ರೂಪಾ ಹಾಸನ್
ಆಸ್ಪತ್ರೆಯಲ್ಲೊಂದು ಸತ್ತು ಹುಟ್ಟಿದ ಮಗುವಿಗೆ ಸಂಬಂಧಿಸಿದ ವಿಶೇಷ ಕೇಸ್ ಇದೆ. ತಾಯಿಯನ್ನು ಒಪ್ಪಿಸಿ ಕಂಪ್ಲೆಂಟ್ ಪಡೆದರೆ ದೊಡ್ಡ ಜಾಲವೇ ಹೊರಬೀಳುತ್ತದೆ ಬೇಗ ಬನ್ನಿ ಎಂದು ವೈದ್ಯ ಮಿತ್ರೆಯೊಬ್ಬರು ದೂರವಾಣಿ ಮೂಲಕ ತಿಳಿಸಿದಾಗ ನಾವು ದಢಬಡಿಸಿ ಅಲ್ಲಿಗೆ ಓಡಿದ್ದೆವು…
ಗ್ರಾಮೀಣ ಪ್ರದೇಶದಲ್ಲಿ ಕೂಲಿ ಮಾಡಿ ಬದುಕುವ 32ರ ಹರೆಯದ ಆ ತಾಯಿಗದು ಆರನೇ ಬಸಿರು! ಮೊದಲನೆಯ ಬಸಿರಿಗೆ 3 ತಿಂಗಳೊಳಗೇ ಗರ್ಭಪಾತವಾಗಿತ್ತು. ಮತ್ತೆ ಸಾಲಾಗಿ 3 ಹೆಣ್ಣುಮಕ್ಕಳು. 5ನೆಯದು ಐದನೇ ತಿಂಗಳಲ್ಲಿ ಗರ್ಭಪಾತವಾಗಿತ್ತು. ಮತ್ತೆ ಈಗ ಆರನೆಯದು. 8ನೇ ತಿಂಗಳಲ್ಲೇ ತಾಯಿಗೆ ವಿಪರೀತದ ರಕ್ತಸ್ರಾವವಾಗಿ ಹೆರಿಗೆ ಮಾಡಿಸಿದಾಗ ಗಂಡು ಮಗು ಸತ್ತು ಹುಟ್ಟಿತ್ತು!

ವಿಷಯ ಮಾತ್ರ ಇಷ್ಟು ಸರಳವಾಗೇನಿರಲಿಲ್ಲ! ಆ ತಾಯಿ ಆಸ್ಪತ್ರೆಗೆ ದಾಖಲಾಗುವಾಗ ಬರೆದುಕೊಟ್ಟ ವಿವರಣೆಯಲ್ಲಿ, ‘ಮಗು ಬೇಡವೆನಿಸಿ ಗರ್ಭಪಾತಕ್ಕಾಗಿ ತಾಲ್ಲೂಕು ಆಸ್ಪತ್ರೆಗೆ ಹೋಗಿ ಕೇಳಿದಾಗ ಮಾತ್ರೆ ಕೊಟ್ಟರು. ತೆಗೆದುಕೊಂಡ ನಂತರ ರಕ್ತಸ್ರಾವ ಹೆಚ್ಚಾಗಿ, ಇಲ್ಲಿ ಆಗುವುದಿಲ್ಲವೆಂದು ಜಿಲ್ಲಾಸ್ಪತ್ರೆಗೆ ಕಳಿಸಿದರು’ ಎಂದಿತ್ತು. ಆದರೆ ವೈದ್ಯ ಮಿತ್ರೆ ಅನುಮಾನದಿಂದ ಕ್ರಾಸ್ ಚೆಕಿಂಗ್ ಮಾಡಿದಾಗ ತಿಳಿದು ಬಂದಿದ್ದು……
ಆ ಮಹಿಳೆ ಸ್ಕ್ಯಾಂನಿಗ್ ಮೂಲಕ ಲಿಂಗ ಪತ್ತೆ ಮಾಡಿಸಿಕೊಂಡಿದ್ದು, ಸ್ಕ್ಯಾಂನಿಂಗ್ ಸೆಂಟರ್ನವರು ಗಂಡು ಮಗುವಿಗೆ ಬದಲಾಗಿ ಹೆಣ್ಣೆಂದು ತಪ್ಪಾಗಿ ತಿಳಿಸಿದ್ದರಿಂದ ಇವಳು 7ನೇ ತಿಂಗಳಿನಲ್ಲಿ ಗರ್ಭಪಾತಕ್ಕೆ ಪ್ರಯತ್ನಿಸಿದ್ದಳು! ವೈದ್ಯರು ಗರ್ಭಪಾತದ ಮಾತ್ರೆಗಳನ್ನು ಕೊಟ್ಟಿದ್ದರು ಎಂದರೆ ಸರಿಯೇನೋ! ಆದರೆ ವಿಪರೀತ ರಕ್ತಸ್ರಾವ ಪ್ರಾರಂಭವಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿ, ವೈದ್ಯರು ಹೆರಿಗೆ ಮಾಡಿಸಿದಾಗ ಹೊರಬಂದಿದ್ದು ಗಂಡು ಶಿಶುವಿನ ಶವ! ಹಿಂದಿನ ಬಸಿರಿನಲ್ಲಿ 5 ತಿಂಗಳಿಗೆ ಗರ್ಭಪಾತವಾಗಿದ್ದು ಕೂಡ ಹೊಟ್ಟೆಯಲ್ಲಿ ಹೆಣ್ಣು ಮಗುವಿತ್ತೆಂದೇ!
ಆ ಮಹಿಳೆಗೆ ಇದು ತಪ್ಪೆಂದು ಎಷ್ಟೆಲ್ಲಾ ತಿಳಿ ಹೇಳಲು ಪ್ರಯತ್ನಿಸಿದ್ದೆವು….. ಲಿಂಗ ಪತ್ತೆ ಮಾಡಿದ, ತಪ್ಪಾಗಿ ಲಿಂಗ ಪತ್ತೆ ಮಾಡಿದ ಕುರಿತು ಸ್ಕ್ಯಾಂನಿಂಗ್ ಸೆಂಟರ್ ವಿರುದ್ಧವಾಗಿ ಒಂದು ದೂರು ಪಡೆಯಲು ಎಷ್ಟೆಲ್ಲಾ ಹರ ಸಾಹಸ ಮಾಡಿದ್ದೆವು……ಈಗಾಗಲೇ ಅದೆಷ್ಟು ಕಂದಮ್ಮಗಳ ಕೊಲೆಗೆ ಕಾರಣರಾಗಿದ್ದಾರೋ, ಮುಂದೆ ಇನ್ನೆಷ್ಟು ಇಂತಹ ಕೊಲೆಮಾಡುತ್ತಾರೋ…. ಧೈರ್ಯ ಮಾಡಿ ದೂರು ಕೊಟ್ಟರೆ ನಾವು ಜೊತೆಗಿರುತ್ತೇವೆ, ನಿನಗಾದ ಅನ್ಯಾಯ ಬೇರೆಯವರಿಗಾಗಬಾರದಲ್ಲವೇ? ಎಂದು ಇನ್ನಿಲ್ಲದಂತೆ ತಿಳಿಹೇಳಲು ಪ್ರಯತ್ನಿಸಿದ್ದೆವು, ಆದರೆ ಎಲ್ಲವೂ ವ್ಯರ್ಥವಾಗಿತ್ತು…… ಕಂದಮ್ಮಗಳ ಸಾವಿಗೆ ಇಲ್ಲಿ ಯಾವುದೇ ಶಿಕ್ಷೆಯೂ ಇರಲಿಲ್ಲ. ಏಕೆಂದರೆ ಸಾಕ್ಷಿಗಳಿಲ್ಲವಲ್ಲ!
ಹೆಣ್ಣೆಂಬ ಒಂದೇ ಕಾರಣಕ್ಕೆ ಗರ್ಭದಲ್ಲೇ ಹಲ್ಲೆಗೊಳಗಾಗುತ್ತಿರುವ ಕಂದಮ್ಮಗಳ ಆರ್ತನಾದ ನಮಗೇಕೆ ಕೇಳುತ್ತಿಲ್ಲಾ? ತಾಯಿಯೇ ನಿರ್ದಯವಾಗಿ ತನ್ನದೇ ಕುಲವನ್ನು ನಿದರ್ಾಕ್ಷಿಣ್ಯವಾಗಿ ಕೊಂದು ಬಿಸುಟುವಷ್ಟು ಬ್ರೈನ್ ವಾಷ್ ಮಾಡುತ್ತಿರುವ ನೀಚತನಕ್ಕೆ ಯಾರಿಗೆ ಶಿಕ್ಷೆ ಕೊಡೋಣ? ಅರಿವಿಲ್ಲದೇ ಇಂತಹ ಅಪರಾಧದಲ್ಲಿ ಭಾಗಿಯಾಗುತ್ತಿರುವ ತಾಯಿಗೇ? ಒತ್ತಡ ಹೇರುತ್ತಿರುವ ಕುಟುಂಬಕ್ಕೇ? ಇಂತಹದೊಂದು ಅಮಾನುಷ ಮನಸ್ಥಿತಿಯನ್ನು ನಿಮರ್ಾಣ ಮಾಡಿರುವ ಸಮಾಜಕ್ಕೇ? ವರ್ಷಕ್ಕೆ ಅಂದಾಜು 6ರಿಂದ10 ಲಕ್ಷಗಳಷ್ಟು ಹೆಣ್ಣು ಭ್ರೂಣಗಳನ್ನು ಅಂತಃಕರಣವಿಲ್ಲದೇ ಹೊಸಕಿ ಹಾಕುತ್ತಿರುವ, ನಾವು ದೈವ ಸ್ವರೂಪಿಗಳೆಂದು ನಂಬುವ ವೈದ್ಯರಿಗೇ? ಇಂತಹ ಅಗಾಧ ಪ್ರಮಾಣದ ಕ್ರೌರ್ಯ ಹೆಣ್ಣು ಕಂದಮ್ಮಗಳ ಮೇಲೆ ಹುಟ್ಟುವ ಮೊದಲೇ ನಡೆಯುತ್ತಿದ್ದರೂ ಗಂಭೀರವಾಗಿ ಪರಿಗಣಿಸದೇ, ಎಚ್ಚೆತ್ತುಕೊಂಡಿಲ್ಲದ ಸಕರ್ಾರಕ್ಕೇ? ಯಾರಿಗೆ ಶಿಕ್ಷೆ ಕೊಡುವುದು? ಶಿಕ್ಷೆ ಕೊಡುವವರಾರು?
ಇಂದು ಮತ್ತೊಂದು ಮಕ್ಕಳ ದಿನಾಚರಣೆ! ಈ ಮೂಲಕ, ನಾವು ಕೊಲ್ಲುತ್ತಿರುವ ಲಕ್ಷಾಂತರ ಕಂದಮ್ಮಗಳಿಗೊಂದು ತಣ್ಣನೆಯ ಶ್ರದ್ಧಾಂಜಲಿಯನ್ನಾದರೂ ಅಪರ್ಿಸಬೇಕೆನ್ನಿಸುತ್ತಿದೆ. ದೇವರೆ ನಮ್ಮನ್ನು ಕ್ಷಮಿಸು!






ಮಕ್ಕಳ ದಿನಾಚರಣೆಯ ಸಂಭ್ರಮವನ್ನು ಅನುಭವಿಸುವುದಿರಲಿ, ಹುಟ್ಟುವ ಅವಕಾಶದಿಂದಲೆ ವಂಚಿತವಾಗುವ ಜೀವಗಳ ಬಗ್ಗೆ ನಮ್ಮ
ಅಂತರಾತ್ಮವನ್ನು ಎಚ್ಚರಿಸಿದ್ದಕ್ಕಾಗಿ ರೂಪಾ ಅವರಿಗೆ ಧನ್ಯವಾದಗಳು. ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಅರಿವನ್ನು ಪ್ರಬಲಗೊಳಿಸುವ ಕಾರ್ಯಕ್ರಮಗಳನ್ನು ಇನ್ನಷ್ಟು ತೀವ್ರವಾಗಿ ಹಮ್ಮಿಕೊಳ್ಳಬೇಕು.
ಮನಸು ತಲ್ಲಣಿಸಿ ಹೋಯ್ತು ಅಕ್ಕ…
ಮಮತ
ಹುಟ್ಟುವ ಮುನ್ನವೇ ಸಾವನ್ನು ಎದುರಿಸುವ ಹೆಣ್ಣು ಮಕ್ಕಳು ಹುಟ್ಟಿದ ನಂತರವಾದರೂ ಸುಖವಾಗಿ ಬಾಳುತ್ತಾರೆ ಎಂದು ಭಾವಿಸುವುದೂ ಇಂದಿನ ಪರಿಸ್ಥಿತಿಯಲ್ಲಿ ದುಸ್ತರವಾಗಿದೆ. ಅತ್ಯಾಚಾರ ಕೇವಲ ಜೀವಂತ ದೇಹಗಳ ಮೇಲೆ ನಡೆಯುತ್ತಿಲ್ಲ. ಇನ್ನೂ ಜೀವ ಸೃಷ್ಟಿಯಾಗುವ ಮುನ್ನವೇ ಹೆಣ್ಣು ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ. ಮಕ್ಕಳ ದಿನ ತಾಯಂದಿರ ದಿನ ಮಹಿಳೆಯರ ದಿನ ಆಚರಿಸುವ ಈ ದೇಶದ ಪ್ರಜ್ಞಾವಂತ ಪ್ರಜೆಗಳಿಗೆ, ವಿಶೇಷವಾಗಿ ಪುರುಷ ಸಮಾಜಕ್ಕೆ ಈ ದಿನಾಚರಣೆಗಳ ನೇಪಥ್ಯದಲ್ಲಿ ನಡೆಯುತ್ತಿರುವ ಮಾರಣಾಂತಿಕ ಅತ್ಯಾಚಾರ-ಹತ್ಯಾಚಾರಗಳು ಕಣ್ಣಿಗೆ ಕಾಣುತ್ತಿಲ್ಲವೇಕೆ ? ನಿರ್ಭಯ, ಸೌಜನ್ಯ, ಸವಿತಾ ಇನ್ನೂ ಎಷ್ಟೋ ಜೀವಗಳು ಪುರುಷ ವಿಕೃತಿಗಳಿಗೆ ಬಲಿಯಾಗಿವೆ. ಭಾರತ ಗೆಲ್ಲಿಸಲು ಹೊರಟಿರುವ ನಮೋವಾದಿಗಳಿಗೆ ಇದು ಸಹಜ ಪ್ರಕ್ರಿಯೆಯಾಗಿ ಕಂಡುಬರುತ್ತಿದೆ. ಇತರ ರಾಜಕೀಯ ಪಕ್ಷಗಳಿಗೆ ಇದು ಮಹಿಳೆಯರ ಮತಗಳಿಕೆಯ ಚಿಮ್ಮುಹಲಗೆಗಳಾಗಿವೆ. ಮಾನವ ಸಮಾಜವನ್ನು ಕಾನೂನು ಕಟ್ಟಳೆಗಳ ಮೂಲಕ ತಿದ್ದುವ ಸಾಹಸದಲ್ಲಿ ತೊಡಗಿರುವ ಆಳ್ವಿಕರಿಗೆ ರೂಪಾ ಅವರ ಲೇಖನ ಕಣ್ತೆರೆಸಿದರೆ ಸಾರ್ಥಕ. ವಿಪರ್ಯಾಸವೆಂದರೆ ನಮ್ಮ ಆಳ್ವಿಕರು ಅಂಧರಾಗಿದ್ದಾರೆ.ಸಮಾಜ ಕುರುಡಾಗಿದೆ. ಪ್ರಜ್ಞೆ ಇಲ್ಲದ ಅರೆ ಜೀವಗಳಂತೆ ನಾಗರಿಕ ಸಮಾಜ ತೆವಳುತ್ತಿದೆ. ಅತ್ಯಾಚಾರಕ್ಕೊಳಗಾದ ಮೂರು ವರ್ಷದ ಹಸುಳೆಗೆ ಸಾಂತ್ವನ ಹೇಳುವ ಸ್ಥೈರ್ಯ,ಆತ್ಮವಿಶ್ವಾಸ, ನೈತಿಕತೆ ನಮ್ಮಲ್ಲಿದೆಯೇ ಎಂದು ಪ್ರಶ್ನಿಸಿಕೊಂಡಾಗ ಮಾತ್ರ ಸತ್ತ ಪ್ರಜ್ಞೆ ಜಾಗೃತವಾಗಲು ಸಾಧ್ಯ.
ನಾ ದಿವಾಕರ
an effective wright up………..
🙁