ಆ ಮಹಾದೇವನಲ್ಲಿ ಪ್ರಶ್ನೆ
ಕುಸುಮಾ ಪಟೇಲ್
ಕೈಕೇಯಿಯ ಬೆರಳು
ಸೀತೆಯ ನೆರಳು
ಅಟ್ಟಾಡಿಸಿ ಬಂದಂತಾಗಿ
ದಿಗ್ಗನೆ ಎದ್ದೆ.
ಆತ ದಶರಥನಲ್ಲ
ನಾನು ಕೈಕೇಯಿಯೂ ಅಲ್ಲ
ಆದರೂ ಬದುಕ ಬಂಡಿ
ಕುಂಟಿದಾಗ ಬೆರಳು ಕೊಟ್ಟೆ.
ಯಾವ ರಾಮಯಣವೂ ಬೇಡ
ಎಂದು ವರಗಳನ್ನೇ ಕೈ ಬಿಟ್ಟೆ.
ಲಟಲಟನೆ ಮುರಿದ ಎಲ್ಲ
ನರನಾಡಿಗಳ ಮತ್ತೆ
ಒಗ್ಗೂಡಿಸಿ ನಿಂತೆ.
ಹರಾಜಿಗೆ ಬಂದ ಆತ
ಸ್ಮಶಾನ ಕಾಯುವ
ಅರಸಾದಾಗ
ಮಕ್ಕಳ ತಬ್ಬಿ
ಅವನ ಹಿಂದೆ ನಿಂತೆ.
ಬತ್ತಿದ ಕಣ್ಣೀರ
ಮುರಿದ ನರನಾಡಿಗಳ
ಮುದುರಿ ನಿಂತ
ಅಖಂಡ ನೋವಿನ
ಆ ಕ್ಷಣದ–ಗೋಳ್ಕರೆಗೆ
ತಾಯಿ ವಸುಂಧರೆ
ಬಾಯ್ಬಿಡಲಿಲ್ಲ.
ಬದಲಿಗೆ
ಗಟ್ಟಿಯಾದಳು
ಪಾದದ ಕೆಳಗೆ
ತಾಯಿ, ವಾತ್ಸಲ್ಯಮಯಿ,
ಗಟ್ಟಿಯಾಗುತ್ತಲೇ, ಗಟ್ಟಿಯಾಗುತ್ತಲೇ
ಹೋದಳು
ಸಂದೇಶ ಕೊಟ್ಟಳು!
ಎದೆ ಗಟ್ಟಿ, ಎದೆ ಗಟ್ಟಿ
ಎಂದು
ಮಾನಾಪಮಾನಗಳನ್ನು,
ಜಯಾಪಜಯಗಳನ್ನು
ಮೆಟ್ಟಿ ನಡೆದೆ.
ನಡೆಯುತ್ತಾ, ನಡೆಯುತ್ತಾ ಹೋದೆ.
ನಡೆದಂತೆ, ನಡೆದಂತೆ
ಅನುಭವದ ಸಿಂಚನ
ಹಾಗಾಗಿ
ನಾನು ವಿಭಿನ್ನ.
ಅನುಭವದ, ಅನುಭಾವದ
ಎಡೆಯ ಈ ಜ್ಞಾನ ಕೊಟ್ಟ
ದೇವನಿಗೆ, ಕಾರಣಕರ್ತನಿಗೆ
ಕೋಟಿ ಕೋಟಿ ನಮನ.
ಆದರೂ
ತಂದೆ ಎಂಬ ಸಲಿಗೆಯಲಿ
ಆ ಮಹಾದೇವನಲ್ಲಿ ಪ್ರಶ್ನೆ
ಕೊಡಬಾರದಿತ್ತೆ ತಂದೆ
ಈ ಎಲ್ಲ ಜ್ಞಾನ ,ಸುಜ್ಞಾನ
ಮೊದಲೆ ಸುಖದಲ್ಲೆ…….





Thank you Avadhi.
Thumbaa chennaagide… S.P.Vijaya lakshmi
Thank you vijayalakshmi .
ಕಷ್ತ್ಟಗಳು ಬಂದಾಗ ಆಗುವ ಆ ಕ್ಷಣದ ಯಾತನೆ, ವೇದನೆ, ಅಪಮಾನ, ನಂತರ ಅದರಿಂದ ಕಲಿಯುವ ಪಾಟ. ಮಾಗುವ ಬುದ್ದಿ, ….ಕವಿತೆಯ ಕೆಲವೇ ಸಾಲುಗಳಲ್ಲಿ ಹಿಡಿದಿಟ್ಟಿರುವ ನಿಮ್ಮ ಕವಿತ್ವ ಅಪ್ಪಟವಾದ್ದು. ಕೊನೆಯಲ್ಲಿ ಕೇಳುವ ಪ್ರಶ್ನೆ ನಾವೆಲ್ಲ ದೇವರನ್ನು ಕೇಳಬಹುದಾದದ್ದೇ!!!!
ಯಾಕಿದೆಲ್ಲ ಆಟ. ನಮ್ಮೆಲ್ಲ ವರ್ಷಗಳನ್ನು, ವಯಸ್ಸನ್ನು, ಬದುಕನ್ನು ಆಹುತಿ ತೆಗೆದುಕೊಂಡ ನಂತರ ಸಿಗುವ ಈ ಪ್ರಭುದ್ದತೆ ನಮಗೆ ಮೊದಲೇ ದೊರೆಯಲಾರದೇಕೆ? …..ತುಂಬಾ ಚೆನ್ನಾಗಿದೆ
ಪ್ರೇಮ
ಬಹಳ ಇಷ್ಟ ಆಯ್ತು ಕವಿತೆ ಕುಸುಮಾ ಅವರೆ. ಆ ಪ್ರಶ್ನೆಗೆ ನೋಡಿ ದೇವರೆನಿಸಿಕೊಂಡವನಿಗೆ ಕೂಡ ಉತ್ತರ ಗೊತ್ತಿಲ್ಲ.
Thank you both lalitha & premalatha.