ನನ್ನ ನೆನಪುಗಳು….

ಧೀರಜ್ ಆರ್ ಬಂಗೇರ
ಎಂದೂ ಮರೆಯದ
ನೆನಪುಗಳನ್ನು ಹೆಣೆದು
ಹಣಿಮಾಡಿ ಬೀದಿಯಲಿ
ಮಾರಲು ಇಟ್ಟಿರುವೆ
ಮತ್ತೆ ಮಳೆಬರುವ ಸಂಭವ
ಭಯದ ಅನಾವರಣದೊಡನೆ
ಹೆದರಿ ಓಡುತಿಹ ಇರುವೆ

ಮತ್ತೆಲ್ಲಿ ಕೊಚ್ಚಿ ಹೋಗುತ್ತದೋ
ನನ್ನ ನೆನಪುಗಳು….!!
ಎಂಬ ಭಯದಲಿ ಸುತ್ತ
ಮೆತ್ತನೆ ಮಣ್ಣಿನಲಿ
ಗಟ್ಟಿ ದಂಡೆಯ ಕಟ್ಟಿ,
ಹರಕು ಅಂಗಿಯನೊಲಿದು
ಮೇಲೆ ಮಾಡನು ಮಾಡಿ,
ಒಳಗೆ ಬೆಚ್ಚನೆ ನೆನಪ
ಮತ್ತೆ ಮಾರಲು ಇಟ್ಟು,
ಕಾಯುತ್ತಿರುವೆ ಯಾರಾದರು
ಕೊಳ್ಳುವಿರ ಎಂದು….
ಬಂದರೂ….
ಪುಟ್ಟ ಕಂದಮ್ಮಗಳು,ತುಂಟ ಮಕ್ಕಳು,
ಲಂಗ-ದಾವಣಿಯ ಹುಚ್ಚು ಹುಡುಗಿಯರು,
ಹರಕು ಅಂಗಿಯ ಬಡವರು,
ಗೂನು ಬೆನ್ನಿನ ವೃದ್ದರು,
ಆದರೂ ಯಾರೂ ಕೊಳ್ಳಲಿಲ್ಲ
ನನ್ನ ನೆನಪುಗಳನ್ನು
ಕೇವಲ ನೋಡಿದುದು ಮಾತ್ರ
ನನ್ನ ನೆನಪುಗಳಿಗಿಲ್ಲಿ ಬೆಲೆಯಿಲ್ಲ..
ಅಗೋ….
ನೆನಪುಗಳ ಗಂಟಿನೊಳಗಡೆ
ನನ್ನಾಕೆಯ ಧ್ವನಿ ಕೇಳುತ್ತದೆ,
ಹೆತ್ತಾಕೆಯ ಪ್ರೀತಿ ಕಾಣುತ್ತದೆ,
ಸಂಬಂಧಿಕರ ಜಗಳವುಂಟದರಲಿ,
ದಾಯಾದಿಗಳ ಕಲಹ ಕೂಡ.
ಪುಟ್ಟ ಕಂದಮ್ಮಗಳ ಅಳುವು ಕೇಳುತ್ತದೆ,
ಸಾಲಗಾರರ ಬಾದೆ ಕಾಣುತ್ತದೆ,
ಎಷ್ಟೋ ಸಾವು-ನೋವುಗಳುಂಟು ಅದರಲಿ,
ನನ್ನುಸಿರಿನ ಬಡಿತ ಕೂಡ.
ಮನದ ಮೂಲೆಯಲಿ
ನೋವ ಮೆರೆತ,
ಯಾರೊಬ್ಬರು ಬರಲಿಲ್ಲ ಕೊಳ್ಳಲು ಎಂದು..
ಬಿಕ್ಕಿ-ಬಿಕ್ಕಿ ಅಳುತಿದೆ ಮನವು
ಮರಳಿ ಬರುತಿಹ ನೆನಪ ತಾಳದೆ,
ಎದೆಯ ಒಳಗಿನ ನೋವ ತಾಳದೆ.
ಇಗೋ…
ಬಿದ್ದೆ ನಾನು ನೆನಪಿನೊಳಗಡೆ
ಏಳಲಾರದ ಸ್ಥಿತಿಯಲಿ,
ನನ್ನೊಟ್ಟಿಗೆ ನೆನಪುಗಳು ಕೂಡ
ನರಳಿ ಸಾಯುತಿವೆ,
ನಡುವೆ ನಾನೂ ಸಾಯುತ್ತಿದ್ದೇನೆ
ಮೆಲ್ಲನೆ ಕಣ್ಣು ಮುಚ್ಚುತ್ತಾ…..
ಮನದೊಳಗಡೆ ಸಣ್ಣನೆ ನಗುವು,
ಮತ್ತೆ ನನ್ನೆಲ್ಲ ನೆನಪುಗಳ ಕಂಡು,
ನನ್ನಾಕೆಯ ಪ್ರೀತಿಯ ದನಿಯ ಕೇಳಿ.
ಅರಿತೆ ನನ್ನ ನೆನಪುಗಳಿಗಿಲ್ಲಿ ಬೆಲೆಯಿಲ್ಲ
ನೋವ ಧ್ವನಿಗಳ ಯಾರು ಕೇಳುವುದಿಲ್ಲ……..





0 Comments