ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನಗಾಗಿ ಕಾದಿರುವಂತೆ ಹೇಳಬೇಕು ನೀನು..

ರೇಣುಕಾ ರಮಾನಂದ
_____________

ಹನಿಮಳೆ ಹೊರಟ ದಿನ
ನಾನೂ ನೀನೂ ಅವಳೂ
ಸೇರಿ ಪಾಟಿಕಲ್ಲಿನ ಮೇಲೆ
ಕುಂಟಲಿಪಿಯಾಡುತ್ತಿದ್ದೆವಲ್ಲ
ಅದೇ ನಿಲ್ದಾಣ ಇದು
ಇಪ್ಪತ್ತು ವಷ೯ಗಳ ಹಿಂದಿನದು
ಅಂದಿನಂತೆಯೆ ಇಂದೂ
ರೈಲು ಬಂದು ಹೋದ ಮೇಲೆ
ಸಕಲ ಸದ್ದು ಸಪ್ಪಳವಿಲ್ಲದ್ದು
ನಾನೀಗ ನಿಂತದ್ದು….

ಸಣ್ಣ ಊರಿನ ಆಕಳಿಸುವ ಸ್ಟೇಷನ್ನುಗಳಲ್ಲಿ
ಅರೆ..!ಹೊರಡುವುದಿಲ್ಲವೇ..?
ಕೇಳದ ಹೊರತು
ಜಳ್ಳೆ ಸೆರಗ ಬೀಸುತ್ತ
ದಣಿವಾರಿಸಿಕೊಳ್ಳುತ್ತಿರುವ
ಲೋಕಲ್ ಟ್ರೇನುಗಳು
ಹಂದಾಡುವುದಿಲ್ಲ
“ಚಾಯಾ” “ಚಾಯಾ” ಉಸುರುವ
ಬಾರೀಕು ಹುಡುಗರು
ಹತ್ತದ ಹೊರತು ಅವಕ್ಕೆ
ಕೂ……ಎನ್ನುವ ಶಕ್ತಿ ಬರುವುದಿಲ್ಲ

ಅದೆಲ್ಲ ಬಿಡು
ಇಲ್ಲೇ ಪಕ್ಕದ ರುದ್ರಭೂಮಿಯಲ್ಲಿ
ಮಣ್ಣುಮಾಡಲಾಗಿದೆಯಂತೆ ನಿನ್ನ…
ರೈಲಿಗೆ ಕಾಯುತ್ತಿದ್ದವರೊಬ್ಬರು
ಹೊತ್ತು ಹೋಗದೆ ಹೇಳಿದ್ದು…
“ಇಲ್ಲಿ ಮಜ್ಜಿಗೆ, ಕೋಕಂ ಸಿಗುತ್ತದೆ”-
ಬೋಡ೯ನ್ನೇ ದಿಟ್ಟಿಸುತ್ತಿದ್ದ ನನಗದು
ಸರಿಗಾಗಿ ಕೇಳಿಸಿರಲಿಕ್ಕಿಲ್ಲ
ಎನಿಸಿರಬೇಕು
ಗಾಳಿ ಎರಚಿಹೋದ ತರಗೆಲೆಗಳ ಎಣಿಸುತ್ತ
ಇನ್ನೊಮ್ಮೆ ಹೇಳಿದರು

ಇದ್ದಕ್ಕಿದ್ದಂತೆಯೇ ಒಂದು ದಿನ
ಮಾಯವೇ ಆಗಿ ಹೋದ ಅವಳು ಮೊನ್ನೆ
ನಡುರಾತ್ರಿ ನಿನ್ನ ಆಸುಪಾಸಿನಲ್ಲಿ ಪ್ರತ್ಯಕ್ಷ ವಾದಂತೆ ಕನಸು….
ಅದರ ಮುಂದುವರಿದ ಭಾಗದಲ್ಲಿ
ಜೊಂಪುಹತ್ತಿದ ನಿನ್ನ ಕಂಕುಳಿಗೆ
ತನ್ನ ಸಪೂರ ಬೆರಳುಗಳಿಂದ ಕಚಗುಳಿಯಿಟ್ಟು ಕಿಲಕಿಲ ನಕ್ಕಂತೆಯೂ…
ಯಾಕೆ ದುಃಖಿಸುತ್ತಿದ್ದೀ ನಾನೀಗ
ಬಂದೆನಲ್ಲ ಎಂದಂತೆಯೂ…

ಹಾಗೊಮ್ಮೆ ಬಂದರೆ ಅವಳು
ಎಲ್ಲಿಂದ ಬಂದೆಯೇ…ಎನ್ನುತ್ತ
ತುಸು ಹೆಚ್ಚೇ ಅತ್ತು ಕರೆದು
ನನ್ನ ಕುರಿತಾಗಿ ಹೇಳಬೇಕು ನೀನು..
ಮಳೆ ಬಿದ್ದ ಅಂಗಳದಲ್ಲಿ ಪಚಾಪಚಾ
ಕುಣಿದು ಕುಪ್ಪಳಿಸುತ್ತಿದ್ದ
ಅವಳ ಅಂಗಾಲ ಸದ್ದು
ಮುಗ್ಗರಿಸುವ ಸಿಗ್ನಲ್ ಗಳಲ್ಲಿ
ನಿತ್ಯ ಪ್ರಯಾಣಿಸುವ ಈ ಬೋಗಿಗಳ
ಧಡಲ್ -ಧಿಡೀಲ್ ಗಳಲ್ಲಿ
ಇನ್ನೂ ಬದುಕಿರುವುದನ್ನೂ
ಮರೆಯದೇ ಪ್ರಸ್ತಾಪಿಸಬೇಕು

ಹಾಗೆಯೇ ಮುಂದೊಮ್ಮೆ ಅಲ್ಲಿಗೆ
ಬರಲಿರುವ ನನಗಾಗಿ ಕಾದಿರುವಂತೆಯೂ…

‍ಲೇಖಕರು admin

23 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading