ಅಗ್ನಿಕಾರ್ಯಕೂ ಜಲಸಂಲಗ್ನಕೂ
ಡಾ ವಿನಯಾ
ಗಂಟಲ ನರಕಿತ್ತು ವಾಪೆ ಜೋತು
ಜೋಲುವ ಹಾಗೆ ಚೀರಿದ್ದು
ಆಗೇರ ಜೋಗಿ ಭರ್ತಿ ಕುಡಿದು
ಹುಲಿಯಾಸದಲಿ ಧಿತ್ತೊಂ ಚಂಡೆಯ
ಕರನ ಹರಿಯುವ ಹಾಗೆ ಕೂಗಿದ್ದ ಕಸುವಿನಲಿ
ನನ್ನ ಮನೆ ದೇವರುಗಳೆಲ್ಲ
ರಾಕ್ಷಸಗಣವ ಕಂಡಂತೆ ತಂತಮ್ಮ
ಮೂಲೆಯಲಿ ಪ್ರತಿಷ್ಠಿತಗೊಂಡು
ಬಿದ್ದ ಪಾತ್ರೆ ಗುಡಿಗಂಟೆಯಂತೆ ತೂಗಿ
ಅಕ್ಕಪಕ್ಕದ ಮನೆ ಬಾಗಿಲು ಕಿಡಕಿ ತೆರೆದು
ಗಂಧದಾರತಿಯ ತಾದ್ಮಾತ್ಯದಲಿ ಮಗ್ನ
ಎಲ್ಲ ತಣ್ಣಗಾದ ಮೇಲೆ ಗಂಟಲುರಿ ಸೆಳೆತ
ಕೂತಿದ್ದೇನೆ ಒಬ್ಬಳೇ ಬಲಿಯುತ್ತಿದೆ ರಾತ್ರಿ
ಯಾಕೆ ಸಿಟ್ಟು ಹೀಗೆ ಉಕ್ಕುತ್ತಿದೆ?
ಬೇವಾರ್ಸಿತನವೇ ಸಿಟ್ಟು ಬಲಿಸುತ್ತಿದೆ
ನಿದ್ದೆ ಇಲ್ಲದ ಎಚ್ಚರ ಅಲ್ಲದ ತೂಗು
ಒಂದೊಂದು ದೇವರಿಗೂ ಮಂಗಳಾರತಿಯ ಮದ್ದು
ಹೊದ್ದು ಮಲಗಿವೆ, ಮುತ್ತಿಟ್ಟು ಎಬ್ಬಿಸಲೆ, ತೋರಲೇ
ಸತ್ತುಬಿದ್ದಿದ್ದಾಳೆ ಒಳಗೇ ಗುಲಾಬಿಗಲ್ಲದ ಹುಡುಗಿ
ನೀಟುಕಾಲಿನಲಿ ಪುಟುಪುಟು ಓಡಾಡಿ
ದೊಡ್ಡವರ ದೊಡ್ಡ ಕೆಲಸವನೂ ಸಾಗುಮಾಡಿದವಳು
ಮಾತಾಡಬರುವುದೇ ಈ ಗಿಣಿಮರಿಗೆ ಅಂತ
ಹಾದಿಹೋಕರ ಕೈಲಿ ಗಲ್ಲ ಗಿಲ್ಲಿಸಿಕೊಂಡವಳು
ಎಂಥ ಕರಕರ ಮಸೆವ ಕರಗಸದ ಮೇಲೂ
ಪಾದಕೊರೆಯದ ಹಾಗೆ ಹಾದುಬಂದವಳು
ಅವಳ ಮಾಯದ ಕೋಲು ಕಾಣೆಯಾಗಿದೆ
ಮುಟ್ಟಿದರೆ ನಳನಳ ಹೊಳೆವ ಮೈ
ಕಾವಿನಲಿ ಕರಕಾಗಿ ಕಂತು ತಾಯಾದ ಹೊತ್ತಲ್ಲಿ
ಹುಡುಗಿ ಸತ್ತು ಮೊಲೆಗೂಡ ದೀಪವಾದಳು
ಒಳಗೇ ಹುಗಿದ ಹೆಣ
ಬಾತು ಉಬ್ಬಿ ಉಬ್ಬಳಿಸುತ್ತಿದೆ
ಬೇಡ, ಮಕ್ಕಳ ಮನೆ ಅಪಶಕುನ ಬೇಡ
ಬೆಳಗಾಗಲಿ, ದೇವರ ತೊಳೆ ನೈವೇದ್ಯ ಇಡು
ಎಡೆ ಮಾಡು ಎದೆಯ ಬಟ್ಟಲ ನೀಡು
ಆಗಲಿ ಬೆಳಗು ಮಕ್ಕಳ ಕಣ್ಣೆವೆಗಳಲಿ
ಇವನ ತುಟಿ ಅದುರಿನಲಿ
ಜುಂಗುಡುವ ನನ್ನ ಮಡಿಲಿನಲಿ
ಮಲಗಿರುವ ದೈವಗಳೆ ಮಲಗಿ
ಕನಸು ಕಾಡಲಿ ತೂಗುವೆ ಜೋಗುಳ
ಅಗ್ನಿಕಾರ್ಯಕೂ ಜಲಸಂಲಗ್ನಕೂ
ಯೋಗ ಕೂಡಲಿ







adbuta! shivaprakasdara kavite odidante aaytu.