
ಪಂಡಿತಾರಾಧ್ಯ
ಇತ್ತೀಚೆಗೆ ನನ್ನ ಗುರುಗಳಾದ ಟಿ.ವಿ. ವೆಂಕಟಾಚಲಶಾಸ್ತ್ರಿಗಳು ವಿಜ್ಞಾನ ಲೇಖಕ ಎನ್.ಎಸ್. ವೀರಪ್ಪನವರ ನಿಧನದ ದಿನಾಂಕ ತಿಳಿಯಬಯಸಿದ್ದರು. ನನ್ನ ಬಳಿ ಅಗತ್ಯ ಮಾಹಿತಿ ಸಿಗಲಿಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ವೀರಪ್ಪನವರು ಶಿಕ್ಷಣ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಕನ್ನಡ ವಿಶ್ವಕೋಶದ ಸಂಪಾದಕರಲ್ಲೊಬ್ಬರಾಗಿದ್ದ ಅವರು ನಮ್ಮ ಸಂಸ್ಥೆಗೆ ಆಗಾಗ ಬರುತ್ತಿದ್ದರು.
ಚಾರ್ಲ್ಸ್ ಡಾರ್ವಿನ್ ಬಗ್ಗೆ ಅವರು ಬರೆದ ಪುಸ್ತಕವನ್ನು ಓದಿದ್ದೆ.ಎತ್ತರವಾಗಿದ್ದ , ಸಣಕಲು ಶರೀರದ ಹೊಳಪುಗಣ್ಣಿನ ಅವರು ಈಗ ಇಲ್ಲ. ಮೈಸೂರಿನ ರುದ್ರಭೂಮಿಯಲ್ಲಿ ಅವರ ಸಮಾಧಿಯನ್ನು ನೋಡಿರಬಹುದೆಂಬ ನೆನಪನ್ನು ಪರೀಕ್ಷಿಸಲು ರುದ್ರಭೂಮಿಗೆ ಹೋದೆ. ವೀರಪ್ಪ ಎಂಬ ಹೆಸರಿನ ಸಮಾಧಿಗಳು ಎಲ್ಲೆಲ್ಲಿವೆ ಎಂದು ತಿಳಿಯಲು ಸ್ಮಶಾನ ನಿರ್ವಾಹಕರಾದ ಮಹಿಳೆಯನ್ನು ವಿಚಾರಿಸಿದೆ. ಆಕೆ ಅಂದು ಬರಲಿರುವ ದೇಹವನ್ನು ಹೂಳಲು ಗುಂಡಿಯೊಂದನ್ನು ತೋಡುತ್ತಿದ್ದರು.
ವೀರಪ್ಪ ಹೆಸರಿನ ಸಮಾಧಿ ಎಲ್ಲೆಲ್ಲಿ ಇವೆ ನೆನಪಿಲ್ಲವೆಂದೂ ಯಾವ ಕ್ರಮದಲ್ಲಿಯೂ ಇಲ್ಲದ ಸಮಾಧಿಗಳ ನಡುವೆ ನಾನೇ ಹುಡುಕಿಕೊಳ್ಳಬಹುದೆಂದೂ ಅವರು ಹೇಳಿದರು. ಸ್ಮಶಾನದಲ್ಲಿ ಸಮಾಧಿ ಬರಹಗಳನ್ನು ಓದುವುದು ನನಗೆ ಬಾಲ್ಯದಿಂದ ಇರುವ ಹವ್ಯಾಸ. ೫೦ರ ದಶಕದಲ್ಲಿ ಬಿಡುವಾದಾಗಲೆಲ್ಲ ನಮ್ಮ ಮನೆಯ ಸುತ್ತಮುತ್ತ ಇದ್ದ ಸಮಾಧಿಗಳ ಬರಹಗಳನ್ನು ಓದುತ್ತಿದ್ದೆ. ಹೆಚ್ಚಿನ ಸಮಾಧಿಗಳ ಬರಹಗಳು ಕನ್ನಡದಲ್ಲಿಯೇ ಇವೆ. ಅಲ್ಲೊಂದು ಇಲ್ಲೊಂದು ಮಾತ್ರ ಇಂಗ್ಲಿಷ್ ಬರಹಗಳಿವೆ. ಈಗಲೂ ಅಷ್ಟೆ. ಆಶ್ಚರ್ಯವೆಂದರೆ ಎನ್.ಎಸ್. ಇರಲಿ, ವೀರಪ್ಪ ಎಂಬ ಹೆಸರಿನ ಒಂದೂ ಸಮಾಧಿಯೂ ಅಲ್ಲಿ ಇಲ್ಲ!
ಯಾವುವಾದರೂ ಸಮಾಧಿಗಳನ್ನು ನಾಶ ಮಾಡಿರಬಹುದೆ? ಗುಂಡಿ ತೋಡುತ್ತಿದ್ದ ನಿರ್ವಾಹಕರನ್ನು ಮತ್ತೆ ಕೇಳಿದೆ. ಯಾವ ಸಮಾಧಿಯೂ ನಾಶವಾಗಿಲ್ಲ. ಮರದ ಪಕ್ಕ ಕಾಂಪೌಂಡ್ ಹಾಕುವಾಗ ಮೂರು ಸಮಾಧಿಗಳು ಮುಕ್ಕಾದವು ಅಷ್ಟೆ. ಎಂದರು. ಅವರ ಜೊತೆ ಮಾತು ಮುಂದುವರೆಸಿದೆ. ಸಮಾಧಿಗಳ ಮೇಲೆ ಸಿಮೆಂಟಿನ ಕಟ್ಟೆ ಕಟ್ಟಿದರೆ ನಾಳೆ ಸಾಯುವವರನ್ನು ಎಲ್ಲಿ ಹೂಳುವುದು ಎಂದು ಕೇಳಿದೆ. ಅದಕ್ಕೆ ಅವರು ಹೇಳಿದ್ದು : ಬರುವಾಗ ಇಟ್ಟಿಗೆ ಸಿಮೆಂಟ್ ತನ್ನಿ ಎಂದು ಹೇಳಿ ಇರುವ ಸಮಾಧಿಗಳ ಮೇಲೆ ಇನ್ನೊಂದು ಮಹಡಿ ಕಟ್ಟುವುದು ! ಎಂದರು. ಅವರ ಹಾಸ್ಯ ಪ್ರಜ್ಞೆಗೆ ತಲೆದೂಗಿದೆ.
ಸ್ಮಶಾನದಿಂದ ಹೊರಡುವಾಗ ಅವರನ್ನು ಬೀಳ್ಕೊಳ್ಳಲು ‘ಬರುತ್ತೇನೆ’ ಎಂದು ಹೇಳುವಂತಿಲ್ಲ! ಎಂಬುದನ್ನು ಅವರಿಗೆ ನೆನಪಿಸಿ ಬರುತ್ತೇನೆ ಎಂದು ಹೇಳುವುದಿಲ್ಲ ಎಂದೆ. ಅವರು, ಅವೆಲ್ಲ ಮನೆಗಳಿಗೆ ಅನ್ವಯಿಸುತ್ತದೆ. ಇಲ್ಲಿ ಅಂಥ ನಿರ್ಬಂಧಗಳಿಲ್ಲ ಎಂದರು. ‘ನಾನು ನಾಳೆಯಾದರೂ ಇಲ್ಲಿಗೆ ಬರುವ ಸಂಭವವಿಲ್ಲ. ನನ್ನ ದೇಹವನ್ನು ವೈದ್ಯಕೀಯ ಕಾಲೇಜಿಗೆ ಕೊಟ್ಟಿದ್ದೇನೆ’ ಎಂದು ವಿವರಣೆ ನೀಡಿದೆ. ಅದಕ್ಕೆ ಅವರು ನೀಡಿದ ಉತ್ತರ ನನ್ನನ್ನು ಚಕಿತಗೊಳಿಸಿತು. ತಾನೂ ತನ್ನ ಗಂಡ, ಮಕ್ಕಳೂ ತಮ್ಮ ದೇಹಗಳನ್ನೂ ವೈದ್ಯಕೀಯ ಕಾಲೇಜಿಗೆ ಕೊಟ್ಟಿರುವುದಾಗಿ ಅವರು ಹೇಳಿದರು. ‘ಹಾಗಾದರೆ ‘ಅಲ್ಲಿ’ (ವೈದ್ಯಕೀಯ ಕಾಲೇಜಿನಲ್ಲಿ!) ಭೇಟಿಯಾಗೋಣ!’ ಎಂದು ಅವರಿಗೆ ನಮಸ್ಕಾರ ಹೇಳಿ ಮನೆಗೆ ಬಂದೆ. ಅವರ ಹೆಸರು ನೀಲಮ್ಮ.
ಗುರುಗಳಿಗೆ ಕರೆಮಾಡಿ, ವೀರಪ್ಪನವರ ಸಮಾಧಿ ಬರಹ ಹುಡುಕಿದ ವಿಷಯ ತಿಳಿಸಿ ಅವರ ನಿಧನದ ದಿನಾಂಕ ಸಿಕ್ಕಲಿಲ್ಲವೆಂದು ಹೇಳಿದೆ. ಅವರು ‘ಪರವಾಗಿಲ್ಲ ಬಿಡು ಎಂದು ಹೇಳಿ, ವೀರಪ್ಪನವರು ಕನಕಪುರದ ಸಮೀಪ ಸಾತನೂರಿನವರು. ೧೯೮೬ ಮೇ ೮ರಂದು ತಮ್ಮ ಊರಿನಲ್ಲಿಯೇ ನಿಧನರಾಗಿ ಅಲ್ಲಿಯೇ ಸಮಾಧಿಯಾದರೆಂದು ಆ ಊರಿನವರೇ ಬರೆದ ಲೇಖನ ಸಿಕ್ಕ ವಿಷಯ ತಿಳಿಸಿದರು. ಕನಕಪುರದವರೇ ಆದ ಗುರುಗಳು ಕನಕಪುರ ತಾಲೂಕಿನ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದಾಗ ಪ್ರಕಟವಾಗಿರುವ ನೆನಪಿನ ಸಂಚಿಕೆ ‘ಕನಕ ಸಿರಿ’ಯಲ್ಲಿ ಆ ಲೇಖನ ಪ್ರಕಟವಾಗಿದೆ. ಅದರಲ್ಲಿ ಎನ್.ಎಸ್. ವೀರಪ್ಪನವರನ್ನು ಕುರಿತು ದೀರ್ಘವಾಗಿ ಊರಿನವರೇ ಬರೆದಿದ್ದಾರೆ.
ನನಗೆ ಈ ಪ್ರಸಂಗದಲ್ಲಿ ವಿಶೇಷವೆನಿಸಿದ್ದು ಸ್ಮಶಾನವಾಸಿ ನೀಲಮ್ಮನವರ ಕುಟುಂಬ ತಮ್ಮ ದೇಹಗಳನ್ನು ವೈದ್ಯಕೀಯ ಕಾಲೇಜಿಗೆ ಕೊಟ್ಟಿರುವುದು. ಅವರ ಸಂತತಿ ಹೆಚ್ಚಲಿ.
ನೀವು ಸ್ಮಶಾನದಲ್ಲಿ ವಾಸಿಸುತ್ತೀರಲ್ಲ, ಭೂತ, ದೆವ್ವ ಏನಾದರೂ ಕಂಡಿವೆಯೆ? ಎಂದು ನೀಲಮ್ಮನವರನ್ನು ಕೇಳಿದಾಗ ಅವರು ನಕ್ಕು ಹೇಳಿದ್ದು,
“ನಾನೇ ದೆವ್ವ, ನಾನೇ ಭೂತ! ಬೇರೆ ಯಾವುವೂ ಕಂಡಿಲ್ಲ!”





ಸಾರ್ ಚೆನ್ನಾಗಿದೆ.