ನಾನು ಮರಣಿಸಿದಾಗ…

ಮೂಲ : ರೂಮಿ

ಕನ್ನಡಕ್ಕೆ : ನಿವೇದಿತಾ ಎಚ್

ನನ್ನ ಶವಪೆಟ್ಟಿಗೆ ಸಿದ್ಧಗೊಳುವಾಗ
ಈ ಪ್ರಪಂಚವನು ತೊರೆಯುತಿರುವೆ
ಎಂದೆನಿಸಕೂಡದು
ನಿನಗೆಂದೂ

ಜಾರದಿರಲಿ ಹನಿ ಕಂಬನಿಯು
ದುಃಖಿಸದಿರು ಕಿಂಚಿತ್ತೂ
ಹಳಹಳಿಸದಿರು ಯಾವತ್ತು
ಪಯಣಿುಸುತಿಲ್ಲ ನಾನು
ಕತ್ತಲಕೂಪದ ರೌರವ ನರಕಕೆ

ಸಾಕ್ಷಿಯಾಗುವಾಗ ಮಸಣದಯಾತ್ರೆಗೆ
ಹನಿಗಣ್ಣಾಗದಿರು ನನ್ನಗಲಿಕೆಯ ನೆನೆದು
ನಾನು ಕಣ್ಮರೆಯಾಗುತ್ತಿಲ್ಲ!
ಸಾಗುತಲಿರುವೆ…
ಅಮರಪ್ರೇಮದೆಡೆಗೆ

ನನ್ನ ಉಸಿರಿರದ ಈ ದೇಹವ ಮಣ್ಣಿನಲಿಡುವಾಗ
ಸಲ್ಲಿಸಬೇಡ ಅಂತಿಮ ನಮನ
ತಿಳಿದಿರಲಿ ನಿನಗೆ
ಸಮಾಧಿಯೆಂಬ ಪರದೆಯ ಹಿಂಬದಿಯೇ
ಸ್ವರ್ಗ ತಂತಾನೆ ಕದ ತರೆದಿದೆ

ಸಮಾಧಿಯಾಳಕಿಳಿಯುವ
ನಿರ್ಜೀವ ದೇಹ ಕಂಡಿರುವೆಯಲ್ಲವೇ?
ಸಿದ್ಧವಾಗು ಇದೀಗ
ಔನ್ನತ್ಯಕ್ಕೇರುವ ನನ್ನನು ನೋಡಲು
ಸೂರ್ಯಚಂದ್ರರ ಮೂಡುಮುಳುಗುಗಳಂತೆ
ನಿರಂತರ, ಅವಿರತ, ಅನವರತ

ಸೂರ್ಯಾಸ್ತದ ಗಳಿಗೆಯಂತೆ
ಅಂತಿಮವೆನಿಸಬಹುದು ಎಲ್ಲ
ಆದರೆ ಅಷ್ಟೇ ಕ್ಷಣಿಕವದು
ನಿಜದಲಿದು ನನ್ನ ಉಗಮ
ಸಮಾಧಿಯಲಿ ಬಂಧಿಯಾದಾಗಲೇ
ಆತ್ಮಕೆ ರೆಕ್ಕೆ ಮೂಡುವುದು

ಭೂಮಿಯೊಡಲಿಗೆ ಬಿದ್ದ ಬೀಜ
ಸೃಷ್ಟಿ ಕ್ರಿಯೆಗೆ
ಪಕ್ಕಾಗದೆ ಇರುವುದನು
ಕಂಡಿರುವೆಯಾ ಎಂದಾದರೂ ?
ಹಾಗಾದರೇಕೆ ಮನುಷ್ಯನೆಂಬ
ಬೀಜರೂಪಿಯ ಬಗೆಗನುಮಾನ?

ಸರಸರನೆ ಬಾವಿಗಿಳಿವ
ಬಿಂದಿಗೆ ಮೇಲೆ ಬಂದುದುಂಟೇ
ನೀರ ಮೊಗೆದುಕೊಳ್ಳದೆ?
ಮತ್ತೇಕೆ ಆತ್ಮದ ಬಗೆಗೆ ಚಿಂತೆ
ಜೋಸೆಫನಂತೆ ಬಾವಿಯಾಳದಿಂದ
ಮೇಲೆದ್ದು ಬರುವೆ

ಕಡೆಯಬಾರಿಯೆಂಬಂತೆ
ನಿನ್ನ ಬಾಯಿ ಮುಚ್ಚುವ ಮುಂಚಿನ
ನಿನ್ನ ಮಾತುಗಳು ಮತ್ತು ಪದಗಳು
ಸೇರಿಹೋಗುತ್ತವೆ ಪ್ರಪಂಚವೊಂದಕ್ಕೆ
ಕಾಲ ದೇಶಗಳ
ಹಂಗಿರದೆ ಆತ್ಮ ಹಕ್ಕಿಯಾಗುತ್ತದಲ್ಲಿ

‍ಲೇಖಕರು avadhi

March 11, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: