಾರೆ ಎಚ್ಚರಿಕೆ’) ಏರ್ಪಡಿಸಲಾಗಿತ್ತು. ರಂಗ ತಂತ್ರಗಳನ್ನು ಅಭ್ಯಸಿಸುವವರಿಗೆ ನಿಜಕ್ಕೂ ಈ ಆರೂ ನಾಟಕಗಳು ಮುಖ್ಯವಾದ ಪ್ರಯೋಗಗಳೇ.
ಶಿಬಿರಾರ್ಥಿಗಳು ರಂಗಮಂದಿರಗಳ ಮಾದರಿಗಳನ್ನು ರೂಪಿಸಿದ್ದರು; ವಸ್ತ್ರ ವಿನ್ಯಾಸದ ನಮೂನೆಗಳನ್ನೂ ತಯಾರಿಸಿದ್ದರು; ಪ್ರಸಾಧನವನ್ನು ಕಲಿತಿದ್ದರು; ಮುಖವಾಡಗಳು-ಶಿರೋಭೂಷಣಗಳು-ಇನ್ನಿತರ ಪರಿಕರಗಳನ್ನು ಹೇಗೆ ನಿರ್ಮಿಸುವುದೆಂಬುದನ್ನು ಕಲಿತುಕೊಂಡಿದ್ದರು. ಇನ್ನು ‘ಸಂಗೀತ’ ಮತ್ತು ‘ಪ್ರಕಾಶ’ಗಳ ಸಂಯೋಜನೆ… ವಿ. ರಾಮಮೂರ್ತಿ ಇವೆರಡನ್ನೂ ಮೇಳೈಸಿ ಒಂದು ಗಂಟೆಯ ಅದ್ಭುತ ಕಾರ್ಯಕ್ರಮವನ್ನು ರೂಪಿಸಿದರು. ಅದರ ನಿರ್ವಹಣೆಯ ಹೊಣೆಯನ್ನು ಶಿಬಿರಾರ್ಥಿಗಳ ಹೆಗಲಿಗೆ ವರ್ಗಾಯಿಸಿದರು.
ನವೆಂಬರ್ 27,1988ರಂದು ‘ನೇಪಥ್ಯ ಶಿಲ್ಪ’ದ ಸಮಾರೋಪ. ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಹಿರಿಯಕ್ಕ ಡಾ. ಗಂಗೂಬಾಯಿ ಹಾನಗಲ್ಲರು ಅಂದಿನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಅವಧಿಯಲ್ಲಿ ಆಗೀಗ ಬಂದು ನೋಡಿ ಸಂತೋಷಪಟ್ಟು ಹೋಗುತ್ತಿದ್ದ ಅಕ್ಕ ಅವತ್ತು ‘ಹಿಂದಿನ ನಾಟಕಗಳು, ಇಂದಿನ ನಾಟಕಗಳು’ ಎಂದು ಮಾತು ಆರಂಭಿಸಿ, ನಾಟಕ ಯಾವ ಕಾಲದ್ದೇ ಆಗಿರಲಿ, ಅದನ್ನು ನಮ್ಮ ತನಕ ಪರಿಣಾಮಕಾರಿಯಾಗಿ ತಲಪಿಸುವಲ್ಲಿ ರಂಗದ ಹಿಂದಿನ ಕೈಗಳು ಮುಖ್ಯ… ಅಂತ ಕೈಗಳನ್ನು ಬಲಪಡಿಸುವ ಕೆಲಸವನ್ನು ನೀವು ಮಾಡಿದ್ದೀರಿ,” ಎಂದು ಪ್ರಶಂಸೆಯ ಮಾತು ಹೇಳಿದರು.

ಆ ನಂತರ ‘ನಾದ-ಪ್ರಭ’ (Sound and Light) ಎಂಬ ವಿಶೇಷ ಕಾರ್ಯಕ್ರಮ. ಈ ಮೊದಲು ಹೇಳಿದ್ದೆನಲ್ಲ, ವಿ. ರಾಮಮೂರ್ತಿ ರೂಪಿಸಿ, ಶಿಬಿರಾರ್ಥಿಗಳ ಸುಪರ್ದಿಗೆ ಒಪ್ಪಿಸಿದ್ದ ಕಾರ್ಯಕ್ರಮ ಅಂತ… ಅದನ್ನು ನೋಡಿದ ಅಕ್ಕ ಅವಾಕ್ಕಾದರು.

-೦-೦-೦-೦-೦-

ಕೆಲವು ದಿನಗಳ ಹಿಂದೆ ಕಾರ್ಯನಿಮಿತ್ತ ಗುಲ್ಬರ್ಗಾಕ್ಕೆ ಹೋಗಬೇಕಾಯಿತು. ಅಲ್ಲಿ ಬಸ್ ನಿಲ್ದಾಣದಲ್ಲಿ ಕಾಲಿರಿಸುತ್ತಿದ್ದಂತೆ ನನ್ನೆಡೆಗೆ ಒಬ್ಬ ಮಧ್ಯವಯಸ್ಸಿನ ವ್ಯಕ್ತಿ ನಡೆದು ಬಂದರು. ‘ನಮಸ್ಕಾರ’ ಅಂದರು. ಪರಿಚಯ ಸಿಗದೇ ಅವರ ಮುಖವನ್ನೇ ನೋಡತೊಡಗಿದೆ.
”ನೀವು ಹುಬ್ಬಳ್ಯಾಗ ಮಾಡಿಸಿದ್ರೆಲ್ರೀ ಸರ್, ‘ನೇಪಥ್ಯ ಶಿಲ್ಪ’ ಅಂತ ಶಿಬಿರಾನ… ನಾ ಅದರಾಗ ಭಾಗವಹಿಸಿದ್ನಿರಿ. ಈಗ ಇಲ್ಲೇ ನಮ್ಮ ನಾಟಕಗಳಿಗೆ ನಾನs ಮೇಕಪ್ ಮಾಡ್ತೀನ್ರಿ ಸರ್… ನೇಪಥ್ಯದ ಉಳದ ಕೆಲಸದಾಗ ಮುಂದಿನ ಹುಡಗೂರಿಗೆ ಟ್ರೇನಿಂಗ್ ಕೊಡಾಕತ್ತೀನ್ರಿ…” ಅಂತ ಹೇಳತೊಡಗಿದರು.
ನನಗೆ ಥಟ್ಟನೆ ಹಿಂದಿನದೆಲ್ಲ ನೆನಪಾಯಿತು….

‍ಲೇಖಕರು avadhi

February 17, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Pushparaj Chowta

    ವಿಶಿಷ್ಟ ಸಿಟ್ಟಿದು. ನಿಮ್ಮ ಮೊಗದಲ್ಲಿ ಸಿಟ್ಟನ್ನೇ ಕಂಡಿಲ್ಲ ನಾನು ಆ ಎರಡು ದಿನದ ನಂಟಿನಲ್ಲಿ. ನೆನಪುಗಳ ನಾದದೊಂದಿಗೆ ‘ಬೆಳಕು’ ಚೆಲ್ಲಿದ್ದೀರಿ ನಿಮ್ಮ ‘ಸಿಟ್ಟಿ(೦ಗ್)ಗೆ’!

    ಪ್ರತಿಕ್ರಿಯೆ
  2. chandra barkoor

    ಒಂದು ಅಪರೂಪದ, ಮನಸ್ಸಿಗೆ ತಾಕುವ ಬರಹ. ಸಾತ್ವಿಕ ಸಿಟ್ಟು ಯಾವಾಗಲೂ ಅನಿವಾರ್ಯವಾದಾಗಲೇ ಪ್ರಕಟವಾಗೋದು. ವ್ಯಕ್ತಿತ್ವ, ಸ್ವಾಭಿಮಾನಗಳ ಜೊತೆಜೊತೆಯಲ್ಲೇ ನಾವು ಮಾಡುವ ಕೆಲಸಗಳೂ ಸಾಗಬೇಕು ಅನ್ನುವುದು ನಿಜ. ಭಾನುವಾರ ಇಂಥ ಒಂದು ಸಾರ್ಥಕ ಓದು ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್….

    ಪ್ರತಿಕ್ರಿಯೆ
  3. Ahalya Ballal

    ಜಬರ್ದಸ್ತ್ ಶಿಬಿರದ ಸೀನ್!
    ಇಂತಹ ಶಿಬಿರಗಳು ಒಂದು ರಂಗಕೃತಿಗೆ ಕೊಡುವ ಮೌಲ್ಯವನ್ನು underestimate ಮಾಡುವುದುಂಟೇ! ನಾಟಕ ಕ್ಷೇತ್ರದಲ್ಲಿ ವೃತ್ತಿಪರ ಶಿಕ್ಷಣ ಪಡೆಯದವರ ಪಾಲಿಗಂತೂ ಇಂತಹ ಶಿಬಿರಗಳಿಂದಲೇ ಹೆಚ್ಚಿನ ಅನುಭವ/ಜ್ಞಾನ ಸಿಗೋದು.

    ಪ್ರತಿಕ್ರಿಯೆ
  4. pravara

    ಸರ್, ರಂಗಭೂಮಿಯಲ್ಲಿ ನಿಮ್ಮ ಅನುಭವ ನನ್ನ ವಯಸ್ಸಿಗಿಂತಲೂ ಹೆಚ್ಚಿದೆ ಎನ್ನಿ… ರಂಗ ಶಿಬಿರಗಳಲ್ಲಿ ಭಾಗವಹಿಸುವ ಆಸೆಯಿದ್ದರೂ ಈಡೇರಿರಲಿಲ್ಲ, ಅವಕಾಶ ಸಿಕ್ಕರೆ ಖಂಡಿತಾ ಪಾಲ್ಗೊಳ್ಳುವೆ….

    ಪ್ರತಿಕ್ರಿಯೆ
  5. Jayalaxmi Patil

    ಕಾಕಾ,ನಿಮ್ಮ್ ಈ ರಂಗಭೂಮಿ ಅನುಭವದ ಬರಹಾ ಎಂಥಾ ಅಮೂಲ್ಯ ಅಂತೀರಿ! ಓದ್ಕೋಂತ ಕುಂತ್ರ ನಾವೂ ನಿಮ್ಮ್ ಕೂಡ ಎಲ್ಲಾದ್ರಾಗೂ ಭಾಗವಹಿಸಿದ ಅನುಭವ!
    ನನ್ನ ಪ್ರಕಾರ, ರಂಗನೇಪಥ್ಯ ಕೆಲ್ಸಾ ಮಾಡೊ ಮಂದಿಗೆ acting ಮಾಡಾಕ ಬರ್ತದೊ ಇಲ್ಲೋ, ಆದ್ರ ನಟನಾ ಮಾಡೋರಿಗೆ ಮಾತ್ರ ನೇಪಥ್ಯದ ಕೆಲ್ಸಾ, ಪೂರ್ತಿ ಅಲ್ಲದಿದ್ರೂ ಅಷ್ಟಿಷ್ಟು ‘ಎಲ್ಲಾ’ ಗೊತ್ತಿರಾಕs ಬೇಕು. ಇಲ್ಲದಿದ್ರ ಆ ನಟ/ನಟಿ ಅಪೂರ್ಣಾನ ಖರೆ!

    ಪ್ರತಿಕ್ರಿಯೆ
  6. hipparagi Siddaram

    ಸರ್, ನಿಮ್ಮ ಕೋಪದ ಬಗ್ಗೆ ನಿಮ್ಮ ಸಮಕಾಲೀನರ ಹತ್ತಿರ ಕೇಳಿದ್ದೇನೆ. ಆದರೆ ನಾನು ಸುಧೈವಿ, ಇನ್ನೂವರೆಗೂ ನಾನು ನಿಮ್ಮ ಕೋಪಕ್ಕೆ ತುತ್ತಾಗಿಲ್ಲ ! ನಿಜ ಹೇಳಬೇಕಂದರೆ, ಸರ್…ಅದು ನೀವು ತೊಡಗಿಸಿಕೊಳ್ಳುವ/ಮಾಡುವ ಕೆಲಸದ ಉತ್ತಮ ಫಲಿತಾಂಶಕ್ಕಾಗಿ ಮಿಡಿಯುವ/ತುಡಿಯುವ ಸಾತ್ವಿಕ ಮನದ ಸಮಾಧಾನದ ಕೋಪವೆಂಬುದನು ನಾನು ವೈಯಕ್ತಿಕವಾಗಿ ಬಲ್ಲೆ. ಈ ಕೋಪದ ಹಿಂದೆ ಮಹತ್ತರವಾದುದನ್ನು ಯುವಪೀಳಿಗೆಗೆ ಮುಟ್ಟಿಸುವ/ತನ್ಮಯಗೊಳಿಸುವಂತಹ ದಿವ್ಯಮಂತ್ರವಿರುವುದು ಮಾತ್ರ ಸೂರ್ಯಪ್ರಕಾಶದಷ್ಟೆ ಸತ್ಯ. ಸದರಿ ಲೇಖನ ಆಗಿನ ಕಾಲದ ರಂಗಚಳುವಳಿಯ ನೆನಪುಗಳಿಂದ ರಂಗಾಸಕ್ತಿಯ ಮನಸ್ಸುಗಳನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಲೇ…ಮುಂದುವರೆದು ಚಳುವಳಿಯೆಂಬ ಕಾಲಚಕ್ರದ ಮರುಚೇತರಿಕೆಯ ಕಾವು ನಿಂತುಕೊಳ್ಳದೇ/ಕಡಿಮೆ ಮಾಡಿಕೊಳ್ಳದೇ ದೂರದ ಗುಲಬರ್ಗಾ(ಹೈ-ಕ)ದಲ್ಲಿ ಇಂದಿಗೂ ಜೀವಂತವಾಗಿರುವುದನ್ನು ಸಾಕ್ಷೀಕರಿಸುತ್ತಾ…ಸಮೃದ್ಧ ವಿವರಣೆಯೊಂದಿಗೆ ಲೇಖನದಲ್ಲಿಯ ಸಾಲುಗಳು ಮಾತ್ರ ಅಂತ್ಯವಾಗುತ್ತದೆ ಹೊರತು ಆ ಚಳುವಳಿ, ಅದರ ಕಾವು, ಅದರ ಕುರಿತು ಬರೆಯುವ ಕೈಗಳು, ಆಸಕ್ತಿಯಿಂದ ಓದುವ ಮನಸ್ಸುಗಳು ಹೀಗೆ ಹಲವಾರು ಸಂಗತಿಗಳು ನಿತ್ಯ….ನಿರಂತರ….ನಿಲ್ಲದ ಸಂಗತಿಗಳು….!
    ಲೇಖನಕ್ಕೆ ಧನ್ಯವಾದಗಳು ಸರ್….

    ಪ್ರತಿಕ್ರಿಯೆ
  7. arathi ghatikaar

    ನಿಜಕ್ಕೂ ರಂಗಭೂಮಿಯ ಅಮೂಲ್ಯ ನೆನಪುಗಳನ್ನು ಕಟ್ಟಿಕೊಡುವ ಮುತ್ತಿನಂತಹ ಬರಹ . ಅಪರೂಪದ ಫೋಟೋಗಳನ್ನು ನೋಡಿ ಖುಷಿ ಯಾಯಿತು .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: