ಶಿಕ್ಷಣ ವ್ಯವಸ್ಥೆ
– ನಾಗರತ್ನಾ ಗೋವಿಂದನ್ನವರ

ಹಿಂದಿನ ಶಿಕ್ಷಣ ಪದ್ದತಿಗೂ ಈಗಿನ ಶಿಕ್ಷಣ ಪದ್ದತಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಂದಿನ ಶಿಕ್ಷಣ ತುಂಬಾನೆ ದುಬಾರಿ. ಈ ವರ್ಷದ ಸ್ಕೂಲ ಫೀ ಕಟ್ಟಿಬಿಟ್ಟರೆ ಚಿಂತೆ ಬಗೆಹರಿಯಿತು ಅನಕೊಳ್ಳೊ ಹಾಗಿಲ್ಲಾ. ಮಧ್ಯದಲ್ಲಿ ಕ್ರಾಫ್ಟ್ ವರ್ಕ, ಚಾರ್ಟ, ಪ್ರೋಜೆಕ್ಟ್ ವರ್ಕ ಅಂತೆಲ್ಲಾ ಮತ್ತೆ ದುಡ್ಡು ಹಾಕಬೇಕು.ಇದರಿಂದ ಮಧ್ಯಮ ವರ್ಗದ ಕುಟುಂಬದವರಿಗೆ ಅದೆಷ್ಟು ತೊಂದರೆಯಾಗುತ್ತದೆ. ದುಡ್ಡು ಹಾಕಿದರೂ ಪರವಾಗಿಲ್ಲಾ ಈ ಕ್ರಾಫ್ಟ ವರ್ಕಗಳೆಲ್ಲಾ ಮಕ್ಕಳೆ ಸ್ವತಹ ಮಾಡುವುಗಳಾಗಿರುತ್ತವೆಯೆ ಇಲ್ಲವೆ ಇಲ್ಲಾ. ಪಾಲಕರು ಕೂಡಾ ಭಾಗಿಯಾಗಬೇಕು. ಇಂದು ಎಲ್ಲಾ ಸ್ಕೂಲಗಳಲ್ಲಿಯೂ ಕೂಡ ಪ್ರೊಜೆಕ್ಟ್ ವರ್ಕಗಳು ಸಾಮಾನ್ಯವಾಗಿವೆ. ಆದರೆ ಮಕ್ಕಳಿಗೆ ತಾವು ಏನು ಪ್ರೋಜೆಕ್ಟ್ ಮಾಡ್ತಾ ಇದ್ದಿವಿ ಅನ್ನೊದರ ಅರಿವೆ ಇರುವುದಿಲ್ಲಾ. ಅವುಗಳ ಬುದ್ದಿಮಟ್ಟವನ್ನು ಮೀರಿದ ಪ್ರೋಜೆಕ್ಟ ವರ್ಕಗಳನ್ನ ಅವರು ಹೇಗೆ ಅರ್ಥೈಸಿಕೊಳ್ಳಲು ಸಾಧ್ಯ. ಒಂದನೆಯ ತರಗತಿಗೆ ಹೋಗುವ ಮಗುವಿಗೆ ಕೂಡ ಪ್ರೋಜೆಕ್ಟ ಇರತ್ತೆ. ಒಂದನೆಯ ತರಗತಿಯ ಹಂತದಲ್ಲಿದ್ದ ಮಕ್ಕಳಿಗೆ ಇದೆಲ್ಲಾ ಅರ್ಥವಾಗಲು ಹೇಗೆ ಸಾಧ್ಯ. ಮಗುವಿಗೆ ಸಿಗುವ ಪ್ರೋಜೆಕ್ಟ್ ವರ್ಕನ ಮಾಡಿಸೊಕೆ ಮನೆಯಲ್ಲಿ ತಂದೆ ತಾಯಿ ಶಾಲೆ ಕಲಿತವರೆ ಆಗಿರಬೇಕು ಅಂತಹ ಪರಿಸ್ಥಿತಿ ನಿರ್ಮಾಣವಾಗ್ತಾ ಇದೆ.
ಶಾಲೆ ಕಲಿಯದ ಅದೆಷ್ಟೊ ಜನ ನಾವು ಶಾಲೆ ಕಲಿಯಲಿಲ್ಲಾ ನಮ್ಮ ಮಕ್ಕಳಾದರೂ ಕಲಿಯಲಿ ಅಂತ ಕೂಲಿಯಾದರೂ ಮಾಡಿ ತಮ್ಮ ಮಕ್ಕಳನ್ನ ಕಾನ್ವೆಂಟ ಶಾಲೆಗಳಿಗೆ ಸೇರಿಸಿರುತ್ತಾರೆ. ಆದರೆ ಶಾಲೆಯಲ್ಲಿ ಪ್ರೋಜೆಕ್ಟ ವರ್ಕಗಳಾಗಲಿ, ಹೋಮವರ್ಕಗಳನ್ನಾಗಲಿ ಮಾಡಿಸೊಕಾಗದೆ ಪ್ರೈವೇಟ ಟ್ಯೂಷನಗಳನ್ನ ಅವಲಂಬಿಸಬೇಕಾದ ಪರಿಸ್ಥಿತಿ. ಒಂದು ವೇಳೆ ಪ್ರೈವೇಟ ಟ್ಯೂಷನ ಕೊಡಿಸೊಕಾಗದೆ ಹೋದರೆ ಹೋಮವರ್ಕ ಮಾಡಲಿಲ್ಲಾ ಅನ್ನೊ ಕಾರಣಕ್ಕೆ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷೆ. ಇತ್ತಿಚೆಗೆ ಮಕ್ಕಳ ಮೇಲೆ ಹೋಮವರ್ಕಗಳ ಒತ್ತಡ ಕೂಡ ಜಾಸ್ತಿ ಆಗ್ತಾ ಇದೆ. ಇಂದಿನ ಮಕ್ಕಳಿಗೆ ಶಾಲೆ ಮುಗಿದ ಮೇಲೆ ತಾವು ಸ್ವಲ್ಪ ಹೊತ್ತು ಆಟಾ ಆಡಬೇಕು ಅನ್ನೊದೆ ಮರೆತು ಹೋಗಿದೆ. ಇವತ್ತು ತುಂಬಾ ಹೋಮವರ್ಕ ಇದೆ ರಾತ್ರಿ ಮಲಗೊದರೊಳಗಾಗಿ ಬರೆದು ಮುಗಿಸಬೇಕು ಇಲ್ಲಾಂದ್ರೆ ಬೆಳಿಗ್ಗೆ ನಮ್ಮ ಮಿಸ್ ಹೋಡಿತಾರೆ ಅಂತ ರಾತ್ರಿ ಮಲಗೊವರೆಗೂ ಹೋಮವರ್ಕ ಮಾಡೊದ್ರಲ್ಲಿಯೆ ಅವರ ಸಮಯ ಮುಗಿದು ಬಿಡತ್ತೆ. ಹೋಮವರ್ಕ ಮಕ್ಕಳಿಗೆ ಒಂದು ವಿಷಯವನ್ನು ಆಳವಾಗಿ ಅರಿಯಲು ಸಹಾಯವಾಗಬೇಕೆ ಹೊರತು ಶಿಕ್ಷೆಯಾಗಬಾರದು. ಹೋಮವರ್ಕ ಮಾಡಿಲ್ಲಾ ಅನ್ನೊ ಕಾರಣಕ್ಕೆ ಮಗುವಿಗೆ ಅಮಾನವೀಯ ಶಿಕ್ಷೆಯನ್ನ ನೀಡಿ ಮಗು ಸಾವಿಗೆ ಕಾರಣವಾಗಿದ್ದನ್ನು ಇತ್ತಿಚೆಗೆ ವೃತ್ತ ಪತ್ರಿಕೆಯೊಂದರಲ್ಲಿ ಓದಿದ ನೆನಪು. ಇತ್ತಿಚೆಗೆ ಸರಕಾರ ಎಷ್ಟೊಂದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ತಾ ಇದ್ದರೂ ಇಂತಹ ದುರಂತಗಳು ನಡಿತಾನೆ ಇವೆ. ಇದರಿಂದ ಮಕ್ಕಳನ್ನು ಶಾಲೆಗೆ ಕಳಿಸೊಕೆ ಪಾಲಕರನ್ನು ಒಂದು ರೀತಿಯ ಭಯ ಆವರಿಸುವುದು ಸಹಜ. ಇಂತಹ ಅಮಾನವೀಯ ಕ್ರೂರ ಶಿಕ್ಷೆಗಳನ್ನು ನೋಡಿದ ಇತರ ಮಕ್ಕಳ ಎಳೆಯ ಮನಸ್ಸಿನ ಮೇಲೆ ಅದೆಂತಹ ಕೆಟ್ಟ ಪರಿಣಾಮ ಬೀರುವುದು.

ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಮೀಸಲಾತಿ ಜಾಸ್ತಿ. ಹೆಣ್ಣು ಮಕ್ಕಳಿಗೆ ಸಹನೆ, ಪ್ರೀತಿ, ಕ್ಷಮಾಗುಣ ಇದೆಲ್ಲಾ ಜಾಸ್ತಿ ಅನ್ನುವ ಕಾರಣಕ್ಕೆ ಅವರಿಗೆ ಮೀಸಲಾತಿ ಇರುವುದು. ಒಬ್ಬ ಶಿಕ್ಷಕಿ ಮನೆಯಲ್ಲಿ ತನ್ನ ಮಗುವಿಗೆ ಮಾತ್ರ ತಾಯಿಯಾಗಲಾರಳು ಅವಳು ಶಾಲೆಯಲ್ಲಿರುವ ಎಲ್ಲಾ ಮಕ್ಕಳಿಗೂ ತಾಯಿಯಾಗಿರ್ತಾಳೆ. ಆದರೆ ಹೆಚ್ಚಾಗಿ ಶಿಕ್ಷಕಿಯರಿಂದಲೆ ಇಂತಹ ಅಚಾತುರ್ಯಗಳು ನಡಿತಾ ಇರೊದು ದುರಂತ. ಮೊದಲಿನ ಕಾಲದಲ್ಲಿ ಗುರು-ಶಿಷ್ಯರ ಮಧ್ಯ ಒಂದು ಅನುಭಂದ ಇರ್ತಾ ಇತ್ತು. ಆದರೆ ಈಗ ಎಲ್ಲವೂ ವ್ಯವಹಾರಿಕವಾಗಿ ನಡಿತಾ ಇವೆ. ನಾವು ಫೀಸ್ ಕಟ್ತಿವಿ ಅದಕ್ಕೆ ಅವರು ನಮ್ಮ ಮಕ್ಕಳಿಗೆ ಪಾಠ ಹೇಳ್ತಾರೆ ಅನ್ನೊವಷ್ಟರ ಮಟ್ಟಿಗೆ ವ್ಯವಹಾರಿಕವಾಗ್ತಾ ಇದೆ. ಶಿಕ್ಷಕ-ಶಿಕ್ಷಕಿಯರಿಗೆ ತರಬೇತಿಯು ಮುಗಿಯುವ ಹಂತದಲ್ಲಿ ಅವರಿಗೆ ಚಿಕ್ಕಮಕ್ಕಳ ಮನೊವೈದ್ಯರ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಬೇಕು. ಇದರಿಂದ ಮಕ್ಕಳ ಮನಸ್ಸನ್ನ ಅರಿತುಕೊಳ್ಳಲು ಶಿಕ್ಷಕರಿಗೆ ಸಹಾಯವಾಗುವುದು. ಇದರಿಂದ ಮಕ್ಕಳನ್ನು ಕ್ರೂರ ಶಿಕ್ಷೆಗಳಿಂದ ತಪ್ಪಿಸಬಹುದು. ಕೆಲವು ಶಾಲೆಗಳಲ್ಲಿ ಎಲ್.ಕೆ.ಜಿ. ಯುಕೆಜಿ ಗೆ ಮಕ್ಕಳನ್ನ ಸೇರಿಸಲು ಹೋದರೆ ಆ ಮಕ್ಕಳು ಇಂಟರವ್ಯೂ ಪಾಸ ಆಗಬೇಕು ಆಮೇಲೆ ಆ ಶಾಲೆಯಲ್ಲಿ ಸೀಟು ಸಿಗೊದು. ಜಾಣ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಅವರನ್ನು ಇನ್ನಷ್ಟು ಜಾಣರನ್ನಾಗಿ ಮಾಡುವುದು ಇದು ನಿಜವಾದ ವ್ಯವಸ್ಥೆಯೆ? ಹತ್ತು ಜಾಣ ವಿದ್ಯಾರ್ಥಿಗಳನ್ನ ಇನ್ನಷ್ಟು ಜಾಣ ವಿದ್ಯಾರ್ಥಿಗಳನ್ನಾಗಿ ಪರಿವರ್ತಿಸುವ ಬದಲು ಒಬ್ಬ ದಡ್ಡನು ಜಾಣನಾಗಿ ಆ ಹತ್ತು ಜನ ವಿದ್ಯಾರ್ಥಿಗಳ ಸಾಲಿಗೆ ಸೇರುವಂತೆ ಮಾಡಬಹುದಲ್ಲಾ. ಈ ಶಿಕ್ಷಣ ಎಲ್ಲರೀಗೂ ದೊರೆಯುವಂತಿರಬೇಕು. ಶಾಲೆಗಳು ತಮ್ಮ ಶಾಲೆಗೆ ಒಳ್ಳೆಯ ಹೆಸರು ಬರಬೇಕು ಅನ್ನೊ ಕಾರಣಕ್ಕೆ ಬೇರೆ ಶಾಲೆಯೊಂದಿಗೆ ಸ್ಪರ್ಧೆಗಿಳಿಯುವುದು ನಿಲ್ಲಬೇಕು. ತಮಗೆ ತಾವೆ ಸ್ಪರ್ಧೆ ನಡಿಸಬೇಕು. ಎಲ್ಲಾ ಶಾಲೆಗಳಿಗೂ ಇರುವ ಪಠ್ಯಪುಸ್ತಕ ಒಂದೆ ಆದ ಮೇಲೆ ಕಲಿಸುವ ವಿಧಾನ ಏಕೆ ಬೇರೆ ಬೇರೆ. ನಮ್ಮ ಮಕ್ಕಳನ್ನ ಈ ಶಾಲೆಗೆ ಹಾಕಬೇಕು, ಆ ಶಾಲೆಗೆ ಹಾಕಬೇಕು ಅಂದರೆ ನಮ್ಮ ಮಕ್ಕಳು ಜಾಣರಾಗ್ತಾರೆ ಅನ್ನೊ ಮನೊಭಾವನೆ ಪಾಲಕರಲ್ಲಿ ಬರದಂತಹ ವಾತಾವರಹ ನಿರ್ಮಾಣವಾಗಬೇಕು. ಯಾವ ಶಾಲೆಗೆ ಹಾಕಿದರೂ ಸರಿ ನಮ್ಮ ಮಕ್ಕಳು ಜಾಣರಾಗ್ತಾರೆ ಅನ್ನುವ ಭಾವನೆ ಅವರಲ್ಲಿ ಮೂಡಬೇಕು. ಆಗ ಸ್ಪರ್ಧೆಗಳು ನಿಲ್ಲತ್ತೆ.
ಶಿಕ್ಷಣದಲ್ಲಿ ಎಲ್ಲಾ ಮಕ್ಕಳಿಗೂ ಸಮಾನ ಅವಕಾಶ ಸಿಗತ್ತೆ ಇದರಿಂದ ಎಷ್ಟೊ ಮಕ್ಕಳು ತಾವು ದಡ್ಡರು ಅನ್ನೊ ಕೀಳರಿಮೆಯಿಂದ ಬಳಲುವುದು ತಪ್ಪುತ್ತದೆ. ಕೆಲವು ಮಕ್ಕಳಿಗೆ ಒಂದು ವಿಷಯದ ಬಗ್ಗೆ ಪಾಠ ಮಾಡಿದಾಗ ಒಂದೆ ಸಲಕ್ಕೆ ಅರ್ಥ ಮಾಡಿಕೊಳ್ಳುವ ಶಕ್ತಿ ಇರತ್ತೆ. ಇನ್ನು ಕೆಲವು ಮಕ್ಕಳಿಗೆ ಎರಡರಿಂದ ಮೂರು ಸಲ ತಿಳಿಸಿದಾಗ ತಿಳಿದುಕೊಳ್ಳುತ್ತವೆ. ಇನ್ನು ಕೆಲವು ಮಕ್ಕಳಿಗೆ ನೆನಪಿನ ಶಕ್ತಿಯ ಕೊರತೆ ಇರತ್ತೆ. ಪ್ರೋಜೆಕ್ಟ್ ವರ್ಕಗಳಿಗೆ ಸಮಯ ನೀಡುವ ಬದಲು ತಿಂಗಳಿಗೊಂದು ಸಲ ಸೆಮಿನಾರ್ ಅಥವಾ ಗುಂಪು ಚರ್ಚೆಗಳನ್ನು ನಡೆಸಿ ಅಧ್ಯಯನದಲ್ಲಿ ಮಕ್ಕಳ ಸಮಸ್ಯೆಗಳನ್ನು ಗಮನಿಸಬೇಕು. ಗುಂಪು ಚರ್ಚೆಯಲ್ಲಿ ಪ್ರತಿಯೊಂದು ಮಗುವಿಗೂ ತನಗೆ ತಿಳಿಯದಿರುವ ವಿಷಯದ ಬಗ್ಗೆ ಕೇಳಲು ಅವಕಾಶವಿರಬೇಕು. ಓದಿನಲ್ಲಿ ಮಗು ಹಿಂದೆ ಬಿಳಲು ಇರುವ ಕಾರಣ ಗೊತ್ತಾಗುತ್ತದೆ. ಆಗ ಆ ಮಗುವಿಗೆ ಇರುವ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಲು ಸಹಾಯವಾಗುತ್ತದೆ ಜೊತೆಗೆ ಪ್ರತಿಯೊಂದು ಮಗುವಿನ ಕಡೆಯು ಗಮನ ಕೊಡಲು ಶಿಕ್ಷಕ-ಶಿಕ್ಷಕಿಯರಿಗೆ ಸಾಧ್ಯವಾಗುತ್ತದೆ. ಒಂದು ಮಗುವಿನ ಸರ್ವತೋಮುಖ ಬೆಳವಣಿಗೆಯೊಳಗೆ ಕುಟುಂಬದ ಪಾತ್ರ ಎಷ್ಟು ಇರುತ್ತದೊ ಅಷ್ಟ್ಟೆ ಶಿಕ್ಷಕರ ಪಾತ್ರವು ಇರುತ್ತದೆ. ಏಕೆಂದರೆ ಮನೆಯೊಳಗಿನಕಿಂತ ದಿನದ ಹೆಚ್ಚಿನ ಸಮಯವನ್ನ ಮಕ್ಕಳು ಶಾಲೆೆಯೊಳಗ ಕಳಿಯುತ್ತವೆ.
ಇನ್ನು ಕೆಲವು ಶಾಲೆಗಳಲ್ಲಿ ತಮ್ಮಲ್ಲಿ ಓದುವ ಮಕ್ಕಳು ಅದೆ ಶಾಲೆಯಲ್ಲಿಯೆ ಪಠ್ಯ ಪುಸ್ತಕಗಳನ್ನು, ನೋಟಬುಕ್ಕಗಳನ್ನು ಕೊಂಡುಕೊಳ್ಳಬೇಕು. ಹೊರಗಡೆ ರಿಯಾಯಿತಿ ದರದಲ್ಲಿ ಸಿಗುವ ಮಳಿಗೆಗಳಲ್ಲಿ ಖರೀದಿಸುವಂತಿಲ್ಲಾ ಇದು ಕೂಡಾ ಪಾಲಕರಿಗೆ ಅನಾವಶ್ಯಕವಾದ ಹೆಚ್ಚಿನ ಖರ್ಚನ್ನು ಭರಿಸುವಂತೆ ಮಾಡುತ್ತದೆ. ಚಿಕ್ಕ-ಪುಟ್ಟ ಸಮಸ್ಯೆಗಳನ್ನು ಸರಿಮಾಡಿಕೊಂಡು ಮುಗ್ಧ ಮಕ್ಕಳನ್ನು ಪ್ರೀತಿಯಿಂದ ಕಂಡಾಗ ಮಾತ್ರ ಮಕ್ಕಳಿಗೆ ಶಾಲೆಯೆಂದರೆ ಸಂತೋಷ ಮೂಡುವುದು.





0 Comments