ದ ರೆಡ್ ಬಲೂನ್
ಜಯಶ್ರೀ ಕಾಸರವಳ್ಳಿ
ನಿನ್ನೆ ಕೆ. ವಿ. ಸುಬ್ಬಣ್ಣ ಆಪ್ತ ಮಂದಿರದಲ್ಲಿ ಪ್ರದಶರ್ಿಸಲಾದ ಎರಡು ಪ್ರಮುಖ ಸಿನಿಮಾಗಳಾದ ಬರ್ತಲೂಚ್ಚಿಯ ‘ಟೆನ್ ಮಿನಿಟ್ಸ್ ಒಲ್ಡರ್’ ಮತ್ತು ಲಾಮೊರಿಸ್ನ ‘ದ ರೆಡ್ ಬಲೂನ್’, ಎಂಥವರನ್ನೂ ಆಕರ್ಷಿಸುವಂತಹ ಅಸಾಧಾರಣ ಸಿನಿಮಾಗಳು. ನಲವತೈದು ನಿಮಿಷದ ‘ದ ರೆಡ್ ಬಲೂನ್’ ನೋಡಿ, ಕೇವಲ ಒಳ್ಳೇ ಸಿನಿಮಾ ಕಂಡು ಆನಂದಿಸುವುದರಲ್ಲೇ ಸಂತೋಷಪಡುತ್ತಿದ್ದ ನಾನು ಸಿನಿಮಾ ವಿಮರ್ಶಕಿ ಅಲ್ಲದಿದ್ದರೂ ಅದರ ಬಗ್ಗೆ ಬರೆಯಲೇಬೇಕೆಂಬ ಹಠದಲ್ಲಿ ಕುಳಿತು ಬರೆಯುತ್ತಿದ್ದೇನೆ.
ಮಾತಿರದ, ಮಾತೇ ಬೇಕಿರದ, ಮಾತಿಗೆ ಅವಶ್ಯಕತೆಯೇ ಇರದ, ಒಂದು ಮೌನವೇ ಕೇವಲ ಚಲನೆಯಾಗುತ್ತಾ, ಒಬ್ಬ ಸಣ್ಣ ಬಾಲಕನೊಂದಿಗೆ ಅನಾವರಣಗೊಳ್ಳುತ್ತಾ ಹೋಗುವ ಕತೆ, ತನ್ನ ಕಾವ್ಯಾತ್ಮಕ ಗುಣಗಳಿಂದ ದೃಶ್ಯವನ್ನು ಕಟ್ಟುವ ಪರಿ ಬೆರಗು ಹುಟ್ಟಿಸುವಂತಹದು. ಕತೆಯಿಷ್ಟೇ: ಮನೆಯ ಬಾಗಿಲು ದಾಟಿ ಒಬ್ಬ ಒಂಟಿ ಬಾಲಕ, ಶಾಲೆಗೆ ಹೊರಟಿದ್ದಾನೆ. (ಅವನು ಯಾರು ಬೇಕಾದರೂ ಆಗಬಹುದು) ಮೆಟ್ಟಲುಗಳನ್ನು ಇಳಿದು ಶಾಲೆಗೆ ಹೋಗುವ ದಾರಿಯಲ್ಲಿ, ಒಂದು ಕಟ್ಟಡದ ಮೇಲೆ ಕಟ್ಟಿರುವ ಕೆಂಪು ಬಣ್ಣದ ಬಲೂನ್ ಅವನ ಕಣ್ಣಿಗೆ ಬೀಳುತ್ತದೆ. ಬಾಲ್ಯ ಸಹಜ ಕುತೂಹಲದಿಂದ ಆ ಬಾಲಕ, ಕಟ್ಟಡವನ್ನೇರಿ ಆ ಬಲೂನನ್ನು ಬಿಚ್ಚಿ, ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ಹೋಗುತ್ತಾನೆ. ಹೋಗುವ ದಾರಿಯಲ್ಲಿ ಅವನು ಬಸ್ ಏರಬೇಕು, ಆದರೆ ಬಸ್ ಏರಿದರೆ ಬಲೂನ್ ಎಲ್ಲಿ ಕೈ ತಪ್ಪಿಹೋಗಬಹುದೆನ್ನುವ ಭಯದಲ್ಲಿ, ಅರ್ಧ ನಡೆದು, ಮತ್ತರ್ಧ ಓಡಿ ಶಾಲೆಗೆ ತಡವಾಗಿ ಹೋಗುತ್ತಾನೆ. ಆದರೆ ಶಾಲಾ ಕೊಠಡಿಯೊಳ ಹೋಗುವ ಅನಿವಾರ್ಯತೆಯಲ್ಲಿ ಅದನ್ನು ಆಚೆ ಬಿಟ್ಟು ಒಳ ಹೋಗುತ್ತಾನೆ, ಅವನಾಶ್ಚರ್ಯಕ್ಕೆ ಕಾಪೌಂಡ್ ಹಾರಿ ಅದೂ ಒಳ ಬರುತ್ತೆ. ಶಾಲೆ ಮುಗಿದು ಮನೆಗೆ ಹಿಂತಿರುಗುವವರೆಗೂ ಅವನ ಹಿಂದೆಯೇ ಅದೂ ಹಿಂಬಾಲಿಸುತ್ತಾ ಬರುತ್ತೆ. ಮನೆಯಲ್ಲಿ ಅವನಮ್ಮ ಬೈದು ಅದನ್ನು ಕಿಟಕಿಯಿಂದಾಚೆ ಎಸೆಯುತ್ತಾಳೆ. ಆದರೆ ಎಷ್ಟೋ ಹೊತ್ತಿನ ನಂತರ ಅವನು ಕಿಟಕಿ ತೆರೆದು ನೋಡಿದರೆ ಅದಿನ್ನೂ ಅವನ ಕಿಟಕಿಯ ಬಳಿಯೇ ಸುಳಿಯುತ್ತಾ ನಿಂತಿರುತ್ತೆ.

ಅದೇ ಅವನ ದಿನನಿತ್ಯದ ಬದುಕಾಗುತ್ತೆ. ಅವನು ಹೋದಲೆಲ್ಲಾ ಅದು ಅವನನ್ನು ಹಿಂಬಾಲಿಸುತ್ತಾ ಹೋಗುತ್ತೆ. ಬಸ್ ಏರುವಾಗ ಅವನೊಂದಿಗೇ ಬಸ್ನ ಹಿಂದೆ, ಶಾಲೆಯೊಳಗೆ ಹೋದಾಗ ಅವನ ಬರುವನ್ನು ಕಾಯುತ್ತಾ ಹೊರಗೆ, ಅಂಗಡಿ ಬೀದಿ ಸುತ್ತುವಾಗ ಅವನ ಕೈಗೆಟಕುವ ಅಂತರದಲ್ಲಿ ಹಾರುತ್ತಾ ಮೇಲೆ, ಮನೆಯೊಳಗೆ ಅವನು ನುಸುಳಿದ್ದೇ ಅವನ ಕಿಟಕಿ ಬಳಿ ತೂಗಾಡುತ್ತಾ ಆಚೆ ಮೌನವಾಗಿ ಕಾಯುವ ಅದು ಸದಾ ಒಂಟಿಯಾಗಿರುವ ಆ ಹುಡುಗನಿಗೆ ಬೆಂಗಾವಲಿದ್ದ ಹಾಗೆ, ಅವನ ಆಂತರ್ಯದ ನುಡಿಯನ್ನು ಕೇಳಿಸಿಕೊಳ್ಳುತ್ತಿರುವ ಹಾಗೆ, ಅವನ ಅತ್ಯಂತ ಆಪ್ತ ಸಂಗಾತಿಯಿದ್ದ ಹಾಗೆ ನಮಗೆ ಭಾಸವಾಗುತ್ತಾ ಹೋಗುತ್ತದೆ.
ಅವನು ‘ನಿಲ್ಲು’ ಅಂದಾಗ ಅದು ನಿಂತ ಹಾಗೂ, ‘ತಡಿ’ ಎಂದಾಗ ತಡೆದ ಹಾಗೂ, ಅಂಗಡಿಯಲ್ಲಿ ಹುಡುಗಿಯ ಪೋಟೋ ಮುಂದೆ ಹುಡುಗ ತಲ್ಲೀನನಾಗಿ ನೋಡುತ್ತಾ ನಿಂತಾಗ, ಮತ್ಸರದಿಂದ ಚಡಪಡಿಸುವುದು, ನೀಲಿ ಬಣ್ಣದ ಬಲೂನ್ ಹಿಡಿದ ಹುಡುಗಿಯೊಬ್ಬಳು ಎದುರಾದಾಗ, ಮನುಷ್ಯರ ಮನಸ್ಸಿನಂತೆ ಅದೂ ಚಂಚಲಕ್ಕೆ ಒಳಗಾಗಿ ಕ್ಷಣ ಅದರ ಹಿಂದೆ ಹೋಗುವುದು, ಶಾಲೆಯಲ್ಲಿ ಮಾಸ್ತರು ಹುಡುಗನಿಗೆ ಶಿಕ್ಷೆ ವಿಧಿಸಿದಾಗ, ಮಾಸ್ತರನ್ನು ಅಟ್ಟಿಸಿಕೊಂಡು ಹೋಗಿ, ಮತ್ತೆ ಅವನಿಗಾಗಿ ಮರುಕದಿಂದ ಕಾಯುತ್ತಾ ನಿಲ್ಲುವುದು, ಮತ್ತುಳಿದ ಹುಡುಗರು ಈ ಬಲೂನ್ ಅನ್ನು ಕಸಿಯಲು ಮುಂದಾದಾಗ ಅವರಿಗೆ ಚಳ್ಳೆಹಣ್ಣು ತಿನ್ನಿಸುವುದರೊಂದಿಗೆ ಅದು ಹುಡುಗನನ್ನು ಕಾಪಾಡಿದರೆ, ಜಿನಗುಟ್ಟುವ ಮಳೆಯಲ್ಲಿ ಬೇರೆಯವರ ಛತ್ರಿಯಡಿ ಬಲೂನ್ನ ಹಿಡಿದು ಅದಕ್ಕೆ ಮಳೆ ಹನಿ ಸೋಕದ ಹಾಗೆ ಇವನೂ ಅದನ್ನು ರಕ್ಷಿಸುತ್ತಾ ಹೋಗುತ್ತಾನೆ.
ಆದರೆ ದುಷ್ಟ ಹುಡುಗರ ಕುತಂತ್ರಕ್ಕೆ ಕಡೆಗೂ ಆ ಬಲೂನ್ ಬಲಿಯಾಗಬೇಕಾಗುತ್ತದೆ. ಅದನ್ನು ಕಾಲಿನಿಂದ ತುಳಿದು ಛಿದ್ರಗೊಳಿಸುವ ಮೂಲಕ ಒಂದಷ್ಟು ಹುಡುಗರು ಸೇಡು ತೀರಿಸಿಕೊಂಡು ಆ ಬಲೂನ್ ಅನ್ನು ಕೊನೆಗಾಣಿಸಿದ ಸಂತೋಷದಲ್ಲಿ ಮರಳುತ್ತಾರೆ. ಆದರೆ ಒಂದು ಬಲೂನ್ನ ಅವಸಾನ ನೂರಾರು ಬಲೂನ್ಗಳನ್ನು ಹುಟ್ಟುಹಾಕುತ್ತಾ, ಎಲ್ಲೆಂದರಲ್ಲಿಂದ, ನಾನಾ ಕೋನಗಳಿಂದ ಬಣ್ಣಬಣ್ಣದ ಬಲೂನ್ಗಳು ಹಾರಿ ಬರುತ್ತವೆ, ಸಂತೋಷದಿಂದ ಹುಡುಗ ಅವನ್ನೆಲ್ಲಾ ಮೊಗೆದೂ ಮೊಗೆದೂ ತನ್ನ ಒಡಲಲ್ಲಿ ತುಂಬಿಕೊಳ್ಳೊತ್ತಿದ್ದಂತೇ, ಅದೇ ಸಂಭ್ರಮದಲ್ಲಿ ಅವನೂ ಬಲೂನ್ನಂತೆ ತೇಲುತ್ತಾ ತಾನು ಕಟ್ಟಿದ ಅವೇ ಬಲೂನ್ ಗುಚ್ಛದೊಂದಿಗೆ ಮೆಲ್ಲಗೆ ಮೇಲೆ ಮೇಲೆ ಹಾರತೊಡಗುತ್ತಾನೆ…
1956ರಲ್ಲಿ ತಯಾರಾದ ಈ ಸಿನಿಮಾ, ಒಂದು ರೀತಿಯಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಎದುರಾದ ನಿರುತ್ಸಾಹ ಬದುಕಿನ ನಿಸ್ತೇಜ ಪ್ರಪಂಚವನ್ನು ಯಥಾಸ್ಥಿತಿಯಲ್ಲಿ ತೋರಿಸಿದೆ. ಇಡೀ ಸಿನಿಮಾದಲ್ಲಿ ಫ್ರಾನ್ಸ್ನ ಸ್ಥಗಿತ ಜನಜೀವನವನ್ನ ಹಿನ್ನಲೆಯಾಗಿ ಬಳಸಿಕೊಂಡಿರುವ ಈ ಚಿತ್ರದಲ್ಲಿ, ಅತ್ಯಂತ ಮಹತ್ವಪೂರ್ಣವಾಗಿ ಮೂಡಿ ಬಂದಿರುವುದು ಒಂದು ರೀತಿಯ ‘gloomy atmosphere ‘. ಚಿತ್ರದುದ್ದಕ್ಕೂ ನಮಗೆ ಎದುರಾಗುವುದು ಎಲ್ಲೆಲ್ಲೂ ಮಾಸಿದ, ಬಣ್ಣ ಕಳೆದುಕೊಂಡು ಪೇಲವಗೊಂಡಿರುವ ಕಟ್ಟಡಗಳು, ಚಿರಿಚಿರಿ ಮಳೆಯಿಂದ ಸದಾ ಜಿನುಗುವ ಒದ್ದೆ ಮುದ್ದೆಯಾಗಿ, ತಣ್ಣಗೆ ಕೊರೆಯುತ್ತಿರುವ ಕಳಾಹೀನ ನಿರ್ಲಿಪ್ತ ರಸ್ತೆಗಳು, ಪ್ರೀತಿಯ ಸೊಲ್ಲೇ ಇರದೇ ನಿಷ್ಠುರ ಮುಖ ಹೊತ್ತು ರಸ್ತೆಯಲ್ಲಿ ಸಂಚರಿಸುವ ಜನರು, ಕಾಠಿಣ್ಯವೇ ಮೈವೆತ್ತಿದ್ದಂತಹ ಶಾಲಾಮಾಸ್ತರರು, ಆತ್ಮೀಯತೆಯ ಸಿಂಚನವೇ ಇರದೆ ದ್ವೇಷದಿಂದ ಕುದಿಯುತ್ತಿರುವ ಸಂಗಡಿಗರು, ಅಲ್ಲೊಬ್ಬ ಮನೆಯೊಳಗೆ ಹೊರಗೆ ಸದಾ ಒಂಟಿಯಾಗುಳಿದು ಹೋಗಿರುವ ಹುಡುಗ. ( ಅವನ ಅಪ್ಪ ಅಮ್ಮ ಯಾರೂ ಬೇಕಾದರೂ ಆಗಬಹುದಾದ್ದರಿಂದ ಇಡೀ ಸಿನಿಮಾದಲ್ಲಿ ಅಪ್ಪ ಅಮ್ಮರನ್ನು ತೋರಿಸಿಲ್ಲ ).
ಪ್ರಪಂಚಕ್ಕೆ ಪ್ರಪಂಚವೇ ಏಕಾಂಗಿಯಾಗಿ, ತನ್ನ ಸಹಜ ಬಣ್ಣ ಕಳೆದುಕೊಂಡು, ರಾಗ ಭಾವಗಳೇ ಇರದೇ ನಿಸ್ಸಾರವಾಗಿ ಬದುಕುತ್ತಿರುವಾಗ, ಅಲ್ಲೊಂದು ದಟ್ಟ ಕೆಂಪು ಬಣ್ಣದ ಬಲೂನ್ ಢಾಳಾಗಿ ಹಾರಾಡುತ್ತಾ, ಮರೆತ ಬದುಕಿಗೆ ಬಣ್ಣ ತುಂಬುತ್ತಾ ಸಾಗುತ್ತದೆ. ಅಕಸ್ಮಾತಾಗಿ ಆ ಹುಡುಗನಿಗೆ ದೊರೆಯುವ ಅಚ್ಚ ಕೆಂಪು ಬಣ್ಣದ ಆ ಬಲೂನ್ ಅವನ ಸಂಗಾತಿಯಾಗಿ, ಅವನ ಮನದ ಅಭಿವ್ಯಕ್ತಿಯಾಗಿ, ಅವನ ಆಶೋತ್ತರಗಳಿಗೆ ತುಡಿಯುವ ಬಿಂದುವಾಗಿ, ಅವನ ಕನಸನ್ನು ಸಾಕಾರಗೊಳಿಸುವ ಮೂರ್ತಿಯಾಗಿ ಅವನ ಹಿಂದೆ ಮುಂದೆ ಸುಳಿಯುತ್ತಾ, ಎಳೇ ಮನಸ್ಸಿಗೆ ಮಾದರಿಯ ದಾರಿದೀಪವಾಗಿದೆ, ಅವನು ಸಾಗಬೇಕಾದ ಬದುಕಿಗೆ ಮಾರ್ಗದರ್ಶನವೂ ಆಗಿದೆ. ಧ್ವಂಸಕರು, ವಿಧ್ವಂಸಕರಿಂದ ಕೂಡಿದ ಕ್ರೂರ ಜಗತ್ತಿನಲ್ಲಿ ಕನಸುಗಳು ಒಡೆದು ಛಿದ್ರಗೊಳ್ಳುತ್ತಿರುವಾಗಲೇ, ಮೊದಲಿಗಿಂತ ಹೆಚ್ಚು ಕಾಳಜಿಯಿಂದ ಮತ್ತೆ ಒಡೆದ ಚೂರುಗಳನ್ನು ಹೆಕ್ಕಿ ಜತನದಿಂದ ಕಟ್ಟುವ ಅವಶ್ಯಕತೆಯನ್ನೂ, ಹಾಗೆ ಕಟ್ಟುವ ಮೂಲಕವೇ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯನ್ನೂ ಸಾರುತ್ತಿವೆ. ಅಂಥಹ ಸುಭಿಕ್ಷವಾದ ಒಂದು ಕನಸಿನಲ್ಲಿ ಆ ಹುಡುಗನ ಜೊತೆ ನಾವೂ ತೇಲುತ್ತಾ ಸಾಗುತ್ತೇವೆ…
ಒಂದು ನೋಟಕ್ಕೆ ಮಕ್ಕಳ ಸಿನಿಮಾವೇನೋ ಅನ್ನಿಸಿದರೂ ಇದು ಮಕ್ಕಳ ಸಿನಿಮಾ ಅಲ್ಲ. ಒಂದು ಸುಂದರ ಕಾವ್ಯದಂತೆ ಹಾರುವ ಬಲೂನ್ ಹಿಡಿದು ಚಿತ್ರದುದ್ದಕ್ಕೂ ಸಾಗುವ ಹುಡುಗನೊಡನೆ ನಾವು ತೇಲುತ್ತಾ ಹೋಗುವಂತೆ ದೃಶ್ಯಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿ ಕೊಡಲಾಗಿದೆ. ಸ್ಥೂಲವಾಗಿ ಹೊಳೆದ ಒಂದು ಅರ್ಥದಲ್ಲಿ ವಿಶ್ಲೇಸಿಷಲು ಹೊರಟರೂ ಇದಿಷ್ಟೇ ಅರ್ಥವಿರಲಿಕ್ಕಿಲ್ಲವೆನ್ನಿಸುವುದರೊಂದಿಗೆ, ಅನೇಕ ಮಗ್ಗುಲುಗಳನ್ನ ತನ್ನ ಒಡಲಲ್ಲಿ ಇಟ್ಟುಕೊಂಡಂತಹ ಸಿನಿಮಾವಿದು.
‘ಟೆನ್ ಮಿನಿಟ್ ಒಲ್ಡರ್’ ಅನೇಕ ಒಡೆದ ಚೂರುಗಳನ್ನು ಕಲಾಕಾರನೊಬ್ಬ ಅತ್ಯಂತ ತಾಳ್ಮೆಯಿಂದ ಜೊಡಿಸಿ ತಯಾರಿಸಿದ ಪ್ರತಿಮೆಯಂತೆ, ಬರ್ತರ್ಲೂಚ್ಚಿ ಒಂದಿಡೀ ಬದುಕಿನ ಯಶೋಗಾಥೆಯನ್ನು
ಹತ್ತು ನಿಮಿಷದಲ್ಲಿ ಹೇಳಿ ಮುಗಿಸಿದ್ದಾನೆ. ಹಿಂದೂ ಮಿಥಾಲಾಜಿಯ ಸಂಕ್ಷಿಪ್ತ ಭಾಗವನ್ನು ಆಧಾರವಾಗಿಟ್ಟುಕೊಂಡು ಹೆಣೆದ ಚಿತ್ರದಲ್ಲಿ ನಿರ್ದಿಷ್ಟ ಸ್ವರೂಪದ ಕತೆಯಿಲ್ಲ. ತಂತ್ರ ಪ್ರಧಾನವಾಗಿರುವ ಚಿತ್ರದಲ್ಲಿ, ಪ್ರತಿ ಶಾಟ್ ಒಡೆದ ತುಂಡಿನಂತೆ ಮೂಡಿಬರುತ್ತಿರುತ್ತದೆ. ಒಂದು ಶಾಟ್ ಮುಗಿದು ಮೂಡುವ ನಂತರದ ಮತ್ತೊಂದು ಶಾಟ್ನ ನಡುವಿನ ವಿರಾಮದಲ್ಲಿ ಕತೆ ಆಕಾರ ಪಡೆದುಕೊಳ್ಳುವುದು ವೀಕ್ಷಕನ ಮನಸ್ಸಿನಲ್ಲಿ. ನಿಗದಿತ ಆಯಾಮದಲ್ಲಿ ಕತೆ ಸಾಗದಾಗ, ಕೈಗೆ ಸಿಗುವ ‘ಬಿಟ್ಸ್ ಅಂಡ್ ಪೀಸ್’ ಗಳನ್ನೇ ಒಂದುಗೂಡಿಸುತ್ತಾ ಸಾಗುತ್ತಿರುವಾಗ ಒಂದು ಹಂತದಲ್ಲಿ, ಆ ತುಂಡು ತುಂಡುಗಳೇ ಕೂಡಿಕೊಳ್ಳುತ್ತಾ ಒಂದು ಸಮಗ್ರ ಬದುಕಿನ ಕತೆಗೆ ನಾಂದಿ ಹಾಡುತ್ತೆ… ಅಂತಿಮದಲ್ಲಿ ಪ್ರತಿಯೊಬ್ಬರ ಬದುಕೂ ಹಲವು ಚೂರುಗಳನ್ನು ಪ್ರಯಾಸದಿಂದ ಒಂದುಗೂಡಿಸುವ ಪ್ರಯತ್ನವೇ ಆಗಿರುತ್ತೆ ಎಂಬ ಆಯಾಮದಲ್ಲಿ ಸಿನಿಮಾದ ಆಶಯ ಅಡಗಿರುವ ಭಾಸವಾಗುತ್ತದೆ…
ಪ್ರತಿ ಭಾನುವಾರ ಮದ್ಯಾಹ್ನ 4 ಗಂಟೆಗೆ ಕೆ. ವಿ. ಸುಬ್ಬಣ್ಣ ಆಪ್ತ ಮಂದಿರದಲ್ಲಿ ಜಗತ್ತಿನ ಖ್ಯಾತ ಸಿನಿಮಾಗಳನ್ನು, ಗಿರೀಶ್ ಕಾಸರವಳ್ಳಿ ಅವರ ಮಾರ್ಗದರ್ಶನದಲ್ಲಿ ಮತ್ತು ಎಸ್. ಜಿ. ಭಾಸ್ಕರ್ ರಾವ್ಅವರ ನಿರ್ವಹಣೆಯಲ್ಲಿ ಅನೇಕ ದಿನಗಳಿಂದ ತೋರಿಸುತ್ತಲೇ ಬಂದಿದ್ದಾರೆ. ಪ್ರತಿ ಸಿನಿಮಾದ ನಂತರ ಸಂವಾದವಿರುತ್ತದೆ. ಸಿನಿಮಾ ಒಂದು ದೃಶ್ಯ ಮಾಧ್ಯಮವಾಗಿ ಅದನ್ನು ನೋಡುವ ಕಲೆಯ ಬಗ್ಗೆ ಸ್ನೇಹಿತರೊಡನೆ ಆತ್ಮೀಯವಾದ ಮಾತುಕತೆ ಹಾಗೂ ಸಣ್ಣ ಚರ್ಚೆಗೆ ಅವಕಾಶವೂ ಇದೆ. ಕೆ. ವಿ. ಸುಬ್ಬಣ್ಣ ತೀರಿಕೊಂಡು ಈ ತಿಂಗಳು ಹದಿನಾರಕ್ಕೆ ಹತ್ತು ವರುಷವಾಗಲಿದೆ. ನಮ್ಮ ನಡುವಿನ ಅದಮ್ಯ ಚೈತನ್ಯವಾಗಿ ಬಾಳಿದ ನಾಡಿನ ಕೆಲವೇ ಧೀಮಂತರಲ್ಲಿ ಕೆ. ವಿ. ಸುಬ್ಬಣ್ಣರೂ ಒಬ್ಬರು. ಅವರ ಶಿಷ್ಯರಾದ ನೀನಾಸಮ್ನ ಗೋಪಿನಾಥ್ ಅವರು, ಸುಬ್ಬಣ್ಣರವರ ಹೆಸರಿನಲ್ಲಿ ಕೆ.ವಿ.ಸ್. ಆಪ್ತ ಮಂದಿರ ತೆರೆದೂ ಹತ್ತು ವರುಷವಾಗಿದೆ. ಅನೇಕ ಏಳು ಬೀಳುಗಳ ನಡುವೆಯೂ ಸಿನಿಮಾ, ರಂಗ ಚಟುವಟಿಕೆಗಳಿಗೆ ತಮ್ಮ ಮನೆಯನ್ನೇ ರಂಗ ಸ್ಥಳವನ್ನಾಗಿ ಒದಗಿಸಿಕೊಟ್ಟಿದ್ದಾರೆ. ಜಗತ್ತಿನ ಅತಿ ಶ್ರೇಷ್ಠ ಸಿನಿಮಾಗಳನ್ನು ಜನ ಸಾಮಾನ್ಯರಿಗೆ ಎಂದಿನಿಂದಲೂ ತೋರುತ್ತಾ ಬಂದಿರುವ ಗೋಪಿನಾಥ್ರ ಉತ್ಸಾಹ ಮೆಚ್ಚುವಂತಹದು… ಸಿನಿಮಾ ಸ್ಕ್ರೀನ್ಗೆ ತಮ್ಮ ಮನೆಯಲ್ಲಿ ಸಣ್ಣ ಥಿಯೇಟರ್ ನಿರ್ಮಿಸಿ, ಒಂದವರಿಗೆಲ್ಲಾ ಕಾಫಿ ಸಮಾರಾಧನೆ ಮಾಡಿ ಉಪಚರಿಸುವವರು ಗೋಪಿನಾಥ್ ಅವರು. ಕೇವಲ ಐವತ್ತು ರೂಪಾಯಿಗೆ ಜಗದ್ವಿಖ್ಯಾತ ಸಿನಿಮಾಗಳನ್ನು, ಒಂದೆಡೆ ಕುಳಿತು ನೋಡುವ ಪರಿಯೇ ಅತ್ಯಂತ ಸೊಗಸಾದ್ದು. ಯಾರು ಬೇಕಾದರೂ ಈ ಸಿನಿಮಾಗಳನ್ನು ವೀಕ್ಷಿಸಬಹುದು. ಕಲೆಯ ಅಭಿರುಚಿಯಿರುವಾಗ ಸಜ್ಜನರೊಡನೆ ಆಸ್ವಾದಿಸಲು ಯಾಕೆ ಹಿಂಜರಿಕೆ? ಒಂದು ಅತ್ಯುತ್ತಮ ಸಿನಿಮಾ, ಒಂದು ಅತ್ಯುತ್ತಮ ರಂಗ ಪ್ರಯೋಗ, ಒಂದು ಅತ್ಯುತ್ತಮ ಕೃತಿ – ನಮ್ಮ ಕೈಗೆಟಕುವ ಅಂತರದಲ್ಲೇ ಇರುವಾಗ ಬನ್ನಿ, ಸದುಪಯೋಗ ಪಡಿಸಿಕೊಳ್ಳೋಣ.






nimma baraha nannnannu kempu baloonina hinde odisitu. Where do we get info about the next movies getting screened at K V S’s apta ranga mandira? nange tumba asakti huttiside. Thank you Jayashree.
ma’am it was nice meeting u, when they screened ‘megha dhaka tara’. i thought the films were screened once a fortnight.
nimma baraha nannnannu kempu baloonina hinde odisitu. Where do we get info about the next movies getting screened at K V S’s apta ranga mandira? nange tumba asakti huttiside. Thank you Jayashree.
Thanks Sarala and Malathi.
Folling is the address:
K.V.Subbanna Apta Ranga Mandira
151,7th cross, Teacher’s colony 1st stage
Near Dayananda Sagar Engg. College.
opp: Vasudha Bhavan
Bangalore – 560078
kvssamuha@gmail.com
Mobile:9964152999 (Gopinath)
This sunday,21-7-13 @ 4 pm. ‘Rashomon’ a
film by Akira Kurosawa.