ಅಹಲ್ಯೆಯ ದೂರು
– ಗುರುನಾಥ ಬೋರಗಿ
ಹೇಳು ಗೌತಮ,
ಇಂದ್ರ ಮಾಡಿದ ಪಾಪಕ್ಕೆ,
ನೀನು ನೀಡಿದ ಶಾಪಕ್ಕೆ
ನಾನೇಕೆ ಕಲ್ಲಾಗಬೇಕಿತ್ತು?
ನನಗೆ ಬೇಕಿದ್ದಿದು,
ನಿನ್ನ ಪೂಜೆ,ಹೋಮ,ಹವನ
ಪ್ರಾರ್ಥನೆಯಾಗಿರಲಿಲ್ಲ
ಸದಾ ನನ್ನೊಟ್ಟಿಗಿಟ್ಟುಕೊಂಡು
ನಿನ್ನ ಸಮಯ ಕೊಲ್ಲುವ
ಹರಕತ್ತೂ ನನಗಿರಲಿಲ್ಲ,ಆದರೆ-
ಬೇಕಿತ್ತು ನನಗೆ ಇಷ್ಟೇ ಇಷ್ಟು;
ನನ್ನ ಸ್ಪರ್ಶಕ್ಕಾಗಿ ನೀ ಇರುಳ ಧೇನಿಸುವ
ಸಣ್ಣದೊಂದು ಚಡಪಡಿಕೆ
ಏಕಾಂತದ ನಂತರ ಚುಟುಪುಟುಗುಟ್ಟುವ
ಮೊಳಕಾಲ ಲಟಿಕೆ
ನೀರೆರೆದು ತೊಟ್ಟಿಲಿಗೆ ಹಾಕಿದ
ಮಗುವಿನ ನಿದಿರೆಯಂಥ ಸಮಾಧಾನ
ಮೈ ಬೆವರಿನ ಘಮಕ್ಕೆ ಕೆರಳಿ,
ಕೆನೆಯುವ ಈರ್ವರ ತನು-ಮನ
ಅದೆಲ್ಲ ಎಲ್ಲಿ ಸಾಧ್ಯವಾಯಿತು?
ನಿನ್ನ ಹೋಮಕುಂಡದೊಳಗೆ
ನಿತ್ಯವೂ ದಗ್ಧಗೊಳ್ಳುತ್ತಿದ್ದುದು
ಹವಿಸ್ಸು ,ಕಾಷ್ಠಗಳಲ್ಲ.
ಹೇಳಲಾಗದೆ ಆಂತರ್ಯದೊಳಗೇ ಬಚ್ಚಿಟ್ಟುಕೊಂಡ
ನನ್ನ ಹೆಣ್ಣುಸಹಜ ಬಯಕೆಗಳವು.
ಇದೆಲ್ಲ ನಿನಗೆ ಏಕೆ ಗೊತ್ತಾಗಲಿಲ್ಲವೋ.. ?
ಗೊತ್ತಿತ್ತೋ..ಏನೋ..
ನೀವು ಗಂಡಸರೇ ಇಷ್ಟು; ನಮ್ಮದಲ್ಲದ ತಪ್ಪಿಗೆ
ನಮ್ಮನ್ನೇ ಹೊಣೆಯಾಗಿಸುತ್ತೀರಿ?
ನಿಮ್ಮದೌರ್ಬಲ್ಯವ ಜಾಹೀರುಗೊಳಿಸದೆ
ಅದನ್ನು ನಮ್ಮ ತಲೆಗೆ ಕಟ್ಟುತ್ತೀರಿ
ಕಾರಣವಿಲ್ಲದ ನಿಮ್ಮ ಶಾಪಕ್ಕೆ ಗುರಿಯಾಗಿ,ಕಲ್ಲಾಗಿ
ರಾಮನ ಕಾಲ್ಬೆರಳ ಸ್ಪರ್ಶಕ್ಕೆ
ನಾವೇಕೆ ಕಾಯಬೇಕು?
ಅಲ್ಲಿ ಊರ್ಮಿಳೆಯೂ ನಮ್ಮಂಥದೇ ನಿರ್ಲಕ್ಷ್ಯಕ್ಕೆ
ಈಡಾಗಿ ಸಂಸ್ಕೃತಿಯ ಬೇಲಿಯೊಳಗೆ ಶತಪಥ
ತುಳಿಯುತ್ತಿದ್ದಾಳೆ;ಹದಿನಾಲ್ಕು ವರ್ಷಗಳಿಂದ
ಲಕ್ಷ್ಮಣನಿಗೋ ಸತಿಪ್ರೀತಿಗಿಂತ
ಅಣ್ಣನ ಆಜ್ಞೆಯೇ ಅಂತಿಮ
ಇಂಥ ಗಂಡಸರ ನೆಚ್ಚಿ ನಾವು ಹೇಗೆ ಬಾಳುವುದು ?






ಒಬ್ಬ ಗಂಡಸಾಗಿ ಹೆಣ್ಣಿನ ಭಾವನೆಗಳನ್ನು ಕವನವಾಗಿಸಿದ್ದೀರಿ! ಅಹಲ್ಯೆಯ ಸ್ವಗತ-ದೂರು-ಪ್ರಶ್ನೆಗಳು ಚೆನ್ನಾಗಿದೆ…nice lines with nice poem 🙂
ಧನ್ಯವಾದಗಳು