ಅಶೋಕ್ ಕುಮಾರ್ ಪಾಂಡೆ

ಕನ್ನಡ ರೂಪಾಂತರ: ಪ್ರೀತಿ ನಾಗರಾಜ
(ಗುಜರಾತಿನ ಧೈರ್ಯವಂತ ದಲಿತ ಕಾರ್ಯಕರ್ತರಿಗೆ ಸಮರ್ಪಿತ)
ಬದುಕಿರುವ ಹಸು ನಿನ್ನದು
ಎಲ್ಲಾ ಹಾಲೂ ನಿನ್ನದೇ
ದೇವಿ ಅಲ್ಲವೇನು ಅದು?
ತಾಯಿ ಸಮಾನ ಮತ್ತೆ!
ಗೋರಕ್ಷೆಯ ಘೋಷಣೆ ಕೂಗು!
ರಸ್ತೆ ರಸ್ತೆ ಅಲೆಯುತ್ತದೆ ಗಂಡು ಎಳೆಗರು;
ಹೆಣ್ಣು ಕರುವಂತೂ ನಿನ್ನದೇ ಮತ್ತೆ!
ಕುಡುಗೋಲು, ಕೊಕ್ಕೆ ಎಳೆಯುತ್ತೇವೆ ನಾವು
ನಿನ್ನ ಕೈಯಲ್ಲಿ ಲಾಠಿ, ಗುಂಡು!
ಬೆವರು ರಕ್ತ ಹರಿದದ್ದು ನಮ್ಮದು
ನೇಗಿಲು ನೊಗ ನಿನ್ನದು;
ದಕ್ಷಿಣೆ ದಾನ ನೀ ತಿನ್ನು
ಸಾಲದ ಸುಳಿಯಲ್ಲಿ ಬೇಯುತ್ತೇವೆ ನಾವು
ಸೀತೆ, ರಾಮ ನಿನ್ನವರು
ಹೊಲಸು ನಾರುವ ಕೆಲಸ ನಮ್ಮದು!
ಹುಣ್ಣು ಸೋರುತ್ತದೆ ನಮ್ಮ ಮೈಯಲ್ಲಿ
ನಿನ್ನ ಕೈ ಮಾತ್ರ ಅದೆಷ್ಟು ಮೃದು!
ಕೋರ್ಟು ಕಛೇರಿಯಲಿ ನಿನ್ನ ಕಾಲುಗಳು
ಫ್ಯಾಕ್ಟರಿಯಲ್ಲಿ ನಡೆಯುವುದು ನಿನ್ನ ದರ್ಪ
ದೇವಳ, ಮಸೀದಿ, ಪಂಡಿತ, ಪುರೋಹಿತ
ಎಲ್ಲಾ ಗರ್ವಗಳೂ ನಿನ್ನವೇನೇ…
ತಗೋ ಮತ್ತೆ, ಈ ಹೆಣವೂ ನಿನ್ನದೇ
ಸತ್ತ ನಿನ್ನ ಪೂಜನೀಯ ತಾಯಿಯಲ್ಲವೇ?
ಹೊತ್ತುಕೊಂಡು ಹೋಗು, ಪೂಜೆ ಸಲ್ಲಿಸು
ಖಂಡ, ಮೂಳೆ ಎಲ್ಲಾ ನಿನ್ನದೇ ಮತ್ತೆ!
ಇನ್ನೇನಿದ್ದರೂ ನಾವು ನಡೆಸುವೆವು ಪೆನ್ನನ್ನು!
ಸಂಸತ್ತಿನವರೆಗೂ ಬರುತ್ತೇವೆ ಇನ್ನು!
ಮಾಡಿಕೋ ನಿನ್ನ ಧರ್ಮದ ರಕ್ಷೆ!
ನಾವು ಕಾಪಾಡುವೆವು ಇಡೀ ದೇಶವನ್ನು
ನಿನ್ನ ಅಮಾನುಷತೆಗೆ ಕಡಿವಾಣ ಹಾಕುವೆವು
ಪ್ರತೀಕಾರ ನಮ್ಮ ದಾರಿ ಇಂದು!
ಭೀಮನ ಸಂದೇಶ ಹೊತ್ತಿದ್ದೇವೆ
ಈ ಹಿಂದೂಸ್ತಾನ ನಮ್ಮದೇ ಎಂದೂ!!





0 Comments