ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನವಿಲುಗಳು ಕರೆಯುತ್ತಿವೆ..

ಜೀವನ್ ಪ್ರಕಾಶನ, ಕೋಲಾರ ಹಮ್ಮಿಕೊಂಡಿದ್ದ ದಸರಾ ಕಾವ್ಯಸ್ಪರ್ಧೆಯಲ್ಲಿ

ಮೆಚ್ಚುಗೆ ಪಡೆದ ಕವಿತೆ 

asha-jagadish

ಆಶಾ ಜಗದೀಶ್

 

 

“ಉಪ್ಪಮ್ಮೋ…… ಉಪ್ಪೋ…..

ಯಾರಿಗ್ಬೇಕಮ್ಮ…… ಉಪ್ಪೋ……”

 

ಕಂಬಕ್ಕೊಬ್ಬೊಬ್ಬರಂತೆ ಕಂಬದ ಮ್ಯಾಲಿನ

ಚಿತ್ತಾರ ನವಿಲ ಸೋಗೆ ಕಣ್ಣು

ಇರುಳು ಬೆಳಕಿನ ಮುಚ್ಚಿ ತೆಗೆಯುವಾಟ

ಕವಾಟದೊಳಗೆ ಮಾಟ ಮೋಸದಾಟ

design plate

ನಿರ್ಲಜ್ಜ ಹೆಜ್ಜೆಗಳ ಗೆಜ್ಜೆ ಕಾಲ್ಗಳು

ಕಂಬದ ಮ್ಯಾಲೆ ಆಸೆ ಇಡುಗಂಟು

ಒಡೆಯದ ಒಡಪು, ಕರೆಯುವ ಕಂಬ

ಗುಟ್ಟು ಗುಟ್ಟು

 

ಕೊಟ್ಟು ಕಸಿಯುವುದೆಷ್ಟರಮಾತು

ತ್ಚ್ ತ್ಚ್ ತ್ಚ್… ಎಂದು ಕರೆದು ಹಚ್ಯಾ ಎಂದಟ್ಟುವಂತೆ

ಉಪ್ಪು ಮಾರುವ ಬಾಲೆ ದಿಟ್ಟೆ

ಕಾದು ಕಾದು ಕಾದ ಮೇಲೆ ಹೊಡೆಯುತ್ತಾಳೆ

ಸಮಯ ಸಾಧಿಸಿ

ಆಟ ಸಾಗುತ್ತದೆ ಬಾಲೆಯರು ಬದಲಾದಂತೆ

 

ನಂಗಷ್ಟು ಉಪ್ಪು ಈಯುಬಾರೆ ಮಣಿ…..

ಮುಂದೆ ನಡೆಯುವ ಬಾಲೆ, ಎಲ್ಲ

ಬದಲಾಗುವ ಅಯೋಮಯದಾಟ ಹಿಂದೆ,

ಕಂಬದರಮನೆಯ ತುಂಬ ಅಶೃಬಿಂದುಗಳ ತಳಿರು

ಕಂಗೆಡಿಸುವ ಬಿಕ್ಕು

 

ಮೋಹ ಹುಟ್ಟಿಸುವ ನಿರ್ಮೋಹಿ ಕಂಬ

ಮೋಹಿಸಲು ಅಣಿಯಾಗುವ ಮರ್ಕಟ ಮನ

ಕೈ ಬದಲಾದರೂ ಬದಲಾಗದ ಋಣದ ಉಪ್ಪು

ಮಣಭಾರ

ಮಾಡು ಹೊತ್ತ ಹೆಡಿಗೆಯಲಿ

 

ಜೊಲಿ ಕಟ್ಟಿ ಲಾಲಿ ಹಾಡಿದ ಕಂಬ

ತೆರೆ ಎಳೆದು ಲಾಲಿಸಿದ ಕಂಬ

ಅಜ್ಜನ ಬೊಕ್ಕಣ ತೂಗಾಡಿದ ಕಂಬ

ಮಾಳಿಗೆಯ ಬೆನ್ನ ಎತ್ತಿಹಿಡಿದ ಕಂಬ

ಮುಗ್ಗರಿಸಿದಾಗ ಹಿಡಿಗೋಲಾದ ಕಂಬ

ಅಡುಗೆ ಮನೆಯ ಕಡೆಗೋಲ ಕಂಬ

ಒಳಮನೆಯ ಕಂಬ ಪಡಸಾಲೆಯ ಕಂಬ

ಅಜ್ಜನ ಅರೆ ಜೀವ ಅಜ್ಜಿಯ ಕೊರೆ ಜೀವದ

ಅರೆ ಗರಿಬಿಚ್ಚಿದ ರೆಪ್ಪೆಗಳ ನಡುವಿನ ಉಸಿರ ಕಾಪಿಡುವ

ಕಂಬದರಮನೆಯ ನಡು ಅಂಗಳದಲ್ಲಿ ನಿಂತುಬಿಟ್ಟ ಗರುಡಕಂಬ

ಹೊಸ ಮಾನದ ಮಂದೆ ರಟ್ಟೆ ಮುರಿದು ನಿಂತ ಮಲ್ಲಕಂಬ

ಕಂಬಗಳಿರಲವ್ವ ಮನೆತುಂಬ

ಎಷ್ಟಾದರಿರಲಿ ಮುಗಿದು ನಡೆದೇನು

 

ಕುಸಿಯುತ್ತಿವೆ ಕಂಬಗಳ ಬುನಾದಿ

ಹ್ಞಾ.. ಎಂದು ತೆರೆದ ಬಾಯಿ,

ಸತ್ತವರ ಗಾದಿಯ ತಲೆಬಾಗಿಲು,

ಎಷ್ಟು ಬಾಲೆಯರ ಬೆವರಿನಂಟು

ತುಂಟು ಹುಡುಗಿಯರ ತುಡುಗು ನಂಟು

ಇಷ್ಟಿಷ್ಟೇ ಕುಸಿದು ಮುಚ್ಚಿ ಮಣ್ಣೆಳೆದುಕೊಂಡ

ಕಂಬದ ತಲೆಯಮೇಲೊಂದು ತಲೆಗಲ್ಲು

 

ಅಜ್ಜ ಕೇಳೋ….. ಅಜ್ಜಿ ಕೇಳೇ……

ನಿಮ್ಮಯ ಹಕ್ಕಿ ಬಿಟ್ಟೆ.. ಬಿಟ್ಟೆ.. ಬಿಟ್ಟೆ..

ನಿಮ್ಮೊಡವೆ ನಮ್ಮೊಡಲ ಒಡೆದು ಹಾರಿದೆ

ನಡುರಾತ್ರಿ ನೀರವ ತೀರದ ತೀರಗುಂಟ

ಅದೋ ಪುಟ್ಟದೊಂದು ದೋಣಿ ಹಾಯುತ್ತಿದೆ ಇತ್ತ

ಮತ್ತೆ ಮತ್ತೆ ನೆನಪ ನೆಪ ಹೂಡಲು

 

ಕಂಬಗಳೆಲ್ಲ ಗುಳೆ ಹೊರಟಿವೆ

ಕಾಂಕ್ರೀಟು ಗೊಂಡಾರಣ್ಯದ ಸರಹದ್ದು ದಾಟಿ

ನವಿಲುಗಳು ಕರೆಯುತ್ತಿವೆ ಸಾವಿರ ಕಣ್ಣುಗಳಲ್ಲಿ

ಯಾವ ಅಂಬಿಗನ ದನಿಯೋ ಕೇಳುತ್ತಿದೆ ಸುಶ್ರಾವ್ಯವಾಗಿ……

 

“ಉಪ್ಪಮ್ಮೋ…….. ಉಪ್ಪೋ….

ಯಾರಿಗ್ಬೇಕಮ್ಮೋ……. ಉಪ್ಪೋ…..”

 

“ಬಾರೆ ಮಣಿ, ಚೆಲುವ ಗಣಿ,

ಕಂಬದಿಂದ ಕಂಬಕ್ಕೆ ಕುಣಿ ಕುಣಿ ಕುಣಿ”

 

‍ಲೇಖಕರು Admin

6 December, 2016

1 Comment

  1. Anonymous

    ಅದ್ಬುತ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading