ನಾನು ಕೇವಲ ಮನುಷ್ಯನಾಗಿದ್ದೆ

ವಿಶ್ವಾರಾಧ್ಯ ಸತ್ಯಂಪೇಟೆ
ನಾನು ಗಡ್ಡ ಬೆಳೆಸಲಿಲ್ಲ
ನಮಾಜು ಮಾಡಲಿಲ್ಲ
ಹೆಣ್ಣನ್ನು ಬುರ್ಕಾದಲ್ಲಿಯೇ
ಇರಲಿ ಎಂದೇ ಬಯಸಲಿಲ್ಲ
ಏಕೆಂದರೆ ನಾನು ಕೇವಲ
ಮನುಷ್ಯನಾಗಿದ್ದೆ
ಯಾವ ಗುಡಿಗೂ ಹೋಗಲಿಲ್ಲ
ಪೂಜೆ ಪುನಸ್ಕಾರ ಮಾಡಲಿಲ್ಲ
ಹರಕೆ ಹೊತ್ತು
ಕಾಯಿ ಕರ್ಪೂರ ಅರ್ಪಿಸಲಿಲ್ಲ
ಹೆಣ್ಣನ್ನು ದೇವಿಯೆಂದು
ಅವಳ ಮಗ್ಗಲ ಮುರಿಯಲಿಲ್ಲ
ಏಕೆಂದರೆ ಕೇವಲ ನಾನು
ಮನುಷ್ಯನಾಗಿದ್ದೆ
ಪ್ರಾರ್ಥನೆಗಾಗಿ
ಇಗರ್ಜಿಗೆಗಳ ಹುಡುಕುತ್ತ
ಹೋಗಲಿಲ್ಲ,ಬೆಳಕಿನಲ್ಲಿಯೂ
ಮೇಣದ ಬತ್ತಿ ಮುಡಿಸಲಿಲ್ಲ
ಶಿಲುಬೆಯ ಚಿಹ್ನೆಯನ್ನು
ಎತ್ತಿ ಮುತ್ತಿಡಲಿಲ್ಲ
ಏಕೆಂದರೆ ನಾನು ಕೇವಲ
ಮನುಷ್ಯನಾಗಿದ್ದೆ
ಅಮವಾಸೆ ಹುಣ್ಣಿವೆ ಜಾತ್ರೆ ಕೇತ್ರೆ
ಉರುಸ್, ಈದ್ ಮೀಲಾದ, ರಮಜಾನ
ಆಚರಿಸಲಿಲ್ಲ ಏಕೆಂದರೆ
ನಾನು ಕೇವಲ ನಾನು ಮನುಷ್ಯನಾಗಿದ್ದೆ
ಗಂಧ ,ಸುರ್ಮಾ, ಹಚ್ಚಿಕೊಳ್ಳಲಿಲ್ಲ
ನಾನಾಗಿಯೇ ನಾ ಇದ್ದುಬಿಟ್ಟೆ
ಯಾರಿಗೂ ಕೆಡುಗು ಮಾಡಲಿಲ್ಲ
ಕೆಟ್ಟದಾಗಲಿ ಎಂದು ಬಯಸಲಿಲ್ಲ
ಏಕೆಂದರೆ ಕೇವಲ ನಾ
ಅಪ್ಪಟ ಮನುಷ್ಯನಾಗಿದ್ದೆ





0 Comments