ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮೊಳಗೊಂದು ಕಾಡು ಮೂಡಬೇಕು…

ಏಕಾಂತದಲ್ಲಿ ನಮ್ಮೊಳಗಿನ ಗದ್ದಲ ಆಚೆ ಬರುತ್ತೆ

ರಘುನಂದನ ಹೆಗಡೆ, ಗಿರಣೀಮನೆ

ದೇವರನ್ನ ಒಲಿಸಿಕೊಳ್ಳಲು ಪೂಜೆ, ಪುನಸ್ಕಾರ, ವೃತ, ಉಪವಾಸ ಮಾಡಿದರಷ್ಟೆ ಸಾಕು ಎಂದು ಯಾರು ಹೇಳಿ ಬಿಟ್ಟಿದ್ದಾರೋ. ಒಂದೊಂದು ಬೇಡಿಕೆಗೆ ಒಬ್ಬೊಬ್ಬ ದೇವರು. ಶಕ್ತಿಗೆ, ಸಂಪತ್ತಿಗೆ, ವಿದ್ಯೆಗೆ, ಪಾಪ ಪರಿಹಾರಕ್ಕೆ, ಹರಕೆಗೆ ಎಲ್ಲದಕ್ಕೂ ದೇವರು. ಎಷ್ಟಾದರೂ ಅವನು ಅನಂತನಲ್ಲವೇ. ಆದರೆ ಸೋಜಿಗ ಎಂದರೆ ಭಕ್ತಿಗೆ ದೇವರೇ ಸಿಗುತ್ತಿಲ್ಲ!! ಅಕ್ಕ ಮಹಾದೇವಿಗೆ ಸಿಕ್ಕವ, ಮೀರಾಗೆ ಒಲಿದವ, ಶಬರಿಗೆ ಕಂಡವ ಉಹ್ಞೂಂ ಯಾರೂ ಭಕ್ತಿಯನ್ನ ಹುಟ್ಟಿಸುತ್ತಿಲ್ಲ. ಆದರೂ ಈ ಪ್ರಪಂಚದಲ್ಲಿ ಎಷ್ಟೊಂದು ದೇವರು, ಹಾದಿ ಬೀದಿಗೊಬ್ಬ ಧರ್ಮಗುರು. ಅಂತರಂಗದ ದೇವರಿಗೆ ಉಪವಾಸ, ಬಹಿರಂಗಕ್ಕೆ ಆಡಂಬರದ ಅಬ್ಬರ. ಕವಿತ್ವದಲ್ಲಿ, ಸಾಹಿತ್ಯದಲ್ಲಿ, ಬರಹದಲ್ಲಿ ಕೊನೆಗೆ ಜಗಳದಲ್ಲೂ ಆಧ್ಯಾತ್ಮದ್ದೆ ಉಗುಳು. ಅದರ ಮೇಲೆ ನಮ್ಮದು ಮತ್ತಿಷ್ಟು. ಆದರೆ ಮನಸ್ಸಲ್ಲಿ ಮಾತ್ರ ಅವ ಕಳೆದು ಹೋಗಿದ್ದಾನೆ.

ದೇವರೊಬ್ಬನಿದ್ದರೆ ಎಷ್ಟೊಂದು ಪಾಪ ಅಲ್ವಾ ಆತ ಎಂದು ಅವ ಈ ಕಾಡಲ್ಲಿ ಕುಳಿತು ಮಾತನಾಡುತ್ತಿದ್ದರೆ ನನ್ನಲ್ಲಿ ಬೆರಗು. ಬಹುಶಃ ಎಂದೋ ಕಳೆದು ಹೋಗಿದ್ದ ನೀನು ಮತ್ತೆ ನನಗೆ ಸಿಕ್ಕಂತಾಗಿ ಬೆಚ್ಚುತ್ತೇನೆ. ಕೊಡಚಾದ್ರಿಯ ಬೆಟ್ಟಗಳಲ್ಲಿ, ಕುಮಾರ ಪರ್ವತದ ತಪ್ಪಲಲ್ಲಿ, ದೂದ ಸಾಗರ ಜಲಪಾತದ ಎದುರಿನಲ್ಲಿ ಕೈ ಹಿಡಿದು ಕುಳಿತು ನೀನು ದೇವರ ಬಗ್ಗೆ, ದೇವರನ್ನ ಸೃಷ್ಟಿಸಿದ ಮನುಷ್ಯರ ಬಗ್ಗೆ, ಕಾಡಿನ ಬಗ್ಗೆ ಮಾತಾಡುತ್ತಿದ್ದರೆ ಕಣ್ಣುಗಳಲ್ಲಿ ವಿಸ್ಮಯ ತುಂಬಿಕೊಂಡು ಕಂಗಾಲಾಗುತ್ತಿದ್ದೆ ನಾನು. ಅಕಸ್ಮಾತಾಗಿ ಎಂಬಂತೆ ಸಿಕ್ಕ ನೀನು, ಸಿಕ್ಕಷ್ಟೆ ವೇಗವಾಗಿ ಕಳೆದು ಹೋಗದಿದ್ದರೆ ಇವತ್ತು ನಾನು ಈ ಕಾಡಲ್ಲಿ ಕುಳಿತು ಇವನ ಗಡ್ಡದಲ್ಲಿ, ಮಾತಿನಲ್ಲಿ ನಿನ್ನ ಹುಡುಕುತ್ತಿರಲಿಲ್ಲ. ಅಷ್ಟಕ್ಕೂ ನನಗೆ ಕಾಡು ಕಾಡುವಂತೆ ಮಾಡಿದ್ದು ನೀನೇ ಅಲ್ಲವೇ.

ಇರಲಿ ಬಿಡು, ನೀನಂತು ಕಳೆದು ಹೋದೆ, ಆದರೆ ನೀನೇ ಹೇಳುತ್ತಿದ್ದೆಯಲ್ಲ, ನಾಡು ಅರ್ಥವಾದ ಮೇಲೆ ಕಾಡಿಗೆ ಬಂದು ಕುಳಿತರೆ ನಮ್ಮಲ್ಲೊಂದು ಆಧ್ಯಾತ್ಮಿಕ ಅರಿವು ಜಾಗೃತವಾಗುತ್ತದೆ ಅಂತ. ಇವನಿಗೂ ಹಾಗೇ ಆಗಿರಬಹುದೇ ಎಂದರೆ, ಕಾಡಿನ ಬಗ್ಗೆ ಮಾತಾಡಿದಷ್ಟೆ ತಾಧ್ಯಾತ್ಮದಿಂದ ಇವ ಹೆಣ್ಣಿನ ಬಗ್ಗೂ ಮಾತಾಡಿ ನನ್ನನ್ನ ಗೊಂದಲಗೊಳಿಸಿ ಬಿಡುತ್ತಾನೆ. ಮತ್ತೇ, ಥೇಟ್ ನಿನ್ನಂತೆಯೇ..!! ಕಾಡ ಮಲ್ಲಿಗೆಯ ನೆರಳಲ್ಲಿ ನನ್ನರಿವಿನ ಪರಿಮಳ ಸಿಕ್ಕಿತೇನೋ ಎಂದು ಹುಡುಕಿ ಇಲ್ಲಿಯವರೆಗೆ ಬಂದಿದ್ದೇನೆ. ಮರೆತುಹೋಗಿದ್ದ ನೀನು ಸಿಗುತ್ತಿದ್ದೀಯ. ನಿನ್ನ ಅರಿಯುವುದೇ ನನ್ನ ಅರಿವಿನ ಮೂಲವೂ ಆದೀತು ಎಂದುಕೊಳ್ಳಲೇ.

“ಪುಟ್ಟಿ, ಬಾ ಇಲ್ಲಿ, ಜೀವ ಸ್ವಲ್ಪ ಬೆಚ್ಚಗಾಗಲಿ.” ಅವ ಬಿಸಿ ಬಿಸಿ ಹಸಿರು ಕಷಾಯ ಮಾಡಿದಂತಿದೆ. ಈ ಕಾಡ ಡೈರಿಗೆ ಈ ಬೆಳಗಿಗೆ ಇಷ್ಟು ಸಾಕು ಬರದದ್ದು. ಮತ್ತೆ ಬರೆಯುವಾಗ ನಿನ್ನೊಳಗಿನ ಕಾಡು ನನಗೆ ಸಿಕ್ಕಿರುತ್ತದಾ..?

ಈ ಕಷಾಯಕ್ಕೆ ಯಾವ ಎಲೆಯನ್ನ ಹಾಕಿದ್ದೀಯ, ಇದನ್ನ ಕುಡಿಯುತ್ತಿದ್ದರೆ ಎಷ್ಟೊಂದು ಖುಷಿಯಾಗುತ್ತೆ ಎನ್ನುತ್ತ ಬಂದವಳಿಗೆ, ಯಾವ ಎಲೆಯಾದರೇನು ಪುಟ್ಟಿ, ನಾವು ಸೇವಿಸುವ ಆಹಾರದಲ್ಲಿ ಗಾಳಿಯಲ್ಲಿ ಜೀವಂತಿಕೆಯಿರಬೇಕು, ಆಗಲೇ ಆನಂದ ಅರಳೋದು ಅಷ್ಟೆ ಎನ್ನುತ್ತ ತಲೆ ನೇವರಿಸಿ ಅವ ಹೊರಗೆ ಹೋಗಿದ್ದ. ನಿನ್ನೆ ಇದೇ ಹೊತ್ತಿಗೆ, ಮುಂಜಾನೆಯ ಅಂಗಳದಲ್ಲಿ ಸೂರ್ಯಕಿರಣ ನೆರಳುಗಳೊಂದಿಗೆ ಸೇರಿ ರಂಗೋಲಿ ಬಿಡಿಸುತ್ತಿದ್ದರೆ, ಅವ ಚೌರಾಸಿಯಾರವರ ಕೊಳಲ ಕೊರಳಿಂದ ಹೊಮ್ಮುವ ರಾಗದಲ್ಲಿ ತನ್ಮಯನಾಗಿ ಕಣ್ಮುಚ್ಚಿ ಕೂತಿದ್ದ. ಹಕ್ಕಿಗಳ ಚಿಲಿಪಿಲಿ, ಗುಬ್ಬಚ್ಚಿಗಳ ರೆಕ್ಕೆ ಸದ್ದು, ದೂರದಲ್ಲಿ ಹರಿಯುತ್ತಿರುವ ಜಲರಾಶಿಯ ಜುಳು ಜುಳು ನಾದ ಇವುಗಳ ಮಧ್ಯೆ ಕಳೆದು ಹೋಗಿದ್ದ ಅವನೆದುರು ಯಾವುದೋ ಅನ್ಯಗ್ರಹದಿಂದ ಪ್ರತ್ಯಕ್ಷವಾದಂತೆ, ನೀಲಿ ಜೀನ್ಸ್ ಮೇಲೆ ಪುಟ್ಟ ಶಾರ್ಟ್ ಹಾಕಿಕೊಂಡು, ಸೊಂಟಕ್ಕೊಂದು ಸ್ವೆಟರ್ ಕಟ್ಟಿಕೊಂದು, ಬೆನ್ನಿಗೊಂದು ಟ್ರೆಕಿಂಗ್ ಬ್ಯಾಗ್‍ನ್ನು ಕುತ್ತಿಗೆಗೊಂದು ಕ್ಯಾಮರಾವನ್ನು ಜೋಲಿ ಬಿಟ್ಟು ಎದುಸಿರು ಬಿಡುತ್ತ ನಿಂತಿದ್ದಳು ಅವಳು.

ನಾನು ಈ ಕಾಡಲ್ಲಿ ದಾರಿ ತಪ್ಪಿದೀನಿ ಅನ್ಸುತ್ತೆ. ಬೆಳಿಗ್ಗಿನ ನಾಲ್ಕರ ಜಾವದಲ್ಲಿ ಒಟ್ಟಿಗೆ ಹೊರಟದ್ದು ನಾವು, ಒಂದು ಕ್ಷಣ ಮೈ ಮರೆತು ಹರಿವ ವಿಚಿತ್ರ ಹಸಿರು ಹುಳದ ಪೋಟೋ ತೆಗೆಯುತ್ತ ನಿಂತೆ ನೋಡಿ, ಅವರೆಲ್ಲ ಮುಂದೋಗಿ ಬಿಟ್ಟಿದ್ರು, ಆಮೇಲೆ ಸಿಗಲೇ ಇಲ್ಲ. ತುಂಬಾ ಹಸಿವಾಗ್ತಿದೆ, ಭಯಾನೂ ಎಂದು ಒಂದೇ ಉಸಿರಲ್ಲಿ ಹೇಳಿ ಅವಳು ಅಂಗಳದ ತುಳಸಿ ಪೀಠದೆದುರು ಕುಸಿದು ಬಿಕ್ಕಳಿಸುತ್ತಿದ್ದರೆ, ಅವ ಆರಾಮು ಖುರ್ಚಿಯಿಂದ ಎದ್ದು ನಿಧಾನವಾಗಿ ಅವಳ ಬಳಿ ಬಂದು, ಭಯ ಬೇಡ ಪುಟ್ಟಿ, ಸ್ವಲ್ಪ ರಿಲ್ಯಾಕ್ಸ್ ಆಗು, ಕಳೆದು ಹೋದ ನಿನ್ನನ್ನು ಹುಡುಕಿಕೊಳ್ಳುವುದಕ್ಕಾಗೇ ಅಲ್ಲವೆ ನೀ ಈ ಕಾಡೊಳಗೆ ಹೆಜ್ಜೆ ಇಟ್ಟದ್ದು, ಅದಾಗುವವರೆಗೆ ಕಾಡು ನಿನ್ನ ಬಿಡದು ಅಷ್ಟೆ ಎಂದಿದ್ದ. ಮೊದಲೇ ಗೊಂದಲದಲ್ಲಿದ್ದವಳಿಗೆ, ಉತ್ತರಾಂಚಲದ ಕಾಡೊಳಗೆ ಕಂಡಿದ್ದ ಅಘೋರಿಗಳೆಲ್ಲ ನೆನಪಾಗಿ ವಿಚಿತ್ರ ಕಂಪನವಾಗಿತ್ತು. ಆದರೆ ಅವನ ಗಡ್ಡದಲ್ಲಿ ಏಕಕಾಲದಲ್ಲಿ ಠಾಗೋರರು, ಅರಬಿಂದೋ ಗುರುಗಳು ಕಂಡಂತಾಗಿ ಸಮಾಧಾನವೂ ಆಗಿತ್ತು.

ಈ ಕಾಡೊಳಗೆ ನಿಮಗೆ ಒಬ್ಬಂಟಿತನ ಕಾಡುವುದಿಲ್ಲವಾ?? ಎಲ್ಲಿಯ ಒಂಟಿತನ ಪುಟ್ಟಿ, ಇಷ್ಟೊಂದು ಮರಗಿಡ, ಹಕ್ಕಿಗಳ ಮಧ್ಯೆ ಸಮಯ ಕಳೆದದ್ದೆ ಗೊತ್ತಾಗದು. ನಮ್ಮೊಳಗಿನ ನಮ್ಮನ್ನು ಕಂಡುಕೊಳ್ಳುವುದಾದರೆ ಜನರಿಂದ ದೂರವೇ ಇರಬೇಕಾಗುತ್ತೆ. ಜೀವನ ಎಂದರೆ ನಮಗೆ ಬೇಕಾದಂತೆ ಮಾತ್ರ ಇರುವುದಲ್ಲ, ಅದು ಬಂದಂತೆ ಸ್ವೀಕರಿಸುವ, ಆ ಸ್ವೀಕೃತಿಯಲ್ಲಿ ನಮ್ಮೊಳಗು ಖುಷಿ ಪಡುವ ಹಂತಕ್ಕೆ ತಲುಪುವುದು. ಹಾಗೆ ತಲುಪಬೇಕಾದರೆ ನಮ್ಮೊಳಗೊಂದು ಕಾಡು ಮೂಡಬೇಕು. ಅದು ಜೀರ್ಣವಾಗಬೇಕು. ಸಂಬಂಧಗಳ ಸಂತೆ ಬಿಟ್ಟು ರಾಮ ಸೀತೆಯರು ತಮ್ಮನ್ನ ಕಂಡುಕೊಂಡ ಜಾಗ ಕಾಡು. ಆದರೆ ವಿಚಿತ್ರ ನೋಡು, ಮೂಲಗುಣ ಬಿಡದು ಅಂತಾರಲ್ಲಾ ಹಂಗೆ, ಕಾಡಿಂದ ಆಚೆ ಕಾಲಿಟ್ಟೊಡನೆ ರಾಮ ಸೀತೆಯನ್ನ ಬಿಟ್ಟ. ಅವನೊಳಗೆ ಕಾಡು ಮಾತ್ರ ಉಳಿದು ಬಿಟ್ಟಿತ್ತಾ, ಅಲ್ಲಿ ಸೀತೆಗೆ ಜಾಗವಿರಲಿಲ್ವಾ. ಕಾಡು ಅಂದರೆ ಪ್ರಕೃತಿ, ಅಂದರೆ ಹೆಣ್ಣು. ಎರಡೂ ಅಷ್ಟು ಸುಲಭದಲ್ಲಿ ಅರ್ಥವಾಗದು. ಹಾಗಾಗೇ ರಾಮ ಅರ್ಥೈಸಿಕೊಳ್ಳಲು ಸೋತನೇನೋ. ಇದೆಲ್ಲ ನಮ್ಮೊಳಗು ಮಾತ್ರ, ನಮ್ಮನ್ನ ಕಂಡುಕೊಳ್ಳುವುದಕ್ಕೆ ಅವನ ವಿಶ್ಲೇಷಣೆ. ಅವನ ಅರಿವು ನಮ್ಮದಕ್ಕಿಂತ ಹೆಚ್ಚಿದ್ದಾಗ ನಮಗೆ ಅವ ಹೇಗೆ ಅರ್ಥವಾಗಬೇಕು ಹೇಳು.

ಎಷ್ಟೊ ಜನ ಸಂತೆಯಿಂದ ಓಡುತ್ತಾರೆ, ತಮ್ಮೊಳಗಿನ ಏಕಾಂತದಿಂದಲೂ. ಏಕಾಂತದಲ್ಲಿ ನಮ್ಮೊಳಗಿನ ಗದ್ದಲ ಆಚೆ ಬರುತ್ತೆ, ಮುಖವಾಡಗಳು ತಪತಪನೆ ಕಳಚಿ ಬೀಳುತ್ತೆ. ಆ ಸತ್ಯವನ್ನ ಎದುರಿಸಲು ಹೆದರಿಕೆ ನಮಗೆ ಹಾಗಾಗೇ ಒಬ್ಬಂಟಿತನ ಭಯಗೊಳಿಸುತ್ತೆ. ಸಂತೆಯಲ್ಲೂ, ಅಂತರಂಗದ ಕತ್ತಲಲ್ಲೂ ತಾನೇ ತಾನಾಗಿ ಇರುವ ಶಕ್ತಿ ಬರೋವರೆಗೂ ಬದುಕು ಸಿಕ್ಕದೇನೋ ಅನ್ನಿಸುತ್ತೆ ನಂಗೆ. ನಾಡಿನ ಮುಖವಾಡಗಳ ಸಂತೆಯಲ್ಲಿ ಬದುಕುವಾಗ, ಪುರುಸೊತ್ತಿಲ್ಲದೆ ಗಡಿಯಾರ ಓಡುತ್ತಿರುವಾಗ, ಮನುಷ್ಯ ನಿರ್ಮಿತ ಗದ್ದಲಗಳು ಅಪ್ಪಳಿಸುವಾಗಲೂ ಒಬ್ಬಂಟಿತನ ಕಾಡುವುದಿಲ್ಲವೆ. ನೋಡು ಈ ದಡದಲ್ಲಿರುವುದೆಲ್ಲಾ ಆ ದಡದಲ್ಲೂ ಇರುತ್ತದೆ ಎನ್ನುತ್ತಾರೆ. ಕಾಡು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ, ನಾಡಿಂದ ನೇರವಾಗಿ ಕಾಡಿಗೆ ತಂದೆಸೆದ ಮನುಷ್ಯನಿಗೆ ಅಂತರಂಗದ ಗದ್ದಲಗಳು ಕೇಳಿ, ಅಚಾನಕ್ ಮೂಡಿದ ನಿರ್ವಾತದಿಂದ, ವಿರಾಮದಿಂದ ಹುಚ್ಚೂ ಹಿಡಿಯಬಹುದು, ಇಲ್ಲಾ ಬದುಕು ಅರ್ಥವಾಗಬಹುದು. ಕಾಡಲ್ಲೇ ಹುಟ್ಟಿ ಬೆಳೆದವಗೆ ಕಾಡು ಕೂಡ ಒಂದು ನಾಡೇ ಅಲ್ಲವೆ. ನಾಡಲ್ಲಿರುವವನಿಗೂ ಕಾಡಲ್ಲಿರುವವನಿಗೂ ಒಂದಲ್ಲ ಒಂದು ದಿನ ಕಾಡು ಸಿಕ್ಕಿಬಿಡಬಹುದು. ಬದುಕಿನ ಪಾಠ, ಅನುಭವಗಳಿಲ್ಲದೆ ಕಾಡು ಅರ್ಥವಾದೀತಾದರೂ ಹೇಗೆ. ಅದಕ್ಕೇ ಇರಬೇಕು ವಾನಪ್ರಸ್ತ ಮನುಷ್ಯ ಜೀವಿತದ ಕೊನೆಯ ಹಂತವಾಗಿದ್ದು.

 

 

‍ಲೇಖಕರು avadhi

18 March, 2014

1 Comment

  1. Sushma Moodbidri

    ರಘು…
    ಒಂದೇ ಉಸಿರಲ್ಲಿ ಓದಿ ಮುಗಿಸಿದೆ.. ಆ ಶಕ್ತಿಯಿದೆ ನಿನ್ನ ಬರಹಕ್ಕೆ.. ಕಾಡಿನ ಕುರಿತು ಓದುಗ ಕಾಡಿಸಿಕೊಳ್ಳುವಂತೆ ಬರೆದಿದ್ದಿಯಾ… ಬರಿತಿರು.. ಓದುವ ಸುಖ ನಮ್ಮದಾಗಲಿ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading