ಪಾಪಗಳನ್ನಾದರು ಪಾವತಿಸಬೇಕು
ರಮೇಶ ಅರೋಲಿ
ಆಗಸಕ್ಕೆ ಯಾರ ನೆನಪೇಕೆ ಬರಬೇಕು
ಈಗ ಸುರಿದಂತೆ ಮಳೆ ಹೀಗೆಯೇ ಸುರಿಯಲು
ಗಟಾರಿನ ಗಲೀಜಿಗೆ ಗುಲಾಬಿಯ ಮೇಲೆ ಮೋಜು
ಮುಡಿದೆಸೆದ ಮುಗಿಲ ಕಾಮನಬಿಲ್ಲು
ಬಿಕರಿಗಿಟ್ಟಂತೆ ನಡು ಬಜಾರಿನಲ್ಲು!
ದೇವರುಗಳೆ ನನ್ನ
ನೋಡ ಬಂದು ಹೀಗೆ ಗುಲಾಮರಾದಿರಿ
ಕೊಲೆಗಡುಕರ ಕೊಲೆಗಡುಕನು
ನಿಮ್ಮ ತಲೆಯ ಮೇಲೆ ಕಾಲಿಟ್ಟು ಹೋಗಲು
ಗಂಟೆಗಳು ಮೊಳಗಿದವೇ ಹೊರತು
ಒಬ್ಬನೂ ಕಾಣ ಬರಲಿಲ್ಲ
ನಗರಗಳು ಸುಟ್ಟರೂ; ಪೈರು ಕೆಟ್ಟರೂ
ಪ್ರೀತಿಸದೇ ಇರುವುದನ್ನು ಕಲಿಸಲಾಗಲಿಲ್ಲ!

ಊರ ಕಾರ್ಖಾನೆಯ ಕೊಳವೆ ಬಾಯಿಂದ
ಹೊಗೆ ಬಲೂನನು ಯಾರೊ ಊದಿದಂತೆ
ಉಸಿರು ಬಚ್ಚಿಟ್ಟುಕೊಂಡು ಪಾಚಿ ನೀರಿಗೆ
ನನ್ನ ಪಾಪಗಳನ್ನು ಪಾವತಿಸುವಾಗ
ನನಗೆ ಹುಟ್ಟಲಿರುವವಳದೇ ಚಿಂತೆ!
ಅವಳು ನಡೆದಾಡುವಾಗಗೆಲ್ಲ
ನಾ ಎಡವಿ ಬಿದ್ದಂತೆ; ಮತ್ತೆ ಎದ್ದುಬಿಡುವಂತೆ
ಹುಟ್ಟೂರು ಕತ್ತಲೆಗೆ ನಾನೆಂದರೆ ಅಷ್ಟಕ್ಕಷ್ಟೆ
ಅದಕ್ಕೆ ನನಗೆ ಅಪರಿಚಿತರೆಂದರೆ
ಭುಜಕ್ಕೆ ವಾಲಿದ ಚೆಂಡು; ವಿಳಾಸ ಹೇಳುವ ದಂಡು
ದಾರಿ ಸವೆಸುವಾಗಲೆಲ್ಲ ರಿಪೇರಿಯಾಗಬೇಕೆನಿಸುತ್ತದೆ
ಗುಜರಿ ನೆಲ ತುಕಡಿ ಚಂದ್ರ ಮತ್ತು ತುಕ್ಕು ನದಿ
ಕಾಣುವುದೆಲ್ಲ ನಂಬೋಣವೆಂದರೆ
ನನಗೆ ಹಗಲುಗಳೇ ಉದ್ದ; ಇನ್ನು ರಾತ್ರಿಗಳೆಷ್ಟು ಪರಿಶುದ್ಧ?
ನನ್ನ ದೇವರುಗಳೆ ನನ್ನ ಪರವಿಲ್ಲ ಎಂದಾದ ಮೇಲೆ
ನಿನ್ನೊಂದಿಗೆ ಯುದ್ಧವೇ ಅಸಂಬದ್ಧ!






hutturu kattalege naanendare ashtakashte………….. allinda saaaguva kavanada saalugalu tumba artapurna mattu manasige tattuvantive.
Padya sogasaagide….
uttama kavite sir
tumba..tumbaane chennagide kaaya..