ನಾ ಕಟ್ಟೋ ಕಥೆಗಿಂತ?

 ಚಂದ್ರಕಾಂತ ವಡ್ಡು

ಅಪ್ಪ ಅಗಲಿ ಇಂದಿಗೆ ಸರಿಯಾಗಿ 51 ವರ್ಷ ಗತಿಸಿದವು. ಆತ ಅಮ್ಮನ ತವರು ಕರ್ಜಗಿಯಲ್ಲಿ ಅಕಾಲಿಕ ಮರಣಕ್ಕೆ ತುತ್ತಾದಾಗ ನಾನು ಆರು ವರ್ಷದ ಬಾಲಕ. ಹಾಗಾಗಿ ನನಗೆ ಅಪ್ಪ ಅಂದರೆ ಅವರಿವರ ಬಾಯಲ್ಲಿ ಕೇಳಿ ತಿಳಿದ ಅಸ್ಪಷ್ಟ ಆಕೃತಿ.

ನನ್ನ ತಾತನಿಗೆ ಮೂವರು ಹೆಂಡತಿಯರು. ಮೊದಲ ಹೆಂಡತಿಯ ಒಬ್ಬನೇ ಮಗನಾದ ನನ್ನಪ್ಪ ನಾಲ್ವರು ತಮ್ಮಂದಿರು, ಒಬ್ಬ ತಂಗಿಯ ಬದುಕು ರೂಪಿಸುವ ಹೊಣೆ ನಿರ್ವಹಿಸಿದ. ಜೊತೆಗೆ ಮಲತಾಯಂದಿರ ಧೋರಣೆಗಳನ್ನು ಧಾರಣೆ ಮಾಡಿಕೊಳ್ಳಬೇಕಿತ್ತು.

ಈಗಲೂ ನಮ್ಮೂರಿನ ಹಳಬರು ಅಪ್ಪನ ಖಡಕ್ ಸ್ವಭಾವ, ಸಿಟ್ಟು, ನ್ಯಾಯ ನಿಷ್ಠುರತೆ ಇತ್ಯಾದಿ ನೆನೆಯುವುದನ್ನು ಕಂಡಾಗ ಅಚ್ಚರಿಯಾಗುತ್ತದೆ. ಅಪ್ಪನನ್ನು ಕಳೆದುಕೊಂಡ ನಂತರ ಮೊದಲಬಾರಿಗೆ ನಾನು ವಡ್ಡು ಗ್ರಾಮಕ್ಕೆ ಹೋದಾಗ ನಮ್ಮೂರ ಜೋಗಪ್ಪ ಕಟ್ಟೇಗೌಡ ನನ್ನನ್ನು ಅಪ್ಪಿಕೊಂಡು, ಅಪ್ಪನನ್ನು ನೆನೆದು, ”ಖಂಡಿತವಾದಿ ಲೋಕವಿರೋಧಿ” ಎಂದು ಹೇಳಿದ ದನಿ ನನ್ನ ಕಿವಿಯಲ್ಲಿ ಇನ್ನೂ ಕೇಳಿಸುತ್ತದೆ.

ನಾನು ಕೆಲವು ಸಂದರ್ಭಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲಿಸುವ ನಿಷ್ಠುರ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ನನ್ನ ಆತ್ಮೀಯ ಹಿತೈಷಿಯೊಬ್ಬರು, ”ವಡ್ಡು ಸುಮ್ಮನಿರುವುದಿಲ್ಲ; ವಿನಾಕಾರಣ ಹುಳು ಬಿಟ್ಟುಕೊಳ್ಳುತ್ತಾನೆ..!” ಎಂದು ಇತ್ತೀಚೆಗೆ ಅಚ್ಚರಿ, ಕಾಳಜಿ ವ್ಯಕ್ತಪಡಿಸಿದರು. ಬಹುಶಃ ನನ್ನ ಈ ಅಪ್ರಿಯ ಸ್ವಭಾವ ಅಪ್ಪನಿಂದ ಬಂದ ಬಳುವಳಿ!

ಸಾಂಪ್ರದಾಯಿಕ ಉಳ್ಳಾಗಡ್ಡಿ, ಜೋಳ ಬೆಳೆಯುವ ಸಂದರ್ಭದಲ್ಲಿ ನಾರಿಹಳ್ಳದ ದಂಡೆಯ ಮೇಲೆ ವ್ಯವಸ್ಥಿತವಾಗಿ ಮಾವಿನ ತೋಟ ಕಟ್ಟಿದ್ದ. ಸಾಹಿತ್ಯದ ಓದು, 30 ನಂಬರು ಬೀಡಿ, ಇಸ್ಪೀಟು ಆಟ, ಪಾರಿವಾಳ ಸಾಕುವುದು ಅಪ್ಪನ ಹವ್ಯಾಸಗಳಾಗಿದ್ದವು.

ಒಬ್ಬ ಸಾಮಾನ್ಯ ಕೃಷಿಕನ ಸಹಜ ಬದುಕಿನ ಹಾದಿಯಲ್ಲೂ ಹೆಜ್ಜೆ ಗುರುತುಗಳು!

ಅಪ್ಪ ಆಂಧ್ರದ ಅನಂತಪುರಕ್ಕೆ ಓದಲು ಹೋದಾಗ ಬಳಸಿದ್ದ ಟ್ರಂಕು, ಅಪ್ಪನ ಸಹಿ ಹೊತ್ತ ನೆಹರೂ ಅವರ “ಭಾರತ ದರ್ಶನ” ಕೃತಿ ಇಂದಿಗೂ ನನ್ನೊಂದಿಗಿವೆ. ಅಪ್ಪನ ಟ್ರಂಕಿನಲ್ಲಿ ಈಗ ಅಮ್ಮ ಬಿಟ್ಟುಹೋದ ವಸ್ತುಗಳು, ನೆನಪುಗಳು ತುಂಬಿವೆ!

ಹುಳು ಬಿಟ್ಟುಕೊಳ್ಳುವವರ ಸಂಖ್ಯೆ ಹೆಚ್ಚಾಗಲಿ ಎಂಬ ಆಶಯದೊಂದಿಗೆ!

‍ಲೇಖಕರು nalike

May 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: