ರಾಜೀವ ನಾರಾಯಣ ನಾಯಕ
೧
ನಾನು ಖಂಡಿತ ಕವಿಯಲ್ಲ
ಆದರೆ ಇಷ್ಟು ಹತ್ತಿರ
ಬಂದಿರುವಾಗ ಚಂದಿರ
ಕವನ ಬರೆಯದಿರುವುದು
ಸರ್ವಥಾ ಸರಿಯಲ್ಲ!
೨
ಮೂನ್ ನೋಡ್ತಿದ್ದರೆ
ಮೂಡ್ ಏಕೋ ಥರಥರಾ:
ಆಗಸದಲ್ಲಿ ಒಂಟಿ ಚಂದಿರ
ಸೇಮ್ ನಂಥರ
ಆಗಸದಲ್ಲಿ ಪೂರ್ಣ ಚಂದಿರ
ಸೇಮ್ ಟು ಸೇಮ್ ನಿಂಥರ!
೩
ನಿನ್ನ ಕಲ್ಲಿನಂಥ ಮೌನವನ್ನು
ಇನ್ನೊಂದು ಮೌನದಿಂದ ಕೊಲ್ಲಬಲ್ಲೆ
ನಿನ್ನ ನಿಷ್ಕಾರಣ ವಿದಾಯವನ್ನು
ಕಠೋರವಾಗಿ ಬೀಳ್ಕೊಡಬಲ್ಲೆ
ಈ ಚಂದ್ರ ನೆನಪಿಸುವ ನಿನ್ನ ಕಾಂತಿಯನ್ನು
ಮಾತ್ರ ಹೇಗೆ ಮರೆಯಲಿ ಹೇಳು ನಲ್ಲೆ?
೪
ಓ ಚಂದಿರನೆ!
ನಿನ್ನ ಹೊಳಪಿಗೆ ನೀನೇ ಬೀಗಬೇಡ
ನಿನ್ನದು ಅರ್ಧ ಕಾಂತಿ ಮಾತ್ರ
ಉಳಿದರ್ಧ ನಿನ್ನನ್ನೆಲ್ಲೋ ನೋಡುತ್ತಿರುವ
ನನ್ನವಳಿಂದ ಪ್ರತಿಫಲಿಸಿದ್ದು, ಮರೆಯಬೇಡ!





0 Comments