ಜಿ ಪಿ ಬಸವರಾಜು
ನಾಳೆ, ಮತ್ತೆ ನಾಳೆ, ಮತ್ತೂ ನಾಳೆ*
ತಿರುಗಿಸು ನಾಳೆಯ ಹಾಳೆಗಳ
ಕೊನೆಯ ಪುಟ ತಿಳಿಯದು ಯಾರಿಗೂ
ದಣಿದರೂ ತಿರುಗಿಸಬೇಕು ಹಾಳೆಯ
ನಾಳೆ ನಾಳೆಯ, ತಿಳಿಯದ ಹಾಳೆಯ
ರಂಗದ ಮೇಲೆ ನಿಂತವರೊ
ರಂಗದ ಕೆಳಗೆ ನಿಂತವರೊ
ರಂಗದಿಂದ ದೂರ ಸರಿದವರೊ
ಅಂತೂ ಮುಗಿಸಬೇಕು ಆಟ
ವೇಷ ಕಳಚಿದ ಮೇಲೆ ಯಾರೂ
ಕ್ಯಾರೇ ಎನ್ನದಿದ್ದರೂ ಮುಗಿಸಬೇಕು
ಎಣ್ಣೆ ತೀರಿದ ಸೊಡರು ಆರುತಿದೆ

೨
ನಮ್ಮದೊ ತೊಗಲಿಗಂಟಿದ ಬಣ್ಣ
ತೊಳೆಯಲಾಗದು, ಅಳಿಸಲಾಗದು
ನಮ್ಮ ಬಣ್ಣವ ಹೀಗಳೆದವರು, ವೇಷ
ಕಳಚಿಟ್ಟಿದ್ದಾರೆ ಆಟ ಮುಗಿಯಿತೆಂದು
ದೀಪ ಆರುವ ಭಯ ನಮಗಿಲ್ಲ
ಕತ್ತಲಲ್ಲೇ ಕಣ್ಬಿಟ್ಟು, ಕತ್ತಲಲ್ಲೇ
ನಡೆದವರು ನಾವು, ಕತ್ತಲೆಯು
ನಮ್ಮಪಮಾನಗಳ ಮುಚ್ಚುವ ಹೊದಿಕೆ
ಪರದೆ ಬೀಳುವುದೆಂಬ ಭಯವೂ
ಇಲ್ಲ ನಮಗೆ, ಪರದೆ ಎದದ್ದು ಬಿದ್ದದ್ದು
ತಿಳಿಯುವುದಿಲ್ಲ ನಮಗೆ, ಯಾವ
ಪರದೆಯೂ ಇಲ್ಲದ ಬಟಾಬಯಲಲ್ಲಿ
ಬೆತ್ತಲೆ ಕುಣಿದು ದಣಿದವರು ನಾವು
ಚಂಡೆ ಬಡಿತದ ಸದ್ದು ಈಗಲೂ
ಕೇಳುತ್ತಿದೆ ನಮಗೆ, ನಮ್ಮ ಎದೆ-
ಯಾಳಗಳಿಂದ, ಅದರ ಗತಿ, ಲಯ,
ಏರಿಳಿತಗಳೇ ನಡೆಸುವವು ನಮ್ಮನ್ನು
ನಡೆಯಬೇಕೆಷ್ಟು ದೂರ ನಾವು?
ಯಾರೂ ಹೇಳಲಿಲ್ಲ ಕೇಳಲಿಲ್ಲ
ನಾವು ನಡೆದಷ್ಟು ನಮ್ಮ ದೂರ
ನಾವು ನಡೆದಷ್ಟು ನಮ್ಮ ಗುರಿ
ಇಂದು ನಿನ್ನೆ ನಾಳೆಗಳ ಲೆಕ್ಕ
ನಮಗಿಲ್ಲ, ನಮ್ಮದು ನಿತ್ಯದ ಆಟ
ಕಾಲಾಂತರದ ಆಟ, ನಾಳೆಯನು
ಕಾಯುವುದಿಲ್ಲ ನಾವು, ನಮ್ಮ ಆಟ
ಈ ದಿನವೇ, ಈಗಲೇ, ಈ ಕ್ಷಣವೇ
ಗರಿಬಿಚ್ಚಿದ ನವಿಲು ಕುಣಿಯುವುದು
ಕಾಲನೊದ್ದು, ಕಾಲ ಮರೆತು, ದಣಿ-
ವಿಲ್ಲ ಅದಕೆ, ಅದರ ಉಮೇದಿಗೆ
— —

* ಷೇಕ್ಸ್ಪಿಯರ್‌ನ ಮ್ಯಾಕ್‌ಬೆತ್ ನಾಟಕದಲ್ಲಿ ಬರುವ ಮಾತು-
To-morrow, and To-morrow, and To-morrow,…
ಈಗ ನಮ್ಮೆಲ್ಲದ ಧ್ಯಾನವೂ ನಾಳೆಯೇ.
ನಾಳೆ..
ನಿಮಗೆ ಇವೂ ಇಷ್ಟವಾಗಬಹುದು…





0 Comments