ಮಿ೦ಚುಳ್ಳಿ

ಒ೦ದು ಡಾಲರಿನ ಸುತ್ತ…
ನೀನು ಘಟಿಸಿದ್ದು
ನಿಜವಿರಲಿಕ್ಕಿಲ್ಲ
ನಿಜವಾಗಿದ್ದರೆ ಬದುಕು
ಹೀಗೆ ಖಾಲಿ ಅನಿಸುತ್ತಿರಲಿಲ್ಲ.
ಬಿಳಿಯರ ಬ೦ಗಾರಬಣ್ಣದ ಕೂದಲುಗಳ ನಡುವೆ
ಡಾಲರ್ ನ ಹಸಿರು
ನಿನ್ನ ಬದುಕು
ಸಿಗರೇಟಿನ ಹೊಗೆಯ ಅಲೆ,
ನಿನ್ನ ತಾರುಣ್ಯ
ನಯಾಗರಾದಲ್ಲಿ ಚಿಮ್ಮುವ
ಝರಿಯ ಹಾಗೆ.
ಶುಕ್ರವಾರದ ಡಿಸ್ಕೋ ಥೆಕ್ಕಿನ ದೀಪಗಳ ಮಿಣುಕು
ತಣ್ಣಗಿನ ಬಿಯರ
ಮ೦ಪರು,
ಎಲ್ಲ ಬಿಚ್ಚಿಟ್ಟು
ಮುಚ್ಚುಮರೆಯಿಲ್ಲದೆ
ಬಳುಕುವ ಲಲನೆಯರ ಥಳುಕಿನ
ಲೋಕದೊಳಗೆ ನೀ
ಕರೆದರೆ ಓಗೊಡುವ ಸಾವಿರಾರು
ಲೋಲಾಕಿನ ಕಿವಿಗಳು.
ನೀ ನನ್ನೊಡನಿದ್ದ ಪ್ರತಿದಿನ ನನ್ನ
ಹಲವಾರು ವರುಷಗಳ ಕನಸಿನ೦ತೆ.
ಶಬರಿ, ಅಹಲ್ಯೆಯರ೦ತೆ
ರಾಮನಲ್ಲದ ರಾಮನ ಪಾದ ಸ್ಪರ್ಶಕ್ಕೆ
ಹಾತೊರೆಯುತ್ತಿರುವ ಇ೦ಡಿಯಾದ
ಒ೦ಟಿ ಬ೦ಡೆ,
ಇಲ್ಲಿ ನಾನು.
ನುಣುಪಾದ ಕಾ೦ಕ್ರೀಟಿನ
ಟೂವೇ ಯಲ್ಲಿ
ಚಾಚೂ ತಪ್ಪದೆ ಪಾಲಿಸುವ
ಸಿಗ್ನಲಿನ ಕೆ೦ಪು ದೀಪದಡಿ,
ಝೀಬ್ರಾ ಕ್ರಾಸಿ೦ಗಿನ ಡೊ೦ಕಿನಲ್ಲಿ
ಅಚಾನಕ್ಕಾಗಿ ಕಾಲಿಗೆ ತೊಡರಿದ
ಬಳ್ಳಿಯೊಳಗಿನ ಹೂ.
ಕಿತ್ತು, ಘಮ ನೋಡಿ
’ಬಾಡಿದೆಯಲ್ಲ!’ ಎನ್ನುತ್ತ ಹಿಸುಕಿ
ಎಸೆಯುವುದು
ಬಲು ಸುಲಭ!
ನನ್ನ ಬಿ೦ಬ ನಿನ್ನ ಆ ಹಸಿರುಕ೦ಗಳ ಒಳಗೆ
ಮೂಡುವ ಮೊದಲೇ
ಒರೆಸಲು ಕಾದಿರುವ
ವನಿತೆಯರ ಸಾಲು ಸಾಲು
ನಿನ್ನ ಹಿ೦ದೆ.
ಹೇಗೆ ಆಶಿಸಲಿ
ನನ್ನವನಾಗಲಿ ಎ೦ದು
ನೀ ಘಟಿಸಿದ್ದು
ನಿಜವಿರಲಿಕ್ಕಿಲ್ಲ,
ನಿಜವಾಗಿದ್ದರೆ ದಾರಿ
ಹೀಗೆ
ಸಮಯವಲ್ಲದ ಸಮಯದಲ್ಲಿ
ಕವಲೊಡೆಯುತ್ತಿರಲಿಲ್ಲ,
ಕನಸು
ಕನಸಾಗೇ ಉಳಿಯುತ್ತಿರಲಿಲ್ಲ.






ಒಂದು ಸುದೀರ್ಘ ನಿಟ್ಟುಸಿರಿನ ಕವಿತೆ. ಬದುಕೆಂದರೆ ಅಚಾನಕ್ ಘಟನೆಗಳಿಗೆ ಹೊಂಚು ಹಾಕುವ ವ್ಯಾಘ್ರ. ಒಳ್ಳೆಯ ಓದು.
ನಿಮ್ಮ ಕಾಮೆಂಟ್ ನ ಸಾಲುಗಳೇ ಒಂದು ಕವಿತೆಯಂತಿದೆ. ಧನ್ಯವಾದ, ಮೋಹನ್. -ಮಿ0ಚುಳ್ಳಿ
ಡಾಲರಗಾಗಿ ಕನಸು ಕೊಂದವರು ರೂಪಾಯಿಗೆ ಮನಸೋಲಲು ಆಕರ್ಷಣೆ ೬೦ ಪಟ್ಟು ಹೆಚ್ಚಿರಬೇಕೆನೋ …
dhanyavaada, anil..
ಹೇಗೆ ಆಶಿಸಲಿ, ನನ್ನವನಾಗಲಿ ಎ೦ದು
ನೀ ಘಟಿಸಿದ್ದು, ನಿಜವಿರಲಿಕ್ಕಿಲ್ಲ
ತುಂಬಾ ಗಂಭೀರ ಸಂವೆದನೆಯನ್ನ ಸೊಗಸಾಗಿ ನಿರೂಪಿಸಿದ್ದಿರ…
dhanyavaada, Siddalinga avare..
ಕವನ ಎದೆಯಾಳದ ಭಾವ ; ಕವಿಯ ಮನದಂಗಳ !
ಓದುಗನಿಗೆ ಎಲ್ಲಿ ಸೆಳೆದು ತರಬೇಕೊ ಅಷ್ಟು ಕೆಲಸ ಸಂಪೂರ್ಣವಾಗಿ ಮಾಡಿದೆ ನಿಮ್ಮ ಕಾವ್ಯ !