ನನ್ನ ಕವಿತೆ..
-ಸರೋಜ ಪ್ರಶಾಂತಸ್ವಾಮಿ
ನನ್ನ ಕವಿತೆ
ನನ್ನ ಜೀವನಾಡಿ
ನನ್ನೆದೆಯ ಒಡನಾಡಿ
ನಾ ಹಾರ ಬಯಸಿದಾಗ
ರೆಕ್ಕೆಯನೀವ ಬಾನಾಡಿ.
ನನ್ನ ಕವಿತೆ
ನನ್ನ ಒಳದನಿ
ಸುರಿಸಲಾಗದ ಕಣ್ಣ ಹನಿ
ಎದೆಯ ಬಾರ ಇಳಿಸಿ
ಮೈದಡವೊ ಜನನಿ.
ನನ್ನ ಕವಿತೆ
ನನ್ನ ನಗುವಿನ ಕನ್ನಡಿ
ಮಿಡಿವ ಹೃದಯದ ಮುನ್ನುಡಿ
ಚಡಪಡಿಸೊ ಭಾವಗಳ
ಹದದಿ ಪೋಣಿಸೊ ಭಾವತುಡಿ.
ನನ್ನ ಕವಿತೆ
ನನ್ನ ಒಂದು ಮನವಿ
ಪ್ರತಿ ಮುಂಜಾವ ಹೊಸ ರವಿ
ದಿನವೆಲ್ಲ ಬೆಳಗಿ ತಮವ ಕಳೆವ
ದೇದೀಪ್ಯಮಾನ ಛವಿ.
ನನ್ನ ಕವಿತೆ
ನನ್ನೊಡಲ ತಕದಿಮಿ
ಅಂತರಂಗದ ಮಾರ್ದನಿ
ಭವದ ಭ್ರಮೆ ಭಾದಿಸದಂತೆ
ಕೈ ಹಿಡಿದು ನಡೆಸೊ ಕರುಣಾಮಯಿ.






0 Comments