ಗೀರ್ವಾಣಿ
ಸಣ್ಣ ತಪ್ಪಿಗೂ ಕಲ್ಲು ಮಾಡುವರಿಲ್ಲಿ
ಕಲ್ಲಾಗಿದ್ದಕ್ಕೆ ಮತ್ತವರೇ ಕಾರಣ ಕೇಳುವರು
ತಲೆ ಮೇಲೆ ಮೊಟಕಿ ಗಟ್ಟಿತನ ಪರೀಕ್ಷಿಸುವರು
ಉದ್ಢರಿಸಲು ಬಂದ ಶ್ರೀರಾಮನನ್ನೂ ತಡೆಯುವರು
ನಾನೇನೂ ಇಂದ್ರನೊಡನೆ ಸರಸವಾಡಿರಲಿಲ್ಲ
ಗಂಡನೆಂದು ತಿಳಿದು ಮೋಸ ಹೋಗಿರಲಿಲ್ಲ
ಯಾರ ಶಾಪಕ್ಕೂ ಗುರಿಯಾದವಳಲ್ಲ
ಆದರೂ ಅಹಲ್ಯೆಯಾಗಿದ್ದೇನೆ
ಕಲ್ಲಾಗಿದ್ದೇನೆ
ಕಲ್ಲಿನಲ್ಲೇ ಮಿದುತ್ವ ಕಂಡುಕೊಂಡಿದ್ದೇನೆ
ಮಿದು ಭಾವಗಳಿಗೆ ಚಪ್ಪಡಿ ಎಳೆದಿದ್ದೇನೆ
ನಾನೇನೂ ಶ್ರೀರಾಮನಿಗೆ ಕಾಯುತ್ತಿಲ್ಲ
ಬಿಡುಗಡೆಗಾಗಿ ಕೈ ಎತ್ತಿ ಬೇಡುತ್ತಿಲ್ಲ
ಒಲವಿರುವವರೆಗೆ ಕೊರಗಿದವಳು ನಾನು
ಶಿಲೆಯಾದ ಮೇಲೆ ಇನ್ಯಾತರ ಕೊರಗು?
ಈಗೇನಿದ್ದರೂ ನನ್ನೊಳಗೆ ಅಗ್ನಿದಿವ್ಯ
ಸಿಡಿದೆದ್ದರೆ ಜ್ವಾಲಾಮುಖಿ
ಇಲ್ಲೆಲ್ಲ ಚೆನ್ನಾಗೇ ಇದೆ
ತಕರಾರು ತೆಗೆಯುವರಿಲ್ಲ
ಪುರಾವೆ ಕೇಳುವರಿಲ್ಲ
ಶಾಪ ಕೊಡುವವರೂ ಇಲ್ಲ
ಕಲ್ಲೇ ಆದ ಮೇಲೆ ಇನ್ನೆಂಥ ಶಾಪ?
ನಾನೇನೂ ಇಂದ್ರ ಚಂದ್ರರನ್ನು ಕೇಳಿರಲಿಲ್ಲ
ಸ್ವರ್ಗದೂರಿಗೆ ಹೋಗುವುದೂ ಬೇಕಿರಲಿಲ್ಲ
ಒಂದೇ ಒಂದು ಕಾರಣ ಕೇಳಿದ್ದೆ
ಕಲ್ಲಾಗಿಸಿದರು.
ನಾನೀಗ ಅಹಲ್ಯೆ !
ಶ್ರೀರಾಮನಿಗೆ ಕಾಯದ ಅಹಲ್ಯೆ !





ಅಹಲ್ಯೆಯ ಮನಸೇ ನೀವಾಗಿದ್ದೀರಲ್ಲ! ಚೆನ್ನಾಗಿದೆ.
S.P.Vijaya lakshmi…
Beautiful.
Channagide anta heluvudakinta, nimma odalalada katu sathyakke mouni yagiddene, estu odhidaru athrupta bhavane