ಸಂತೆಬೆನ್ನೂರು ಫೈಜ್ನಟ್ರಾಜ್

ಕನಸುಗಳನ್ನು ಮಾರುತ್ತಿದ್ದೇನೆ
ಅವುಗಳಿಗೆ ಬೆಲೆ ಇಲ್ಲ ಹಾಗಾಗಿ ನಿಮ್ಮಂತೆ ಜೀವಿಸುವುದನ್ನು ಕಲಿತಿದ್ದೇನೆ
ನಿಮ್ಮೊಳಗಿದ್ದೂ ನಾನು ನಾನಾಗಿ
ಉಳಿಯುವುದನ್ನು ನಿಮ್ಮಿಂದ ನಿಧಾನವಾಗಿ ಕಲಿತಿದ್ದೇನೆ
ರೆಕ್ಕೆ ಮುರಿದರೇನಂತೆ ಹಾರಲಾರೆ ಸರಿ,
ನಡೆಯುವುದನ್ನು ತಡೆಯುವವರಾರು ಅದನ್ನೂ ಕಲಿತಿದ್ದೇನೆ
ಬಿದ್ದ ನನ್ನ ನೋಡಿ ನಕ್ಕರೆ
ನಿಮ್ಮ ತಪ್ಪಲ್ಲ; ಏಳುವುದನ್ನೂ ನಿಮ್ಮ ನಗುವಿನಿಂದ ಕಲಿತಿದ್ದೇನೆ
ನಾನು ನಿಮ್ಮವನೆಂದು ನಿಮಗೆ ಹೇಗೆ ಹೇಳಲಿ?

ನಿಮ್ಮಂತೆ ಅವರಿವರಿಗೆ ನಂಬಿಸುವುದನ್ನು ನಿಮ್ಮಿಂದಲೇ ಕಲಿತಿದ್ದೇನೆ
ಮಣ್ಣ ಕಣದೊಳಗೆ ಮನೆ ಮಾಡಿದ ಇರುವೆ ನಾನು
ತುಳಿದರೆ ಕಚ್ಚುವುದನ್ನು ಈಗೀಗ ನಿಮ್ಮ ನೋಡಿ ಕಲಿತಿದ್ದೇನೆ
ಹಾಡುಗಳು ಎಲ್ಲೆರದೆಯಲ್ಲಿವೆ ಎರೆಹುಳದಂತೆ
ಮಣ್ಣ ತಿಂದು ಮಣ್ಣಿಗೆ ಋಣಿಯಾಗೋ ಹಾಡ ಹಾಡುವುದನ್ನು ಕಲಿತಿದ್ದೇನೆ
ನಿಮಗೆ ಹೇಳುವುದಿಷ್ಟೆ ಸುಮ್ಮನೆ ಕೇಳಿಸಿಕೊಳ್ಳಿ
ಕಂಬಳಿ ಹುಳ ಚಿಟ್ಟೆಯಾಗೋ ದಿನಗಳು ದೂರವಿಲ್ಲ ನಾನೂ
ಫೈಜ್ ರೆಕ್ಕೆ ಬಡಿವುದನ್ನು ಕಲಿತಿದ್ದೇನೆ!






ಸತ್ಯಕ್ಕೆ ಹತ್ತಿರದ ಗಝಲ್ ಫೈಜ್ !