ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಳೆಯ ಚಿಂತೆ ಬಿಟ್ಟವರಾರು..

ಊಸರವಳ್ಳಿ ಮತ್ತು ನೀರಿನ ನಶೆ

ವಿಶಾಲ್ ಮ್ಯಾಸರ್

ಏನಾದರೂ ಕುಡಿದಿರಬೇಕಂತೆ
ಯಾವಾಗಲೂ
ಪಾಪದ ಹೂವಿನಲ್ಲಿ
ಪುಣ್ಯಾತ್ಮ ಒಣಗಿದ
ದಳಗಳನ್ನು ಮುಚ್ಚಿಟ್ಟಂತೆ

ಏನನ್ನು ಸಂಗ್ರಹಿಸಬೇಡ
ಇಂದಿನದು ಇಂದಿಗೆಂದು!
ಪಿಟಕದಲ್ಲಿ ಸಮಣ ಹೇಳಿದಂತೆ ಬರೆದರು ಎನ್ನುವುದು ನಂಬಿಕೆ

ಬೆಟ್ಟದಾ ಮೇಲೊಂದು ಮನೆಯ ಮಾಡಿ ಎನ್ನುವ ಸುರುಳಿಯ ರಾಗದೊಂದಿಗೆ ಎಚ್ಚರಗೊಂಡು
ಓದುತ್ತಾ ಕಳಕೊಂಡರಾಯಿತು
ಲೋಕದ ಡೊಂಕ

ಅಲ್ಲೊಂದು ಮನುಷ್ಯ
ಅಲ್ಲಪ್ಪ ಮನುಷ್ಯನಂತಿರುವ ಆಕಾರ ಅವನಂತೆ ನಾಜೂಕಾಗಿ ನಡೆಯುವ ಊಸರವಳ್ಳಿ ನಡೆಯುತ್ತಲೇ ಇತ್ತು ಒಂದೊಂದೆಜ್ಜೆ ಚಿಕ್ಕಪುಟ್ಟ ಹೆಜ್ಜೆ

ಅದು ಕುಡಿದಿತ್ತೆ
ಅಥವಾ ನಾಳೆಗೆ ಕೂಡಿಡುತ್ತಿತ್ತೆ
ಬಣ್ಣ ಬಣ್ಣಕ್ಕೆ ಹಾರುವ
ಕನಸಹೊಂದಿತ್ತೆ

ಕುಡಿದಾಗ ನಿಜದ ಬಣ್ಣ ಹೊರಬೀಳುತ್ತೆ
ಅನ್ನುವ ಅಂಬೋಣ ಕುಡಿಯದ
ನಿಚ್ಚಳ ವ್ಯಕ್ತಿಯದ್ದು

ನಾಳೆಗೆ ಕೂಡಿಡದೆ
ಇರುವವನು ಕುಡುಕನೊಬ್ಬನೆ
ಪ್ರೀತಿಯ ಕುಡಿದರು
ನೋವ ಕುಡಿದರು
ನಗುವ ಕುಡಿದರು
ಒಮ್ಮೆ ಹರಿದ ನೀರು ಇನ್ನೊಮ್ಮೆ ಹರಿಯದು ಜಂಗಮ ಸ್ವರೂಪಿ ಲಿಂಗದ ಮೇಲಿನ ತಟ ತಟ ಹನಿಯಂತೆ ಇವೆಲ್ಲ

ನಡುವೆ ಊಸರವಳ್ಳಿ ಅಂತ ಕೋಟ್ ಮಾಡಿದರಲ್ಲ ಸ್ವಾಮಿ
ಅದು ಮನುಷ್ಯನಿಗೆ ಸಮವೇ?
ಮನುಷ್ಯನಷ್ಟು ತೃಣವೇ..?

ವೇಣಿನಾದವ ಹಿಡಿದ ದನಗಳ
ಇಲ್ಲಿ ಯಾರು ಅನ್ನುವ ಅಭಿಪ್ರಾಯ ಇದ್ದರೂ
ಅದ್ಯಾವುದೋ ನಾದ ಒಳಗೊಂದು ಇದೆಯಲ್ಲ ಅದೇ ನಡೆಸುತ್ತದೆ
ಹೆಜ್ಜೆಯಮೇಲೊಂದು ಹೆಜ್ಜೆ

ನಾದಕ್ಕೆ ನಾಳಿನ ಚಿಂತೆ
ಇಲ್ಲವೇ ಇಲ್ಲ
ನಶೆಗೆ ಇಂದಿನ ಪರಿವೇ
ಇಲ್ಲವೇ ಇಲ್ಲ
ಬಣ್ಣ ಕೇವಲ ಬದುಕುವ ನೆಪವಂತೆ
ಅಯ್ಯಾ
ಮುಂದಿನ ಬಣ್ಣಕ್ಕೆ ನೆಗೆಯುವ ಗುರಿಯೊಂದೇ

ಇಲ್ಲಿ ಎಲ್ಲಾ ಪದಗಳ ಅಚ್ಚಿಗೆ
ದಾಖಲಾಗುವ ಇರಾದೆ ಇರುತ್ತದೆ ಅಂತ ಹೇಳಿದರು
ನೀರಿನಷ್ಟು ನಾಳೆಯ ಚಿಂತೆ ಬಿಟ್ಟವರಾರು
ನೀರು ಕುಡಿದಾಗ ಹಿಡಿಯುವ
ನಶೆ ಅದೆಂತದ್ದು
ಅಂದರೆ
ಅಂದರೆ
ಈಗ ಅದು ಮರೆತು ಹೋಗಿದೆ ಅನ್ನುವಷ್ಟು ಮಂಪರು ಸಾಕಲ್ಲವೇ
ಇನ್ನು ಮುನ್ನಾಗಲಿ ಬಣ್ಣದೆಡೆಗಿನ
ಸಣ್ಣ ನಡಿಗೆ

‍ಲೇಖಕರು Admin

6 October, 2025

1 Comment

  1. ಕವಿತಾ ವಿರೂಪಾಕ್ಷ

    ಸೂಪರ್ ಬ್ರದರ್…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading