ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹತಿಯಾರಗಳ ಬಾಯಿ ಹೊಲಿಯಲೇಬೇಕಿದೆ ಈಗ..

 

 

 

ಸುಧಾ ಆಡುಕಳ

 

 

 

ಹತಿಯಾರಗಳು ಮಾತನಾಡುತ್ತವೆ

ಮಾತು ಮೂಕವಾದ ಊರಿನಲ್ಲೀಗ
ಹತಿಯಾರಗಳು ಮಾತನಾಡುತ್ತವೆ
ಒಡಲ ಬಿಸಿರಕ್ತದ ಸೇಸೆಯನ್ನೆರಚಿ
ಹೊಸಶಾಸನವ ಬರೆಯುತ್ತವೆ
ಮಚ್ಚುಗಳು ಮನಬಂದಂತೆ ಕೊಚ್ಚುತ್ತಿರುವಾಗ
ಅದನ್ನು ಬಡಿದ ಬಡಗಿಯ ಹೃದಯ ಬಿಕ್ಕುತ್ತದೆ!
ಚೆಲ್ಲಿದ ರಕ್ತದ ಕಲೆಯಲ್ಲಿ
ಧರ್ಮದ ಹೆಸರೇ ಕಾಣೆ!
ಯಂತ್ರದಲಿ ಚಿತ್ರಿಸಿದರೂ
ಹೆತ್ತವರ ಹೆಸರು ಸಿಕ್ಕೀತು!
ಚಿಮ್ಮಿದ ರಕ್ತದ ಕಲೆಗಳೀಗ ಜೀವ ಪಡೆದಿವೆ
ಅಗ್ನಿಜ್ವಾಲೆಗಳಾಗಿ ಅಳಿದುಳಿದ ಹೃದಯಗಳನ್ನು
ಬೇಯಿಸುತ್ತವೆ!

ಸತ್ತು ಮಲಗಿದವನ ಧರ್ಮ ಕೇಳಬೇಡಿ
ಕೊಂದವನಂತೂ ಧರ್ಮದಿಂದ ಹೊರಗು
ಅವರಿಬ್ಬರ ತಾಯಂದಿರಿಗೂ ತಾಯ್ತನವೇ ಧರ್ಮ
ಮತ್ತು ಕೊಲೆ ಅಲ್ಲಿ ಬಹಿಷ್ಕೃತ
ಕೊಲ್ಲಲೆಂದು, ಕೊಲ್ಲಲ್ಪಡಲೆಂದು
ಯಾವ ತಾಯಿಯೂ ಶಿಶುವ ಹಡೆಯುವುದಿಲ್ಲ
ಸಾವೆಂದರೆ ಅದು ಆತನದು ಮಾತ್ರವಲ್ಲ
ಅವನ ಹೆತ್ತ ತಾಯಿಯದ್ದು ಕೂಡ
ಸತ್ತ ಹೆಣಕ್ಕೂ, ಕೊಲ್ಲುವ ಕೈಗಳಿಗೂ
ಧರ್ಮ ಆರೋಪಿಸುವವರ ಕಂಡು
ಸಾವು ಕೂಡಾ ಮರುಗುತ್ತದೆ!

ಧರ್ಮ ನೋಡಿ ಇರಿದವರೇ ಕೇಳಿ
ಅವನು ಮನುಷ್ಯನಾಗಿ ಸತ್ತಿದ್ದಾನೆ
ಸತ್ತ ಗೋರಿಯಿಂದೆದ್ದು ಬಂದು
ಕಾರಣವ ಕೇಳಿದರೆ ಉತ್ತರವಿದೆಯೇನು
ನಿಮ್ಮ ಬತ್ತಳಿಕೆಯಲ್ಲಿ?

ಶಿಶುವ ಹಡೆಯದ ನಿಮಗೆ ಕೊಲ್ಲುವ ಹಕ್ಕಿದೆಯೆ?
ಹೆಪ್ಪು ಹಾಕುವ ಮೊದಲು ತಿಳಿದಿರಲಿ ನಿಮಗೆ
ಮುಂದೆಂದೂ ಸಿಹಿಯ ಹಾಲು ಸಿಕ್ಕದು
ಇನ್ನೇನಿದ್ದರೂ ಹುಳಿಯದ್ದೇ ಕಾರುಬಾರು!
ನೀವು ಸಾಯಿಸಿದವನೊಳಗೆ ನಿಮ್ಮದೇ ಮಗುವಿದ್ದೀತು!
ಜನ್ಮಾಂತರದ ಕಥೆಯೂ ಧರ್ಮದ್ದೇ ಅಲ್ಲವೇನು?

ಹಸಿದ ಒಡಲಿಗಿಷ್ಟು ಅನ್ನ ಬೇಕು
ಅನ್ನಕ್ಕೆ ಧರ್ಮದ ಹಂಗಿಲ್ಲ
ದುಡಿಯುವ ಕೈಗಳಿಗೆ ಕೆಲಸ ಬೇಕು
ಕಾಯಕಕ್ಕೆ ಧರ್ಮದ ನಂಟಿಲ್ಲ
ನೊಂದ ಮನಸ್ಸಿಗಿಷ್ಟು ಸಾಂತ್ವನ ಬೇಕು
ಭಾಷೆಗೆ ಧರ್ಮದ ಬೇಲಿಯಿಲ್ಲ
ಮಲ್ಲಿಗೆ ಹೆಣೆಯುವ ನಮ್ಮೂರ ಅಜ್ಜಿ ಹೇಳುತ್ತಾಳೆ

ಮಧ್ಯದಲ್ಲಿರಲಿ ಕನಕಾಂಬರ!
ಬಗೆಬಗೆಯ ಬಣ್ಣ ಸೇರಿದರೆ ಚೆನ್ನ
ನಮ್ಮೂರ ಧರ್ಮಗ್ರಂಥ ಅವಳು!
ಹತಿಯಾರಗಳ ಬಾಯಿ ಹೊಲಿಯಲೇಬೇಕಿದೆ
ಪ್ರೀತಿ ಬೆಸುಗೆಯ ಹೊಸ ದಾರ ಹೊಸೆದು
ತಲವಾರು ಹಿಡಿದ ಕೈ ಮೃದುವಾಗಬೇಕಿದೆ
ಆಗತಾನೆ ಅರಳಿದ ಹೂವ ಹಿಡಿದು

‍ಲೇಖಕರು Avadhi GK

20 January, 2018

1 Comment

  1. Shobha Hirekai

    ಹತಿಯಾರಗಳ ಬಾಯ ಹೊಲಿಯಬೇಕಿದೆ. ಸುಧಾ ಮೇಡಂ ತುಂಬಾ ಇಷ್ಟವಾಯಿತು ಕವಿತೆ. ಅಭಿನಂದನೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading