ನನ್ನ ಹಾಡು
ಮಲ್ಲಿಕಾರ್ಜುನ ಹೊಸಪಾಳ್ಯ
ನನ್ನ ಹಾಡು
ಉಬ್ಬಿದ ಬಲೂನು
ತೇಲುತ್ತದೆ ಹಗೂರ
ಎತ್ತೆಂದರತ್ತ ದೂರ ದೂರ
ದಿಕ್ಕಿಲ್ಲ ದೆಸೆಯಿಲ್ಲ
ನನ್ನ ಹಾಡು
ಮುಗಿಲಗಲ ಹಬ್ಬಿದ
ಬಂಜೆ ಮೋಡ
ಬರೀ ತೀಡುವ ಗಾಳಿ
ನೀರಿಲ್ಲ ನಿಡಿಯಿಲ್ಲ
ನನ್ನ ಹಾಡು
ಜಾಲಿಯ ಮರ
ರೆಂಬೆ ಕೊಂಬೆ ತುಂಬಾ
ಮುಳ್ಳಿನಾಗರ
ಹಣ್ಣಿಲ್ಲ ನೆರಳಿಲ್ಲ

ನನ್ನ ಹಾಡು
ಕನ್ನಡಿಯ ಗಂಟು
ಕಣ್ಣೆದುರುಂಟು
ಹಿಡಿಯಲಾಗದು
ಬಿಡಲೂ ಆಗದು
ಆದರೆ
ನನ್ನ ಹಾಡು
ಬಲೂನಿನ ಗಾಳಿಯಲ್ಲಿದೆ
ಮೋಡದ ಹಿಡಿಕೆಯಲ್ಲಿದೆ
ಜಾಲಿಮುಳ್ಳಿನ ತುದಿಯಲ್ಲಿದೆ
ಕನ್ನಡಿಯ ಒಡಕಲಿನಲ್ಲಿದೆ
ಅದು
ರಂಧ್ರವಿಲ್ಲದ
ಬಿದಿರುಗೊಳವೆಯಲ್ಲಿ ಮೂಡುತ್ತದೆ
ಎರಡೂ ಕಣ್ಣಿಲ್ಲದ
ವರಿಗೆ ಕಾಣುತ್ತದೆ
ಎರಡೂ ಕಿವಿಯಿಲ್ಲದ
ವರಿಗೆ ಕೇಳುತ್ತದೆ






0 Comments