ನಮ್ಮಮ್ಮನ ಸಣ್ಣ ಸಣ್ಣ ಅನುಭವಗಳು
ಮೋಹನ್ ವಿ ಕೊಳ್ಳೇಗಾಲ
ನಮ್ಮಮ್ಮನ ಮೂರು ಬೆರಳಿಗೆ ಗೊತ್ತು
ಉಪ್ಪಿನಳತೆ
ಕಾಂಪಾಸ್ಸಿಲ್ಲದೆ ದೋಸೆ ಉಯ್ಯುವ
ಅವಳದಗಣಿತ ಬುದ್ಧಿ
ಚಂದ್ರನನ್ನು ಮೊದಲು
ತಟ್ಟೆಯಲ್ಲಿ ಹಿಡಿದಿಟ್ಟು ಕೊಟ್ಟವಳು
.
ಬೇಲಿ ಮೇಲಿನ ಸೊಪ್ಪು ಜಜ್ಜಿ ಜಜ್ಜಿ
ಉಗುರು ಬಣ್ಣ ಹಚ್ಚಿದವಳು
ಉಗುರ ಗಾಯ ಒಣಗಿಸಿ
ನೋವ ನುಂಗಿದವಳು
ಸಾಂಬ್ರಾಣಿ ಹೊಗೆಯಲ್ಲಿ
ನೋವ ತೆಗೆದವಳು
ಕೆರೆ ಏರಿಯ ಮಣ್ಣನ್ನು ಕೂದಲಿಗಜ್ಜಿ
ಹೊಳೆಯುವಂತೆ ತೊಳೆದವಳು
.
ಮುಂಜಾನೆಗೇ ಹೊಲದಂಗಳದ
ಮುಳ್ಳಿನ ನಡುವೆ
ವಿಷದ ಸೊಪ್ಪು ಆಯ್ದು
ಉಪ್ಹೆಸರ ಸೊಪ್ಪು ಕೊಯ್ದು
ಬರಿ ಕೆಂಡದಲ್ಲಿ ಸೌದೆ ಹೊತ್ತಿಸಿ
ತನ್ನ ಹಸಿವೆಗೆ ಕಾಯದೆ ನನ್ನ ಹಸಿವಿನಷ್ಟರಲ್ಲಿ
ಹೊಟ್ಟೆ ತುಂಬಾ ಬಡಿಸಿದವಳು
.
ಹತ್ತು ಹೆರಿಗೆ ಮಾಡಿಸಿದ್ದಾಳಂತೆ
ತಾನೂ ಐದು ಹೆತ್ತು
ಒಂದು ಮಗು ಅಳುವಾಗ ಮುದ್ದಿಸಿ
ಇನ್ನೊಂದನ್ನೂ ಸಂತೈಸಿ
ಜೊತೆ ಜೊತೆಗೆ ಒಲೆಗೆ ಬೆಂಕಿಯಟ್ಟಿದವಳು
ಕುಡುಕ ಗಂಡನನ್ನು ತಬ್ಬಿದವಳು
.
ಅವಳ ಸಣ್ಣ ಸಣ್ಣನುಭವಾಶ್ಚರ್ಯಗಳು
ಕಣ್ಣರಳುವಂತೆ ಮಾಡುತ್ತವೆ
ಮನೆಯಿಂದ ಹೊರೆಗೆ
ಕಾಲಿಟ್ಟೊಡನೆ
ರಂಗೋಲಿ ತಾಗಿಸುತ್ತಾಳೆ
ಅಲಾರಂ ಇಲ್ಲದೇ ಬೇಗ ಎದ್ದು!






ಮೋನಿ, ಇದನ್ನು ಎಷ್ಟು ಸಲ ಓದಿದರೂ ಬೇಸರವಾಗುವುದಿಲ್ಲ.
ಅಮ್ಮನ ಜೋಗುಳದ ಹಾಗೆ!!
ಅಮ್ಮ ಅಮ್ಮನೇ ಮೋಹನ್ ಮನ ಮುಟ್ಟಿದ ಕವನ