ನಾಟಕದ ಕೊನೆಯ ಅಂಕ ಮುಗಿಯೋದರ ಒಳಗೆ!

ಕು ಸ ಮಧುಸೂದನ ರಂಗೇನಹಳ್ಳಿ
ಪಂಚಭೂತಗಳ ಕಳ್ಳಾಟ
ಬ್ರಹ್ಮಾಂಡದ ಉರುಳಾಟ
ನರಮನುಷ್ಯನ ನರಳಾಟಗಳ
ನಟ್ಟನಡೂವೆ
ಏಳು ಸಾಗರಗಳ ಉಬ್ಬರವಿಳಿತ
ಕಣಕಣದ ಕಾಮದಾತುರ
ಕಂಡದ್ದನ್ನೆಲ್ಲ ಭೋಗಿಸುವ ಆತುರ
ಇಂದು
ಎಂದೂ
ಮುಂದೂ
ಹಳ್ಳಕೊಳ್ಳ ನದಿಸಾಗರಗಳು
ಬತ್ತಿ ಹೋಗುವ ಮುನ್ನ
ಇಲ್ಲವೆಂಬ ನಾಟಕದ ಕೊನೆಯ ಅಂಕ
ಬರೋದರ ಒಳಗೆ
ಏಳು ಎದ್ದೇಳು!
ಆಗಿನ್ನೂ ರೆಕ್ಕೆ ಬಲಿತ ಹಕ್ಕಿ ಮರಿ
ಹದ್ದಿನ ಕಣ್ಣ ತಪ್ಪಿಸಿ
ನಮ್ಮನಾಳುವ ಪ್ರಭುಗಳ
ಅರಮನೆ
ಪಡಖಾನೆ
ಪಾಯಖಾನೆಗಳ
ಗೋಪುರಗಳ ಮೆಟ್ಟಿ
ರಕ್ತ ಮೆತ್ತಿದ ರತ್ನಖಚಿತ ಕರೀಟಗಳ ನೆತ್ತಿಯ ಕುಕ್ಕಿ
ಸಿಕ್ಕಷ್ಟು ಕಾಳಗಳನೆಕ್ಕಿ
ಮತ್ತೆ ಮನೆಗೆ ಮರಳೋಕಾಗದ ಮುನ್ನ
ಇಲ್ಲವೆಂಬ ನಾಟಕದ ಕೊನೆಯ ಅಂಕ
ಬರೋದರ ಒಳಗೆ
ಏಳು ಎದ್ದೇಳು!





0 Comments