
ರಜನಿ
ಇಲ್ಲಿಂದ ಸೆಳೆದೊಯ್ದ
ನನ್ನದೇ ಸೆರಗ
ನಿನ್ನೂರವರೆಗೂ ಹರಡಿ

ದಾರಿ ಮಾಡಿದಷ್ಟೇ ಮೋಹ
ಇಬ್ಬರನೂ ಬಂಧಿಸಿದ
ಆ ಹೆದ್ದಾರಿ ಮೇಲೆ
ಅಕ್ಕರೆಯ ಹೆದ್ದಾರಿಯಲಿ
ಅಂದು ನೀ ಬರುವಾಗ
ಅರವಟಿಗೆಯಲಿ ಆಸರಿಗೆ ಕೊಟ್ಟರೇನು?
ಚಕ್ರವಾಹನರೆಲ್ಲ ಅಂತರದಿ
ಹಾದುಹೋದರೇನು ಅಕ್ಕಪಕ್ಕ?
ಕಲ್ಲು ಹೊರುವವರು
ಹುಲ್ಲು ತರುವವರು
ಸುರಕ್ಷಿತ ಸಾಗಿದರೇನು?
ಕೈ ಮಾತ್ರ ಕಿಂಡಿಯಲಿ ಇಳಿಬಿಟ್ಟು
ಸುಂಕ ಕೇಳಿದರೇನು?
ತಂದೆಯೇನು ನನಗೆ
ದಾರಿಯುದ್ದಕೂ ಸಪೂರ ಕೈ ಮಾರುಮಾಡಿ
ಮಾರುವ ಅಬ್ಬಲಿಗೆ, ಮಲ್ಲಿಗೆ?
ಕ್ಷೇಮವೇನು
ಸೀರೆ ಬಿಗಿದು ಕಟ್ಟಿ ಸೊಪ್ಪು ಮಾರುವವರು?
ಹೆದ್ದಾರಿ ಇಬ್ಬರ ಜೀವನಾಡಿಯಾಗಿ
ಆಳ ಪಾತಳಿಯಲ್ಲಿಅಂತರ್ಜಲದಂತೆ
ಜೊತೆಗೂಡಿ ನನ್ನೊಳಗೇ ಇರುವ
ಅಶರೀರಿ ನೀನು
ಕಣ್ಣು ಕಿವಿ ಮೂಡಿ ಕಾಯ
ಆಕಾರ ತಳೆವುದಾದರೂ ಯಾಕೆ?

ಈಗ ನೋಡು,
ಎಷ್ಟು ನಿಚ್ಚಳಾಗಿರುವೆ..
ಕಣ್ಣಲಿಳಿದ ಭ್ರಮೆ ಇಲ್ಲ
ನನ್ನೊಳಗಿನ ನೀನು ಭಾರವೆನಿಸುವುದಿಲ್ಲ
ಎಲ್ಲ ಸೌಹಾರ್ದ ಕರೆ ಕಿವುಡಾಗಿರುವಾಗ
ಉಳಿದಿರುವುದು ಬಿಂಬಗಳ ಒಡನಾಟ
ಮೌನ ಮುರಿದು ಮಾತಾಡುವುದು
ಒಲವ ಬಣ್ಣಗಳೊಡನೆ ಮಾತ್ರ
ಜಾತ್ರೆ ಜನಸಂದಣಿ ಹೂವು ಚಪ್ಪಾಳೆಗಳೆಲ್ಲ
ನನ್ನ ಒಗ್ಗರಣೆ ಪ್ರಪಂಚದಿಂದ ಬಹುದೂರ
ವಿರಹಿ ಮಲೆ ಸಾಲ ಮೇಲೆ
ಮಳೆಸುರಿಸದೆ ಸಾಗಿ ಬಿಡು
ಮಂದ ಮಾರುತದ ಹಾಗೆ
ಎದೆಯಲಿ ಶೂನ್ಯರಾಗವೊಂದು
ಸ್ಥಾಯಿಯಾಗಿ ಬಿಡಲಿ





Fine. Padya buguriyagi tirugutte marayti
Ninna kaili
Nice one!!
ಚೆನ್ನಾಗಿದೆ ಕವಿತೆ
Bhava jagattinolage shramika shaktiya bagegina apara kaalaji nitchlavagi anavarana gondide,……
Vandanegalondige, Chi na hally, kirana
ತುಂಬಾ ಚೆನ್ನಾಗಿ ಮೂಡಿಬಂದಿದೆ ಪದ್ಯ
ಅಭಿನಂದನೆ ರಜನಿ