ಸದಾಶಿವ್ ಸೊರಟೂರು
ಇಲ್ಲೇಕೆ ಕೂತಿದ್ದೇವೆ ನಾವು
ಈ ಕಡು ಕತ್ತಲಲ್ಲಿ
ನಮ್ಮ ಕಣ್ಣುಗಳನು
ಕಿತ್ತು ಚರ್ಮಕೆ ಅಂಟಿಸಿಕೊಂಡು..
ಚಂದ್ರನೇಕೆ ರಾಜೀನಾಮೆ ಕೊಟ್ಟನೊ
ಗಾಳಿಯೇಕೆ ತುರ್ತು ನಿಗಾ ಘಟಕದಲ್ಲಿದೆಯೊ
ಈ ಚುಕ್ಕಿಗಳೆದ್ದೆನೊ ಸಂಕಟವೊ
ನದಿಯ ಎದೆಗೆ ಯಾರೂ ಇರಿದರೊ..
ಇನ್ಯಾಕೆ ಕೂತಿದ್ದೆವೆ ನಾವು
ಮಾತುಗಳೆ ಇಲ್ಲದಿರುವಾಗ
ನಮ್ಮ ತುಟಿಗಳನು
ಕೈಕಾಲುಗಳಿಗೆ ತೊಡಿಸಿ

ಅಲೆಗಳೇಕೆ ಉಸಿರುಗಟ್ಟಿವೆಯೊ
ಹೂಗಳೇಕೆ ಬೆವರದೆ ಹಲ್ಲು ಕಚ್ಚಿವೆಯೊ
ಮೋಡಗಳೇಕೆ ಅಲೆಯದೆ ಮುಷ್ಕರ
ಹೂಡಿವೆಯೊ
ಹಕ್ಕಿಗಳಿವು ಏನಕೆ ಗೂಡು ತೊರೆದವೊ..
ನಾವು ಕಿತ್ತಿಟ್ಟ ನಮ್ಮ ಒಲವೊಂದು
ನಮ್ಮ ನಡುವೆ ಬಾಲ ಚಿಮ್ಮಿಸಿ
ಒದ್ದಾಡುವಾಗ;
ಇಚ್ಚಾಮರಣಿಗಳಾದ ನಾವೇಕೆ
ಇನ್ನೂ ಬದುಕಿದ್ದೇವೆ ಒಂದು ಬೊಗಸೆ
ನೀರಿಗಾಗಿಯೂ ಅಲೆಯದೆ?
ಒಲವು
ಒಳಗಿಂದ ಹೊರಗೊ..






0 Comments