
ಶಿ ಜು ಪಾಶ
ಮಳೆ ಮತ್ತು ನಾನು
ಮಳೆ ಮಾತಾಡುತ್ತಿದೆ;
ಹನಿಹನಿ ಮೌನಗಳನ್ನು ಅಂಗಳಕ್ಕೆ ಕಳಿಸಿ,
ಹಾಡು ಆಕಾಶದ್ದು ಹಾಡುತ್ತಿದೆ,
ಟಪಟಪ ಸಂಗೀತ ರೂಪಿಸಿ…
ಮಳೆ ಮತ್ತು ನಾನು
ಅದೆಷ್ಟು ಮಾತಾಡುತ್ತೇವೆ;
ನನ್ನೊಳಗಿನ ಮಾತು ಅದರ ಕಿವಿಯೊಳಗೆ,
ಅದರ ಮಾತು ನನ್ನ ಇಡೀ ಮೈಯೊಳಗೆ,
ಒಂದು ಬಿಸಿಯುಸಿರು ನನ್ನದು
ತಣ್ಣನೆ ರೋಮಾಂಚನ ಅದರದು.
ಧೀರವನಿತೆಯ ನರಕ, ಕಾಮಾಲೆ ಕಣ್ಣು,
ತಬ್ಬಲಿ ನಿಂತ ನನ್ನೊಳಗೆ ಸುಡುಬಿಸಿಲ ಹುಣ್ಣು,
ಅಪ್ಪಳಿಸಿತೆಂದರೆ ಮಳೆ ನವಿಲು ಹೆಣ್ಣು,
ಕುಣಿದರೆ ನಾನು ನಿಸರ್ಗ, ಇಲ್ಲದಿರೆ ಬರಬಿದ್ದ ಮಣ್ಣು.
ನಾ ಮಳೆಯ ನೆರಳು,
ಅದು ಮನದ ಕೊರಳು,
ಬೆರಳ ತುದಿಯಲ್ಲಿ ಲೋಕ,
ಬುದ್ದಿಗೆ ಎಚ್ಚರದ ಶ್ಲೋಕ,
ಹಸ್ತದ ಗೆರೆಗಳಲ್ಲಿ ನೀರಚೇಷ್ಟೆ,
ಮೇಘಗಳಲ್ಲಿ ಕೋಟಿನಿಷ್ಠೆ.
ಮಳೆಯಂತೆ ನಾನು,
ಅದರ ಜೀವಹನಿಗಳಂತೆ;
ಕೆರೆಯಾಗುತ್ತೇನೆ, ನದಿ-ಸಾಗರವಾಗುತ್ತೇನೆ,
ತುಚ್ಛವಾಗುತ್ತೇನೆ, ಸ್ವಚ್ಛವಾಗುತ್ತೇನೆ,
ಫಲಹೊತ್ತ ಬಳ್ಳಿಗೆ ಬೇರಾಗುತ್ತೇನೆ, ಬೇರಿಗೆ ನೀರಾಗುತ್ತೇನೆ…
ನನ್ನಂತೆ ಹೆಣ್ಣಾಗುತ್ತೇನೆ,
ಮತ್ತೆ ಮಳೆಯಾಗುತ್ತೇನೆ…
![]()
ಬೀಜ
ಬೀಜಗಳು ಸಾಯುತ್ತಿವೆ,
ಫಲವತ್ತಾದ ಭೂಮಿ ಫಲಕೊಡದೆ
ಬೀಜಗಳ ಕೊಲ್ಲುತ್ತಿದೆ,
ಬೀಜಗಳೆಂದರೆ ಬರಿಯ ಬೀಜಗಳೇ?
ನನ್ನ-ನಿನ್ನ ಹಲ್ಲುಗಳ ನಡುವೆ ಸಿಕ್ಕಿ ಆಹಾರವಾಗಿ,
ರಕ್ತವಾಗಿ, ದೇಹದೊಳಗಿನ ಹಸಿವಿನ ಶಕ್ತಿಯಾಗಿ,
ಕಸುವಾಗಿ, ಬೆವರಾಗಿ, ಮತ್ತೆ ಬೀಜವಾಗುವ ಮಂತ್ರ…
ಮೂರು ಹೊತ್ತು ಹಸಿವ ಹೊಟ್ಟೆಗೆ ಶಕುನಬೇಕೆ?
ಹತ್ಯೆ ಆತ್ಮದ್ದೇ ನಡೆಯುವಾಗ ಸುಳಿವು ಬೇಕೆ?
ಮರಮರವೂ ಮಾತಾಡುತ್ತಿದೆ ಟೊಂಗೆಗಳ ತಬ್ಬಿ ಅಳುತ್ತಾ,
ನೇಣು ಬಿಗಿದುಕೊಂಡಿದೆ ಹಸಿರು ರಕ್ತ ಕುದಿಕುದಿಯುತ್ತಾ!
ಖಡ್ಗ ಮತ್ತು ಬಂದೂಕಿನಿಂದ ಏನು ಸಾಧಿಸುವರೋ?
ಬೀಜವೇ ನರಳಿ ತೊಲೆಗೆ ನೇಣುಹಾಕಿಕೊಳ್ಳುವಾಗ;
ನನ್ನ-ನಿನ್ನೊಳಗಿನ ವಂಚನೆಗೆ ಬೇಯುತ್ತಿದೆ ಹಸಿರು ನಕ್ಷತ್ರ,
ಕಿವಿಯ ಬಳಿ ಆಡಿದ ಚುಚ್ಚುಮಾತಿಗೆ ಬಿಡುವಂತಾಗಿದೆ ಸ್ವಕ್ಷೇತ್ರ.
ರೈತನೆಂಬುದು ವಚನ, ರೈತನೆಂಬುದು ಮೆದುಳು,
ರೈತನೆಂಬುದು ಭೂಮಿ, ರೈತನೆಂಬುದು ಬಾವುಟ,
ರೈತನೆಂಬುದು ಕಾಲ, ರೈತನೆಂಬುದು ಜೀವ,
ರೈತನೆಂಬುದು ಬಂಗಾರ, ರೈತನೆಂಬುದೇ ಬೀಜ…
ಬೀಜ ಕಳೆದುಕೊಂಡರೆ ಏನುಂಟು?





male mattu nanu very nice poem. wah. really beautiful.
ರೈತನ ಮಾಹತ್ಮೆ “ಬೀಜದಲ್ಲಿ” ಬಹಳ ಚೆನ್ನಾಗಿ ಮೂಡಿ ಬಂದಿದೆ,