ನಿರ್ಣಯ..
ಸವಿತಾ ನಾಗಭೂಷಣ
ಅವನ ಅಜ್ಜ ಸಿಡಿಮದ್ದಿನ
ಕಾರ್ಖಾನೆಯನ್ನೇನೂ ಇಟ್ಟಿಲ್ಲ !
ಅವನ ಅಪ್ಪ ಬಡವ- ಸ್ವಾಭಿಮಾನಿ
ಗುಲಾಬಿ ಮಾರುತ್ತಾನೆ !
ಅವನ ಕಾಕಾ ಅತ್ತರಿನ
ಅಂಗಡಿ ಇಟ್ಟಿರುವನು….
ಕುಸುರಿ ಕೆಲಸದಲ್ಲಿ ಅವನ
ತಾಯಿಯದು ಪಳಗಿದ ಕೈ…
ಅವನ ತಂಗಿ ಜಾಣೆ ಧೀರೆ
ನನ್ನ ಸಹಪಾಠಿ….
ಅವನು ಸರಳ ಸಜ್ಜನ….
ಸೀದಾ-ಸಾದ…

ಎಷ್ಟು ವಿಚಿತ್ರ ಈ ಜಗತ್ತು !
ಕೆಲವರು ರಕ್ತ ಹರಿಸಲು ಆತುರರಾಗಿದ್ದಾರೆ
ಹಲವರು ರಕ್ತ ಬೆರೆಸಲು ಕಾತುರರಾಗಿದ್ದಾರೆ
ನಾವೋ…ಪರಸ್ಪರ ಅರಿಯಲು,ಪಡೆಯಲು
ಹಂಬಲಿಸುತ್ತಿದ್ದೇವೆ….
ಅಯ್ಯೋ…..
ಎಲ್ಲಕ್ಕಿಂತ ಮೊದಲು ಅವನ ಒಬ್ಬನೇ
ಅಲ್ಲಾಹುವಿನನ್ನು ನಾನು ಒಪ್ಪಿಕೊಳ್ಳಬೇಕು !
ನನ್ನ ಕೋಟಿ ದೇವರುಗಳನ್ನು
ಅವನು ತಬ್ಬಿಕೊಳ್ಳಬೇಕು…!!
ಎಷ್ಟು ಕಷ್ಟ ಸೂರ್ಯ ಸ್ಪಷ್ಟ
ಪ್ರಕೃತಿ ಹರಸಬೇಕು….
(ಹಳೆಯ ಪುಸ್ತಕ ಕೊಡವಿ ಇಡುತ್ತಿದ್ದೆ… ಇದು
ಇವತ್ತೇ ಸಿಗಬೇಕೇ??)






ನೆನಪಿನಲ್ಲಿ ಉಳಿಯುವ ಉತ್ತಮ ಕವನ
ಮನ ಮುಟ್ಟುವ ಕವಿತೆ.